Advertisement

ವಿಟಿಯು ಎಂಟೆಕ್‌ ಪ್ರಮಾಣಪತ್ರಕ್ಕೆ “ಸ್ಪೆಶಲೈಜೇಷನ್‌’

01:14 AM Dec 02, 2024 | Team Udayavani |

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ತನ್ನಲ್ಲಿ ಸ್ನಾತಕೋತ್ತರ ಪದವಿ ಓದುವ ವಿದ್ಯಾರ್ಥಿಗಳಿಗೆ ಅವರ ಸ್ಪೆಶಲೈಜೇಷನ್‌ (ಪ್ರಾವೀಣ್ಯ) ವಿಷಯದ ಹೆಸರಿನ ಸಹಿತ ಪದವಿ ಪ್ರಮಾಣ ಪತ್ರ ನೀಡಲು ಮುಂದಾಗಿದೆ.

Advertisement

ಈವರೆಗೆ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಅವರು ಓದಿದ ವಿಷಯದದಲ್ಲಿ ಮಾಸ್ಟರ್‌ ಡಿಗ್ರಿ ಪಡೆದಿದ್ದಾರೆ ಎಂದು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ನೀಡುತ್ತಿತ್ತು. ಉದಾಹರಣೆಗೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪಡೆದ ವಿದ್ಯಾರ್ಥಿಗೆ “ಮಾಸ್ಟರ್‌ ಆಫ್ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌’ ಎಂದು ಉಲ್ಲೇಖೀಸಿ ಪದವಿ ಪ್ರದಾನ ಮಾಡಲಾಗುತ್ತಿತ್ತು.

ಆದರೆ ಇನ್ನು ಮುಂದೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನ ಮೆಷಿನ್‌ ಡಿಸೈನ್‌ನಲ್ಲಿ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಯ ಪದವಿ ಪ್ರಮಾಣ ಪತ್ರದಲ್ಲಿ “ಮಾಸ್ಟರ್‌ ಆಫ್ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌’ (ಸ್ಪೆಶಲೈಜೇಷನ್‌ ಇನ್‌ ಮೆಷೀನ್‌ ಡಿಸೈನ್‌)’ ಎಂದು ಉಲ್ಲೇಖ ಇರಲಿದೆ.

ದೇಶದಲ್ಲೇ ಮೊದಲ ಬಾರಿಗೆ ಈ ರೀತಿ ಪದವಿ ಪ್ರದಾನ ಮಾಡುವ ಕ್ರಮವನ್ನು ವಿಟಿಯು ಪ್ರಸ್ತಾವಿಸಿತ್ತು. ಇದೀಗ ಎಐಸಿಟಿಇ ಮತ್ತದರ ಸಂಯೋಜಿತ ಕಾಲೇಜುಗಳಲ್ಲಿ ಜಾರಿಗೆ ಬರಲಿದೆ ಎಂದು ವಿಟಿಯುನ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಟಿಯು ಕುಲಪತಿ ಡಾ| ಎಸ್‌. ವಿದ್ಯಾಶಂಕರ್‌ ಎಸ್‌. ಸ್ನಾತಕೋತ್ತರ ಪದವಿ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಲು ಅವಕಾಶ ನೀಡುವಂತೆ ತಾಂತ್ರಿಕ ಶಿಕ್ಷಣಕ್ಕಾಗಿನ ಅಖಿಲ ಭಾರತ ಪರಿಷತ್‌ಗೆ (ಎಐಸಿಟಿಇ) ಪತ್ರ ಬರೆದು ಕೋರಿದ್ದರು. ವಿದ್ಯಾರ್ಥಿ ಯಾವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ ಎಂಬುದನ್ನು ಆತನ ಪ್ರಮಾಣ ಪತ್ರದಲ್ಲೇ ಉಲ್ಲೇಖೀಸಿದರೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

Advertisement

ಹಾಗೆಯೇ ಇದು ಸ್ನಾತಕೋತ್ತರ ವಿಷಯಗಳ ವಿವಿಧ ವಿಭಾಗಗಳ ಗುಣಮಟ್ಟ ಹೆಚ್ಚಳಕ್ಕೆ ಸಹಕಾರಿ ಯಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಆಶಯಕ್ಕೆ ಪೂರಕವಾಗಿರಲಿದೆ ಎಂದು ಗಮನ ಸೆಳೆದಿದ್ದರು.

