Advertisement

ಮಳೆ; ದೇವರ ಮೊರೆ ಹೋದ ಸರಕಾರ

03:45 AM May 16, 2017 | |

ಬೆಂಗಳೂರು: ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಮಳೆರಾಯನಿಗಾಗಿ ದೇವರ ಮೊರೆ ಹೋಗಲು ನಿರ್ಧರಿಸಿದ್ದು, ವಿಶೇಷ ಪೂಜೆ ಸಲ್ಲಿಸಲು ಮುಜರಾಯಿ ಇಲಾಖೆ ಮುಂದಾಗಿದೆ.

Advertisement

ಮಳೆಗಾಗಿ ಮೋಡಬಿತ್ತನೆ, ನೀರಿಗಾಗಿ ಪಾತಾಳಗಂಗೆಯತ್ತ ಮುಖ ಮಾಡಿರುವ ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ 34,543 ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಪೂಜೆ ಸಲ್ಲಿಸಲು ನಿರ್ಧರಿಸಿದೆ. ಈ ಸಂಬಂಧ ಶೀಘ್ರವೇ ಅಧಿಕೃತ ಆದೇಶವೂ ಹೊರಬೀಳಲಿದೆ.

ಈ ಕುರಿತು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಈಗಾಗಲೇ ಇಲಾಖೆಯ ಆಯುಕ್ತರಿಗೆ ಮೌಖೀಕ ಸೂಚನೆ ನೀಡಿದ್ದು, ಉತ್ತಮ ದಿನ ನಿಗದಿಪಡಿಸಿ ಎಲ್ಲ ದೇವಸ್ಥಾನಗಳಲ್ಲಿಯೂ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಲು ಅಧಿಕೃತ ಆದೇಶ ಹೊರಡಿಸುವಂತೆ ಸೂಚಿಸಿದ್ದಾರೆ.

ಮುಜರಾಯಿ ಇಲಾಖೆಗಳ ಮೂಲಗಳ ಪ್ರಕಾರ ವರುಣನಿಗೆ ವಿಶೇಷ ಪೂಜೆಯ ವೇಳೆ, ವಿಧಿ ವಿಧಾನ ಎಲ್ಲ ಮಾಹಿತಿಯುಳ್ಳ ಅಧಿಕೃತ ಆದೇಶ ಒಂದೆರಡು ದಿನದಲ್ಲಿ ಆಯುಕ್ತರಿಂದ ಪ್ರಕಟವಾಗುವ ಸಾಧ್ಯತೆ ಇದ್ದು, ಈ ಬಾರಿಯಾದರೂ, ಉತ್ತಮ ಮಳೆ ಬಂದು ರಾಜ್ಯದಲ್ಲಿ ರೈತರು, ಜನರು ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂಬ ಬೇಡಿಕೆಯನ್ನಿಟ್ಟು, ದೇವರ ಮೊರೆ ಹೋಗಲು ನಿರ್ಧರಿಸಿದ್ದಾರೆ ಎದು ಹೇಳಲಾಗಿದೆ.

ರಾಜ್ಯದಲ್ಲಿ ಸತತ ಆರು ವರ್ಷಗಳಿಂದ ನಿರಂತರ ಬರಗಾಲವಿದ್ದು ಸಾಮಾನ್ಯ ಜನರಿಗಷ್ಟೇ ಅಲ್ಲ ಸರ್ಕಾರವೂ ನೀರಿನ ಕೊರತೆಯಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. 42 ವರ್ಷಗಳಲ್ಲಿ ಕರ್ನಾಟಕ ಅತಿ ಹೆಚ್ಚು ಬರ ಪರಿಸ್ಥಿತಿ ಎದುರಿಸುತ್ತಿದ್ದು, ಈ ವರ್ಷ ರಾಜ್ಯ ಸರ್ಕಾರ ಮುಂಗಾರಿನಲ್ಲಿ 139 ತಾಲೂಕುಗಳು ಹಾಗೂ ಹಿಂಗಾರಿನಲ್ಲಿ 160 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. 

Advertisement

ಇದೇ ಮೊದಲಲ್ಲ…
ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ ಮಳೆಗಾಗಿ ಏಕ ಕಾಲದಲ್ಲಿ ಪೂಜೆ ಸಲ್ಲಿಸಲಾಗಿತ್ತು. ಕಾಂಗ್ರೆಸ್‌ ಸರ್ಕಾರದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಕೂಡ ಕಳೆದ ವರ್ಷ ಚಿಕ್ಕಮಗಳೂರಿನ ದೇವಸ್ಥಾನವೊಂದರಲ್ಲಿ ವರುಣನಿಗಾಗಿ ರಾಜ್ಯ ಸರ್ಕಾರದ ಪರವಾಗಿ ವಿಶೇಷ ಪೂಜೆ ಸಲ್ಲಿಸಿದ್ದರು.

ಮಳೆ ಬಾರದಿದ್ದರೆ ಎಲ್ಲರಿಗೂ ಸಮಸ್ಯೆಯಾಗುತ್ತದೆ. ಈ ವರ್ಷ ಮಳೆ ಚೆನ್ನಾಗಿ ಬರುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ಇದುವರೆಗೂ ಆಗಬೇಕಾದಷ್ಟು ಮಳೆ ಆಗಿಲ್ಲ. ರಾಜ್ಯದ ಜನರ ಒಳಿತಿಗಾಗಿ ಮಳೆ ರಾಯನಿಗೆ ವಿಶೇಷ ಪೂಜೆ ಸಲ್ಲಿಸಬೇಕೆಂಬ ಆಲೋಚನೆ ಇದೆ. ಈಗಾಗಲೇ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಖಾಸಗಿಯಾಗಿ ವಿಶೇಷ ಪೂಜೆ ಸಲ್ಲಿಸಲು ಅರ್ಚಕರಿಗೆ ಸೂಚನೆ ನೀಡಿದ್ದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿಯೂ ಒಂದು ಬಾರಿ ವಿಶೇಷ ಪೂಜೆ ಸಲ್ಲಿಸಲು ಆದೇಶ ಹೊರಡಿಸಲು ಆಯುಕ್ತರಿಗೆ ಸೂಚನೆ ನೀಡಿದ್ದೇನೆ.
– ರುದ್ರಪ್ಪ ಲಮಾಣಿ, ಮುಜರಾಯಿ ಸಚಿವ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next