ಮಂಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಮುಸ್ಲಿಂ ಸಮುದಾಯದ ದಂಪತಿಗಳ ಮದುವೆ ಪ್ರಮಾಣ ಪತ್ರಗಳನ್ನು ಮನೆಬಾಗಿಲಿಗೆ ತಲುಪಿಸುವ ವಿಶೇಷ ಸೇವೆಗೆ ಬುಧವಾರ ಚಾಲನೆ ನೀಡಲಾಯಿತು.
ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಹಾಗೂ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್. ಅವರು ಈ ಒಡಂಬಡಿಕೆ ಮಾಡಿಕೊಂಡರು.
ಪ್ರಸ್ತುತ ವ್ಯವಸ್ಥೆಯಲ್ಲಿ ಮುಸ್ಲಿಂ ಸಮುದಾಯದ ಮದುವೆ ಪ್ರಮಾಣ ಪತ್ರ ಪಡೆಯಲು ಅರ್ಜಿದಾರರು ಎರಡು ಬಾರಿ ಜಿಲ್ಲಾ ವಕ್ಫ್ ಕಚೇರಿಗೆ ಭೇಟಿ ನೀಡಬೇಕು. ದೂರದ ಸ್ಥಳಗಳಿಂದ ಬರುವ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಇದೀಗ ಈ ಒಡಂಬಡಿಕೆಯ ಪ್ರಕಾರ ಮದುವೆ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುವಾಗ ಖುದ್ದಾಗಿ ದ.ಕ. ಜಿಲ್ಲಾ ವಕ್ಫ್ ಕಚೇರಿಗೆ ಭೇಟಿ ನೀಡಿ ಈ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು. ಅಥವಾ ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ಪ್ರಮಾಣ ಪತ್ರವನ್ನು ತಮ್ಮ ಮನೆಬಾಗಿಲಲ್ಲಿ ಪಡೆದುಕೊಳ್ಳಬಹುದು.
ಸ್ಪೀಡ್ ಪೋಸ್ಟ್ ಸೇವೆ ಆಯ್ಕೆ ಮಾಡಿಕೊಂಡರೆ ಮದುವೆ ಪ್ರಮಾಣ ಪತ್ರದ ಅರ್ಜಿಯಲ್ಲಿ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಪಡೆದುಕೊಳ್ಳುವ ಆಯ್ಕೆಗೆ ಟಿಕ್ ಮಾಡಿ ಅರ್ಜಿಯನ್ನು ಕೌಂಟರ್‌ನಲ್ಲಿ ನೀಡಬೇಕು. ಈ ಪ್ರಮಾಣ ಪತ್ರದ ಅರ್ಜಿಯಲ್ಲಿ ಬಟವಾಡೆಯಾಗಬೇಕಾಗಿರುವ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಬೇಕು. 80 ರೂ. ಅನ್ನು ಬಟವಾಡೆ ಸಂದರ್ಭದಲ್ಲಿ ಪೋಸ್ಟ್‌ಮ್ಯಾನ್‌ಗೆ ನೀಡಲು ತಮ್ಮ ಸಮ್ಮತಿ ಇದೆ ಎಂದು ಸಹಿ ಮಾಡಬೇಕು. ಪ್ರಮಾಣ ಪತ್ರವು ಮುದ್ರಣಗೊಂಡ ಬಳಿಕ ಅಂಚೆ ಇಲಾಖೆಯು ಈ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆಗೆ ಬಟವಾಡೆ ಮಾಡುವುದು.