Advertisement

ವಿದೇಶದಿಂದ ಬಂದ 67 ಮಂದಿ ಮೇಲೆ ವಿಶೇಷ ನಿಗಾ

11:15 PM Mar 18, 2020 | mahesh |

ಪುತ್ತೂರು: ಕೋವಿಡ್ ವೈರಸ್‌ ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ವತಿಯಿಂದ ಸಮರೋಪಾದಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಡಬ ಸಹಿತ ಪುತ್ತೂರು ತಾಲೂಕಿನಲ್ಲಿ ವಿದೇಶದಿಂದ ಸ್ವದೇಶಕ್ಕೆ ಮರಳಿರುವ 67 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಿಗೆ 14 ದಿನಗಳ ಕ್ವಾರಂಟೈನ್‌ ಅವಧಿಯ ನಿಗಾ ವಹಿಸಲಾಗುತ್ತಿದೆ.

Advertisement

ವಿದೇಶಗಳಿಂದ ವಾಪಸಾದವರನ್ನು ಎಲ್ಲ ಬಗೆಯ ಆರೋಗ್ಯ ಪರೀಕ್ಷೆ ನಡೆಸಿ, ಮುನ್ನೆಚ್ಚರಿಕೆ ದೃಷ್ಟಿಯಿಂದ 14 ದಿನಗಳ ಕಾಲ ಯಾರ ಸಂಪರ್ಕದಲ್ಲೂ ಇರದಂತೆ ಮನೆಯ ಕೋಣೆಯಲ್ಲೇ ಪ್ರತ್ಯೇಕವಾಗಿ ಇರಿಸಲಾಗುತ್ತಿದೆ.

ಪ್ರತ್ಯೇಕ ಬೆಡ್‌
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ 4 ಬೆಡ್‌ಗಳ ಐಸೋಲೇಶನ್‌ ವಾರ್ಡ್‌ ಹಾಗೂ 6 ಬೆಡ್‌ಗಳ ಕ್ವಾರಂಟೈನ್‌ ವಾರ್ಡ್‌ ಸೇರಿದಂತೆ ಕಡಬ, ಉಪ್ಪಿನಂಗಡಿ ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಪ್ರತ್ಯೇಕ ವಾಗಿ ಐಸೋಲೇಶನ್‌, ಕ್ವಾರಂಟೈನ್‌ ವಾರ್ಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಮಾಹಿತಿ ರವಾನೆ
ತಾಲೂಕಿನ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮಾಹಿತಿ ಸಂಗ್ರಹಿಸುವ ಆಶಾ ಕಾರ್ಯಕರ್ತೆಯರು ಈ ಮಾಹಿತಿಯನ್ನು ಆರೋಗ್ಯ ಕಾರ್ಯ ಕರ್ತೆಯರ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ರೋಡೀಕರಿಸಲಾಗುತ್ತದೆ. ಅನಂತರ ತಾಲೂಕು ಆರೋಗ್ಯ ಇಲಾಖೆಯ ಮೂಲಕ ಡಿಸಿಗೆ ಮಾಹಿತಿ ರವಾನೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆ ಗಳಿಂದಲೂ ರೋಗಿಗಳ ದಿನವಹಿ ಮಾಹಿತಿಯನ್ನು ತಾಲೂಕು ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗುತ್ತಿದೆ. ಕಡಬ ಮತ್ತು ಪುತ್ತೂರು ತಾಲೂಕಿನ ಗ್ರಾಮೀಣ ಭಾಗ ಹಾಗೂ ನಗರ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹಾಗೂ ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡುವ ಕೆಲಸಗಳು ನಡೆಯುತ್ತಿವೆ. ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ಕಾರ್ಯ ಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಮಾಹಿತಿ ಸಂಗ್ರಹ
ಸುಳ್ಳು ಸುದ್ದಿಗಳನ್ನು ನಂಬದೆ, ಭಯ ಪಡದೆ ಜಾಗ್ರತೆ ವಹಿಸಲು ಆದ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಜನತೆ ಹೆಚ್ಚು ಭಯ ಪಡುತ್ತಿರುವುದು ಕಂಡುಬರುತ್ತಿದೆ. ವಿದೇಶದಿಂದ ಬಂದ ವ್ಯಕ್ತಿಗಳಿದ್ದರೆ ಅಂಥವರ ಕುರಿತು ಮಾಹಿತಿ ನೀಡಬೇಕು. ಈ ಸೋಂಕು ವಿದೇಶಗಳಿಂದ ಬಂದ ವ್ಯಕ್ತಿಗಳಲ್ಲಿ ಮಾತ್ರ ರಾಜ್ಯದಲ್ಲಿ ಕಂಡು ಬಂದಿದೆ. ವಿಶೇಷವಾಗಿ ವಿದೇಶಗಳಿಂದ ಮರಳಿ ಮನೆಗೆ ಬಂದಿರುವ ವ್ಯಕ್ತಿಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್‌ ಕುಮಾರ್‌ ರೈ ತಿಳಿಸಿದ್ದಾರೆ.

