ಪುತ್ತೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜನಪ್ರಿಯವಾಗಿರುವ ಕಂಬಳವು ಇಲ್ಲಿನ ಜನರ ಹೆಮ್ಮೆಯ, ಸ್ವಾಭಿಮಾನದ ಕ್ರೀಡೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಮಹಾಲಿಂಗೇಶ್ವರ ದೇಗುಲದ ಮುಂಭಾಗದ ದೇವರಮಾರು ಗದ್ದೆಯಲ್ಲಿ ಶನಿವಾರ 29ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳಕೂಟದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ಹೋಲಿಸಿದರೆ ಕಂಬಳ ಅಪಾಯಕಾರಿ ಅಲ್ಲ. ಕಂಬಳ ತುಳುನಾಡಿನ ಸಂಸ್ಕೃತಿ ಆಧಾರಿತ ಕ್ರೀಡೆ. ಕರಾವಳಿ ಭಾಗದಲ್ಲಿ ಕಂಬಳ, ಯಕ್ಷಗಾನ, ಭೂತಾರಾಧನೆಗೆ ವಿಶೇಷ ಸ್ಥಾನಮಾನ ಇದೆ. ಹಾಗಾಗಿ ಕಂಬಳ ಕೂಟ ಸೇರಿದಂತೆ ಜನರ ಮಧ್ಯೆ ಬೆಳೆದಂತಹ ಜನಪದೀಯ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಅಗತ್ಯ ಇದ್ದು ಆ ನಿಟ್ಟಿನಲ್ಲಿ ಉಭಯ ಜಿಲ್ಲೆಗಳಲ್ಲಿ ಕಂಬಳ ಸಮಿತಿ ಬಹು ದೊಡ್ಡ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಮ್ಮಾನ
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಮಹಾಲಿಂಗ ನಾಯ್ಕ ಕೇಪು, ಕಂಬಳ ಕ್ಷೇತ್ರದ ಸಾಧಕ ಕೇಶವ ಭಂಡಾರಿ ಕೈಪ ಅವರನ್ನು ಸಮ್ಮಾನಿಸಲಾಯಿತು.
ಸಿದ್ದರಾಮಯ್ಯ ಅವರನ್ನು ಗೌರವಿಸಲಾಯಿತು.ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಬಿ. ರಮಾನಾಥ ರೈ, ಶಾಸಕ ಬೈರೆತಿ ಬಸವರಾಜ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಚಿತ್ರನಟ ವಿಜಯ ರಾಘವೇಂದ್ರ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾ ಪ್ರಸಾದ್, ಉದ್ಯಮಿ ಕಿಶೋರ್ ಆಳ್ವ, ನಟ ಗರುಡ ರಾಮ್, ಮಾಜಿ ಸಚಿವ ಅಭಯಚಂದ್ರ ಜೈನ್, ನಟ ನವೀನ್ ಡಿ. ಪಡೀಲು, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸದಸ್ಯ ಐವನ್ ಡಿ’ಸೋಜಾ, ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ವೇದಿಕೆಯಲ್ಲಿದ್ದರು. ಕಂಬಳ ಸಮಿತಿಯ ಕೃಷ್ಣಪ್ರಸಾದ್ ಆಳ್ವ, ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಗೌರವಾರ್ಪಣೆ
ಬ್ಯಾಂಕ್ ಆಫ್ ಬರೋಡಾದ ಜನರಲ್ ಮ್ಯಾನೇಜರ್ ಗಾಯತ್ರಿ, ಮುಖ್ಯಮಂತ್ರಿ ಪದಕ ವಿಜೇತ ಪ್ರವೀಣ್ ರೈ ಪಾಲ್ತಾಡು, ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಕುಂಬ್ರ ಕಿರಣ್ ಕುಮಾರ್, ಪ್ರೊಕಬಡ್ಡಿ ಆಟಗಾರರಾದ ಪ್ರಶಾಂತ್ ರೈ ಕೈಕಾರ, ಸಚಿನ್ ಸುವರ್ಣ ಅವರನ್ನು ಗೌರವಿಸಲಾಯಿತು.