Advertisement

ಸ್ಪಿತಿ ವ್ಯಾಲಿಯಲ್ಲಿ ಕಡೆಯ ದಿನ ಇನ್ನೇನು ದೆಹಲಿಗೆ 540 ಕಿಮೀ ಬಾಕಿ

03:45 AM Jan 10, 2017 | |

ಒಬ್ಬ ಹಿರಿಯರು ಇನ್ನೊಂದೆರಡು ಲಾಡ್ಜ್ ಗಳು ಇರುವುದಾಗಿ ಹೇಳಿ ಅಲ್ಲಿಗೆ ಹೋಗುವ ದಾರಿ ತೋರಿಸಿದರು. ಕೊನೆಗೆ ತುಂಬಾ ಚೌಕಾಶಿ ಮಾಡಿದ ಬಳಿಕ ಚಿಕ್ಕ ಲಾಡ್ಜ್ ನಲ್ಲಿ 800 ರೂಪಾಯಿಗಳಿಗೆ ನಮ್ಮ ವಸತಿ ನಿಗದಿಯಾಯಿತು. ನೆಲ ಮಹಡಿಯಲ್ಲೇ ಇರುವ ಹೋಟೆಲ್‌ನಲ್ಲಿ ರೋಟಿ ಮತ್ತು ಚಿಕನ್‌ ಕರಿ ತಿಂದು ವಾಯುವಿಹಾರಕ್ಕೆ ಹೊರಟೆವು. ನಮ್ಮ ಬೆಂಗಳೂರಿನ ತರಹದ ಚಳಿ. ದಾರಿಯಲ್ಲಿ ಸಿಹಿತಿಂಡಿಗಳ ಅಂಗಡಿಯನ್ನು ಮುಚ್ಚುತ್ತಿದ್ದ ಅಂಕಲ್‌ಗೆ ಒತ್ತಾಯ ಪೂರ್ವಕವಾಗಿ ಅಂಗಡಿಯನ್ನು ಪುನಃ ತೆರೆಯಿಸಿ ಲಡೂx ಮತ್ತು ರಸಗುಲ್ಲ ಪಾರ್ಸಲ್‌ ಮಾಡಿಸಿಕೊಂಡು ತಿನ್ನುತ್ತಾ ಊರಿನ ಸುತ್ತಲೂ ಸುತ್ತಾಡಿಕೊಂಡು ಬಂದು ಮಲಗಿದಾಗ 12 ಆಗಿತ್ತು.

Advertisement

ನಮ್ಮ ಮುಂದಿನ ನಿಲ್ದಾಣ ಮನಾಲಿ ಕೇವಲ 40 ಕಿಮೀ ದೂರವಿದ್ದ ಕಾರಣ ನಮಗೆ ಬೇಗ ಎದ್ದು ಹೊರಡುವ ಅಗತ್ಯವಿರಲಿಲ್ಲ. ಆದರೆ ರೋಚಕವಾದ ರೋತಂಗ್‌ ಪಾಸ್‌ ನೋಡಲು ಕಾತುರರಾಗಿದ್ದೆವು. ಬೆಳಿಗ್ಗೆ ತಡವಾಗಿ ಎದ್ದು ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ಒಟ್ಟಿಗೆ ಮುಗಿಸಿ (ತಲಾ ಎರಡೆರಡು ಡುಬ್ಲೆ ಬ್ರೆಡ್‌ ಒಮ್ಲೆಟ್‌) ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ಅಲ್ಲಿಂದ ಹೊರಟಾಗ ಮಧ್ಯಾಹ್ನ 1 ಘಂಟೆ.

