Advertisement

ಕಾನನವಿಲ್ಲದೆ ಕಂಗಾಲಾದ ಸ್ಪಿಕ್ಸ್‌ ಮಕಾವ್‌ಗಳು

09:49 AM Feb 17, 2020 | mahesh |

ಇವು ನೀಲಿ ಬಣ್ಣದ ಗಿಳಿಗಳು! ಬ್ರೆಜಿಲ್‌ನ ಕಾಡಿನಲ್ಲಿರುವ ಈ ಪಕ್ಷಿಗಳೀಗ ಅಳಿವಿನ ಅಂಚಿನಲ್ಲಿವೆ. ಉಳಿದಿರುವ ಬೆರಳೆಣಿಕೆಯ ಗಿಳಿಗಳನ್ನು ಸಂರಕ್ಷಿಸುವ ಕೆಲಸ ನಡೆದಿದೆ.

Advertisement

ಬ್ರೆಜಿಲ್‌ನ ಕಾಡಿನಿಂದ ಅಳಿದೇ ಹೋಗಿರುವ ನೀಲ ಬಣ್ಣದ ಸ್ಪಿಕ್ಸ್‌ ಮಾಕಾವ್‌ಗಳನ್ನು ಮತ್ತೆ ಕಾಡಿನಲ್ಲಿ ಹಾರಾಡುವಂತೆ ಮಾಡಲು ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಬ್ರೆಜಿಲ್‌ ಸರಕಾರ ಪರಿಸರದ ಬಗ್ಗೆ ಅಸಡ್ಡೆ ತೋರುತ್ತ ಬಂದಿದೆ ಎನ್ನುವ ಆರೋಪದ ನಡುವೆಯೇ, ಯುರೋಪಿನಲ್ಲಿ ಪಂಜರದಲ್ಲಿರುವ ಈ ಗಿಳಿಗಳನ್ನು ಜತನದಿಂದ ಸಾಕಿ ಕಾಡಿನಲ್ಲಿ ಬಿಟ್ಟು ಮತ್ತೆ ಕಾನನದಲ್ಲಿ ಇವುಗಳ ಕೂಗನ್ನು ಕೇಳಲು ಬ್ರೆಜಿಲ್‌ ಸರಕಾರ ಯೋಜನೆ ರೂಪಿಸಿದೆ.

ಬ್ರೆಜಿಲ್‌ ಸರಕಾರ ಕಾಡಿನಿಂದ ನಿರ್ನಾಮವಾಗಿ ಹೋಗಿರುವ ಸ್ಪಿಕ್ಸ್‌ ಮಾಕಾವ್‌ಗಳನ್ನು ಯುರೋಪಿನ ಬೆಲ್ಜಿಯಂ ಮತ್ತು ಜರ್ಮನಿಯಿಂದ ತರಿಸಿಕೊಳ್ಳುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ. ಅದರಂತೆ 50 ಮಧ್ಯಮ ಗಾತ್ರದ, ವಿವಿಧ ನೀಲ ವರ್ಣ ಸಂಯೋಜನೆಯ ಗರಿ ಹೊಂದಿರುವ ಗಿಳಿ ಜಾತಿಯ ಸ್ಪಿಕ್ಸ್‌ ಮಾಕಾವ್‌ಗಳನ್ನು ಕಾಳಜಿಯಿಂದ ಆರೈಕೆ ಮಾಡಿ ಕಾಡಿಗೆ ಬಿಡಲಾಗುವುದು.

