Advertisement

ಬಿಂಕದಕಟ್ಟಿ ಸಣ್ಣ ಮೃಗಾಲಯದಲ್ಲಿ ಸ್ಪಿಂಕ್ಲರ್‌

02:52 PM Apr 29, 2019 | Suhan S |

ಗದಗ: ದಿನ ಕಳೆದಂತೆ ಹೆಚ್ಚುತ್ತಿರುವ ತಾಪಮಾನದಿಂದ ವನ್ಯಜೀವಿಗಳು ಬಳಲುವುದನ್ನು ತಪ್ಪಿಸಲು ಬಿಂಕದಕಟ್ಟಿ ಸಣ್ಣ ಮೃಗಾಲಯ ಅಧಿಕಾರಿಗಳು ಹೊಸ ಉಪಾಯ ಕಂಡುಕೊಂಡಿದ್ದಾರೆ. ಮೃಗಾಲಯದ ಸೂಕ್ಷ್ಮ ಪ್ರಾಣಿ ಹಾಗೂ ಪಕ್ಷಿಗಳ ಪಂಜರಗಳಲ್ಲಿ ಸ್ಪಿಂಕ್ಲರ್‌ಗಳ ಮೂಲಕ ಕೃತಕ ಮಳೆ ಸೃಷ್ಟಿಸುವ ಮೂಲಕ ವನ್ಯಜೀವಿಗಳ ದೇಹ ತಣಿಸುವ ಪ್ರಯತ್ನ ನಡೆಸಿದ್ದಾರೆ.

Advertisement

ಹೌದು, ಸತತ ಬರ ಹಾಗೂ ಮಳೆ ಕೊರತೆಯಿಂದಾಗಿ ದಿನ ಕಳೆದಂತೆ ಜಿಲ್ಲೆಯಲ್ಲಿ ಬೇಸಿಗೆ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದೊಂದು ವಾರದಿಂದ ಸರಾಸರಿ 37-38 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಬಿರು ಬಿಸಿಲಿನಿಂದಾಗಿ ಜನರೊಂದಿಗೆ ಜಾನುವಾರುಗಳು ಹಾಗೂ ವನ್ಯಜೀವಿಗಳೂ ಬಸವಳಿಯುತ್ತಿವೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಗಂಟೆಗಳ ಕಾಲ ಮರಗಳ ನೆರಳಿನ ಆಸರೆ ಪಡೆದರೂ, ಬಿಸಿಲಿನ ಬೇಗೆಯಿಂದ ಪರದಾಡುವಂತಾಗುತ್ತದೆ.

ತುಂತುರು ನೀರಾವರಿ ವ್ಯವಸ್ಥೆ:

ದಿನದಿಂದ ದಿನಕ್ಕೆ ಉಷ್ಣಾಂಶ ಏರುತ್ತಿರುವ ಹಿನ್ನೆಲೆಯಲ್ಲಿ ಕೆಲವೆಡೆ ಗುಡ್ಡಗಾಡು ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಕೃತಕ ಹೊಂಡ ನಿರ್ಮಿಸಿ, ಅವುಗಳಿಗೆ ಟ್ಯಾಂಕರ್‌ ಮೂಲಕ ನೀರು ತುಂಬಿಸಲಾಗುತ್ತಿದೆ. ಇದಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಬಿಂಕದಕಟ್ಟಿ ಸಣ್ಣ ಮೃಗಾಲಯದ ಸಿಬ್ಬಂದಿ, ಬಿಸಿಲಿನ ತಾಪಕ್ಕೆ ತತ್ತರಿಸಿರುವ ಪ್ರಾಣಿ-ಪಕ್ಷಿ ರಕ್ಷಿಸಲು ತುಂತುರು ನೀರಾವರಿ ಮೊರೆ ಹೋಗಿದ್ದಾರೆ.