ತೊರೆಯಲ್ಲಿ ಮೀನು ಹಿಡಿದ ನೆನಪು
ಹಸಿರು ಬಣ್ಣದ ಗುಡ್ಡಗಳ ಮೇಲೆ ಹರಡಿರುವ ಶ್ವೇತ ಹಿಮರಾಶಿ. ಸರಾಸರಿ 100 ಮೀಟರ್‌ಗಳಲ್ಲಿ ಒಬ್ಬರಂತೆ ನಮ್ಮನ್ನು ದಾಟಿ, ಕೈಬೀಸಿ ಹೋಗುವ ರೈಡರ್‌ಗಳು. ಬಳ್ಳಿಗಳಂತೆ ಬಳುಕುವ ರಸ್ತೆ ಅಲ್ಲಲ್ಲಿ ನವೀಕರಣ. ಇನ್ನೊಂದೆಡೆ ಪ್ರಪಾತ, ಪ್ರಕೃತಿಯ ಸೌಂದರ್ಯಕ್ಕೆ ಎಲ್ಲವೂ ವಶೀಕರಣ. ಸ್ವಲ್ಪ ದೂರ ಹೋಗುತ್ತಿದ್ದಂತೆ ಬಾರಿ ಟ್ರಾಫಿಕ್‌ ಜಾಮ್‌. ಸಿಗ್ನಲ್‌ ಏನಾದರೂ ಇರಬಹುದಾ ಎಂದು ಹುಡುಕುತ್ತಾ, ಸಂದಿಗೊಂದಿಯಲ್ಲಿ ನುಸುಳುತ್ತಾ ಮುಂದೆ ತಲುಪಿದರೆ, ರಸ್ತೆ ಕಾಮಗಾರಿಗಾಗಿ ಗುಡ್ಡಗಳನ್ನು ಡೈನಮೈಟ್‌ ಬಳಸಿ ಸ್ಫೋಟಿಸುತ್ತಿದ್ದಾರೆ. ದೊಡ್ಡ ದೊಡ್ಡ ಗಾತ್ರದ ಬಂಡೆಗಳು ಉರುಳಿ ಪ್ರಪಾತವನ್ನು ಸೇರುವುದನ್ನು ನೋಡುವಾಗ, ನಮ್ಮ ಹಳ್ಳಿಯ ನದಿಯಲ್ಲಿ ಡೈನಮೈಟ್‌ ಬಳಸಿ, ಸತ್ತು ತೇಲುವ ಮೀನುಗಳನ್ನು ಈಜಾಡಿ, ಹಿಡಿದು ದಡದಲ್ಲಿ ಬೆಂಕಿ ಮಾಡಿ, ಅಡಿಗೆ ಮಾಡಿ ಊಟ ಮಾಡುತ್ತಿದ್ದ ಪ್ರಾಥಮಿಕ ಶಾಲಾ ದಿನಗಳು ನೆನಪಿಗೆ ಬಂದವು.

ಯುದ್ಧದ ಸನ್ನಿವೇಶದಂತೆ 1 ಗಂಟೆ ಅಲ್ಲೇ ಕಳೆದು, ಕೊನೆಗೆ ಅಲ್ಲಿಂದ ಹೊರಟಾಗ ಧಾರಾಕಾರ ಮಳೆ ಶುರುವಾಯಿತು. ಬ್ಯಾಗ್‌ಗಳೆಲ್ಲ ಟಾರ್ಪಾಲ್‌ಗ‌ಳಿಂದ ಸುತ್ತಿ ಬಂದೋಬಸ್ತ್ ಮಾಡಿದ್ದರಿಂದ, ಮಳೆಯಲ್ಲೇ ನೆನೆಯುತ್ತಾ ರೋತಂಗ್‌ ಪಾಸ್‌ ಪ್ರವೇಶಿಸಿದ್ದೆವು. ಮತ್ತೆ ಆಫ್ ರೋಡಿಂಗ್‌. 

ಬಿದ್ದು ಹೋದ ಹೆಲ್ಮೆಟ್‌ ವಾಪಸ್‌ ಬಂತು
ಮಳೆಯ ನೀರಿಗೆ ಕೊಚ್ಚೆಯಾಗಿರುವ ಧೂಳಿನ ರಸ್ತೆ, ಮಳೆಯೊಂದಿಗೆ ಮಂಜು ಸೇರಿ, ಫಾಗ್‌ ಲೈಟ್‌ ಹಾಕಿಕೊಂಡರೂ ಸುಮಾರು 5 ಮೀಟರ್‌ ದೂರವಷ್ಟೇ ಕಾಣುವ ರಸ್ತೆಯಲ್ಲಿ 10 ಕಿಮೀ ಪ್ರತಿ ಗಂಟೆ ವೇಗದಲ್ಲಿ ಚಲಿಸಿದರೂ, ಹಿಂದೆ ಬಂಗೀ ರೋಪ್‌ಗೆ ಕಟ್ಟಿದ್ದ ಸ್ಪೇರ್‌ ಹೆಲ್ಮೆಟ್‌ ಕಳೆದು ಹೋಗಿರುವುದು ಗಮನಕ್ಕೆ ಬಂದಿದ್ದು ನಿಂತು ಹಿಂದೆ ನೋಡಿದಾಗಲೇ. ತುಂಬಾ ಇಷ್ಟವಾದ ಹೆಲ್ಮೆಟ್‌ ಕಳೆದುಕೊಂಡಿದ್ದಕ್ಕೆ ಮರುಕವಾಗುತ್ತಿತ್ತು. ಹಿಂದಿರುಗಿ ಹೋಗುವುದೋ ಬೇಡವೋ ಎಂದುಕೊಳ್ಳುತ್ತಿರುವಾಗಲೇ, ಕಾರ್‌ನಲ್ಲಿ ನಮ್ಮ ಹಿಂದೆ ಬರುತ್ತಿದ್ದ ಯಾರೋ ಹೆಲ್ಮೆಟ್‌ ಕೊಟ್ಟು ಹೊದರು. 