Advertisement

ಸಭಾಂಗಣಗಳಿಗೆ ಸೂಚನೆ
ಮುಂದಿನ ಆದೇಶದ ತನಕ ಕಲ್ಯಾಣ ಮಂಟಪ, ಸಭಾಂಗಣ, ಸಮುದಾಯ ಭವನಗಳಲ್ಲಿ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಮದುವೆ, ಉಪನಯನ, ನಿಶ್ಚಿತಾರ್ಥ ಇತ್ಯಾದಿ ಕಾರ್ಯಕ್ರಮ ಆಯೋಜಿಸುವ ಸಬಾಂಗಣಗಳ ಮಾಲಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸ್ಯಾನಿಟೈಸರ್‌ ವ್ಯವಸ್ಥೆ
ಕೊರೊನಾ ಮುಂಜಾಗ್ರತೆಗಾಗಿ ಜಿಲ್ಲಾಧಿಕಾರಿ ಸೂಚನೆಯಂತೆ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವತ್ಛತಾ ಸಿಬಂದಿಗೆ ಕೈ ಸ್ವತ್ಛ ಮಾಡಲು ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಕಡ್ಡಾಯವಾಗಿ ಮುಖ ಕವಚ ಬಳಸುವಂತೆ ಸಿಬಂದಿಗೆ ಸೂಚನೆ ನೀಡಲಾಗಿದೆ ಎಂದು ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ತಿಳಿಸಿದ್ದಾರೆ.

ಗ್ರಾಮಸಭೆ ಮುಂದೂಡಿಕೆ
ಹಾಲಿ ಗ್ರಾ.ಪಂ.ಗಳಲ್ಲಿ ಗ್ರಾಮಸಭೆಗಳು ನಡೆಯುತ್ತಿದ್ದವು. ಈಗಾಗಲೇ ಶೇ. 75 ಗ್ರಾ.ಪಂ.ಗಳಲ್ಲಿ ಗ್ರಾಮಸಭೆಗಳು ನಡೆದಿವೆ. ಆದರೆ ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸಭೆಗಳ ಸಹಿತ ಎಲ್ಲ ಸಭೆಗಳನ್ನು ಮುಂದೂಡಿಕೆ ಮಾಡಿ ಗ್ರಾ.ಪಂ.ಗಳಿಗೆ ಆದೇಶ ಮಾಡಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಂಡಾರಿ ತಿಳಿಸಿದ್ದಾರೆ. ಕೊರೊನಾ ಜಾಗೃತಿಗೆ ಸಂಬಂಧಿಸಿ ಗ್ರಾ.ಪಂ.ಗಳ ಮೂಲಕವೂ ಮನೆ ಮನೆಗೆ ಕರಪತ್ರ ತಲುಪಿಸಲು ಸೂಚನೆ ನೀಡಲಾಗಿದೆ. ಜನರಲ್ಲಿ ಭಯ ಬೇಡ ಎನ್ನುವ ಸಂದೇಶದ ಬ್ಯಾನರ್‌ ಅಳವಡಿಸುವ ನಿಟ್ಟಿನಲ್ಲಿ ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗಿದೆ ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next