ಮುದ್ದೇಬಿಹಾಳ: ನಮ್ಮ ದೇಶದ ನಿಜವಾದ ಆಸ್ತಿ ಅಧ್ಯಾತ್ಮವಾಗಿದೆ. ಜಗತ್ತಿನಲ್ಲಿಯೇ ನಿಜವಾದ ಶ್ರೀಮಂತ ಹಾಗೂ ಅಧ್ಯಾತ್ಮದ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯವಾಗಿತ್ತು. ಆಗ ಈ ಭಾಗ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತ್ತು ಅನ್ನೋದು ನಮಗೆಲ್ಲ ಹೆಮ್ಮೆ ತರುವಂಥದ್ದು ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಗ್ರಾಮದ ಪಾರ್ವತಿ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆಯುತ್ತಿರುವ ಮಹಾದಾಸೋಹಿ ಕಲಬುರಗಿಯ ಶರಣಬಸವೇಶ್ವರ ಮಹಾಪುರಾಣ ಪ್ರವಚನದಲ್ಲಿ ಯುವಕ ಮಂಡಳಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಹೇಗೆ ಬದುಕಬೇಕು ಅನ್ನೋದನ್ನು ಹೇಳಿಕೊಟ್ಟ ದೇಶ ನಮ್ಮ ಭಾರತ. ಕಾಯಕ ಮಾಡುತ್ತಲೇ ಸಂಸ್ಕೃತಿ, ಸಂಸ್ಕಾರ ಪಾಲಿಸುತ್ತ ಆಧ್ಯಾತ್ಮದ ಒಲವನ್ನು ಹೊಂದಿರುವ ಈ ದೇಶದ ಹಿರಿಮೆ ಬೇರೆ ಯಾವ ದೇಶದಲ್ಲೂ ಕಂಡು ಬರೊಲ್ಲ. ಇದು ಶರಣರು, ಸಂತರ ನಾಡು. ಇಂಥ ನಾಡಿನಲ್ಲಿ ಪ್ರವಚನ ನಡೆದರೆ ಮನೆ ಮನೆಗಳಿಂದ ತಾಯಂದಿರು ಬರುತ್ತಾರೆ. ಇದು ನಮ್ಮ ಸಂಸ್ಕೃತಿ. ದಾರಿ ಹೋಕರಿಗೂ ದಾಸೋಹ ಮಾಡುವ ಸಂಪ್ರದಾಯ ಇಂದಿಗೂ ನಮ್ಮ ದೇಶ, ನಮ್ಮ ರಾಜ್ಯದಲ್ಲಿದೆ ಎಂದರು.
ಪ್ರವಚನಕಾರ ವೇದಮೂರ್ತಿ ಶಿವಮೂರ್ತಿ ಶಾಸ್ತ್ರಿಯವರು, ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಗಣ್ಯರಾದ ಪ್ರಸನ್ನಕುಮಾರ ಜಹಾಗೀರದಾರ, ಬಸನಗೌಡ ಪಾಟೀಲ, ಅಶೋಕ ಬೋವಿ, ತಾಪಂ ಮಾಜಿ ಸದಸ್ಯ ಮಲ್ಲನಗೌಡ ಪಾಟೀಲ, ಪಣಯ್ಯ ಹಿರೇಮಠ, ಬಿ.ಬಿ. ಭೋವಿ, ಸಂಗಪ್ಪ ರಾಮೋಡಗಿ, ಅಡಿವೆಪ್ಪ ನಾಡಗೌಡ್ರ, ಶೇಖಪ್ಪ ನಾರಯಣಪುರ, ರುದ್ರು ರಾಮೋಡಗಿ, ಮಲ್ಲಿಕಾರ್ಜನ ಗುಡಗುಂಟಿ, ಗಿರೀಶ ಲಿಂಗದಳ್ಳಿ, ಎಚ್.ಎನ್. ಭೋವಿ, ಆದೇಶ ನಾಗರತ್ತಿ ಮುಂತಾದವರು ಇದ್ದರು.
ಸಂಗಮೇಶ್ವರ ದೇವಸ್ಥಾನದ ನೂತನ ತೇರು ನಿರ್ಮಾಣಕ್ಕೆ ವೈಯುಕ್ತಿಕವಾಗಿ 2 ಲಕ್ಷ ರೂ. ನೆರವು ನೀಡುತ್ತೇನೆ. ಒಂದು ವೇಳೆ ತೇರು ಪೂರ್ಣಗೊಳ್ಳಲು ಇನ್ನೂ ಹೆಚ್ಚಿನ ನೆರವು ಬೇಕಾದರೂ ನೀಡುತ್ತೇನೆ.
ಎ.ಎಸ್. ಪಾಟೀಲ ನಡಹಳ್ಳಿ, ಶಾಸಕರು