Advertisement

ಅವರಿಗೆ ಮುಗುಳ್ನಗೆಯೊಂದಿಗೆ ಒಂದು ಥ್ಯಾಂಕ್ಸ್‌ ಹೇಳಿ ನೇರವಾಗಿ ರೋತಂಗ್‌ ಪಾಸ್‌ ಹೈ ಟಾಪ್‌ ತಲುಪಿದಾಗ ಮಳೆ ಬೆಚ್ಚನೆ ಕಡಿಮೆಯಾಗಿತ್ತು. ನಮ್ಮ ದುರದೃಷ್ಟಕ್ಕೆ ಸುತ್ತಲೂ ಮೋಡ ಕವಿದ ವಾತಾವರಣ ಇರುವುದರಿಂದ ರೋತಂಗ್‌ ಪಾಸ್‌ನ ಸೌಂದರ್ಯವನ್ನು ನೋಡಲಾಗುತ್ತಿಲ್ಲ ಎಂದುಕೊಳ್ಳುವಷ್ಟರಲ್ಲಿ, ಸೂರ್ಯನ ಕಿರಣಗಳು ಬೆನ್ನಟ್ಟಿ ಬಂದು ಕ್ಷಣಾರ್ಧದಲ್ಲಿ ಮಂಜನ್ನು ಆರಿಸಿ, ರೋತಂಗ್‌ ಪಾಸ್‌ ಅನ್ನು ಶುದ್ಧಗೊಳಿಸಿತ್ತು.

ಫೋಟೋ ತೆಗೆಸಿಕೊಂಡು ಅಲ್ಲಿಂದ ಹೊರಡಲು ಮತ್ತೆ ಮಳೆ ವಕ್ಕರಿಸಿತ್ತು. ರೋತಂಗ್‌ ಪಾಸ್‌ ದಾಟಿ ರೋಡ್‌ ಬದಿಯಲ್ಲಿರುವ ಹೋಟೆಲ್‌ನಲ್ಲಿ ಫ್ಯಾನ್‌ ಕೆಳಗಡೆ ಕುಳಿತು ಬಟ್ಟೆ ಒಣಗಿಸಿಕೊಳ್ಳುತ್ತಾ ಮೊದಲು ಚಹಾ ಕುಡಿದು, ಹಸಿವೆಗೆ ರೋಟಿ ಚಿಕನ್‌ ಕರಿ ಆರ್ಡರ್‌ ಮಾಡಿದೆವು. ಹೋಟೆಲ್‌ನ ಮಾಣಿ ಬಂದು ಈ ಚಳಿಗೆ, ಮನಾಲಿಗೆ ಬಂದು ಮನಾಲಿ ಮಾಲ್‌ ಟ್ರೆ„ ಮಾಡದಿದ್ದರೆ ಹೇಗೆ? ಜಾಯಂಟ್‌ ಮಾಡಿ ಕೊಡಲಾ? ಎಂದು ಕೇಳಿದ. ನಾವು ಬೇಡ ಗುರು ಎಂದು ಸನ್ನೆಯಲ್ಲೇ ಹೇಳಬೇಕಾಯಿತು. ಊಟ ಮುಗಿಸಿ ಅಲ್ಲಿಂದ ಹೊರಟು ಮನಾಲಿ ಹೋಟೆಲ್‌ ತಲುಪಿದೆವು. ಗುಡ್ಡದ ತಪ್ಪಲಲ್ಲಿರುವ ಹಿಮಾಲಯನ್‌ ರೀಜೆನ್ಸಿ ಎಂಬ ಹೋಟೆಲ್‌ ನಮ್ಮ ಉಹೆಗೆ ಮೀರಿ ಸುಂದರವಾಗಿತ್ತು.

