Advertisement

ಎಡನೀರು ಮಠ: ಭಾಗವತ ಸಂಪ್ರದಾಯದ ವೈಶಿಷ್ಟ್ಯ

02:44 AM Sep 07, 2020 | Hari Prasad |

ಉಡುಪಿ: ಈಗ ಗೃಹಸ್ಥರಾಗಲೀ ಸನ್ಯಾಸಿಯಾಗಲೀ ಅವರು ಸಾಮಾನ್ಯವಾಗಿ ಒಂದೋ ಭಸ್ಮಧಾರಣೆ ಇಲ್ಲವೇ ಗೋಪಿಚಂದನ ಧಾರಣೆ ಮಾಡುತ್ತಾರೆ.

Advertisement

ಆದರೆ ತೋಟಕಾಚಾರ್ಯ/ಶಂಕರಾಚಾರ್ಯ ಪರಂಪರೆಯ ಎಡನೀರು ಮಠಾಧೀಶರು ಬೆಳಗ್ಗೆ ಭಸ್ಮವನ್ನು, ಸಂಜೆ ಗೋಪಿಚಂದನವನ್ನು ಧರಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದರು. ಇದು ಭಾಗವತ ಸಂಪ್ರದಾಯದ ಕ್ರಮ.

ಇಂತಹ ಕ್ರಮವನ್ನು 40-50 ವರ್ಷಗಳ ಹಿಂದೆ ಗೃಹಸ್ಥರೂ ಪಾಲಿಸುತ್ತಿದ್ದರು. ಭಸ್ಮಧಾರಣೆಯ ಸಂಪ್ರದಾಯಸ್ಥರು ಉಪನಯನ ಕಾಲದಲ್ಲಿ ಈಗಲೂ ಗೋಪಿಚಂದನ ಧಾರಣೆ ಮಾಡುವ ಕ್ರಮವಿದೆ. ಬರಬರುತ್ತ ಇಂತಹ ವೈಶಿಷ್ಟ್ಯ ಮರೆಯಾಯಿತು. ಈ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿರುವುದು ಎಡನೀರು ಮಠ ಮಾತ್ರ.

ಭಾರತದಲ್ಲಿ ಮೊದಲು ಇದ್ದದ್ದೇ ಭಾಗವತ ಸಂಪ್ರದಾಯ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಬಲದೇವ ಉಪಾಧ್ಯಾಯರ ಹಿಂದಿಯ “ಭಾಗವತ ಸಂಪ್ರದಾಯ’ ಕೃತಿಯಲ್ಲಿ, ಹೊಳೆನರಸೀಪುರ ಅಧ್ಯಾತ್ಮ ಪ್ರಕಾಶದ ಶ್ರೀ ಸಚ್ಚಿದಾನಂದೇಂದ್ರ ಸ್ವಾಮೀಜಿಯವರ ‘ಭಾಗವತ ಸಂಪ್ರದಾಯ’ ಕೃತಿಯಲ್ಲಿ ಈ ಸಂಪ್ರದಾಯದ ಕುರಿತು ಸಮಗ್ರ ಮಾಹಿತಿಗಳಿವೆ. ಬಾಳೆಕುದ್ರು ಮಠವೂ ಭಾಗವತ ಸಂಪ್ರದಾಯಕ್ಕೆ ಸೇರಿದ್ದಾಗಿದೆ. ಕಾಲಕ್ರಮೇಣ ಮತಪಂಥಗಳು ಉದಯವಾದ ಬಳಿಕ ಬೇರೆ ಬೇರೆ ಕ್ರಮಗಳು ಬಂದವು ಎಂದು ಹಿರಿಯ ವಿದ್ವಾಂಸರಾದ ಹಿರಣ್ಯ ವೆಂಕಟೇಶ್ವರ ಭಟ್‌ ಹೇಳುತ್ತಾರೆ.

