Advertisement

ಮಸಾಲೆ ಮಿಶ್ರಿತ ಆ್ಯಪಲ್‌ ಕೇಕ್‌… 

11:24 AM Nov 28, 2018 | |

ಸಿನಿಮಾ ನಿರ್ದೇಶಕನಾಗಬೇಕು. ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಹತ್ತಾರು ಕನಸುಗಳನ್ನು ಹೊತ್ತು ನೂರಾರು ಮಂದಿ ಗಾಂಧಿನಗರಕ್ಕೆ ಪ್ರತಿನಿತ್ಯ ಅಡಿಯಿಡುತ್ತಲೇ ಇರುತ್ತಾರೆ. ದಿನ ಬೆಳಗಾದರೆ ಒಂದು ಅವಕಾಶಕ್ಕಾಗಿ ನಿರ್ಮಾಪಕರು, ನಿರ್ದೇಶಕರ ಮನೆಯ ಕದ ತಟ್ಟುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇಂಥಹ ಅದೆಷ್ಟೋ ಪ್ರತಿಭೆಗಳಲ್ಲಿ ಕೆಲವೇ ಕೆಲವರು ಚಿತ್ರರಂಗದಲ್ಲಿ ತಾರೆಗಳಾಗಿ ಮಿಂಚುತ್ತಾರೆ. ಉಳಿದವರು ಕಂಡರೂ ಕಾಣದಂತೆ ಮರೆಯಾಗಿ ಹೋಗುತ್ತಾರೆ.

Advertisement

ಇಂಥ ತೆರೆಮರೆಯ ಸಿನಿಮಾ ಮಂದಿಯ ಕಥೆಯೇ ಆ್ಯಪಲ್‌ ಕೇಕ್‌. ಕರ್ನಾಟಕದ ನಾಲ್ಕು ಮೂಲೆಗಳಿಂದ ಬಂದ ನಾಲ್ವರು ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಲು ಹೇಗೆಲ್ಲ ಹೋರಾಟ ನಡೆಸುತ್ತಾರೆ? ಈ ಹೋರಾಟದಲ್ಲಿ ಗೆಲುವು ಯಾರಿಗೆ? ಎನ್ನುವುದೇ ಆ್ಯಪಲ್‌ ಕೇಕ್‌ ಚಿತ್ರದ ಕ್ಲೈಮ್ಯಾಕ್ಸ್‌. ಆ್ಯಪಲ್‌ ಕೇಕ್‌ ಚಿತ್ರದ ಕಥೆ ಕನ್ನಡಕ್ಕೆ ತೀರಾ ಹೊಸದು ಅನ್ನುವಂತಿಲ್ಲ. ಕನ್ನಡ ಸೇರಿದಂತೆ ಬೇರೆ ಭಾಷೆಯ ಚಿತ್ರಗಳ ಛಾಯೆಯೂ ಚಿತ್ರದಲ್ಲಿ ಅಲ್ಲಲ್ಲಿ ಕಂಡಂತೆ ಭಾಸವಾಗುತ್ತದೆ.

ಚಿತ್ರವನ್ನು ಮನರಂಜನೆಯ ಜೊತೆಗೆ ಕಮರ್ಷಿಯಲ್‌ ಆಗಿಯೂ ತೆರೆಮೇಲೆ ತರುವ ದೃಷ್ಠಿಯಿಂದ ಒಂದಷ್ಟು ಸಿನಿಮಾದ ಸಿದ್ಧ ಸೂತ್ರಗಳನ್ನು ಯಥಾವತ್ತಾಗಿ ಚಿತ್ರದಲ್ಲಿ ಅಳವಡಿಸಲಾಗಿದೆ. ಕರ್ನಾಟಕದ ನಾಲ್ಕು ಭಾಗಗಳಿಂದ ಬರುವ ನಾಲ್ಕು ಪಾತ್ರಗಳನ್ನು ಇಟ್ಟುಕೊಂಡು ಚಿತ್ರಕಥೆಯನ್ನು ಬರೆದಿರುವುದರಿಂದ ಸಮಗ್ರ ಕರ್ನಾಟಕದ ಸೊಗಡನ್ನೂ ಚಿತ್ರದಲ್ಲಿ ಕಾಣಬಹುದು. ಒಟ್ಟಾರೆ ತೀರಾ ಪ್ರಯೋಗಗಳಿಲ್ಲದೆ, ಸರಳವಾದ ಕಥೆಯೊಂದನ್ನು ನಿರ್ದೇಶಕ ರಂಜಿತ್‌ ಕುಮಾರ್‌ ಗೌಡ ಅಚ್ಚುಕಟ್ಟಾಗಿ ತೆರೆಮೇಲೆ ಹೇಳಿದ್ದಾರೆ ಎನ್ನಬಹುದು. 

