ಬಾಲಿವುಡ್ ಗೆ ಈ ವರ್ಷ ಸುಗ್ಗಿ ಕಾಲವೆಂದೇ ಹೇಳಬಹುದು. ಕಳೆದ ಕೆಲ ವರ್ಷಗಳಿಂದ ಸೌತ್ ಸಿನಿಮಾಗಳು ಕೂಡ ಬಾಲಿವುಡ್ ಅಂಗಳದಲ್ಲಿ ಮಿಂಚು ಹರಿಸುತ್ತಿವೆ. ಆದರೆ ಬಾಲಿವುಡ್ ಮಾತ್ರ ಸಪ್ಪೆಯಾದ ಸಿನಿಮಾಗಳನ್ನು ನೀಡುತ್ತಿತ್ತು. ಆದರೆ 2022 ರಲ್ಲಿ ಬಂದ ಕೆಲ ಚಿತ್ರಗಳು ಹಾಗೂ 2023 ರ ಮೊದಲಾರ್ಧದಲ್ಲಿ ಬಂದಿರುವ ಸಿನಿಮಾಗಳು ಬಾಲಿವುಡ್ ರಂಗದಲ್ಲಿ ಮತ್ತೆ ಮನರಂಜನೆ ಚಿಗುರೊಡೆಯುವಂತೆ ಮಾಡಿದೆ.
ಈ ವರ್ಷ ಬಾಲಿವುಡ್ ನಲ್ಲಿ ಬಂದ ಸಿನಿಮಾಗಳು ಸೌತ್ ಸಿನಿಮಾರಂಗಕ್ಕೂ ಟಕ್ಕರ್ ಕೊಟ್ಟಿವೆ. ಕೋವಿಡ್ ಸಮಯದಿಂದ ಬಾಲಿವುಡ್ ಮಾರ್ಕೆಟ್ ನಲ್ಲಿ ಏನೇ ಬಂದರೂ ಅದು ಓಟಿಟಿಯಲ್ಲೂ ಕ್ಲಿಕ್ ಆಗಲು ಪರದಾಡುತ್ತಿತ್ತು. ಇದೀಗ ನಿಧಾನವಾಗಿ ಬಾಲಿವುಡ್ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ತನ್ನ ಹಿಡಿತವನ್ನು ಸಾಧಿಸುತ್ತಿದೆ.
ಬಾಲಿವುಡ್ ಗೆ ಮರು ಜೀವ ಕೊಟ್ಟ ಪಠಾಣ್:
ಎಷ್ಟೇ ದೊಡ್ಡ ಹೀರೋ ಆಗಿರಬಹುದು. ಆತನಿಗೆ ದೊಡ್ಡ ಪ್ರೇಕ್ಷಕ ವರ್ಗವೇ ಇರಬಹುದು ಆದರೆ ಸಿನಿಮಾದ ಕಂಟೆಂಟ್ ಚೆನ್ನಾಗಿದ್ದಾರೆ ಮಾತ್ರ ಸಿನಿಮಾ ಥಿಯೇಟರ್ ನಲ್ಲಿ ಹೆಚ್ಚು ದಿನ ಓಡಬಹುದು ಇಲ್ಲದಿದ್ರೆ ಮೊದಲ ಮೂರು ದಿನದಲ್ಲೇ ಸಿನಿಮಾದ ಹಣೆಬರಹ ಹಾಗೂ ಹಣದ ಗಳಿಕೆಯ ಬಗ್ಗೆ ಗೊತ್ತಾಗಿ ಬಿಡುತ್ತದೆ. ಇದಕ್ಕೆ ಉದಾಹರಣೆಗೆಯಾಗಿ ನಿಲ್ಲುತ್ತಾರೆ ಕಿಂಗ್ ಖಾನ್ ಶಾರುಖ್. ತನ್ನ ಹಿಂದಿನ ಸತತ ಸೋಲಿನ ಬಳಿಕ ಸಿನಿಮಾರಂಗದಿಂದ ಗ್ಯಾಪ್ ಪಡೆದಿದ್ದ ಶಾರುಖ್ ಮತ್ತೆ ಕಂಬ್ಯಾಕ್ ಮಾಡಿದ್ದು ‘ಪಠಾಣ್’ ಮೂಲಕ. ಸಿನಿಮಾ ರಿಲೀಸ್ ಗೂ ಮುನ್ನ ವಿವಾದದಿಂದ ‘ಬ್ಯಾನ್’ ಆಗುವ ಕೂಗಿಗೂ ಒಳಗಾದರೂ ಕಂಟೆಂಟ್‌ನಿಂದ ಕೋಟಿ ಕ್ಲಬ್ ಸೇರಿ ಬಾಲಿವುಡ್ ಗೆ ವರ್ಷದ ಮೊದಲ ಬೂಸ್ಟ್ ನೀಡಿತು. ಇದರೊಂದಿಗೆ ಶಾರುಖ್ ಇಮೇಜ್ ಮತ್ತೆ ಮುನ್ನೆಲೆಗೆ ಬಂತು.
