Advertisement
ಬದುಕು ಕಟ್ಟಿಕೊಟ್ರಾ ಮಣಿ:ಪೀಸ್‌ಪಾರ್ಕ್‌ನಲ್ಲಿ 40 ವರ್ಷ ಮೆಸ್ ನಡೆಸುತ್ತಿದ್ದ ನಾಗರಾಜ್ ಅವರು ನಿಧನವಾದ ನಂತರ ಅವರ ಮಗ ಸುಬ್ರಹ್ಮಣ್ಯ ಮಣಿ ನಗರದಲ್ಲೇ ಪುಟ್ಟದಾದ ಕುಕ್ಕೆ ಟಿಫನ್ ಸೆಂಟರ್ ಎಂಬ ಹೋಟೆಲ್ ಅನ್ನು ಪ್ರಾರಂಭಿಸಿದ್ದರು. ವ್ಯಾಪಾರವೂ ಚೆನ್ನಾಗಿಯೇ ನಡೆಯುತ್ತಿತ್ತು. ಈ ವೇಳೆ ಮಣಿ ನಾಲ್ಕೈದು ವರ್ಷಗಳ ಹಿಂದೆ ತಮ್ಮ ಸ್ವಗ್ರಾಮವಾದ ತಮಿಳುನಾಡಿನ ಕೊಯಮತ್ತೂರಿನ ಪೇರೂರ್‌ಗೆ ಹೋಗಿ ನೆಲೆಸಿದರು. ಆದರೆ, ತಾವು ನಡೆಸಿಕೊಂಡು ಬರುತ್ತಿದ್ದ ಹೋಟೆಲ್ ಮುಚ್ಚಲು ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಗ್ರಾಹಕರಿಗೆ ಮುಂದಿನ ದಿನಗಳಲ್ಲೂ ಒಳ್ಳೆಯ ತಿಂಡಿ ಸಿಗಬೇಕು ಎಂದು ತಮ್ಮ ಜೊತೆಯಲ್ಲಿದ್ದ ಸ್ನೇಹಿತರಾದ ನಾಗರಾಜ್ ಹಾಗೂ ಕೆ.ಶಶಿಧರ್‌ಗೆ ತಿಂಡಿ ತಯಾರಿಸುವುದನ್ನು ಹೇಳಿಕೊಟ್ಟು, ಹೋಟೆಲ್ ಮುಂದುವರಿಸಿಕೊಂಡು ಹೋಗುವಂತೆ ಹೇಳಿದರು. ಅದರಂತೆ ನಾಗರಾಜ್ ಹಾಗೂ ಶಶಿಧರ್ ಇದನ್ನೇ ಸ್ವಂತ ಉದ್ಯೋಗವಾಗಿಸಿಕೊಂಡು ಹಿಂದಿನಂತೆ ಶುಚಿ ರುಚಿಯಾದ ತಿಂಡಿಯನ್ನು ಗ್ರಾಹಕರಿಗೆ ಉಣಬಡಿಸುತ್ತಾ ಬದುಕು ರೂಪಿಸಿಕೊಂಡಿದ್ದಾರೆ. ಇವರಿಗೆ 6 ವರ್ಷಗಳಿಂದ ಮಹೇಶ್, ಬಸವರಾಜ್, ಚೇತನ್‌ರಾಜ್ ಸಾಥ್ ನೀಡುತ್ತಾ ಇಲ್ಲಿಯೇ ಕೆಲಸ ಗಿಟ್ಟಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ತಟ್ಟೆ ಇಡ್ಲಿ, ಗುಂಡು ಇಡ್ಲಿ, ರವಾ ಇಡ್ಲಿ ಸಿಗುತ್ತದೆ. ಆದರೆ, ಕುಕ್ಕೆ ಹೋಟೆಲಿನಲ್ಲಿ ಮಸಾಲೆ ಇಡ್ಲಿ ಸಿಗುತ್ತದೆ. 10 ರೂ. ಕೊಟ್ರೆ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಕಾಯಿ ತುರಿ, ಕಡ್ಲೆ, ಅರಿಶಿಣ ಹಾಕಿ ಮಾಡಿದ ರುಚಿಯಾದ ಮಸಾಲೆ ಇಡ್ಲಿ ತಿನ್ನಬಹುದು. ಶನಿವಾರ, ಇತರೆ ತಿಂಡಿಗಳ ಜೊತೆ ರಾಗಿ ಶ್ಯಾವಿಗೆ ಸವಿಯಬಹುದು. ಪ್ರತಿದಿನ ಸಿಗುವ ತಿಂಡಿ:
ರೈಸ್‌ಬಾತ್, ಅಕ್ಕಿ ಶ್ಯಾವಿಗೆ, ಪುಳಿಯೊಗರೆ, ಉಪ್ಪಿಟ್ಟು, ಚಿತ್ರಾನ್ನ (22 ರೂ.), ತಟ್ಟೆ ಇಡ್ಲಿ(ದರ 8 ರೂ.), ಮಸಾಲೆ ಇಡ್ಲಿ(10 ರೂ.), ವಡೆ, ಬೋಂಡ(2 ರೂ.) ಪ್ರತಿದಿನವೂ ಇರುತ್ತದೆ. ಸೋಮವಾರ ವೆಜಿಟೆಬಲ್ ಫಲಾವ್, ಮಂಗಳವಾರ ಟೊಮೆಟೋ ಬಾತ್, ಬುಧವಾರ ವಾಂಗೀಬಾತು, ಗುರುವಾರ ವೆಜಿಟೆಬಲ್ ಫಲಾವ್, ಶುಕ್ರವಾರ ಮೆಂತ್ಯೆ ಫಲಾವ್, ಶನಿವಾರ ಕ್ಯಾಬೇಜ್ ರೈಸ್‌ಬಾತ್ ಜೊತೆಗೆ ವಿಶೇಷವಾಗಿ ರಾಗಿ ಶ್ಯಾವಿಗೆ ಸಿಗುತ್ತದೆ.
ಹೋಟೆಲ್ ಸಮಯ:
ಬೆಳಗ್ಗೆ 6.30 ರಿಂದ 11 ಗಂಟೆಯವರೆಗೆ ಮಾತ್ರ. ಭಾನುವಾರ ರಜೆ.
Related Articles
ಸದರನ್ ಎಕ್ಸ್‌ಟೆಕ್ಷನ್, ಕಲಾ ಮಂಟಪದ ಎದುರು, 4ನೇ ಕ್ರಾಸ್, ಕೊಳ್ಳೇಗಾಲ ನಗರ. ಬಸ್ ನಿಲ್ದಾಣದಿಂದ 5 ನಿಮಿಷದ ನಡಿಗೆ.
Advertisement
ನಮಗೆ ಹೆಚ್ಚು ಲಾಭ ಮಾಡುವ ಆಸೆ ಇಲ್ಲ. ಜನರಿಗೆ ಒಳ್ಳೆ ತಿಂಡಿ ಕೊಡಬೇಕು ಎಂದು ಆಸೆ. ಹಾಗಾಗಿ, ಕಡಿಮೆ ಖರ್ಚಲ್ಲಿ ರುಚಿಯಾದ ತಿಂಡಿಯನ್ನು ನೀಡುತ್ತಿದ್ದೇವೆ ಎನ್ನುತ್ತಾರೆ ಶಶಿಧರ್.
– ಬೋಗೇಶ ಆರ್. ಮೇಲುಕುಂಟೆ/ಕೊಳ್ಳೇಗಾಲ ನಟರಾಜ್