ಮಕ್ಕಳಿಗೆ ಪಾಲಕರಿಗಿಂಥ ರೋಲ್ ಮಾಡೆಲ್ಸ್ ಬೇರಾರೂ ಇಲ್ಲ. ಆದ್ದರಿಂದ ಹೆತ್ತವರು ಮಕ್ಕಳೆದುರು ಜಗಳ, ಕೆಟ್ಟ ಶಬ್ದಗಳ ಬಳಕೆ, ಇನ್ನೊಬ್ಬರನ್ನು ಬೈಯ್ಯುವುದನ್ನು ಮಾಡಬಾರದು…
ಆ ಕತೆಯನ್ನು ನೀವು ಕೇಳಿರುತ್ತೀರಿ. ಎರಡು ಪುಟ್ಟ ಗಿಳಿಮರಿಗಳು, ಅವುಗಳಲ್ಲಿ ಒಂದನ್ನು ಆಶ್ರಮದ ಗುರುಗಳು, ಮತ್ತೂಂದನ್ನು ಕಸಾಯಿಖಾನೆಯವನು ಸಾಕುತ್ತಾರೆ. ಬೆಳೀತಾ ಬೆಳೀತಾ ಎರಡೂ ಗಿಳಿಮರಿಗಳ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸ ಕಾಣಿಸುತ್ತೆ. ಆಶ್ರಮದ ಗಿಳಿ ಯಾವಾಗಲೂ ವಿನಯದಿಂದ, “ಬನ್ನಿರಿ, ಕುಳಿತುಕೊಳ್ಳಿರಿ, ವಿಶ್ರಮಿಸಿರಿ, ಆರಾಮಿದ್ದೀರಾ?’ ಎಂದು ಸೌಜನ್ಯದಿಂದ ಮಾತಾಡಿದರೆ, ಕಸಾಯಿಖಾನೆಯಲ್ಲಿ ಬೆಳೆದ ಗಿಳಿಮರಿ, “ಹಿಡೀರಿ, ಬಡೀರಿ, ತುಂಡರಿಸಿರಿ, ಕೊಲ್ಲಿ’ ಎಂದು ಹೇಳುತ್ತಿರುತ್ತದೆ. ಇದಕ್ಕೆ ಆ ಎರಡೂ ಗಿಳಿಗಳು ಬೆಳೆದು ಬಂದ ಪರಿಸರವೇ ಕಾರಣ, ಎಂದು ಎಲ್ಲರಿಗೂ ಗೊತ್ತಿದೆ.
ಇಂದು ಮಕ್ಕಳೆನಿಸಿಕೊಂಡ ಗಿಳಿಮರಿಗಳು ಆಶ್ರಮದ ಗಿಳಿಯಾಗದೆ, ಕಸಾಯಿಖಾನೆಯ ಗಿಳಿಮರಿಯಾಗುತ್ತಿರುವುದು ಆತಂಕದ ವಿಷಯ. ಇಂದಿನ ಲಗುಬಗೆಯ ಜೀವನದಲ್ಲಿ, ಪಾಲಕರ ನಿರ್ಲಕ್ಷ್ಯದಿಂದ ಮಕ್ಕಳು ಸದ್ಗುಣಗಳನ್ನು ಕಲಿಯದೇ, ದುರ್ನಡತೆಯನ್ನು ಅನುಸರಿಸುತ್ತಿದ್ದಾರೆ. ಇಬ್ಬರೂ ದುಡಿಯುವ ಪಾಲಕರು, ಕೆಲಸದ ಒತ್ತಡದಲ್ಲಿ ಮನೆಗೆಲಸ ಮಾಡಿಕೊಂಡು, ಆಫೀಸ್‌ಗೆ ದೌಡಾಯಿಸುತ್ತಾರೆ. ಉಸಿರು ಕಟ್ಟಿದ ವಾತಾವರಣದಲ್ಲಿ ಕೆಲಸ ಮಾಡಿ ಮನೆಗೆ ಬಂದರೆ ಸುಸ್ತೋ ಸುಸ್ತು. ಮೇಲಾಗಿ ಕಚೇರಿಯ ವಾತಾವರಣ ಆರೋಗ್ಯಯುತವಾಗಿದ್ದರೆ ಸರಿ, ಇಲ್ಲದಿದ್ದರೆ ಅದರ ಪರಿಣಾಮ ಮನೆಯಲ್ಲಾಗುತ್ತದೆ. ದುಡಿದು ಮನೆಗೆ ಬಂದ ಮೇಲೂ ಫೋನ್‌ನಲ್ಲಿ ಮತ್ತೆ ಅದೇ ಕಚೇರಿಯ ರಂಪಾಟ, ಸಮಸ್ಯೆಗಳ ವಿಶ್ಲೇಷಣೆ. ಈ ಎಲ್ಲ ಮಾತುಗಳನ್ನು, ನಡವಳಿಕೆಯನ್ನು ಮಕ್ಕಳು ನಮಗರಿವಿಲ್ಲದಂತೆ ಕೇಳಿಸಿಕೊಳ್ಳುತ್ತಿರುತ್ತಾರೆ.