ವಿನಾಶಕ್ಕೆ ಒಳಗಾದ ಗಿಳಿಗಳ ಸಂರಕ್ಷಣಾ ಸಂಘದ (ಎಸಿಟಿಪಿ) ಪ್ರಕಾರ ಬ್ರೆಜಿಲ್‌ನ ಕಾಡಿನಲ್ಲಿ ಸಮೃದ್ಧವಾಗಿದ್ದ ಸ್ಪಿಕ್ಸ್‌ ಮಾಕಾವ್‌ಗಳು ಕೊನೆಯ ಬಾರಿಗೆ ಕಾಣಸಿಕ್ಕಿದ್ದು 2000ದಲ್ಲಿ. ಕಾಡಿನ ನಾಶ, ಸಾಕುವಿಕೆಗಾಗಿ ಇವುಗಳ ಸಾಗಣೆಯಿಂದಾಗಿ ಈ ಹಕ್ಕಿಗಳು ಕಾಡಿನಿಂದ ಅಳಿದವು. ಇಂದು ಈ ಪ್ರಬೇಧದ ಕೊನೆಯ 160 ಹಕ್ಕಿಗಳು ಯುರೋಪಿನಲ್ಲಿ ಪಂಜರದಲ್ಲಿ ಬಂಧಿಯಾಗಿ ಜೀವನ ಸಾಗಿಸುತ್ತಿವೆ.

ಈಗಾಗಲೇ ಬ್ರೆಜಿಲ್‌ ಮತ್ತು ಜರ್ಮನಿ ನಡುವಿನ ಒಪ್ಪಂದದ ಪ್ರಕಾರ ಜರ್ಮನಿಯ ಬರ್ಲಿನ್‌ನಲ್ಲಿ ವಿಶೇಷ ಕೇಂದ್ರವನ್ನು ಸ್ಥಾಪಿಸಿ ಸ್ಪಿಕ್ಸ್‌ ಮಾಕಾವ್‌ಗಳ ಆರೈಕೆ ಮಾಡಲಾಗುವುದು. ಬಳಿಕ ಅವುಗಳನ್ನು ಬ್ರೆಜಿಲ್‌ನ ಬಹಿಯಾದಲ್ಲಿರುವ 72 ಎಕರೆ ಪ್ರದೇಶದಲ್ಲಿರುವ ಸಂರಕ್ಷಣಾ ಕೇಂದ್ರಕ್ಕೆ ಕರೆದೊಯ್ಯಲಾಗುವುದು. ಇಲ್ಲಿ ಆರೈಕೆ ಮಾಡಲಾದ ಗಿಳಿಗಳನ್ನು 2021ರಲ್ಲಿ ಕಾಡಿಗೆ ಬಿಡಲು ನಿರ್ಧರಿಸಲಾಗಿದೆ.

Advertisement

ಬ್ರೆಜಿಲ್‌ ಸರಕಾರದ ಪ್ರಕಾರ ಪಂಜರದಲ್ಲಿರುವ ಸ್ಪಿಕ್ಸ್‌ ಮಾಕಾವ್‌ ಗಿಳಿಗಳ ಸಂಖ್ಯೆ 2012ರಲ್ಲಿ 72 ಇದ್ದರೆ, 2018ಕ್ಕೆ ಇದು 160ಕ್ಕೆ ಏರಿಕೆಯಾಗಿದೆ. ಎಸಿಟಿಪಿ ಪ್ರಕಾರ, ಈ ಗಿಳಿಗಳು ಕಾಡಿನಲ್ಲಿ ಉಳಿದು ಬಾಳಲು ಅವುಗಳ ಸಂಖ್ಯೆಯಲ್ಲಿ ಹೆಚ್ಚಳ ಆಗಬೇಕಿದೆ. ಬ್ರೆಜಿಲ್‌ನ ಕತ್ತಿಂಗ ಕಾಡಿನಲ್ಲಿ ಉಳಿದು, ಇವು ಬೆಳೆಯುವಂತಾಗಲು ಅಲ್ಲಿನ ಜನರು ಇವುಗಳ ಜೊತೆಗೆ ಸಹಜೀವನ ನಡೆಸಬೇಕಿದೆ. ಇದಕ್ಕಾಗಿ ಕತ್ತಿಂಗದ ಸ್ಥಳೀಯ ಜನರಿಗೆ ಈ ಹಕ್ಕಿಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಯತ್ನವನ್ನೂ ಮಾಡಲಾಗುತ್ತಿದೆ.

