Advertisement
ಅಡಿಕೆ ಸಸಿಗಳ ಸೋಗೆ ಹಳದಿ ಬಣ್ಣಕ್ಕೆ ತಿರುಗುವ, ಸಿರಿಯ ಸುಳಿಯ ಭಾಗದ ಮೇಲೆ ಬರುತ್ತಲೇ ಒಂದಷ್ಟು ಭಾಗ ಯಾವುದೋ ಕೀಟ ತಿಂದು ಹಾಕಿದಂತೆ ತೋರುವ, ಸೋಗೆಯೇ ಸುಟ್ಟು ಹೋದಂತಾಗುವ ಈ ರೋಗವು ಸ್ಪಿಂಡ್‌ಲ್ ಬಗ್ ಇನ್‌ಫೆಕ್ಷನ್ ನಿಂದಾಗಿದೆ. ಸುಳಿಯ ಭಾಗದಲ್ಲಿ ಕೀಟವು ರಸ ಹೀರಿ, ಕೆರೆದು ಹಾಕಿದಂತಾಗುತ್ತದೆ. ಮಳೆಗಾಲ ಕಳೆಯುತ್ತಿದ್ದಂತೆ ಈ ಸಿರಿಯ ಭಾಗದ ಮೇಲೆ ಬರುವಾಗ ಆ ಭಾಗ ಬಲಹೀನವಾಗಿ, ಒಣಗಿ, ಸುಟ್ಟು ಹೋದಂತೆ ಹೊರಹೊಮ್ಮುತ್ತದೆ. ಇದನ್ನು ಹತೋಟಿಗೆ ತರಲು ‘ಥಿಮೆಟ್’ ಸ್ಯಾಚೆಟ್ ಗಳನ್ನು ಈ ಭಾಗದಲ್ಲಿಡಬೇಕು ಇದರೊಂದಿಗೆ ಥಿಯಾಮೆಥಾಕ್ಸೊಂ ಎಂಬ ಕೀಟ ನಾಶಕವನ್ನು ಸ್ಪ್ರೆ ಮಾಡಬೇಕು ಎಂದು ಸಿಪಿಸಿಆರ್‌ಐ ಪ್ಲಾಂಟ್ ಪೆಥೋಲಜಿ ವಿಜ್ಞಾನಿ ಡಾ| ಥಾವಾ ಪ್ರಕಾಶನ್ ಪಾಂಡಿಯನ್ ಅವರು ಸೂಚಿಸಿದರು.
ಆಗಸ್ಟಿನ್ ಅವರ ತೋಟವು ಹದವಾದ ಇಳಿಜಾರಿನ ಗುಡ್ಡ ಪ್ರದೇಶದಲ್ಲಿರುವುದಾದರೂ ಇಲ್ಲಿರುವುದು ಕೊಂಚ ಅಂಟು ಮಣ್ಣು. ಅಡಿಕೆ ಸಸಿಗಳಿಗಾಗಿ ಮಾಡಿದ ಹೊಂಡವೂ ಸ್ವಲ್ಪ ದೊಡ್ಡದೇ ಇದೆ. ಇಲ್ಲಿ ಬಿದ್ದ ನೀರು ಇಂಗಲು ವ್ಯವಸ್ಥೆ ಇಲ್ಲ. ಹೀಗಾಗಿ ಫಂಗಸ್ ಇನ್‌ಫೆಕ್ಷನ್ ಆಗಿ ಸುಳಿ ಕೊಳೆ ರೋಗ ಉಂಟಾಗುತ್ತದೆ. ಇದನ್ನು ನಿವಾರಿಸಲು ಎರಡು ಸಾಲುಗಳ ನಡುವೆ ಇರುವ ಹೊಂಡಗಳಿಗಿಂತಲೂ ಕನಿಷ್ಟ ಅರ್ಧ ಅಡಿ ಆಳದ ಬಸಿಗಾಲುವೆಯನ್ನು ತೋಡಿ ಸಸಿಗಳ ಬುಡದಲ್ಲಿ ನೀರು ನಿಲ್ಲದಂತೆ ಮಾಡಬೇಕು. ಕಾಪರ್ ಆಕ್ಸಿಕ್ಲೋರೈಡ್ ಶೇ. 0.1 ದ್ರಾವಣವನ್ನು ಈ ಸುಳಿಯೊಳಗೆ ಸಿಂಪಡಿಸಬೇಕು, ಬುಡಕ್ಕೂ ಇಳಿಯುವಂತೆ ಮಾಡಬೇಕು ಎಂದು ಅವರು ಸೂಚಿಸಿದರು. ಇದೇರೀತಿ ಕೊಡ್ಯಡ್ಕ ಮಿತ್ತಬೈಲ್‌ನ ಗೋವರ್ಧನ ನಾಯಕ್ ಅವರ ತೋಟದಲ್ಲಿ ಕಾಣಿಸಿಕೊಂಡಿರುವ ರೋಗ ಪೀಡಿತ ಅಡಿಕೆ ಗಿಡಗಳ ಬಗ್ಗೆಯೂ ವಿಜ್ಞಾನಿಗಳು ಪರಿಹಾರ ಸೂಚಿಸಿದರು. ಸಿಪಿಸಿಆರ್‌ಐ ಹಿರಿಯ ತಾಂತ್ರಿಕ ಸಹಾಯಕ ಬಿ. ಆನಂದ ಗೌಡ ಸಲಹೆ ನೀಡಿದರು.
Related Articles
Advertisement