ಧೊಳೆಬ್ಬಿಸಿದ ‘ದಿ ಕೇರಳ ಸ್ಟೋರಿ’ :
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಬಳಿಕ ಜನರಿಗೆ ಅಂಥ ಸಿನಿಮಾಗಳ ಮೇಲೆ ಒಲವು ಹೆಚ್ಚಾಗಿತ್ತು. ಇದೇ ಮಾದರಿಯ ಸಿನಿಮಾವಾಗಿ ಬಂದದ್ದು ‘ದಿ ಕೇರಳ ಸ್ಟೋರಿ’ ಆರಂಭದಲ್ಲಿ ಸಿನಿಮಾಕ್ಕೆ ವಿರೋಧ ಹಾಗೂ ಬ್ಯಾನ್ ಬಿಸಿ ಬಿಸಿ ತಟ್ಟಿತು. ಎಲ್ಲಿಯವರೆಗೆ ಅಂದರೆ ಸಿನಿಮಾದಲ್ಲಿ ನಟಿಸಿದ ಕಲಾವಿದರಿಗೂ ಬೆದರಿಕೆಗಳು ಬರಲು ಆರಂಭಿಸಿತು. ಆದರೆ ಈ ಎಲ್ಲಾ ಅಂಶ ಸಿನಿಮಾಕ್ಕೆ ಪಾಸಿಟಿವ್ ಆಗಿ ಪರಿಣಮಿಸಿತು. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕ್ಲಬ್ ಸೇರಿತು ಜತೆಗೆ ಬಾಲಿವುಡ್ ನಲ್ಲಿ ಹಿಟ್ ಸಾಲಿಗೆ ಸೇರಿತು.
ಕಡಿಮೆ ಬಜೆಟ್ ನಲ್ಲೂ ಮಿಂಚಿದ ಚಿತ್ರಗಳು:
ಸಾಮಾನ್ಯವಾಗಿ ಕೋಟಿ ಕೋಟಿ ಗಳಿಸುವ ಸಿನಿಮಾಗಳು ದೊಡ್ಡ ಬಜೆಟ್ ನಲ್ಲಾಗುತ್ತದೆ. ಆದರೆ ಬಾಲಿವುಡ್ ನಲ್ಲಿ ಈ ವರ್ಷ ಬಂದ ಕೆಲ ಸಿನಿಮಾಗಳು ಇದಕ್ಕೆ ವಿರುದ್ಧವಾಗಿ ಗೆದ್ದು ತೋರಿಸಿದೆ. ಮುಖ್ಯವಾಗಿ ರಣ್ ಬೀರ್ ಕಪೂರ್ ಅವರ ‘ತು ಜೂಟಿ ಮೈನ್ ಮಕಮಕ್ಕರ್’,ವಿಕ್ಕಿ ಕೌಶಲ್, ಸಾರಾ ಅಲಿಖಾನ್ ಅಭಿನಯದ ‘ಜರಾ ಹಟ್ಕೆ ಜರಾ ಬಚ್ಕೆ’ ‘ಮಿಸೆಸ್ ಚಟರ್ಜಿ Vs ನಾರ್ವೆ ‘ ಹಾಗೂ ಕೇರಳ ಸ್ಟೋರಿ’ ಮುಂತಾದ ಸಿನಿಮಾಗಳು ದೊಡ್ಡ ಬಜೆಟ್ ನಲ್ಲಿ ತಯಾರಾದ ಸಿನಿಮಾಗಳಲ್ಲ. ಆದರೆ ಇವುಗಳು ಕಥೆ, ಭಾವನಾತ್ಮಕತೆ, ನಟನೆ, ಸಬ್ಜೆಕ್ಟ್ ಯಿಂದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
‘ ತು ಜೂಟಿ ಮೈನ್ ಮಕಮಕ್ಕರ್’, ಹಾಗೂ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾಗಳು ರೊಮ್ಯಾಂಟಿಕ್ ಸ್ಟೋರಿ ಲೈನ್ ನಿಂದ ಯುವ ಪ್ರೇಕ್ಷಕರನ್ನು ಸೆಳೆದಿದ್ದು,’ಮಿಸೆಸ್ ಚಟರ್ಜಿ Vs ನಾರ್ವೆ’ ಹಾಗೂ ‘ದಿ ಕೇರಳ ಸ್ಟೋರಿ’ ಸಿನಿಮಾಗಳು ಸ್ಟ್ರಾಂಗ್ ಕಥೆಯಿಂದ ಜನರನ್ನು ಸೆಳೆದಿದೆ.