ಪ್ರತಿನಿತ್ಯ ಕೃತಕ ಮಳೆ: ಬಿಂಕದಕಟ್ಟಿ ಸಣ್ಣ ಮೃಗಾಲಯದಲ್ಲಿ ವಿವಿಧ ಜಾತಿಯ 350ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳಿವೆ. ಈ ಪೈಕಿ ಹುಲಿ, ಚಿರತೆ, ನರಿಗಳ ಬೋನ್‌ಗಳಲ್ಲಿ ಕೃತಕ ಹೊಂಡಗಳಿಗೆ ನೀರು ತುಂಬಿಸಲಾಗುತ್ತದೆ. ಇನ್ನುಳಿದಂತೆ ನೂರಾರು ಸಂಖ್ಯೆಯಲ್ಲಿರುವ ಜಿಂಕೆ, ಕಡಬೆ, ಆಸ್ಟ್ರಿಚ್ ಪಂಜರ ಹಾಗೂ ಪಕ್ಷಿಪಥದಲ್ಲಿ ಪ್ರತಿನಿತ್ಯ ಕೃತಕ ಮಳೆ ಸುರಿಸುತ್ತಿದ್ದಾರೆ. ಅದಕ್ಕಾಗಿ ಆಯಾ ಪ್ರಾಣಿ, ಪಕ್ಷಿಗಳ ಪಂಜರಗಳಲ್ಲಿ ಕೃಷಿಗೆ ಬಳಸುವ ಸ್ಪಿಂಕ್ಲರ್‌ ಅಳವಡಿಸಿದ್ದು, ಅದರ ಮೂಲಕ ದಿನ ನಿತ್ಯ ಮಧ್ಯಾಹ್ನ ಒಂದೆರಡು ಗಂಟೆಗಳ ಕಾಲ ಕೃತಕ ಮಳೆ ಸುರಿಸುತ್ತಿದ್ದಾರೆ. ಸ್ಪಿಂಕ್ಲರ್‌ಗಳ ಮೂಲಕ ಚಿಮ್ಮುವ ನೀರಿಗೆ ವನ್ಯಜೀವಿಗಳು ಮೈಯೊಡ್ಡಿ, ಆನಂದಿಸುತ್ತಿವೆ.

Advertisement

ಬಿಸಿಲೇರುತ್ತಿದ್ದಂತೆ ಪ್ರಾಣಿಗಳು ಸ್ಪಿಂಕ್ಲರ್‌ಗಳ ಕೆಳಗೆ ವಿಶ್ರಾಂತಿ ಪಡೆಯುತ್ತವೆ. ಹುಲಿಗಳ ಆವಾಸಕ್ಕೆ ಕಾಡಿನ ಸಹಜ ಪರಿಸರ ಹೋಲುವಂತೆ ಅಭಿವೃದ್ಧಿಪಡಿಸಿರುವ ‘ಟೈಗರ್‌ ಡೇಕ್ರಾಲ್’ನಲ್ಲಿ ಪುಟ್ಟ ಕೊಳ ನಿರ್ಮಿಸಲಾಗಿದ್ದು, ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಹುಲಿ ದಿನದ ಬಹುತೇಕ ಸಮಯ ನೀರಿನಲ್ಲೇ ವಿರಮಿಸುತ್ತದೆ. ಇನ್ನು, ಚಿರತೆಗಳದ್ದೂ ಅದೇ ಪರಿಸ್ಥಿತಿ. ಎಮು ಪಕ್ಷಿಗಳಿಗಾಗಿ ಶೀಘ್ರದಲ್ಲೇ ‘ಕೆಸರಿನ ಹೊಂಡ’ ನಿರ್ಮಿಸಲಾಗುವುದು’ ಎಂದು ಮೃಗಾಲಯದ ಸಿಬ್ಬಂದಿ,ಎನ್ನುತ್ತಾರೆ

ಆಹಾರ ಕ್ರಮದಲ್ಲಿ ಅಲ್ಪ ಬದಲಾವಣೆ: ಬಿಸಿಲಿನ ತಾಪಮಾನ ಏರಿಕೆಯಾದ ಬೆನ್ನಲ್ಲೇ, ಮೃಗಾಲಯದ ಪ್ರಾಣಿಗಳ ಆಹಾರ ಕ್ರಮದಲ್ಲೂ ಬದಲಾವಣೆ ಮಾಡಲಾಗಿ ದೆ. ಕರಡಿ, ಆಸ್ಟ್ರಿಚ್ ಮತ್ತು ಎಮು ಸೇರಿದಂತೆ ವಿವಿಧ ಪಕ್ಷಿಗಳಿಗೆ ಕಲ್ಲಂಗಡಿ ಸೇರಿದಂತೆ ಹೆಚ್ಚಿನ ನೀರಿನಂಶ ಇರುವ ಹಣ್ಣನ್ನು ಯಥೇಚ್ಛವಾಗಿ ನೀಡಲಾಗುತ್ತಿದೆ ಎನ್ನುತ್ತಾರೆ ಮೃಗಾಲಯದ ಸಿಬ್ಬಂದಿ.

 

Advertisement

Udayavani is now on Telegram. Click here to join our channel and stay updated with the latest news.

Next