Advertisement

ಆನ್‌ಲೈನ್‌ ಬಿಡ್ಡಿಂಗ್‌ ಆಧಾರದಲ್ಲಿ ತಜ್ಞ ವೈದ್ಯರ ನೇಮಕ

05:05 AM Aug 19, 2017 | Team Udayavani |

ವಿಟ್ಲ : ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲೆ ಯೋಜನೆ ನಿರ್ವಹಣೆ ಘಟಕ ಜಂಟಿಯಾಗಿ ಆನ್‌ಲೈನ್‌ ಬಿಡ್ಡಿಂಗ್‌ ಆಧಾರದಲ್ಲಿ ತಜ್ಞ ವೈದ್ಯರ ನೇಮಕಾತಿಗೆ ಕಾರ್ಯೋನ್ಮುಖವಾಗಿವೆೆ. ಎನ್‌.ಎಚ್‌.ಎಂ. ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರ ನೇಮಕಾತಿ ನಡೆಯುತ್ತಿದೆ. 14 ಮಂದಿ ವೈದ್ಯರನ್ನು ಜಿಲ್ಲೆಯಲ್ಲಿ ನೇಮಕಾತಿ ಮಾಡಲಾಗಿದೆ. ಇವರಿಗೆ ಸರಕಾರ ಈಗಾಗಲೇ ನೇಮಿಸಿದ ವೈದ್ಯರಿಗಿಂತ ಮಾಸಿಕ ನಾಲ್ಕು ಪಟ್ಟು ವೇತನ ಲಭಿಸುತ್ತದೆ. ಆದರೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ವೈದ್ಯರು ರೋಗಿಗಳನ್ನು ಪರೀಕ್ಷಿಸಲು ಮತ್ತು ಚಿಕಿತ್ಸೆ ನೀಡಲು ಮೂಲ ಸೌಲಭ್ಯಗಳಿಲ್ಲ ಎನ್ನುವುದು ವಿಪರ್ಯಾಸ.

Advertisement

ನೇಮಕಾತಿ ಯಾಕೆ ?
ಸರಕಾರ ನಡೆಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಹುದ್ದೆ ಖಾಲಿ ಇದೆ. ಕೆಲವೊಂದು ಕಡೆ ಮೂವರು ವೈದ್ಯರ ಆವಶ್ಯಕತೆಯಿರುವಲ್ಲಿ ಒಬ್ಬರು ಅಥವಾ ಇಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ತಜ್ಞ ವೈದ್ಯರ ಹುದ್ದೆಗಳೂ ಭರ್ತಿಯಾಗಿಲ್ಲ. ತಜ್ಞರ ಆವಶ್ಯಕತೆಯನ್ನನುಸರಿಸಿ, ಆಯಾಯ ಆಸ್ಪತ್ರೆಗೆ ಸೂಕ್ತ ಕ್ರಮಕೈಗೊಳ್ಳಲು ಎನ್‌.ಎಚ್‌.ಎಂ.ಮಾರ್ಗಸೂಚಿಯಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನಿರ್ಧರಿಸಿ, ಅರ್ಜಿ ಆಹ್ವಾನಿಸಿತು.

ನೇಮಕಾತಿ ಹೇಗೆ ?
ಆನ್‌ಲೈನ್‌ ಅರ್ಜಿ ಆಹ್ವಾನಿಸಿದ ಸಂಘಕ್ಕೆ ತಜ್ಞ ವೈದ್ಯರ ಅರ್ಜಿಗಳು ಬಂದವು. ದಾಖಲಾತಿ ಪರಿಶೀಲನೆ ನಡೆಸಿದ ಸಂಘವು ನಿರ್ದಿಷ್ಟ ವೇತನಕ್ಕೆ ಚರ್ಚಿಸಿ ನೇಮಕಾತಿಗಾಗಿ ಅನುಮೋದನೆ ಪಡೆದುಕೊಂಡಿತು. ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯಿಂದ ನಿಯಮಾನುಸಾರ ನೇಮಕಾತಿ ಮಾಡಲು ಸೂಚಿಸಿದೆ.ಆ ಪ್ರಕಾರ 2018ರ ಮಾ.31ರ ವರೆಗೆ ಮಾಸಿಕ ಸಂಚಿತ ವೇತನ ನಿರ್ಧರಿಸಿ, ಕೆಲವೊಂದು ನಿಬಂಧನೆಗಳನ್ನು ಒಪ್ಪಿಕೊಂಡ ಬಳಿಕ 7 ದಿನಗಳ ಒಳಗಾಗಿ ವೈದ್ಯರನ್ನು ಕರ್ತವ್ಯಕ್ಕೆ ಹಾಜರುಪಡಿಸಲು ಸೂಚಿಸಲಾಗಿದೆ.