ಶ್ರೀಮದ್ಭಾಗವತ ಪುರಾಣವನ್ನು ಅನುಸರಿಸುವವರನ್ನು ಭಾಗವತರು, ಭಾಗವತ ಸಂಪ್ರದಾಯದವರು ಎಂದು ಕರೆಯುತ್ತಾರೆ. ಪುರಾಣಗಳನ್ನು ಹೇಳುವವರನ್ನು ಭಾಗವತರು ಎನ್ನುತ್ತಾರೆ. ಇದೇ ಹಿನ್ನೆಲೆಯಲ್ಲಿ ಯಕ್ಷಗಾನ ಮೇಳಗಳ ಹಾಡುಗಳನ್ನು ಹಾಡುವವರು ಭಾಗವತರು ಎಂದಾದರು. ಈ ಹಿನ್ನೆಲೆಯಲ್ಲಿ ಕರಾವಳಿಯ ಯಕ್ಷಗಾನ ಮೇಳಗಳ ಹೆಸರೂ ‘ದಶಾವತಾರ ಮೇಳ’ ಎಂದಾಗಿದೆ. ಹೀಗಾಗಿ ಭಾಗವತ ಸಂಪ್ರದಾಯಕ್ಕೂ ಪ್ರಾಚೀನತೆಗೂ ಬಹಳ
ಸಂಬಂಧವಿದೆ ಎನ್ನುವುದನ್ನು ಹಿರಿಯ ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯ ಅವರು ಬೆಟ್ಟು ಮಾಡುತ್ತಾರೆ.

Advertisement

ಸೆ. 28ರಂದು ನೂತನ ಯತಿ ಪೀಠಾರೋಹಣ


ಶ್ರೀಗಳು ಸೆ. 2ರಂದು ತಮ್ಮ 60ನೇ ಚಾತುರ್ಮಾಸ ವ್ರತಾನುಷ್ಠಾನವನ್ನು ಯಶಸ್ವಿಯಾಗಿ ಪೂರೈಸಿದ್ದರು. ಈ ಸಂದರ್ಭ ವಯೋಸಹಜವಾಗಿ ಅಲ್ಪ ನಿತ್ರಾಣರಾಗಿ ಕಂಡುಬಂದಿದ್ದ ಅವರು ಉತ್ತರಾಧಿಕಾರಿಯಾಗಿ ತಮ್ಮ ಪೂರ್ವಾಶ್ರಮದ ಸಹೋದರಿ ಸರಸ್ವತಿ- ನಾರಾಯಣ ದಂಪತಿಯ ಸುಪುತ್ರ ಜಯರಾಮ ಮಂಜತ್ತಾಯ ಅವರನ್ನು ಹೆಸರಿಸಿದ್ದರು. ಪ್ರಸ್ತುತ 50ರ ಹರೆಯದ ಜಯರಾಮ ಅವರು ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಪರಿಷತ್ತಿನ ಅಧ್ಯಕ್ಷರಾಗಿದ್ದವರು ಪ್ರಸ್ತುತ ಸದಸ್ಯರಾಗಿದ್ದಾರೆ.

ಮಠದ ಸಂಪೂರ್ಣ ಉಸ್ತುವಾರಿಯನ್ನು ದಶಕದಿಂದ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಅಧಿಕೃತ ಘೋಷಣೆ ಮತ್ತು ಪೀಠಾರೋಹಣ ವಿಧಿವಿಧಾನಗಳು ಸೆ. 28ರಂದು ನಡೆಯಲಿವೆ ಎಂದು ಮಠದ ಮೂಲಗಳು ತಿಳಿಸಿವೆ. ಭಾವಿ ಶ್ರೀಗಳಿಗೆ ಶ್ರೀ ಸಚ್ಚಿದಾನಂದ ಭಾರತೀ ಎಂದು ಮಠದ ಅಧಿಕೃತರು ಅಭಿಧಾನಗೈದಿದ್ದಾರೆ.

ಮೋದಿ ಟ್ವೀಟ್‌
ಪೂಜ್ಯ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಸಮುದಾಯದ ಸೇವೆಗಾಗಿ ಮತ್ತು ದೀನ ದಲಿತರ ಸಶಕ್ತೀಕರಣ ಕ್ಕಾಗಿ ನೀಡಿದ ಕೊಡುಗೆ ಅಪಾರ ಹಾಗೂ ಅನನ್ಯ. ಭಾರತ ದೇಶದ ಸಂಸ್ಕೃತಿ ಮತ್ತು ಸಂವಿಧಾನದ ಕುರಿತು ಅಳವಾದ ಜ್ಞಾನವನ್ನು ಹೊಂದಿದ್ದ ಅವರು ಮುಂದಿನ ತಲೆಮಾರುಗಳಿಗೂ ಸ್ಫೂರ್ತಿಯಾಗಿ ಉಳಿಯುತ್ತಾರೆ. ಓಂ ಶಾಂತಿ.
– ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next