ಈ ಎಲ್ಲವುಗಳ ಮಧ್ಯೆ ಮಕ್ಕಳು ಹೋಂ ವರ್ಕ್ ಮುಗಿಸಿ, ಉಳಿದ ಸಮಯವನ್ನು ಟಿ.ವಿ. ನೋಡುವುದರಲ್ಲಿ, ಮೊಬೈಲ್‌ನಲ್ಲಿ ಆಡುವುದರಲ್ಲಿ ಕಳೆಯುತ್ತವೆ. ಪಾಲಕರು ಗಮನ ಹರಿಸದಿದ್ದಾಗ, ಇಬ್ಬರೇ ಮಕ್ಕಳಿದ್ದರೂ ಬಡಿದಾಡುತ್ತಾರೆ. ಇವಳು ತೆಗೆದುಕೊಂಡ ವಸ್ತು ಅವನಿಗೆ ಬೇಕು, ಅವನ ವಸ್ತು ಇವಳಿಗೆ ಬೇಕು. ಕಾರಣವಿಲ್ಲದೇ ಜಗಳಾಡುವುದು ಮಕ್ಕಳ ರೂಢಿ. ಮಕ್ಕಳ ಜಗಳಕ್ಕೆ ನಿರ್ದಿಷ್ಟ ಕಾರಣಗಳು ಬೇಕೆ?
ಕೆಲವು ಸಲ ದಂಪತಿ ನಡುವೆ ಹೊಂದಾಣಿಕೆಯಿದ್ದರೂ, ಕಚೇರಿಯ ಸಮಸ್ಯೆಗಳು, ಮನೆಯ ಚಿಕ್ಕಪುಟ್ಟ ವಿಷಯಗಳ ಮೇಲೆ ಪರಿಣಾಮ ಬೀರಿ, ಜಗಳಕ್ಕೆ ನಾಂದಿಹಾಡುತ್ತವೆ. ಮಕ್ಕಳೆದುರಿಗೆ ಜಗಳ/ ಕಿತ್ತಾಟ ಒಳ್ಳೆಯದಲ್ಲ ಎಂಬ ಅರಿವು ಯಾವ ಪಾಲಕರಿಗಿಲ್ಲ ಹೇಳಿ? ಅರಿವಿದ್ದರೂ ಪಾಲಕರು ಒತ್ತಡಕ್ಕೊಳಗಾಗಿ ಕಿತ್ತಾಡಿದಾಗ, ಸೂಕ್ಷ್ಮಗ್ರಾಹಿಗಳಾದ ಮಕ್ಕಳು ಅದನ್ನೇ ಅನುಸರಿಸುತ್ತವೆ. ಇಲ್ಲಿ ಒತ್ತಡಗಳು ಮನುಷ್ಯನ ಹಿಡಿತದ ಮೇಲೆ ಮೇಲುಗೈ ಸಾಧಿಸಿವೆ.
ಪಾಲಕರು ಆಡಿದ ಮಾತುಗಳನ್ನೇ, ಮುಂದೆ ಮಕ್ಕಳೂ ಬಳಸುತ್ತವೆ. ಅನುಕರಣೆ ಎಂದರೆ ಇದೇ. ಮಕ್ಕಳು ಯಾವುದು ಸರಿ, ಯಾವುದು ತಪ್ಪು ಎಂದು ಯೋಚಿಸುವುದಿಲ್ಲ. ಶಬ್ದಗಳ ಬಳಕೆಯೊಂದೇ ಪ್ರಮುಖವಾಗಿ, ಪಾಲಕರಂತೆಯೇ ನಡೆದುಕೊಳ್ಳಲು ಪ್ರಾರಂಭಿಸುತ್ತವೆ. ಅದಕ್ಕೆ ಮಕ್ಕಳನ್ನು ಗಿಳಿಮರಿಗಳೆಂದು ಹೇಳಿದ್ದು.
ಪೋಷಕರೇ, ಇಲ್ಲಿ ಕೇಳಿ…
– ಮಕ್ಕಳಿಗೆ ಪಾಲಕರಿಗಿಂಥ ರೋಲ್ ಮಾಡಲ್ಸ… ಬೇರೆ ಯಾರೂ ಇಲ್ಲ ಎಂಬುದು ನಿಮಗೆ ಗೊತ್ತಿರಲಿ.
– ಮಕ್ಕಳೆದುರು ಜಗಳ, ಕೆಟ್ಟ ಶಬ್ದಗಳ ಬಳಕೆ, ಇನ್ನೊಬ್ಬರನ್ನು ಬೈಯ್ಯುವುದನ್ನು ಮಾಡಬೇಡಿ.
– ಕಚೇರಿಯ ಜಗಳ ರಂಪಾಟಗಳನ್ನು ಅಲ್ಲೇಮರೆತರೆ ಒಳ್ಳೆಯದು.
– ಮನೆಗೆ ಬಂದ ಮೇಲೆ ಸಂಪೂರ್ಣವಾಗಿ ವೈಯಕ್ತಿಕ ಜೀವನದ ಕಡೆ ಗಮನ ಹರಿಸಬೇಕು.
ಮಾಲಾ ಅಕ್ಕಿಶೆಟ್ಟಿ