ಕಾಂಡವಿಲ್ಲ, ಬೇರಿಲ್ಲ ; ಗೆಲ್ಲು, ಎಲೆ ಇರಲು ಸಾಧ್ಯವೇ?
ಮರದ ಬೇರು ಇಲ್ಲ, ಕಾಂಡವಿಲ್ಲ. ಆದರೆ ಗೆಲ್ಲು ಮತ್ತು ಎಲೆ ಜೀವಂತವಾಗಿರಲು ಸಾಧ್ಯವೇ? ಎಂದು ತಜ್ಞ ವೈದ್ಯರ ನೇಮಕಾತಿ ವಿಚಾರದಲ್ಲಿ ಪ್ರಶ್ನೆ ಮೂಡುತ್ತದೆ. ಹಾಗಾದರೆ ತಜ್ಞರ ನೇಮಕಾತಿ ಹೇಗಿರಬೇಕು? ಒಂದು ಆಸ್ಪತ್ರೆ ವ್ಯವಸ್ಥೆ ಪೂರ್ಣವಾಗಿರಲು ಶಸ್ತ್ರಚಿಕಿತ್ಸಕರು, ಪ್ರಸೂತಿ ತಜ್ಞರು ಮತ್ತು ಅರಿವಳಿಕೆ ತಜ್ಞರು ಇರಬೇಕು. ಒಬ್ಬರಿಲ್ಲದೇ ಹೋದರೂ ಆ ಆಸ್ಪತ್ರೆ ಅಪೂರ್ಣವಾಗುತ್ತದೆ. ಪ್ರಸ್ತುತ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ತಜ್ಞ ವೈದ್ಯರ ನೇಮಕಾತಿಯು ಅಪೂರ್ಣತೆಯನ್ನು ಬಯಲು ಮಾಡುತ್ತದೆ. ಉದಾಹರಣೆಗೆ ವಾಮದ ಪದವು ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಿಲ್ಲ, ಪ್ರಸೂತಿ ತಜ್ಞರಿಲ್ಲ. ಆದರೆ ಅರಿವಳಿಕೆ ತಜ್ಞರ ನೇಮಕಾತಿಯಾಗಿದೆ. ಅವರಿಗೆ ಮಾಸಿಕ ವೇತನ 4 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ. ಶಸ್ತ್ರ ಚಿಕಿತ್ಸಕರೂ ಪ್ರಸೂತಿ ತಜ್ಞರೂ ಇಲ್ಲದೇ ಅರಿವಳಿಕೆ ತಜ್ಞರಿಗೆ ಏನು ಕೆಲಸ  ಎಂದು ನಾಗರಿಕರು ಪ್ರಶ್ನಿಸಿದ್ದಾರೆೆ.

