Advertisement

ಸದಸ್ಯೆ-ಅಧ್ಯಕ್ಷರ ಮಧ್ಯೆ ಮಾತಿನ ಚಕಮಕಿ

08:10 AM Jan 29, 2019 | Team Udayavani |

ಕೂಡ್ಲಿಗಿ: ನನ್ನ ಮೇಲೆ ಹಣ ದುರುಪಯೋಗದ ಆರೋಪ ಮಾಡಿ ತಾಪಂನಿಂದ ಹೇಗೇ ನೋಟಿಸ್‌ ಕಳುಹಿಸಿದ್ದೀರಿ. ಹಣ ದುರುಪಯೋಗ ಸಾಬೀತು ಮಾಡುವವರೆಗೂ ಸಭೆ ನಡೆಯಲು ಬಿಡುವುದಿಲ್ಲ ಪ್ರತಿಭಟನೆ ಮಾಡುತ್ತೇನೆ ಎಂದು ತಾಪಂ ಅಧ್ಯಕ್ಷರ ವಿರುದ್ಧ ಸದಸ್ಯೆಂಯೋಬ್ಬರು ವಾಗ್ಧಾಳಿ ನಡೆಸಿದ ಪರಿ ಇದು. ಸೋಮವಾರ ನಡೆದ ತಾಪಂ ಸಭೆ ಗೊಂದಲ ಗೂಡಾಗಿ ಪರಿಣಮಿಸಿತು.

Advertisement

ತಾಪಂ ವಾಣಿಜ್ಯ ಮಳಿಗೆಗಳನ್ನು ತಾಲೂಕಿನ ಗುಂಡುಮುಣಗು ತಾಪಂ ಸದಸ್ಯೆ ಸರೋಜಾ ಅವರ ಪತಿ ಸೂರ್ಯ ಪಾಪಣ್ಣ ಬಾಡಿಗೆಗೆ ಪಡೆದಿದ್ದು, ವರ್ಷಗಳೇ ಕಳೆದರೂ ಬಾಡಿಗೆ ಹಣ ಪಾವತಿ ಯಾಕೆ ಮಾಡಿಲ್ಲ. ಈ ಬಗ್ಗೆ ಸೂಕ್ತ ವಿವರಣೆ ಕೊಡಿ ಎಂದು ತಾಪಂ ಅಧ್ಯಕ್ಷ ವೆಂಕಟೇಶ್‌ ನಾಯ್ಕ ಅವರ ಸೂಚನೆ ಮೇರೆಗೆ ತಾಪಂ ಇಒ ನೋಟಿಸ್‌ ಕಳುಹಿಸಿದ್ದಾರೆ. ಸೂರ್ಯಪಾಪಣ್ಣ ತಮ್ಮ ಪ್ರಭಾವ ಬಳಸಿ ರಾಮದುರ್ಗ ಕೆರೆಯ ಟೆಂಡರ್‌ ಕರೆಯದೇ ಪತ್ರಿಕಾ ಪ್ರಕಟಣೆ ನೀಡದೇ ಗ್ರಾಪಂ ಸಭೆಯಲ್ಲಿ ತೀರ್ಮಾನಿಸಿ, ಸರ್ಕಾರಿ ನಿಯಮ ಉಲ್ಲಂಘಿಸಿ ಕೆರೆಯ ವಿಲೇವಾರಿ ಹಕ್ಕನ್ನು ಪಡೆದಿದ್ದಾರೆ. ಈ ಎರಡು ಆರೋಪಗಳನ್ನು ತಾಪಂ ಅಧ್ಯಕ್ಷ ವೆಂಕಟೇಶನಾಯ್ಕ ಅವರು ಮಾಡಿದ್ದಾರೆ. ಅಲ್ಲದೇ ಗುಂಡುಮುಣಗು ತಾಪಂ ಸದಸ್ಯೆ ಸರೋಜಮ್ಮ ಅವರ ಕ್ಷೇತ್ರದಲ್ಲಿ 3 ವರ್ಷದ ಅವಧಿಯಲ್ಲಿ ಅಧಿಕಾರಿಗಳನ್ನು ಹೆದರಿಸಿ ಕಾಮಗಾರಿ ಮಾಡದೇ ಬಿಲ್‌ ಪಡೆದಿರುತ್ತಾರೆ. ಹೀಗಾಗಿ ತಾಪಂ ಅಧಿಕಾರಿಗಳು ತಾವೇ ಖುದ್ದಾಗಿ ರಾಮದುರ್ಗ ಹಾಗೂ ಗುಂಡುಮುಣುಗು ಕ್ಷೇತ್ರಗಳ ಕಾಮಗಾರಿಗಳನ್ನು ಪರಿಶೀಲಿಸಿ 10 ದಿನಗಳೊಳಗೆ ವರದಿ ನೀಡಬೇಕು. ಇಲ್ಲವಾದಲ್ಲಿ ಈ ವಿಷಯವನ್ನು ಜಿಪಂ ಸಭೆಯಲ್ಲಿ ಚರ್ಚಿಸುವೆ ಎಂದು ಇಒಗೆ ಡಿ. 11 ರಂದು ಲಿಖೀತವಾಗಿ ದೂರು ನೀಡಿದ್ದಾರೆ. ಇದರಂತೆ ಇಒ ಬಸಣ್ಣ ಅವರು ತಾಪಂ ಸದಸ್ಯೆ ಪತಿ ಸೂರ್ಯ ಪಾಪಣ್ಣ ಅವರಿಗೆ ಡಿ.12 ರಂದು ತಾಪಂ ಇಒ ಬಸಣ್ಣ ಅವರು ನೋಟಿಸ್‌ ನೀಡಿದ್ದಾರೆ. ಇದರಿಂದ ತಾಪಂ ಸದಸ್ಯೆ ಸರೋಜಾ ಪಾಪಣ್ಣ ಅವರು ಸೋಮವಾರ ತಾಪಂ ಸಾಮಾನ್ಯ ಸಭೆ ನಡೆಯುತ್ತಿದ್ದಂತೆ ಅಧ್ಯಕ್ಷರ ವಿರುದ್ಧ ವಾಗ್ಧಾಳಿ ನಡೆಸಿದರು.

