Advertisement

ಭಾಷಣ, ಚರ್ಚಾ ಸ್ಪರ್ಧೆ ವಿದ್ಯಾರ್ಥಿ ಜೀವನಕ್ಕೆ ಪೂರಕ

10:11 PM Dec 03, 2019 | Lakshmi GovindaRaju |

ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಹಲವು ಮಜಲುಗಳಲ್ಲಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವುದು ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಅಭಿವೃದ್ಧಿಗೆ ಪೂರಕವಾಗುವುದಂತೂ ಸತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭಾಷಣ, ಚರ್ಚೆ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಹಲವು ರೀತಿಯಲ್ಲಿ ಉಪಯೋಗವನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಬೌದ್ಧಿಕವಾಗಿ ಸಬಲರಾಗುತ್ತಾರೆ ಎಂಬುದನ್ನು ಅರಿಯಬೇಕಿದೆ.

Advertisement

ಹಾಗಾದರೆ ಚರ್ಚೆ, ಸಂವಾದಗಳು ವಿದ್ಯಾರ್ಥಿ ಜೀವನಕ್ಕೆ ಹೇಗೆ ಪೂರಕವಾಗಲಿದೆ ಎಂಬುದನ್ನು ನಾವು ಈಗ ತಿಳಿಯಬಹುದಾಗಿದ್ದು ಕೆಲವೊಂದು ಅಂಶಗಳು ನೋಡಬಹುದು.

ಸಂವಹನ ಕೌಶಲ ವೃದ್ಧಿ
ವಿದ್ಯಾರ್ಥಿ ಜೀವನದಲ್ಲಿ ಭಾಷಣ ಸ್ಪರ್ಧೆ ಮತ್ತು ಚರ್ಚೆ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದಾಗಿ ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ ವೃದ್ಧಿಯಾಗುತ್ತದೆ. ಇದರಿಂದ ಮಾತಿನಲ್ಲಿ, ಉಚ್ಚಾರದಲ್ಲಿ ಸ್ಪಷ್ಟತೆಯನ್ನು ಕಾಣಬಹುದು. ಮುಂದೆ ಉದ್ಯೋಗ ಅರಸಿ ಸಂದರ್ಶನಕ್ಕೆ ಹೋದಾಗ ನಮ್ಮ ಸಂವಹನವೂ ಕೂಡ ಮುಖ್ಯ ಪಾತ್ರ ವಹಿಸಲಿದೆ. ಸಂವಹನ ಕೌಶಲ ವೃದ್ಧಿ ಕೂಡ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಭಾಷಣ, ಚರ್ಚೆ, ಸಂವಾದಗಳಲ್ಲಿ ಭಾಗವಹಿಸುವುದು ಅಗತ್ಯ.

ಎದುರಿಸುವ ಸಾಮರ್ಥ್ಯ
ಭಾಷಣ, ಚರ್ಚೆ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಎಲ್ಲವನ್ನೂ ಎದುರಿಸುವ ಸಾಮರ್ಥ್ಯವನ್ನು ನಾವು ಕಂಡುಕೊಳ್ಳುತ್ತೇವೆ. ಏಕೆಂದರೆ ಚರ್ಚೆ, ಸಂವಾದಗಳಲ್ಲಿ ನಮ್ಮ ಎದುರಾಳಿ ತಂಡಗಳು ಬೀಸುವ ಪ್ರಶ್ನೆಗಳು, ಹಾಕುವ ಪಾಯಿಂಟ್‌ಗಳಿಂದ ತತ್‌ಕ್ಷಣವೇ ನಮ್ಮಲ್ಲೊಂದು ಹೊಸ ಆಲೋಚನೆ ಹುಟ್ಟಿಕೊಳ್ಳಲು ನೆರವಾಗುತ್ತದೆ. ಎದುರಾಳಿಗಳು ನಮ್ಮನ್ನು ಪ್ರಶ್ನೆಗಳಿಂದ ಕಟ್ಟಿ ಹಾಕುವಾಗ ನಾವು ಸಾಮಾನ್ಯವಾಗಿ ಅಧ್ಯಯನಶೀಲರಾಗಿರುವುದರಿಂದ ಎಲ್ಲವನ್ನೂ ಎದುರಿಸುವ ಸಾಮರ್ಥ್ಯವನ್ನು ನಾವು ಗಳಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಚರ್ಚೆ, ಸಂವಾದ ಪೂರಕವಾಗಲಿದೆ.

ವಿಚಾರ ಸ್ಪಷ್ಟತೆ
ಭಾಷಣ, ಚರ್ಚೆ ಮತ್ತು ಸಂವಾದಗಳಲ್ಲಿ ನಾವು ಭಾಗವಹಿಸುವುದರಿಂದ ನಮ್ಮಲ್ಲಿ ಒಂದು ವಿಚಾರದ ಬಗೆಗಿನ ಸ್ಪಷ್ಟತೆಯನ್ನು ಕಂಡುಕೊಳ್ಳಬಹುದು. ಭಾಷಣದ ವಿಷಯಾಧಾರದ ಮೇಲೆ ನಾವು ಪರಿಣಾಮಕಾರಿಯಾಗಿ ಅಧ್ಯಯನ ಮಾಡುತ್ತೇವೆ. ಇದರಿಂದ ಒಂದು ಸಣ್ಣ ವಿಷಯದ ಬಗೆಗಿನ ಸವಿಸ್ತಾರವಾದ ನೋಟಗಳು ನಮ್ಮಲ್ಲಿ ಮೂಡುತ್ತವೆ. ಆಗ ಬೌದ್ಧಿಕ, ಶೈಕ್ಷಣಿಕ ಅಭಿವೃದ್ಧಿಗೆ ಚರ್ಚೆ, ಸಂವಾದಗಳು ಉಪಯುಕ್ತವಾಗುತ್ತವೆ.

Advertisement

ಯೋಚನಾ ಶಕ್ತಿ ವೃದ್ಧಿ
ಚರ್ಚೆ, ಸಂವಾದಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಯೋಚನ ಶಕ್ತಿ ವೃದ್ಧಿಯಾಗುತ್ತದೆ. ಚರ್ಚೆ, ಭಾಷಣ ಸ್ಪರ್ಧೆಗಳಲ್ಲಿ ಎದುರಾಳಿಗಳು ಸವಾಲೆಸೆಯುವ ಪ್ರಶ್ನೆಗಳಿಗೆ ನಾವು ಅಗತ್ಯವಾಗಿ ಯೋಚಿಸಿ, ಯೋಜಿಸಿಯೇ ಉತ್ತರ ನೀಡಬೇಕಾಗುತ್ತದೆ. ಅದು ಕೂಡ ಸಾರ್ವಕಾಲಿಕ ಒಪ್ಪಿತ ಅಭಿಪ್ರಾಯವಾಗಬೇಕಿರುವ ನಿಟ್ಟಿನಲ್ಲಿ ನಾವು ವಿಭಿನ್ನವಾಗಿ ಯೋಚಿಸಲು ಮುಂದಾಗುತ್ತೇವೆ. ಇದು ನಮ್ಮ ಬೌದ್ಧಿಕ ಮಟ್ಟದ ವೃದ್ಧಿಗೆ ಪೂರಕವಾಗುವುದು.

-  ಶಿವ ಸ್ಥಾವರಮಠ

Advertisement

Udayavani is now on Telegram. Click here to join our channel and stay updated with the latest news.

Next