ಕೋಲ್ಕತಾ:ಪಶ್ಚಿಮ ಬಂಗಾಳದ 5ನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ನಡೆದ ಕೆಲವು ಪ್ರದೇಶಗಳಲ್ಲಿ ವಿರಳ ಸಂಖ್ಯೆಯಲ್ಲಿ ಹಿಂಸಾಚಾರ ನಡೆದಿರುವುದು ವರದಿಯಾಗಿದೆ ಎಂದು ಶನಿವಾರ(ಏ.17) ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಶವ ಮುಂದಿಟ್ಟುಕೊಂಡು ರಾಜಕೀಯ ಮಾಡೋ ಟಿಎಂಸಿಯ ಹಳೇ ಚಾಳಿ ಮುಂದುವರೆದಿದೆ : ಪ್ರಧಾನಿ ಮೋದಿ
ಮಧ್ಯಾಹ್ನ 3ಗಂಟೆವರೆಗೆ ಶೇ.69.40ರಷ್ಟು ಮತದಾನವಾಗಿದೆ. ಅಂದಾಜು 1.13 ಕೋಟಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ಉತ್ತರ 24 ಪರಗಣಾಸ್ ನ 45 ಸ್ಥಾನಗಳಿಗೆ, ದಕ್ಷಿಣ ಬಂಗಾಳದ ಪುರ್ಬಾ ಬರ್ಧಾಮಾನ್, ನಾಡಿಯಾ ಜಿಲ್ಲೆ, ಜಲ್ಪೈಗುರಿ, ದಾರ್ಜಿಲಿಂಗ್ ಮತ್ತು ಕಲಿಂಪಾಂಗ್ ಜಿಲ್ಲೆಗಳಲ್ಲಿ ಮತದಾನ ನಡೆದಿದೆ. ಭದ್ರತಾ ಸಿಬಂದಿಗಳು ತೀವ್ರ ನಿಗಾವಹಿಸಿದ್ದು, ಈ ಸಂದರ್ಭದಲ್ಲಿ ನಡೆದ ಕೆಲವು ಅಹಿತಕರ ಘಟನೆಗಳನ್ನು ನಿಯಂತ್ರಣಕ್ಕೆ ತಂದು ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ 24 ಪರಗಣಾಸ್ ಜಿಲ್ಲೆಯ ದೇಗಂಗಾ ಕ್ಷೇತ್ರದ ಕುರುಲ್ ಗಚಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚದುರಿಸಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ ದೇಗಂಗಾ ಪ್ರದೇಶದಲ್ಲಿ ಯಾವುದೇ ಗುಂಡಿನ ದಾಳಿಯ ಘಟನೆ ನಡೆದಿಲ್ಲ. ಇಲ್ಲಿ ಶಾಂತಿಯುತವಾಗಿ ಮತದಾನ ನಡೆದಿರುವುದಾಗಿ ಕೇಂದ್ರ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶಾಂತಿನಗರ್ ಪ್ರದೇಶದ ವಿಜ್ಞಾನ್ ನಗರದಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಮತಗಟ್ಟೆಯಲ್ಲಿ ಮತದಾನ ಸ್ಥಗಿತಗೊಳಿಸಲಾಗಿತ್ತು. ಕಲ್ಲು, ಇಟ್ಟಿಗೆಗಳನ್ನು ತೂರಿದ ಪರಿಣಾಮ ಎಂಟು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.