ಅಕ್ಕಿಆಲೂರು: ಯುಗಾದಿಗಳಿಂದಲೂ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪಾರಿಣ್ಯತೆ ಸಾಧಿಸಿ ವಿಶ್ವದ ದೇವರ ಮನೆಯಾಗಿ ಹೊರಹೊಮ್ಮಿರುವುದು ನಮ್ಮ ದೇಶ. ಆದರೆ, ಸಾಂಸ್ಕೃತಿಕ ರಾಷ್ಟದಲ್ಲಿಯೇ ಆಧ್ಯಾತ್ಮಿಕ ಅನಾಥಪ್ರಜ್ಞೆ ಕಾಡುತ್ತಿದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಕಳವಳ ವ್ಯಕ್ತಪಡಿಸಿದರು.
ಮಾನಸಿಕ ನೆಮ್ಮದಿ ಹುಡುಕಿಕೊಂಡು ಬಂದ ನೋಂದ ಜೀವಿಗಳಿಗೆ ಆಶ್ರಯ ಒದಗಿಸುವಲ್ಲಿ ಕಾರ್ಯಪ್ರವೃತ್ತವಾಗುವಲ್ಲಿ ಮಠ ಮಾನ್ಯಗಳು ಯಶಸ್ವಿಯಾಗಿವೆ. ಸಮಾಜದಲ್ಲಿ ರೂಢಿಯಲ್ಲಿರುವ ಅನಿಷ್ಠ ಪದ್ಧತಿಗಳನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ಸರ್ವಧರ್ಮೀಯರ ಸಹಭಾಗಿತ್ವದಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಬಡಕುಟುಂಬಗಳ ಪಾಲಿನ ಆರ್ಥಿಕ ಸಂಕಷ್ಠಕ್ಕೆ ಕಡಿವಾಣ ಹಾಕಲಿವೆ. ಎಲ್ಲ ಆಶ್ರಮಗಳಿಗಿಂತ ಗ್ರಹಸ್ಥಾಶ್ರಮ ಶ್ರೇಷ್ಠವಾಗಿದ್ದು, ಸತಿ-ಪತಿಗಳು ಹೊಂದಾಣಿಕೆ ಮನೋಭಾವದಿಂದ ಬದುಕು ಸಾಗಿಸಿ, ಪರಿಪೂರ್ಣತೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.
ಅಡವಿಸ್ವಾಮಿ ಮಠದ ಕುಮಾರ ಶ್ರೀಗಳು ಆಶೀರ್ವಚನ ನೀಡಿ, ಇಂದಿನ ಆಧುನಿಕ ಯುಗದಲ್ಲಿ ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾದ ಹಲವಾರು ಕ್ಷೇತ್ರಗಳು ಪ್ರೋತ್ಸಾಹ ಮತ್ತು ಆಚರಣೆಯ ಕೊರತೆಯಿಂದಾಗಿ ಕಳೆಗುಂದಿವೆ. ಇವೆಲ್ಲ ಕ್ಷೇತ್ರಗಳಿಗೆ ಪುನಶ್ಚೇತನ ತುಂಬಲು ನಾಡಿನ ಮಠಮಾನ್ಯಗಳು ಶ್ರಮಿಸುತ್ತಿವೆ. ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲ್ಗೊಳ್ಳಬೇಕಾದ ಯುವಶಕ್ತಿ ಈ ಬದಲಾವಣೆಗಳನ್ನು ಅರಿತುಕೊಳ್ಳಬೇಕಾದ ಅನಿವಾರ್ಯತೆ ಇದೆ. ತಮ್ಮ ದಿನನಿತ್ಯದ ಜಂಜಾಟದ ಬದುಕಿನ ಮಧ್ಯೆಯೂ ಧರ್ಮಾಚರಣೆಯಲ್ಲಿ ಜನತೆ ತೊಡಗಿಕೊಂಡರೆ ಶಾಶ್ವತ ನೆಮ್ಮದಿ ದೊರಕಲು ಸಾಧ್ಯ ಎಂದರು.
ಇದಕ್ಕೂ ಮುನ್ನ ಅಡವಿಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಡೆದವು. ಪುರೋಹಿತ ವರ್ಗದವರಿಂದ ಶ್ರೀ ಚೌಡೇಶ್ವರಿದೇವಿ ಹಾಗೂ ಶ್ರೀ ದುರ್ಗಾಮಾತೆಗೆ ಉಡಿ ತುಂಬುವುದು ಮತ್ತು ತೇರಿಗೆ ಕಂಕಣ ಕಟ್ಟಲಾಯಿತು. ಅಕ್ಕಿಅಲೂರು, ಬಾಳೂರ, ಗೆಜ್ಜಿಹಳ್ಳಿ, ಸೇವಾಲಾಲ ನಗರ, ಗುರುರಾಯಪಟ್ಟಣ, ದ್ಯಾಮನಕೊಪ್ಪ, ಹೀರೂರ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಜನತೆ ಆಗಮಿಸಿದ್ದರು.
Advertisement
ಬಾಳೂರು ಗ್ರಾಮದ ಅಡವಿಸ್ವಾಮಿ ಮಠದಲ್ಲಿ ಅಡವಿಸ್ವಾಮಿಗಳವರ ಜಾತ್ರಾ ಮಹೋತ್ಸವ ಮತ್ತು ಕುಮಾರ ಶ್ರೀಗಳವರ ಅಮೃತ ಮಹೋತ್ಸವದ ಪ್ರಯುಕ್ತ ನಡೆದ ಷಟ್ಸ್ಥಲ ಧ್ವಜಾರೋಹಣ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು.
Related Articles
Advertisement
ಗದಿಗೇಶ್ವರ ಶ್ರೀಗಳು, ವಿರಕ್ತಮಠದ ಶಿವಬಸವ ಶ್ರೀಗಳು ಸಮ್ಮುಖ ವಹಿಸಿದ್ದರು. ರಾಜಣ್ಣ ಗೌಳಿ, ಉದಯ ವಿರುಪಣ್ಣನವರ, ಬಸವರಾಜ ಸಾಲಿಮಠ, ಮಹೇಶ ಕೋರಿಶೆಟ್ಟರ, ಚನ್ನಬಸಪ್ಪ ಬೆಲ್ಲದ, ಕೊಟ್ರಪ್ಪ ಬೆಲ್ಲದ, ಸೋಮಶೇಖರಯ್ಯ ಸೋಮಯ್ಯಗಳಮಠ, ಶಿವಕುಮಾರ ದೇಶಮುಖ, ಶಿವಕುಮಾರ ಪಾಟೀಲ, ಬಸವರಾಜ ಬೆಲ್ಲದ, ಕೃಷ್ಣಾ ಅರ್ಕಸಾಲಿ, ಸಿದ್ಧನಗೌಡ ಪಾಟೀಲ ಇದ್ದರು.