ಇನ್ನು ಚಿತ್ರದಲ್ಲಿ ಬರುವ ಅರವಿಂದ ಕುಮಾರ್‌, ವಿಜಯ್‌ ಕುಮಾರ್‌, ಕೃಷ್ಣ, ಶುಭ ರಕ್ಷಾ, ಚೈತ್ರಾ ಶೆಟ್ಟಿ ಮೊದಲಾದ ಕಲಾವಿದರು ಹಿರಿತೆರೆಗೆ ಹೊಸಮುಖಗಳು. ತೆರೆಮೇಲೆ ಹೊಸಬರಾದರೂ, ಒಂದಿಬ್ಬರನ್ನು ಹೊರತುಪಡಿಸಿದರೆ, ಬಹುತೇಕ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರದ ತಾಂತ್ರಿಕ ಕೆಲಸಗಳ ಬಗ್ಗೆ ಹೇಳುವುದಾದರೆ, ಎ.ಆರ್‌ ನಿರಂಜನ್‌ ಬಾಬು ಛಾಯಾಗ್ರಹಣ ಮತ್ತು ವೇದಿಕ್‌ ವೀರ್‌ ಸಂಕಲನ ಕಾರ್ಯ ಚಿತ್ರ ದೃಶ್ಯಗಳನ್ನು ಅಂದಗಾಣಿಸಿದೆ.

ಶ್ರೀಧರ್‌ ಕಶ್ಯಪ್‌ ಸಂಗೀತ ಕೂಡ ಚಿತ್ರದ ದೃಶ್ಯಗಳಿಗೆ ಮೆರುಗನ್ನು ನೀಡಿದ್ದು, ಒಂದೆರಡು ಹಾಡುಗಳು ನಿಧಾನವಾಗಿ ಕಿವಿಗೆ ಇಂಪು ನೀಡುತ್ತವೆ. ಒಂದು ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಚಿತ್ರ(ನ್ನ)ಕ್ಕೆ ಏನೆಲ್ಲಾ ಉಪ್ಪು-ಒರಣ, ಮಸಾಲೆಗಳು ಬೇಕೊ, ಅದೆಲ್ಲವೂ ಆ್ಯಪಲ್‌ ಕೇಕ್‌ನಲ್ಲಿದೆ. ಚಿತ್ರದ ಹೆಸರಿನಲ್ಲಿ ಸ್ವೀಟ್‌ ಇದ್ದರೂ, ಅದಕ್ಕಿಂತ ಹೆಚ್ಚಾಗಿ ಅದರಲ್ಲಿರುವ ರುಚಿಗೊಪ್ಪುವ ಉಪ್ಪು-ಹುಳಿ-ಖಾರವೇ ಪ್ರೇಕ್ಷಕರಿಗೆ ಹಿಡಿಸಿದರೂ ಅಚ್ಚರಿ ಇಲ್ಲ. 

Advertisement

ಚಿತ್ರ: ಆ್ಯಪಲ್‌ ಕೇಕ್‌
ನಿರ್ಮಾಪಕರು: ಅರವಿಂದ್‌ ಕುಮಾರ್‌ ಗೌಡ (ಮಾಸ್ಟರ್‌ಮೈಂಡ್‌ ಇಂಕ್‌ ಎಂಟರ್‌ಟೈನ್ಮೆಂಟ್‌)
ನಿರ್ದೇಶನ: ರಂಜಿತ್‌ ಕುಮಾರ್‌ ಗೌಡ
ಸಂಗೀತ: ಶ್ರೀಧರ್‌ ಕಶ್ಯಪ್‌
ತಾರಾಗಣ: ಅರವಿಂದ ಕುಮಾರ್‌, ವಿಜಯ್‌ ಕುಮಾರ್‌, ಕೃಷ್ಣ, ಶುಭ ರಕ್ಷಾ, ಚೈತ್ರಾ ಶೆಟ್ಟಿ, ರಂಗಸ್ವಾಮಿ, ಅಂಜನಪ್ಪ, ಹರಿಚಂದ್ರ

* ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next