ಬೆಂಗಳೂರು: ರಾಜ್ಯ ಸರಕಾರ ಶೀಘ್ರ ಸೈಬರ್ ಸೆಕ್ಯೂರಿಟಿ ಪಾಲಿಸಿ ಜಾರಿಗೆ ತರಲು ಚಿಂತಿಸಿದೆ. ಡಿಜಿಟಲ್ ಸೇವೆಗಳಿಗೆ ಪೂರಕವಾಗಿ ಸೈಬರ್ ಭದ್ರತೆ ಕುರಿತು ಅರಿತುಕೊಳ್ಳುವುದು ಅಗತ್ಯ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್ ಪ್ರತಿಪಾದಿಸಿದರು.
ರಾಜ್ಯ ಪೊಲೀಸ್ ಇಲಾಖೆ, ಸಿಐಡಿ ಹಾಗೂ ಸೈಬರ್ ಕ್ರೈಂ ತನಿಖಾ ತರಬೇತಿ ಮತ್ತು ಸಂಶೋಧನ ಸಂಸ್ಥೆಯು ಬುಧವಾರ ಹಮ್ಮಿಕೊಂಡಿದ್ದ “ಸೈಬರ್ ಅಪರಾಧ ತನಿಖಾ ಶೃಂಗ ಸಭೆ-2024′ ಅನ್ನು ಉದ್ಘಾಟಿಸಿ ಮಾತನಾಡಿ, ಡೀಪ್‌ಫೇಕ್, ಅಕ್ರಮ ಹಣ ವರ್ಗಾವಣೆ, ಆನ್‌ಲೈನ್ ಬ್ಯಾಂಕಿಂಗ್, ಸಾಲ ಆ್ಯಪ್ ವಂಚನೆ ಇತರ ಪ್ರಕರಣಗಳು ಹೆಚ್ಚಾಗುತ್ತಿವೆ. ಗಂಭೀರ ಪ್ರಕರಣಗಳಲ್ಲಿ ವಿದೇಶಿ ಕಂಪೆನಿಗಳ ನೆರವು ಸಿಗದಿದ್ದರೆ ತನಿಖೆ ಕಷ್ಟವಾಗುತ್ತದೆ ಎಂದರು.
ಸೈಬರ್ ಅಪರಾಧಿಗಳು ಜಗತ್ತಿನ ಎಲ್ಲೋ ಕುಳಿತು ಇನ್ನೊಂದು ಪ್ರದೇಶದ ಮೇಲೆ ಬೆದರಿಕೆ, ವಂಚನೆ ಇನ್ನಿತರ ಸೈಬರ್ ದಾಳಿ ನಡೆಸುತ್ತಾರೆ. ಇದು ಆಯಾ ವಲಯದ ಮಾರುಕಟ್ಟೆ, ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ತನಿಖೆ ನಡೆಸಿ ಅಪರಾಧಿ ಗಳನ್ನು ಮಟ್ಟಹಾಕಲು ಜಾಗತಿಕ ಮಟ್ಟದಲ್ಲಿ ಸಹಯೋಗ ಅಗತ್ಯವಾಗುತ್ತದೆ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸು ತ್ತಿರುವ 43 ಸೈಬರ್ ಕ್ರೈಂ ಪೊಲೀಸ್ ಠಾಣೆಗಳು, ಸೈಬರ್ ವಂಚನೆಗೊಳಗಾದ ಜನರಿಗೆ ಸುರಕ್ಷೆ ಒದಗಿಸುವ ಕೆಲಸ ಮಾಡುತ್ತಿವೆ. ರಾಜ್ಯ ಸರಕಾರವು ಸೈಬರ್ ಕ್ರೈಂ ವಿಭಾಗದ ಬಲ ಹೆಚ್ಚಿಸಲು ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್ ಸಹಿತ ವಿವಿಧ ತಂತ್ರಜ್ಞಾನ ವಲಯಗಳಲ್ಲಿ ಪರಿಣತಿ ಹೊಂದಿರುವ ಕಂಪೆನಿಗಳ ನೆರವು ಪಡೆದುಕೊಳ್ಳಲಿದೆ. ಅಧಿಕಾರಿ ಮತ್ತು ಸಿಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. 33 ಸಾವಿರಕ್ಕೂ ಹೆಚ್ಚು ಸಿಬಂದಿ ಸಿಐಡಿ ಕಚೇರಿಯಲ್ಲಿ ಸ್ಥಾಪಿಸಿರುವ ಸಿಸಿಐಟಿಆರ್‌ನಲ್ಲಿ ಆಯೋಜಿಸುತ್ತಿರುವ ತರಬೇತಿ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.
ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಡಿಜಿಪಿ ಡಾ| ಎಂ.ಎ.ಸಲೀಂ, ಎಡಿಜಿಪಿ ಪ್ರಣವ್ ಮೊಹಂತಿ, ಇನ್ಫೋಸಿಸ್ ಫೌಂಡೇಷನ್ ಟ್ರಸ್ಟಿ ಸುನೀಲ್ ಕುಮಾರ್ ಧಾರೇಶ್ವರ್, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯ ಸಿಇಒ ವಿನಾಯಕ್ ಗೋಡ್ಸೆ ಉಪಸ್ಥಿತರಿದ್ದರು.