Advertisement

ಬೆಂಗಳೂರು ಬಂಟರ ಸಂಘದಲ್ಲಿ‌ ವಿಶೇಷ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

08:20 PM Jul 28, 2022 | Team Udayavani |

ಬೆಂಗಳೂರು: ಕುಂದಾಪ್ರ ಸಂಸ್ಕೃತಿಯನ್ನ ಸದುದ್ದೇಶದಿಂದ ವಿಜೃಂಭಣೆ ಯಿಂದ ಆಚರಿಸಿ.‌ಆದರೆ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.ಕುಂದಾಪುರ ಭಾಗದಲ್ಲಿ ‌ಸಾಕಷ್ಟು ಜನ ಸಾಧಕರಿದ್ದಾರೆ. ಆದರೆ ಅವರನ್ನ ಕಂಡು ಖುಷಿಪಟ್ಟರಷ್ಟೇ ಸಾಲದು ಅವರಂತೆ ಆಗಲು ಪ್ರಯತ್ನಿಸಬೇಕು ಎಂದು ಬಂಟರ ಸಂಘದಲ್ಲಿ‌ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ವೇಳೆ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.

Advertisement

ಬೆಂಗಳೂರಿನ ಬಂಟರ ಸಂಘದ‌ ಸಭಾಭವನದಲ್ಲಿ ವಿಶ್ವಕುಂದಾಪ್ರ ಕನ್ನಡ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಕುಂದಾಪ್ರ ‌ಕನ್ನಡ ಗೀತೆಯನ್ನು ಯುವ ಗಾಯಕಿ ಸಾನ್ವಿ ಶೆಟ್ಟಿ ಹಾಡಿ ಜನರನ್ನ ರಂಜಿಸಿದರು. ಚೇತನ್ ನೈಲಾಡಿ ನೇತೃತ್ವದಲ್ಲಿ ಹೆಂಗಸರ ಪಂಚಾಯ್ತಿ ಕಾರ್ಯಕ್ರಮದ ಮೂಲಕ ಸಂಸ್ಕೃತಿ ಬಿಂಬಿಸುತ್ತಾ ಹಾಸ್ಯದ ಮೂಲಕ ಭಾಷಿ, ಬದುಕನ್ನ ತೋರಿಸಿಕೊಟ್ಟರು.

ಕುಂದಾಪ್ರ ಕನ್ನಡದ ರಾಯಭಾರಿ ‌ಎಂದೇ ಖ್ಯಾತಿಯಾಗಿರುವ ಮನು ಹಂದಾಡಿ ಕುಂದಾಪುರ ಭಾಷೆಯಲ್ಲಿ ಹಾಸ್ಯದ ಮೂಲಕವೇ ಭಾಷೆ ಮಹತ್ವ ಸಾರಿದರು. ತಮ್ಮ ಮಾತಿನ ಕೊನೆಯವರೆಗೂ ಪ್ರೇಕ್ಷಕರನ್ನು ನೆಗೆಗಡಲಲ್ಲಿ ತೇಲಿಸಿದರು.ಕುಂದಾಪ್ರ ಕಟ್ಕಟ್ಲೆ ಕಾರ್ಯಕ್ರಮದ ಮೂಲಕ ಈ ಭಾಗದ ಮಹತ್ವದ ಸಂಸ್ಕ್ರತಿಯನ್ನು ಪರಿಚಯಿಸಲಾಯಿತು.

ಬೆಂಗಳೂರಿನ ಹಲವರಿಗೆ ಕುಂದಾಪುರ ವೈಶಿಷ್ಟ್ಯ ವಿಭಿನ್ನ ಹಬ್ಬದ ಬಗೆಗಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನವರಾತ್ರಿಯ ಸಮಯದಲ್ಲಿನ ಕಟ್ಟೆ ಪೂಜೆ, ಹುಲಿ ವೇಷ ಆರ್ಭಟವನ್ನ ಪರಿಚಯಿಸಲಾಯಿತು. ಬಲೀಂದ್ರ ಪೂಜೆಯ ಮೌಲ್ಯವನ್ನು ಕಾರ್ಯಕ್ರಮದ ಮೂಲಕ ತಿಳಿಸಲಾಯ್ತು. ಇದೀಗ ವಿರಳವಾಗಿ ಕಾಣ ಸಿಗುವ ವಸಂತ ಕುಣಿತದ ಹೌದರಾಯನ ವಾಲಗದ ಕುಣಿತವನ್ನು ಬೆಂಗಳೂರನಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ಹಾಗೇ ಭಜನಾ ಕುಣಿತವನ್ನು ಪ್ರದರ್ಶಿಸಿ‌ ಭಕ್ತಿ ಭಾವ ಮೆರೆಯಲಾಯ್ತು.ಯಕ್ಷಗಾನ ಅಂದರೆ ಕರಾವಳಿ ಭಾಗದಲ್ಲಿ ಆರಾಧಿಸಿ ಪೂಜಿಸುವರಿದ್ದಾರೆ.ವಿಶ್ವಕುಂದಾಪ್ರ‌ ದಿನದ ವಿಶೇಷ ಸಂದರ್ಭದಲ್ಲಿ ವೀರ ಅಭಿಮನ್ಯು ‌ಕಾಳಗದ ಯಕ್ಷಗಾನದಲ್ಲಿ ಅಭಿಮನ್ಯುವನ್ನು ಯುದ್ದಭೂಮಿಗೆ ಸುಭದ್ರೆ ನೋವಿನಿಂದಲೇ ಕಳುಹಿಸಿಕೊಡುವ ಸಂದರ್ಭದ ಯಕ್ಷಗಾನ ತುಣುಕನ್ನು ತೋರಿಸಲಾಯಿತು. ದಿಮ್ಸಾಲ್, ತುಳಸಿ ಪೂಜೆ ಸೇರಿ ಸಂಸ್ಕೃತಿಯ ಅನಾವರಣವನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿಸಲಾಯಿತು. ಒಟ್ಟಿನಲ್ಲಿ ವಿಶ್ವಕುಂದಾಪ್ರ ಕನ್ನಡ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next