ಹಡಿಂಬಾ ದೇಗುಲದಲ್ಲಿ ಘಟೋದ್ಗಜ
ಬಿಸಿ ನೀರಿನಲ್ಲಿ ಸ್ನಾನ ಮಾಡಿ ಹೋಟೆಲ್‌ ಸನಿಹದಲ್ಲೇ ಇರುವ ಪ್ರಸಿದ್ಧ ಹಡಿಂಬಾ ದೇವಸ್ಥಾನ ನೋಡಲು ಹೊರಟೆವು. ಸುಮಾರು ಕ್ರಿ.ಶ 1553ರಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ದೇವಸ್ಥಾನಕ್ಕೆ ಅದರದೇ ಆದ ಅಸ್ತಿತ್ವ ಹಾಗೂ ಪೌರಾಣಿಕ ಕಥೆಯಿದೆ. ರಾಕ್ಷಸ ಕುಲದ ಹಡಿಂಬಾ ದೇವಿ, ಪಂಚ ಪಾಂಡವರಲ್ಲಿ ಒಬ್ಬನಾದ ಭೀಮನನ್ನು ವರಿಸಿದ ಕಥೆಯನ್ನು ಅಲ್ಲಿ ಬರೆಯಲಾಗಿತ್ತು. ಅವರಿಬ್ಬರಿಗೆ ಜನಿಸಿದ ಘಟೋದ್ಗಜ ಹೆಸರಲ್ಲಿ ಒಂದು ಬೃಹತ್‌ ಆಕಾರದ ಮರ ಅಲ್ಲೇ ಸ್ವಲ್ಪದೂರದಲ್ಲಿ ಪೂಜಾ ಸ್ಥಾನವಾಗಿತ್ತು. ವಿಶೇಷವೆಂದರೆ ಬುರ್ಖಾ ಧರಿಸಿದ ಮಹಿಳೆಯರು ಬಂದು ದೇವಿಗೆ ನಮಸ್ಕರಿಸುತ್ತಿದ್ದುದು ನೋಡಿ, ಹೀಗೂ ಉಂಟೆ ಎನಿಸಿತು.

ಪಕ್ಕದಲ್ಲೇ ಇರುವ ಅಂಗಡಿಗಳಲ್ಲಿ ಚಿಕ್ಕ ಪುಟ್ಟ ಶಾಪಿಂಗ್‌ ಮಾಡಿ, ಹೋಟೆಲ್‌ ಸೇರಿಕೊಂಡೆವು. ರಾತ್ರಿ 10 ಘಂಟೆಗೆ ಹೊಸದಾಗಿ ಬಿಡುಗಡೆಯಾಗಿರುವ ಭಾಯಿ ಸಲ್ಮಾನ್‌ನ ಸುಲ್ತಾನ್‌ ಚಿತ್ರ ಬುಕ್‌ ಮೈ ಶೋ ನಲ್ಲಿ ಬುಕ್‌ ಮಾಡಿದೆವು. ಸರಿಯಾದ ಸಮಯಕೆ ಪಿಕ್ಕಾಡೆಲ್ಲಿ ಥಿಯೇಟರ್‌ಗೆ ಹೋಗಿ, ಹೊರಗಡೆ ಪ್ರದರ್ಶನಕ್ಕೆ ಇಟ್ಟಿರುವ ಹಳೆಯ ಬಾಬ್ಬೀ ಮೂವೀಯಲ್ಲಿ ಬಳಸಲಾಗಿದೆ ಎನ್ನಲಾದ ಸ್ಕೂಟರ್‌ ಹಾಗೂ ಕಾರ್‌ನೊಂದಿಗೆ ಫೋಟೋ ತೆಗೆಸಿಕೊಂಡು ಸುಲ್ತಾನ್‌ ಮೂವೀ ನೋಡಲು ಕುಳಿತುಕೊಂಡೆವು.

ಮೂವೀ ಮುಗಿಸಿ, ರಾತ್ರಿ 1 ಗಂಟೆಗೆ ರಸ್ತೆ ಬದಿಯಲ್ಲಿರುವ ಫ‌ುಟ್‌ಪಾತ್‌ ಹೋಟೆಲ್‌ನಲ್ಲಿ ಜೀರ ರೈಸ್‌ ಜೊತೆಗೆ ತವಾ ಚಿಕನ್‌ ತಿಂದು ಹೋಟೆಲ್‌ ತಲುಪಿದಾಗ ರಾತ್ರಿ 2 ಗಂಟೆಯಾಗಿತ್ತು. ಚಿಕ್ಕದಾಗಿ ಜಿನುಗುವ ಮಳೆ ಮನಾಲಿಯಲ್ಲಿ ಹನಿ ನೀರಾವರಿ ಮಾಡುತ್ತಿತ್ತು. ಬೆಳಿಗ್ಗೆ ಬೇಗ ಎದ್ದು ದೆಹಲಿ ತಲುಪಬೇಕು. 

ಮಲಗಿದರೂ ನಿದ್ದೆ ಬರಲಿಲ್ಲ. ಎಲ್ಲೋ ಮನಸ್ಸಿನ ಒಂದು ಕಡೆ ಸ್ಪಿತಿ ವ್ಯಾಲೀ ನೋಡಲಾಗದ ಕೊರಗು ಕಾಡುತ್ತಿತ್ತು. ಗೂಗಲ್‌ ಮ್ಯಾಪ್‌ ಓಪನ್‌ ಮಾಡಿ ನೋಡಿದಾಗ ದೆಹಲಿ 540ಕಿಮೀ ದೂರವಿದೆ ಎಂದು ತೋರಿಸಿತು.

(ಮುಂದುವರೆಯುವುದು)

– ವಿಶ್ವಜಿತ್‌ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next