Advertisement

ಸ್ಥಳೀಯರ ಆವಶ್ಯಕತೆ ಪೂರೈಸಲು ಶ್ರಮಿಸಿ: ಶಾಸಕ ಸಂಜೀವ ಮಠಂದೂರು

09:42 AM Feb 11, 2020 | Hari Prasad |

ಪುತ್ತೂರು: ಯುವಕ, ಯುವತಿ ಮಂಡಲಗಳು ದೇಶದ ಕಲೆ, ಸಂಸ್ಕೃತಿಯನ್ನು ಪರಿಚಯಿಸುವ ಜತೆಗೆ ಸ್ಥಳಿಯವಾಗಿ ತಳಮಟ್ಟದ ಜನರ ಆವಶ್ಯಕತೆಗಳನ್ನು ಪೂರೈಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ಬನ್ನೂರು ಸ್ಫೂರ್ತಿ ಮೈದಾನದಲ್ಲಿ ಫೆ. 8ರಂದು ಸಂಜೆ ನಡೆದ ಸ್ಫೂರ್ತಿ ಯುವಕ-ಯುವತಿ ಮಂಡಲ, ಮಹಿಳಾ ಮಂಡಲ ಹಾಗೂ ಬಾಲ ಸಭಾ ಇವುಗಳ 29ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ತರುಣರ ದೇಶ. ಯುವ ಸಮಾಜ ಶಕ್ತಿಯುತವಾಗಿದ್ದು, ದೇಶದ ಪ್ರಗತಿಯ ಕುರಿತು ಚಿಂತಿಸಬೇಕು. ಯುವಕರು ಸಂಘಟನೆಗಳಲ್ಲಿ ತೊಡಗಿಸಿಕೊಂಡಾಗ ವ್ಯಕ್ತಿತ್ವವೂ ಬೆಳೆಯುತ್ತದೆ, ದೇಶ ನಿರ್ಮಾಣಕ್ಕೂ ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.

ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಕಿರುತೆರೆ ನಟ ನಂದಕಿಶೋರ್‌ ಭಟ್ಕಳ, ಸ.ಹಿ.ಪ್ರಾ. ಶಾಲೆ ಕಾಸರಗೋಡು ಚಿತ್ರ ನಟ ರಂಜನ್‌, ಸಹ ನಟ ಸಂಪತ್‌, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲಾ ಶಿಕ್ಷಕ ಇನಾಸ್‌ ಗೊನ್ಸಾಲ್ವಿಸ್‌ ಮಾತನಾಡಿದರು.

ಸಾಧಕರಿಗೆ ಗೌರವ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರೇಶ್‌ ರೈ ಸೂಡಿಮುಳ್ಳು, ಪಿಎಲ್‌ಡಿ ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕ ಯಶೋಧರ ಜೈನ್‌, ಮೆಸ್ಕಾಂನ ಮೋನಪ್ಪ ಗೌಡ, ಬೇಕರಿ ಉತ್ಪನ್ನಗಳ ವಿತರಕ ರಾಜೇಂದ್ರ ಹೆಗ್ಡೆ ನೆಕ್ಕಿಲ ಅವರನ್ನು ಸಮ್ಮಾನಿಸಲಾಯಿತು.

Advertisement

2018-19ನೇ ಸಾಲಿನ 7ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬನ್ನೂರು ಶಾಲೆ ವಿದ್ಯಾರ್ಥಿಗಳಾದ ರೂಪಕ್‌ ಬಿ. ಹಾಗೂ ಲಕ್ಷ್ಮೀ ಅವರಿಗೆ ಪ್ರತಿಭಾ ಪುರಸ್ಕಾರ ಹಾಗೂ ಯುವಕ ಮಂಡಲದ ಗೌರವಾಧ್ಯಕ್ಷ ವಿಶ್ವನಾಥ ನಾಯ್ಕ ಹಾಗೂ ಮಹಿಳಾ ಮಂಡಲ ಜತೆ ಕಾರ್ಯದರ್ಶಿ ಬೇಬಿ ಶೋಭನಾ ಅವರನ್ನು ಗೌರವಿಸಲಾಯಿತು.

ತನ್ವೀ ಹಾಗೂ ಸಾನ್ವಿ ಪ್ರಾರ್ಥಿಸಿದರು. ಯುವ ಸಂಸ್ಥೆಗಳ ಸಂಚಾಲಕ ದಿನೇಶ್‌ ಸಾಲಿಯಾನ್‌ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಆದರ್ಶ ಸಾಲಿಯಾನ್‌ ವರದಿ ವಾಚಿಸಿದರು. ಕಾರ್ತಿಕ್‌, ಉದಯ ಕುಮಾರ್‌, ಭವಿಷ್‌, ವಿಶ್ವನಾಥ ನಾಯ್ಕ, ನವೀನ್‌ ರೈ, ಕುಶಾಲಪ್ಪ ಗೌಡ, ಶರತ್‌ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಯುವಕ ಮಂಡಲದ ಅಧ್ಯಕ್ಷ ಹರೀಶ್‌ ಬಿ.ಎನ್‌ ವಂದಿಸಿದರು. ಶಿಕ್ಷಕಿ ದೇವಿಕಾ ಹಾಗೂ ಅಮರನಾಥ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಈಶ ವಿದ್ಯಾಲಯ ನೆಲ್ಲಿಕಟ್ಟೆ ಇದರ ಡಿಎಮ್‌ಇಎಡ್‌ ನರ್ಸರಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ವೈವಿದ್ಯ ಹಾಗೂ ಸ್ಫೂರ್ತಿ ಕಲಾವಿದರಿಂದ ತುಳುನಾಡ ವೈಭವ ನಡೆಯಿತು.

ಕಲಾಮಾತೆಯ ಆರಾಧನೆ
ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಡಾ| ಬಿ. ಶ್ರೀಧರ ಭಂಡಾರಿ ಅವರಿಗೆ ಈ ವರ್ಷದ ಸ್ಫೂರ್ತಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮ್ಮಾನಕ್ಕೆ ಉತ್ತರಿಸಿದ ಅವರು, ಕಲಾವಿದರನ್ನು ಗುರುತಿಸಿ, ಗೌರವಿಸುವುದು ಕಲಾ ಮಾತೆಯ ಆರಾಧನೆ ಮಾಡಿದಷ್ಟೇ ಶ್ರೇಷ್ಠವಾದುದು. ಕಲಾವಿದರನ್ನು ಗುರುತಿಸಲು ಹೃದಯ ಶ್ರೀಮಂತಿಕೆ ಅವಶ್ಯ. ಅದಕ್ಕೆ ಹಣ ಮುಖ್ಯವಲ್ಲ. ಗುಣ ಮುಖ್ಯವಾಗಿದ್ದು, ಸ್ಫೂರ್ತಿ ಯುವ ಸಂಸ್ಥೆಗಳು ಇದಕ್ಕೆ ನಿದರ್ಶನವಾಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next