ಹಾಗೆಯೇ ಎಐಸಿಟಿಯು ವಿಟಿಯುನ ಹೊಸ ಪ್ರಮಾಣ ಪತ್ರ ಮಾದರಿಯನ್ನು ತನ್ನ ವ್ಯಾಪ್ತಿಯಲ್ಲಿರುವ ಸ್ನಾತಕೋತ್ತರ ಪದವಿ ಪ್ರದಾನ ಮಾಡುವ ಎಲ್ಲ ಸಂಸ್ಥೆಗಳಿಗೆ ವಿಸ್ತರಿಸಲು ಉತ್ಸಾಹ ತೋರಿದೆ. ಈ ಮಾದರಿಯು ವಿದ್ಯಾರ್ಥಿಗಳ ಸ್ನಾತಕೋತ್ತರ ಪದವಿಯ ಬಗ್ಗೆ ಸ್ಪಷ್ಟತೆ ಮತ್ತು ಸ್ಥಿರತೆಯನ್ನು ನೀಡುತ್ತದೆ. ಮುಂಬರುವ ದಿನಗಳಲ್ಲಿ ಇದು ಎಂಟೆಕ್‌ನ ಪದವಿ ಪ್ರಮಾಣ ಪತ್ರದ ಮಾನದಂಡವಾಗಿರಲಿದೆ ಎಂದಿದೆ.

ವಿಟಿಯು ತನ್ನ ವ್ಯಾಪ್ತಿಯಲ್ಲಿ ಆರ್ಕಿಟೆಕ್ಚರ್‌, ಸಿವಿಲ್‌ ಎಂಜಿನಿಯರಿಂಗ್‌, ಮೆಕಾನಿಕಲ್‌ ಎಂಜಿನಿಯರಿಂಗ್‌, ಕಂಪ್ಯೂಟರ್‌ ಎಂಜಿನಿಯರಿಂಗ್‌ ಮತ್ತು ಸೈನ್ಸ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌, ಏರೋನಾಟಿಕಲ್‌ ಎಂಜಿನಿಯ ರಿಂಗ್‌ನಲ್ಲಿ ಎಂಟೆಕ್‌ ಓದುವ ಅವಕಾಶವನ್ನು ಕಲ್ಪಿಸಿದೆ.

ವಿಟಿಯುನ ಎಂಟೆಕ್‌ ಡಿಗ್ರಿಯ ಬ್ರಾಂಚ್‌ಗಳಲ್ಲಿ ಆರ್ಕಿಟೆಕ್ಚರ್‌ನಲ್ಲಿ 11, ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ 14, ಕಂಪ್ಯೂಟರ್‌ ಎಂಜಿನಿಯರಿಂಗ್‌ ಮತ್ತು ಸೈನ್ಸ್‌ 13, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ನಲ್ಲಿ 19, ಏರೋನಾಟಿಕಲ್‌ ಎಂಜಿನಿಯರಿಗ್‌ 1, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ 22 ವಿಷಯಗಳ ಸ್ಪೆಶಲೈಜೇಷನ್‌ ಇದೆ.

ವಿಟಿಯುನ ಪ್ರಸ್ತಾವಕ್ಕೆ ಎಐಸಿಟಿಇ ಒಪ್ಪಿಗೆ ಸೂಚಿಸಿರುವುದು ಮತ್ತು ನಮ್ಮ ಈ ಪ್ರಸ್ತಾವನೆಯನ್ನು ದೇಶಾದ್ಯಂತ ಜಾರಿಗೊಳಿಸಲು ಮುಂದಾಗಿರುವುದು ನಮಗೆ ಸಂತಸ ತಂದಿದೆ. ಸ್ನಾತಕೋತ್ತರ ಪದವಿ ಪ್ರಮಾಣ ಪತ್ರದಲ್ಲಿ ವಿದ್ಯಾರ್ಥಿಯ ಸ್ಪೆಶಲೈಜೇಷನ್‌ ನಮೂದಿಸಲು ಅವಕಾಶ ನೀಡುವುದರಿಂದ ಉದ್ಯೋಗ ಪಡೆಯಲು ಹೆಚ್ಚಿನ ಅನುಕೂಲವಾಗಲಿದೆ.
– ಡಾ| ಎಸ್‌. ವಿದ್ಯಾಶಂಕರ್‌, ಕುಲಪತಿ, ವಿಟಿಯು

-ರಾಕೇಶ್‌ ಎನ್‌. ಎ ಸ್‌.

Advertisement

Udayavani is now on Telegram. Click here to join our channel and stay updated with the latest news.

Next