ಮೂಲ ಸೌಲಭ್ಯಗಳಿವೆಯೇ ?
ವಿಟ್ಲ, ವಾಮದಪದವು ಸಮುದಾಯ ಆಸ್ಪತ್ರೆಗಳಲ್ಲಿ ಪ್ರಸೂತಿ ತಜ್ಞ, ಮಕ್ಕಳ ತಜ್ಞ ಮೊದಲಾದ ಅನೇಕ ಹುದ್ದೆಗಳು ಖಾಲಿಯಾಗಿವೆ. ಅಲ್ಲಿ ಮೂಲ ಸೌಲಭ್ಯಗಳಿಲ್ಲ. ಈ ನಡುವೆ ಅರಿವಳಿಕೆ ತಜ್ಞರು ಶಸ್ತ್ರಚಿಕಿತ್ಸಕರೂ ಪ್ರಸೂತಿ ತಜ್ಞರೂ ಆಗಲು ಅಸಾಧ್ಯ. ಮೂರು ವೈದ್ಯರ ತಂಡ ಮಾಡಬೇಕಾದ ಕೆಲಸಕ್ಕೆ ಒಬ್ಬ ವೈದ್ಯರನ್ನು ನೇಮಕ ಮಾಡಿ, ನಾಗರಿಕರಿಗೆ ಉಪಯುಕ್ತವೆನಿಸುವುದಿಲ್ಲ. ಇದರ ಪರಿಪೂರ್ಣ ಸೇವೆ ನೀಡಲು ಸಾಧ್ಯವಾಗುವುದಿಲ್ಲ. ಆಗ ಅರಿವಳಿಕೆ ತಜ್ಞರಿದ್ದೂ ರೋಗಿಗಳಿಗೆ ಯಾವುದೇ ಪ್ರಯೋಜನವಿರುವುದಿಲ್ಲ. ಇದು ಸಾಮಾನ್ಯ ಜ್ಞಾನವಾಗಿದ್ದು ನೇಮಿಸಲ್ಪಟ್ಟ ವೈದ್ಯರಿಂದ ಯಾರಿಗೆ ಹೇಗೆ ಸೇವೆ ಸಲ್ಲುತ್ತದೆ ? ಅಷ್ಟೇ ಅಲ್ಲ, ಲಕ್ಷಗಟ್ಟಲೆ ಮಾಸಿಕ ವೇತನವಿರುವ ಅನೇಕ ವೈದ್ಯರಿಂದ ಸರಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ಅನುದಾನ ಹೊರೆಯಾಗುತ್ತದೆ.

Advertisement

ಜಿಲ್ಲೆಯಲ್ಲಿ ಒಟ್ಟು 14 ಹುದ್ದೆಗಳು ಭರ್ತಿ 
ಗ್ರಾಮೀಣ ಪ್ರದೇಶದ ಸರಕಾರಿ ಆಸ್ಪತ್ರೆಗಳಿಗೆ ತಜ್ಞ ವೈದ್ಯರು ತೆರಳಲು ಬಯಸುವುದಿಲ್ಲ. ಆದರೆ ಆಸ್ಪತ್ರೆಗಳಲ್ಲಿ ಹುದ್ದೆಗಳನ್ನು ಹೇಗೆ ಭರ್ತಿ ಮಾಡುವುದು? ವೈದ್ಯರಿಲ್ಲದೇ ನಾಗರಿಕರಿಗೆ ಸೇವೆ ನೀಡುವುದು ಹೇಗೆ? ಆಗ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿ, ಗ್ರಾಮೀಣ ಪ್ರದೇಶದಲ್ಲಿ ಆಸಕ್ತ ವೈದ್ಯರ ಜತೆ ಮಾತುಕತೆ ನಡೆಸಲಾಯಿತು. ಜಿಲ್ಲೆಯಲ್ಲಿ ಒಟ್ಟು 14 ಹುದ್ದೆಗಳು ಈ ರೀತಿಯಾಗಿ ಭರ್ತಿಯಾಗಿವೆ. ಮೂಲ್ಕಿ, ವೆನ್ಲಾಕ್‌, ವಾಮದಪದವು ಮೊದಲಾದೆಡೆ ಕೆಲ ಹುದ್ದೆಗಳನ್ನು ಇದೇ ರೀತಿ ಭರ್ತಿಗೊಳಿಸಲಾಗಿದೆ. ವಾಮದಪದವಿನಲ್ಲಿ ಅರಿವಳಿಕೆ ತಜ್ಞರು ಎಲ್ಲ ಕಾರ್ಯವನ್ನೂ ಮಾಡಬೇಕು. ಅವರೇ ಶಸ್ತ್ರಚಿಕಿತ್ಸಕರೂ ಪ್ರಸೂತಿ ತಜ್ಞರೂ ಅರಿವಳಿಕೆ ತಜ್ಞರೂ ಆಗಿ ಕರ್ತವ್ಯ ನಿರ್ವಹಿಸಬೇಕು.
– ಡಿಎಚ್‌ಒ ರಾಮಕೃಷ್ಣ ರಾವ್‌

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next