ಕಾಡಿನಿಂದ ಅಳಿದ ಸ್ಪಿಕ್ಸ್‌ ಮಾಕಾವ್‌ಗಳ ಕತೆ
ಬ್ರೆಜಿಲ್‌ನ ಕಾಡಿನಲ್ಲಿದ್ದ ಸ್ಪಿಕ್ಸ್‌ ಮಾಕಾವ್‌ಗಳು 1985ರ ವೇಳೆಗೆ ವಿನಾಶದ ಅಂಚಿಗೆ ತಲುಪುತ್ತಿರುವುದನ್ನು ಗಮನಿಸಲಾಯಿತು. 1985ರಿಂದ 1986ರ ವೇಳೆಗೆ ಮೂರು ಸ್ಪಿಕ್ಸ್‌ ಮಾಕಾವ್‌ಗಳು ಬ್ರೆಜಿಲ್‌ನ ಉತ್ತರ ಬಹಿಯಾದಲ್ಲಿ ಕಂಡು ಬಂದವು. ಆದರೆ, 1988ರ ವೇಳೆಗೆ ದುರದೃಷ್ಟವಶಾತ್‌ ಈ ಹಕ್ಕಿಗಳನ್ನು ಸಾಕುವಿಕೆಗಾಗಿ ಸೆರೆಹಿಡಿಯಲಾಯಿತು.

1990ರಲ್ಲಿ ಬ್ರೆಜಿಲ್‌ನ ಕಾಡಿನಲ್ಲಿ ಗಂಡು ಸ್ಪಿಕ್ಸ್‌ ಮಾಕಾವ್‌ ಗಿಳಿಯನ್ನು ಪತ್ತೆ ಹಚ್ಚಲಾಯಿತು. ಇದಕ್ಕೆ ಜೋಡಿಯಾಗಿ ಪಂಜರದಲ್ಲಿದ್ದ ಹೆಣ್ಣು ಸ್ಪಿಕ್ಸ್‌ ಮಾಕಾವ್‌ ಗಿಳಿಯನ್ನು 1995ರಲ್ಲಿ ಕಾಡಿಗೆ ಬಿಡುವ ಪ್ರಯತ್ನ ನಡೆಯಿತು. ಆದರೆ, ಈ ಹಕ್ಕಿ ಕಾಡಿಗೆ ಬಿಟ್ಟ ಏಳು ವಾರದಲ್ಲಿ ಕಣ್ಮರೆಯಾಗಿ ಹೋಯಿತು. ವಿದ್ಯುತ್‌ ತಂತಿಗೆ ಸಿಲುಕಿ ಈ ಹಕ್ಕಿ ಸತ್ತಿತ್ತು ಎಂದು ಜೀವವಿಜ್ಞಾನಿಗಳು ಭಾವಿಸಿದರು.

ಮತ್ತೆ ಗಂಡು ಸ್ಪಿಕ್ಸ್‌ ಮಾಕಾವ್‌ಗೆ ಹೆಣ್ಣು ಜೋಡಿಯನ್ನು ಬಿಡುವ ಪ್ರಯತ್ನವನ್ನು ಮಾಡಲಾಯಿತು. ಆದರೆ, 2000ದ ಬಳಿಕ ಈ ನೀಲಿ ವರ್ಣದ ಗಿಳಿ ಕಾಡಿನಲ್ಲಿ ಕಾಣಿಸಲಿಲ್ಲ. ಇದು ಕಾಡಿನಿಂದ ಕಣ್ಮರೆಯಾಗಿದೆ ಎಂದು ಅಧಿಕೃತವಾಗಿ ನಿರ್ಧರಿಸಲಾಯಿತು.