ಇದರಿಂದ ಆಕ್ರೋಶಗೊಂಡ ಅಧ್ಯಕ್ಷ ವೆಂಕಟೇಶ್‌ ನಾಯ್ಕ ಮಾತನಾಡಿ, ನಿಮ್ಮ ಪತಿ ಮಳಿಗೆ ಬಾಡಿಗೆ ಪಡೆದು ಯಾಕೆ ಬಾಡಿಗೆ ಕಟ್ಟಿಲ್ಲ. ಇದಕ್ಕಾಗಿ ನೋಟಿಸ್‌ ನೀಡಿರುವುದು ನಿಜ. ಬಾಡಿಗೆ ಕಟ್ಟಿ ಎಂದು ತಿಳಿಸಿದರು.

ನೀವು ಯಾವ ಆಧಾರದ ಮೇಲೆ ಅನುಮೋದನೆ ಮಾಡಿದ್ದೀರಿ ಎಂದು ತಾಪಂ ಸದಸ್ಯೆ ಸರೋಜಾ ಅಧ್ಯಕ್ಷರನ್ನು ಪ್ರಶ್ನಿಸಿದರು. ಬಾಡಿಗೆ ಬೇಕು ಎಂದು ಅರ್ಜಿ ನೀಡದೇ ಬಾಡಿಗೆ ನೀಡಿರುವುದು ತಪ್ಪಲ್ಲವೇ. ನೀವು ಸರ್ಕಾರಿ ನಿಯಮ ಉಲ್ಲಂಘಿಸಿದಂತಲ್ಲವೇ ಎಂದು ಮರುಪ್ರಶ್ನೆ ಮಾಡಿದರು.

ಇಒ ಬಸಣ್ಣ ಕೂಡ ಈ ಪ್ರಶ್ನೆಗೆ ಉತ್ತರ ನೀಡದೇ ಸುಮ್ಮನಾದರು. ನನ್ನ ಮೇಲೆ ವಿನಾಕಾರಣ ಅಧಿಕಾರಿಗಳನ್ನು ಬೆದರಿಸಿ ಕಾಮಗಾರಿ ಮಾಡದೆ ಬಿಲ್‌ ಡ್ರಾ ಮಾಡಿಕೊಂಡಿದ್ದಾರೆ ಎಂದು ತಾಪಂ ಅಧ್ಯಕ್ಷರು ಆರೋಪಿಸಿದ್ದಾರೆ. ಅದನ್ನು ಸಾಬೀತು ಮಾಡುವವರೆಗೂ ಸಭೆ ನಡೆಯಲು ಬಿಡುವುದಿಲ್ಲ ಎಂದು ಸಭೆ ಮಧ್ಯದಲ್ಲಿ ಬಂದು ಸದಸ್ಯೆ ಕುಳಿತರು.

Advertisement

ತಕ್ಷಣವೇ ತಾಪಂ ಅಧ್ಯಕ್ಷ ವೆಂಕಟೇಶ್‌ ನಾಯ್ಕ ಅವರು ಪೊಲೀಸರ ಕರೆಯಿಸಿ ನಿಮ್ಮನ್ನು ಹೊರಗೆ ಕಳುಹಿಸಿ ಸಭೆ ಮಾಡ್ತೀನಿ ಎಂದು ಠಾಣೆಗೆ ಕರೆ ಮಾಡಿ ಇಬ್ಬರು ಮಹಿಳಾ ಪೊಲೀಸರನ್ನು ಕರೆಯಿಸಿದರು. ಪೊಲೀಸರು ಬರುವಷ್ಟರಲ್ಲಿ ತಾಪಂ ಸದಸ್ಯ ಹೂಡೇಂ ಪಾಪಾನಾಯಕ ಅವರು ಅಧ್ಯಕ್ಷರನ್ನು ಸಮಾಧಾನಪಡಿಸಿದರು. ನಂತರ ಸರೋಜಾ ಪಾಪಣ್ಣ ಸಭೆಯಲ್ಲಿ ಕುಳಿತರು.

ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಚರ್ಚಿಸಲಾಯಿತು. ತಾಪಂ ಅಧ್ಯಕ್ಷ ವೆಂಕಟೇಶ್‌ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅಮಲಾಪುರ ಬಸವರಾಜ, ತಾಪಂ ಇಒ ಬಸಣ್ಣ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ತಾಪಂ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next