ರಿಮೇಕ್ ಸಿನಿಮಾ ಅಷ್ಟಕ್ಕಷ್ಟೇ..
ಚಿತ್ರರಂಗದ ಯಾವ ಸಿನಿಮಾಗಳು ಬಂದರೂ, ಅವು ಇಂದು ಬಹುಬೇಗ ಓಟಿಟಿಯಲ್ಲಿ ಬಂದು ಬಿಡುತ್ತವೆ. ಇದರೊಂದಿಗೆ ಡಬ್ ಆಗಿ ಬೇರೆ ಬೇರೆ ಭಾಷೆಯಲ್ಲಿ ತೆರೆಗೆ ಬರುತ್ತದೆ. ಇಷ್ಟಾದರೂ ಸಿನಿಮಾವನ್ನು ರಿಮೇಕ್ ಮಾಡಿ ಮತ್ತೆ ತೆರೆಗೆ ತರುವ ಸಾಹಸವನ್ನು ಬಾಲಿವುಡ್ ಸೇರಿದಂತೆ ಇತರ ಚಿತ್ರರಂಗಗಳು ಮಾಡುತ್ತಿವೆ. ಅದರಂತೆ ಬಾಲಿವುಡ್ ನಲ್ಲಿ ಈ ವರ್ಷವೂ ರಿಮೇಕ್ ಆದ ಸಿನಿಮಾಗಳು ಅಟ್ಟರ್ ಲಾಸ್ ಆಗಿ ಮಕಾಡೆ ಮಲಗಿದೆ.
ರಿಮೇಕ್ ಚಿತ್ರಗಳನ್ನು ದೊಡ್ಡ ಸ್ಟಾರ್ ಗಳನ್ನು ಬಳಸಿ ಮಾಡುವುದು ಸಾಮಾನ್ಯ. ಈಗಾಗಲೇ ಆ ಸಿನಿಮಾ ಡಬ್ ಆಗಿ ಯೂಟ್ಯೂಬ್ ಸೇರಿದಂತೆ ಇತರ ಭಾಷೆಯಲ್ಲಿ ಬಂದಿದ್ದರೂ ನಾಯಕ ನಟ, ನಾಯಕಿ ಬದಲಾವಣೆ ಮಾಡಿ ಹೊಸ ರೀತಿಯ ಸಿನಿಮಾವೆಂದೇ ರಿಮೇಕ್ ಮಾಡಿ ತೆರೆಗೆ ತರುತ್ತಾರೆ.
ಬಾಲಿವುಡ್ ನಲ್ಲಿ ಉದಾಹರಣೆಗೆಯಾಗಿ ಹೇಳುವುದಾದರೆ ಈ ವರ್ಷ ಕಾಲಿವುಡ್ ರಿಮೇಕ್ ‘ಖೈತಿ’ ‘ಬೋಲಾ’ ಆಗಿ ತೆರೆಗೆ ಬಂದಿತ್ತು. ಬೋಲಾದಲ್ಲಿ ಅಜಯ್ ದೇವಗನ್ ನಂತಹ ದೊಡ್ಡ ಸ್ಟಾರ್ ಲೀಡ್ ರೋಲ್ ನಲ್ಲಿ ನಟಿಸಿದ್ದರೂ ಸಿನಿಮಾಕ್ಕೆ ಹಾಕಿದ ಹಣವನ್ನು ಗಳಿಸಲು ವಿಫಲವಾಗಿತ್ತು.
