Advertisement

ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ವೇಗ

09:28 AM Mar 11, 2020 | Lakshmi GovindaRaj |

ವಿಧಾನಸಭೆ: ಭೂ ಸರ್ವೇ ಕಾರ್ಯ ಕಗ್ಗಂಟಾಗಿದೆ ಎಂದು ಒಪ್ಪಿಕೊಂಡ ಕಂದಾಯ ಸಚಿವ ಆರ್‌.ಅಶೋಕ್‌, ಪೋಡಿ ಮುಕ್ತ ಗ್ರಾಮ ಅಭಿಯಾನದ ವೇಗ ಹೆಚ್ಚಿಸುವ ಜತೆಗೆ ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳು ಒಂದು ಗ್ರಾಮಕ್ಕೆ ತೆರಳಿ ಜನರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದು ಸದನಕ್ಕೆ ಉತ್ತರಿಸಿದರು.

Advertisement

ಸೋಮವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ಬೆಳ್ಳಿ ಪ್ರಕಾಶ್‌ ಪ್ರಶ್ನೆಗೆ ಉತ್ತರಿಸಿದ ಆರ್‌. ಅಶೋಕ್‌, ರಾಜ್ಯದಲ್ಲಿ ಪೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆ 2015ರ ಸೆಪ್ಟೆಂಬರ್‌ನಲ್ಲಿ ಜಾರಿಯಾಗಿದ್ದು, ನಗರ ಪ್ರದೇಶ ಹೊರತಾಗಿ 174 ವಿಧಾನಸಭಾ ಕ್ಷೇತ್ರಗಳಲ್ಲಿ ಅನುಷ್ಠಾನಗೊಂಡಿದೆ. ಹಂತ ಹಂತವಾಗಿ ಪೋಡಿ ಮುಕ್ತ ಗ್ರಾಮಗಳನ್ನು ಮಾಡಲಾಗುತ್ತಿದೆ. ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 315 ಗ್ರಾಮಗಳ ಪೈಕಿ 86 ಗ್ರಾಮಗಳನ್ನು ಅಳತೆಗೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ 82 ಗ್ರಾಮಗಳ ಅಳತೆ ಪೂರ್ಣಗೊಂಡಿದೆ. ಇನ್ನೂ 229 ಗ್ರಾಮಗಳ ಅಳತೆ ಬಾಕಿಯಿದೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮೊದಲು ಮಾತನಾಡಿದ ಬೆಳ್ಳಿ ಪ್ರಕಾಶ್‌, ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 229 ಗ್ರಾಮಗಳ ಅಳತೆಯಾಗಿಲ್ಲ. ಸರ್ವೇ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ರೈತರು ನಿತ್ಯ ಪಹಣಿಗಾಗಿ ಉದ್ದದ ಸಾಲುಗಳಲ್ಲಿ ನಿಲ್ಲುವಂತಾಗಿದೆ. ಸದಾ ನೆಟ್‌ವರ್ಕ್‌ ಸಮಸ್ಯೆ ಎಂದು ಹೇಳಲಾಗುತ್ತಿ¤ದೆ. ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ನ ಶಿವಾನಂದ ಪಾಟೀಲ್‌, ಕಳೆದ ವರ್ಷ 1,700 ಸರ್ವೆಯರ್‌ಗಳ ನೇಮಕವಾಗಿತ್ತು. ಅವರ ಪೈಕಿ ಹಲವರನ್ನು ಎರವಲು ಸೇವೆ ಮೇಲೆ ವರ್ಗಾವಣೆ ಮಾಡಲಾಗಿದ್ದು, ಸರ್ವೇ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದರು. ಕಾಂಗ್ರೆಸ್‌ನ ನರೇಂದ್ರ, ಎಲ್ಲ ಕಡೆ ಸರ್ವೇ ಕಾರ್ಯ ಸ್ಥಗಿತಗೊಂಡಿದೆ ಎಂದು ದೂರಿದರು. ಕಾಂಗ್ರೆಸ್‌ನ ನಾರಾಯಣ ಸ್ವಾಮಿ, 50- 60 ವರ್ಷಗಳ ಹಿಂದಿನ ಮೂಲ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಮನವಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂದರು. ಹೆಚ್ಚುವರಿ ಭೂ ದಾಖಲೆ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹಾಗಾಗಿ ತಹಸೀಲ್ದಾರ್‌ ಅವರಿಗೆ ಅಧಿಕಾರ ನೀಡಬೇಕು ಎಂಬ ಸಲಹೆಯೂ ವ್ಯಕ್ತವಾಯಿತು.

ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌, ಸರ್ವೇ ಇತ್ಯರ್ಥ ಇಲಾಖೆಯು ಮಾರ್ಗಸೂಚಿಗಳನ್ನು ನೀಡಿ 10 ನಿಬಂಧನೆ ವಿಧಿಸಿದೆ. ಇದರಲ್ಲಿ 1-5 ನಿಬಂಧನೆಯನ್ನು ಒಂದು ವರ್ಗವಾಗಿ ಪರಿಗಣಿಸಿ ಪರಿಶೀಲಿಸಿದರೆ ಸಾಕಷ್ಟು ಸಮಸ್ಯೆ ಬಗೆಹರಿಯುತ್ತವೆ. ದಾಖಲೆಗಳನ್ನು ಇಟ್ಟುಕೊಳ್ಳುವ ಜವಾಬಾರಿ ರೈತರದ್ದಲ್ಲ, ಸರ್ಕಾರದ್ದು. ಕಡತಗಳು ಕಾಣೆಯಾದ ಪ್ರಕರಣಗಳಲ್ಲೂ ಪರಿಶೀಲಿಸಿ ಇತ್ಯರ್ಥಕ್ಕೆ ಅವಕಾಶವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಸಿಕ ವರದಿ ಪಡೆಯುವಂತಾದರೆ ಸಮಸ್ಯೆ ಬಗೆಹರಿಯಲಿದೆ ಎಂದು ಸಲಹೆ ನೀಡಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಆರ್‌.ಅಶೋಕ್‌, ಸರ್ವೇ ಕಾರ್ಯ ಕಗ್ಗಂಟಾಗಿದೆ. 100 ಎಕರೆ ಭೂಮಿಯಿದ್ದರೆ 150 ಎಕರೆ ಮಂಜೂರಾಗಿರುತ್ತದೆ. ವರ್ಗಾವಣೆಯಾದ ಬಳಿಕವೂ ಹಳೆಯ ತಹಶೀಲ್ದಾರ್‌ಗಳು ಸಹಿ ಹಾಕಿ ಮಂಜೂರು ಮಾಡಿರುವ ಪ್ರಕರಣಗಳಿದ್ದು, ಸಹಿ ತಾಳೆ ಹಾಕಿ ಪರಿಶೀಲಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ. ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ವೇಗ ನೀಡಲಾಗುವುದು. ಹಾಗೆಯೇ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳು ತಿಂಗಳಲ್ಲಿ ಒಂದು ದಿನ ಒಂದು ಗ್ರಾಮಕ್ಕೆ ಭೇಟಿ ನೀಡಿ ಪಹಣಿ, ಪೋಡಿ ಇತರೆ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಲು ಸೂಚಿಸಲಾಗಿದೆ. ಹಾಗೆಯೇ ಸರ್ವೆಯರ್‌ಗಳ ವರ್ಗಾವಣೆ ಸಮರ್ಪಕವಾಗಿಲ್ಲದಿರುವುದು ಗಮನಕ್ಕೆ ಬಂದಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ಚರ್ಚೆ ಅಂತ್ಯವಾಯಿತು.

ವಾರಕ್ಕೆ ಒಂದು ಇಲ್ಲವೇ 15 ದಿನಕ್ಕೊಮ್ಮೆ ಪೋಡಿ ಅದಾಲತ್‌ ನಡೆಸಿದರೆ ಸಮಸ್ಯೆ ನಿವಾರಣೆಯಾಗಲಿದೆ.
-ಎಚ್‌.ಕೆ.ಪಾಟೀಲ್‌, ಕಾಂಗ್ರೆಸ್‌ ಸದಸ್ಯ

ಪೋಡಿಗಾಗಿ ರೈತರು ದಾಖಲೆ ಸಲ್ಲಿಸುವುದು ಕಷ್ಟವಿದೆ. ಹಾಗಾಗಿ ಊರವರನ್ನೆಲ್ಲಾ ಜಮೀನಿನ ಬಳಿ ಕರೆದೊಯ್ದು ಎಲ್ಲರ ಸಮಕ್ಷಮದಲ್ಲಿ ಇತ್ಯರ್ಥಪಡಿಸುವಂತಾದರೆ ಸಮಸ್ಯೆ ಶೀಘ್ರ ಪರಿಹಾರವಾಗಲಿದೆ.
-ಶಿವಲಿಂಗೇಗೌಡ, ಜೆಡಿಎಸ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next