ಈ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಇವುಗಳ ಆವಾಸಗಳ ನಾಶ, ಸಾಕುವಿಕೆಗಾಗಿ ಇವುಗಳ ಬೇಟೆ ಅವಸಾನಕ್ಕೆ ಕಾರಣವಾಯಿತು. ಬ್ರೆಜಿಲ್‌ನ ಪ್ರಯೋಗಾಲಯದಿಂದ ತಪ್ಪಿಸಿಕೊಂಡ ಹೈಬ್ರಿಡ್‌ ಆಫ್ರಿಕನ್‌ ಜೇನುನೊಣಗಳು ಬ್ರೆಜಿಲ್‌ನ ಕಾಡಿನಲ್ಲಿ ಶೀಘ್ರವಾಗಿ ಹರಡಿ ಸ್ಪಿಕ್ಸ್‌ ಮಾಕಾವ್‌ಗಳಿಗೆ ತೊಂದರೆ ಉಂಟುಮಾಡಿದವು ಎಂದೂ ಹೇಳಲಾಗುತ್ತಿದೆ. ಆಕ್ರಮಣಕಾರಿಯಾಗಿದ್ದ ಆಫ್ರಿಕಾ ಹಾಗೂ ಯುರೋಪಿನ ಜೇನುನೊಣಗಳ ಈ ಹೈಬ್ರಿಡ್‌ ಜೇನುನೊಣಗಳ ತಳಿ ಮರಗಳ ಪೊಟರೆಯಲ್ಲಿ ಗೂಡುಕಟ್ಟುವ ಮೂಲಕ ಸ್ಪಿಕ್ಸ್‌ ಮಾಕಾವ್‌ಗಳಿಗೆ ಪ್ರತಿಸ್ಪರ್ಧಿಯಾದವು ಎಂದು ಅಂದಾಜಿಸಲಾಗಿದೆ.

ಸ್ಪಿಕ್ಸ್‌ ಮಾಕಾವ್‌ಗಳ ಜೀವನವನ್ನು ಆಧರಿಸಿ ರಿಯೋ ಎನ್ನುವ ಅನಿಮೇಟೆಡ್‌ ಸಿನೆಮಾವನ್ನು ತಯಾರಿಸಲಾಯಿತು. ಈ ಸಿನೆಮಾ ಬ್ರೆಜಿಲ್‌ನ ಕಾಡಿನಲ್ಲಿ ಸೆರೆಹಿಡಿಯಲಾದ ಸ್ಪಿಕ್ಸ್‌ ಮಾಕಾವ್‌ ಪ್ರಬೇಧದ ಕೊನೆಯ ಗಂಡು ಗಿಳಿ, ಹೆಣ್ಣು ಗಿಳಿ ಇರುವುದನ್ನು ತಿಳಿದು ಮತ್ತೆ ಬ್ರೆಜಿಲ್‌ನ ಕಾಡಿಗೆ ಮರಳಿ ಮೂರು ಮರಿಗಳಿಗೆ ತಂದೆಯಾಗುವ ಕಥಾ ಹಂದರವನ್ನು ಹೊಂದಿದೆ. ಈಗ ಬ್ರೆಜಿಲ್‌ ಸರಕಾರ ಈ ಸಿನೆಮಾದ ಕಥೆಯನ್ನು ನಿಜ ಮಾಡುವ ನಿಟ್ಟಿನಲ್ಲಿ ಪ್ರಶಂಸಾರ್ಹ ಹೆಜ್ಜೆ ಇಟ್ಟಿದೆ.

ಐಯುಸಿಎನ್‌ ರೆಡ್‌ಲಿಸ್ಟ್‌ನಲ್ಲಿ ಕಾಡಿನಿಂದ ಕಣ್ಮರೆಯಾದ ಹಕ್ಕಿಗಳ ಪಟ್ಟಿಯಲ್ಲಿ ಸ್ಪಿಕ್ಸ್‌ ಮಾಕಾವ್‌ಗಳಿವೆ. ಇವುಗಳನ್ನು ಉಳಿಸಿಕೊಳ್ಳದೆ ಹೋದರೆ ಇವುಗಳು ಅಳಿದುಹೋದ ಹಕ್ಕಿಗಳ ಸಾಲಿಗೆ ಸೇರುವ ಅಪಾಯವಿದೆ.

ಅರುಣ್‌ ಕಿಲ್ಲೂರು

Advertisement

Udayavani is now on Telegram. Click here to join our channel and stay updated with the latest news.

Next