ಇನ್ನು ಅಲ್ಲು ಅರ್ಜುನ್ ಅವರ ‘ಅಲಾ ವೈಕುಂಠಪುರಮುಲು’ ನಂತಹ ಸೂಪರ್ ಹಿಟ್ ಸಿನಿಮಾವನ್ನು ಹಿಂದಿಯಲ್ಲಿ ‘ಶೆಹಜಾದಾ’ ಎಂದು ಟೈಟಲ್ ಇಟ್ಟು ಕಾರ್ತಿಕ್ ಆರ್ಯನ್ ನಟಿಸಿದ್ದರು. ಆದರೆ ಟಾಲಿವುಡ್ ನಲ್ಲಿ ಮಾಡಿದ ದೊಡ್ಡಮಟ್ಟದ ಕಮಾಯಿ ಅರ್ಧದ್ದಷ್ಟನ್ನೂ ಹಿಂದಿಯಲ್ಲಿ ಈ ಸಿನಿಮಾ ಮಾಡಿಲ್ಲ.
ಇನ್ನು ಇತ್ತೀಚಿಗೆ ಬಂದ ಅಕ್ಷಯ್ ಕುಮಾರ್ ಹಾಗೂ ಇಮ್ರಾನ್ ಹಶ್ಮಿ ಅವರ ‘ಸೆಲ್ಫಿ’ ಸಿನಿಮಾ ಮಲಯಾಳಂನ ‘ಡ್ರೈವಿಂಗ್ ಲೈಸೆನ್ಸ್’ ಚಿತ್ರದ ರಿಮೇಕ್. ಆದರೆ ಬಾಲಿವುಡ್ ನಲ್ಲಿ ಸಿನಿಮಾ ಅಷ್ಟಾಗಿ ಹವಾ ಕ್ರಿಯೇಟ್ ಮಾಡಿಲ್ಲ. ಬಹುಬೇಗನೇ ಥಿಯೇಟರ್ ನಿಂದ ಹೊರ ಹೋಯಿತು.
ಸಲ್ಮಾನ್ ಖಾನ್ ಅವರ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ‘ ಸಿನಿಮಾ ಅಜಿತ್ ಅವರ ‘ವೀರಂ’ ಸಿನಿಮಾದ ರಿಮೇಕ್ . ಸಿನಿಮಾ ಒಂದಷ್ಟು ಸದ್ದು ಮಾಡಿತು ನಿಜ ಆದರೆ ಸನ್ಮಾನ್ ಖಾನ್ ಅವರ ಉಳಿದ ಚಿತ್ರದ ಕಮಾಯಿ ಅಷ್ಟು ಈ ಚಿತ್ರದ ಗಳಿಕೆ ಇರಲಿಲ್ಲ.
ಸೆಕೆಂಡ್ ಹಾಫ್ ನಲ್ಲೂ ಧಮಾಕ ಮಾಡುತ್ತಾ ಬಾಲಿವುಡ್?:
ವರ್ಷದ ಎರಡನೇ ಹಾಫ್ ನಲ್ಲಿ ಬಾಲಿವುಡ್ ನಲ್ಲಿ ಕೆಲ ದೊಡ್ಡ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದೆ. ಇವುಗಳಲ್ಲಿ ಈಗಾಗಲೇ ಕೆಲ ಚಿತ್ರಗಳು ಹೈಪ್ ಕ್ರಿಯೇಟ್ ಮಾಡಿವೆ. ಅವುಗಳಲ್ಲಿ ಪ್ರಮುಖವಾಗಿ..
ಬವಾಲ್: ʼದಂಗಲ್ʼ ನಿರ್ದೇಶಕ ನಿತೀಶ್ ತಿವಾರಿ ಅವರ ʼಬವಾಲ್ʼ ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆಗದೇ ಇರುವುದು ಅಚ್ಚರಿಯಾಗಿದ್ದರೂ, ಓಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗಿ ಮಿಂಚುತ್ತಿದೆ. ವರುಣ್ ಧವನ್ ಹಾಗೂ ಜಾಹ್ನವಿ ಅವರ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದೆ. ಈ ಸಿನಿಮಾ ಜು.21 ರಂದು ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿದೆ.
