ಹೊಸೂರು: ತಮ್ಮ ರಾಜಕೀಯ ನಾಯಕರ ಗೆಲುವಿ ಗಾಗಿ ಅಭಿಮಾನಿಗಳು ಮಾಡಿಕೊಳ್ಳುವ ಹರಿಕೆಗಳನ್ನು ನೋಡಿದಾಗ ನಿಜಕ್ಕೂ ಇಂತಹ ಹರಿಕೆಗಳನ್ನು ಮಾಡಿಕೊಳ್ಳಬಹುದೇ ಎಂಬ ಅಚ್ಚರಿ ಆಗಬಹುದು. ತನ್ನ ನಾಯಕನ ಗೆಲುವಿಗಾಗಿ ಮಾಡಿಕೊಂಡ ಹರಿಕೆ ತೀರಿಸಲು ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಸಂತೋಷ ಅವರ ಪತ್ನಿ ಮಂಜುಳಾ ಅವರು ಮನೆ ಮನೆ ತೆರಳಿ ಭಿಕ್ಷೆ ಬೇಡಿ ದೇವರಿಗೆ ತಾವು ಮಾಡಿಕೊಂಡ ಹರಿಕೆಯನ್ನು ತೀರಿಸಿದ್ದಾರೆ.
ಇದು ಯಾರಿಗಾಗಿ ಮಾಡಿದ ಹರಿಕೆ ಎಂದರೆ ಅಭಿವೃದ್ಧಿಯ ಅನುಕಂಪದ ಜಿದ್ದಾಜಿದ್ದಿನಲ್ಲಿ ರಾಜ್ಯದಲ್ಲಿ ಹೈವೊಲ್ಟೇಜ್ ಕದನವಾಗಿದ್ದ ಮೈಸೂರು ಜಿಲ್ಲೆಯ ಕೆ.ಆರ್ .ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೇ ಚಿಕ್ಕಕೊಪ್ಪಲು ಮತ್ತು ಅಕ್ಕಪಕ್ಕದ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿ ಅರಕಲಗೂಡು ತಾಲೂಕಿನ ಲಕ್ಕೂರು ಮೂಡಲಕೊಪ್ಪಲು ಗ್ರಾಮದ ಶ್ರೀಮದನಂಟಿ ಅಮ್ಮ ದೇವರಿಗೆ ಪ್ರಸಾದ ಮಾಡುವುದಾಗಿ ಮಂಜುಳ ಹರಿಕೆ ಹೊತ್ತಿದ್ದರು.
ಇದೀಗ ಡಿ.ರವಿಶಂಕರ್ ಅವರು 1,04,502 ಮತ ಪಡೆದು 27,242 ಮತಗಳ ಅಂತರದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಜುಳಾ ಅವರು ಗ್ರಾಮದ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುವ ಮೂಲಕ ಅದರಿಂದ ಸಂಗ್ರಹವಾದ ಅಕ್ಕಿಯಿಂದ ಪ್ರಸಾದ ತಯಾರಿಸಿ ತಮ್ಮ ಮನೆಯ ದೇವರಿಗೆ ಪ್ರಸಾದ ಅರ್ಪಿಸಿದ್ದಾರೆ.
ಕಳೆದ ಎರಡು ಚುನಾವಣೆಯಲ್ಲಿ ಒಂದರಲ್ಲಿ ತಂದೆ ದೊಡ್ಡಸ್ವಾಮೇಗೌಡ ಬಾರಿ ಮತಗಳ ಅಂತರದಲ್ಲಿ ಸೋತಿದ್ದರೇ ಇನ್ನೊಂದು ಚುನಾವಣೆಯಲ್ಲಿ ಡಿ.ರವಿಶಂಕರ್ ಅವರು ಬೆರಳು ಎಣಿಕೆ ಮತದ ಎಣಿಕೆಯಲ್ಲಿ ಸೋತಿದ್ದರು. ಈ ಬಾರಿಯಾದರೂ ಗೆಲ್ಲಿಲಿ ಎಂದು ಈ ದೇವರಿಗೆ ಈ ತರದ ಹರಿಕೆಯನ್ನು ಹೊತ್ತಿದ್ದಾಗಿ ಮಂಜುಳಾ ಪತ್ರಿಕೆಗೆ ತಿಳಿಸಿದರು.
ಒಟ್ಟಿನಲ್ಲಿ ದೇವರ ಹುಂಡಿಗೆ ದುಡ್ಡು ಹಾಕುವುದು, ಮುಡಿ ಕೊಡುವುದು, ಕುರಿ ಬಲಿ ಕೊಡುವಂತಹ ಹರಿಕೆ ಮಾಡಿಕೊಂಡಿರುವ ಡಿ.ರವಿಶಂಕರ್ ಅಭಿಮಾನಿಗಳಲ್ಲಿ ಮಂಜುಳಾ ಅವರು ಮನೆ ಮನೆ ತೆರಳಿ 5 ದಿನಗಳ ಕಾಲ ಭಿಕ್ಷೆ ಬೇಡಿ ದೇವರ ಪ್ರಸಾದ ಅರ್ಪಣೆ ಮಾಡಿರುವುದು ರಾಜ್ಯದಲಿಯೇ ಡಿಪರೆಂಟ್ ಆಗಿದೆ.
-ಆನಂದ್ ಹೊಸೂರ್