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ:
ರಣ್ವೀರ್ – ಆಲಿಯಾ ಜೋಡಿಯಾಗಿ ನಟಿಸಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಕರಣ್ ಜೋಹರ್ ನಿರ್ಮಾಣದ ಸಿನಿಮಾ. ಜಯಾ ಬಚ್ಚನ್, ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಮುಂತಾದವರು ನಟಿಸಿರುವ ಸಿನಿಮಾ ಜುಲೈ 28 ರಂದು ತೆರೆಗೆ ಬರಲಿದೆ.
ಗದರ್ 2: ಸನ್ನಿ ಡಿಯೋಲ್ ಅವರ ಗದರ್ -2 ಸಿನಿಮಾ ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. 2001 ರಲ್ಲಿ ಬಂದ ಸಿನಿಮಾದ ಮೊದಲ ಭಾಗ ಅಂದು ಬಾಲಿವುಡ್ ನಲ್ಲಿ ಹೊಸ ದಾಖಲೆ ಬರೆದಿತ್ತು. ತಾರಾ ಸಿಂಗ್ ಹಾಗೂ ಸಕೀನಾ ಪ್ರೇಮಕಥೆ ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ಬರಲಿದೆ. ಸಿನಿಮಾದ ಮೇಲಿನ ಕುತೂಹಲ ಅದರ ಹಾಡು ಪೋಸ್ಟರ್‌ಗಳ ಹಿಟ್ ನಿಂದಲೇ ಎಷ್ಟಿದೆ ಅನ್ನೋದು ಈಗಾಗಲೇ ಗೊತ್ತಾಗಿದೆ. ಈ ಸಿನಿಮಾ ಆಗಸ್ಟ್ 11 ರಂದು ತೆರೆಗೆ ಬರಲಿದೆ.
ಓ ಮೈ ಗಾಡ್ 2 : ಅಕ್ಷಯ್ ಕುಮಾರ್ ಸಿನಿ ಕೆರಿಯರ್ ನಲ್ಲಿ ದೊಡ್ಡ ಹಿಟ್ ಕೊಟ್ಟ ʼಓ ಮೈ ಗಾಡ್ʼ ಸಿನಿಮಾದ ಸೀಕ್ವೆಲ್ ಈಗಾಗಲೇ ಸದ್ದು ಮಾಡಿದೆ. ಪಂಕಜ್ ತ್ರಿಪಾಠಿ ಅವರನ್ನು ಒಳಗೊಂಡ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಅಕ್ಕಿಯ ಈ ಹಿಂದಿನ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಅಷ್ಟಾಗಿ ವರ್ಕೌಟ್ ಆಗಿಲ್ಲ. ʼಓ ಮೈ ಗಾಡ್-2ʼ ಸಿನಿಮಾ ಬಿಟೌನ್ ನಲ್ಲಿ ಕಮಾಲ್ ಮಾಡಬಹುದು ಎನ್ನಲಾಗುತ್ತದೆ. ಅಂದಹಾಗೆ ಈ ಸಿನಿಮಾ ಆಗಸ್ಟ್ 11 ರಂದು ರಿಲೀಸ್ ಆಗಲಿದೆ. ಅದೇ ದಿನ ಗದರ್ -2 ಕೂಡ ರಿಲೀಸ್ ಆಗಲಿದ್ದು, ಬಿಟೌನ್ ಬಾಕ್ಸ್ ಆಫೀಸ್ ನಲ್ಲಿ ಪೈಪೋಟಿ ಆಗುವ ಸಾಧ್ಯತೆಯಿದೆ.
ಜವಾನ್:
ಕಾಲಿವುಡ್ ಸ್ಟಾರ್ ನಿರ್ದೇಶಕ ಅಟ್ಲಿಯ ಮೊದಲ ಬಾಲಿವುಡ್ ಸಿನಿಮಾವಾಗಿರುವ ‘ಜವಾನ್’ ಈಗಾಗಲೇ ತನ್ನ ಪೋಸ್ಟರ್, ಟೀಸರ್ ಹಾಗೂ ಟ್ರೇಲರ್ ನಿಂದ ಮೋಡಿ ಮಾಡಿದೆ. ಈ ಸಿನಿಮಾದ ಹವಾ ಜೋರಾಗಿದ್ದು ಸೆ.7 ರಂದು ರಿಲೀಸ್ ಆಗಲಿದೆ. ʼಪಠಾಣ್ʼ ಬಳಿಕ ಶಾರುಖ್ ಸಿನಿ ಕೆರಿಯರ್ ನಲ್ಲಿ ʼಜವಾನ್ʼ ಮತ್ತೊಂದು ದೊಡ್ಡ ಹಿಟ್ ಆಗುವ ಸಾಧ್ಯತೆಯಿದೆ.
ಆ್ಯನಿಮಲ್: ಈ ವರ್ಷ ರಣ್ಬೀರ್ ಕಪೂರ್ ಅವರಿಗೆ ‘ ತು ಜೂಟಿ ಮೈನ್ ಮಕಮಕ್ಕರ್’ ಸಿನಿಮಾ ಹಿಟ್ ಕೊಟ್ಟಿದೆ. ಸಂದೀಪ್ ರೆಡ್ಡಿ ವಂಗ ಅವರ ʼ ಆ್ಯನಿಮಲ್ʼ ಮತ್ತೊಂದು ಹಿಟ್ ಆಗುವ ಸಾಧ್ಯತೆಯಿದೆ. ಸಿನಿಮಾದಲ್ಲಿ ರಣ್ಬೀರ್ ಇಂದೆಂದೂ ಕಾಣಿಸಿಕೊಳ್ಳದ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಡಿಸೆಂಬರ್ 1 ರಂದು ತೆರೆಗೆ ಬರಲಿದೆ. ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ನಟಿಸಿದ್ದಾರೆ.
ಟೈಗರ್- 3: ಸಲ್ಮಾನ್ ಖಾನ್ ಅವರ ಕಳೆದ ಕೆಲ ಸಿನಿಮಾ ಅಂದುಕೊಂಡಷ್ಟು ಹಿಟ್ ಆಗಿಲ್ಲ. ಈ ಹಿಂದಿನ ಅವರ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ‘ 100 ಕೋಟಿ ಕ್ಲಬ್ ಸೇರಿತು. ಆದರೆ ಸಿನಿಮಾದ ಬಗ್ಗೆ ಅಷ್ಟಾಗಿ ಪಾಸಿಟಿವ್ ಮಾತುಗಳು ಕೇಳಿ ಬಂದಿಲ್ಲ. ಸಲ್ಮಾನ್ ಖಾನ್ ಅವರ ʼಟೈಗರ್ʼ ಸರಣಿಯ ಸಿನಿಮಾಗಳು ಹಿಟ್ ಆಗಿವೆ. ಕತ್ರಿನಾ – ಸಲ್ಮಾನ್ ಮತ್ತೊಮ್ಮೆ ಟೈಗರ್ -3 ನಲ್ಲಿ ಮೋಡಿ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್, ಇಮ್ರಾನ್ ಹಶ್ಮಿ ಸೇರಿದಂತೆ ದೊಡ್ಡ ತಾರಂಗಣವೇ ಇರಲಿದೆ ಎನ್ನಲಾಗಿದೆ. ಒಂದು ಮಾಹಿತಿಯ ಪ್ರಕಾರ ಈ ಸಿನಿಮಾ ನವೆಂಬರ್ 10 ರಂದು ತೆರೆಗೆ ಬರಲಿದೆ.
ಇವಿಷ್ಟು ಮಾತ್ರವಲ್ಲದೆ ಪ್ರಮುಖವಾಗಿ ಆಯುಷ್ಮಾನ್ ಖುರಾನಾ ಅವರ ʼಡ್ರೀಮ್ ಗರ್ಲ್ -2ʼ, ಟೈಗರ್ ಶ್ರಾಫ್ ಅವರ ʼಗಣಪತ್ ಪಾರ್ಟ್- 1ʼ, ಕಂಗನಾ ರಣಾವತ್ ಅವರ ʼಎಮರ್ಜೆನ್ಸಿʼ, ವರ್ಷಾಂತ್ಯಕ್ಕೆ ಕರಣ್ ಜೋಹರ್ ಅವರ ʼಯೋಧʼ, ಕತ್ರಿನಾ , ಸೇತುಪತಿ ಅವರ ʼಮೇರಿ ಕ್ರಿಸ್ಮಸ್ʼ ತೆರೆ ಕಾಣಲಿದೆ.
-ಸುಹಾನ್ ಶೇಕ್