Advertisement

Special train: ಜ. 31ರಿಂದ ರಾಜ್ಯದಿಂದ ಅಯೋಧ್ಯೆಗೆ ವಿಶೇಷ ರೈಲು

11:00 AM Jan 22, 2024 | Team Udayavani |

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಚುರುಕುಗೊಳ್ಳುತ್ತಿದ್ದಂತೆ, ಕರ್ನಾಟಕದಿಂದ ಅಯೋಧ್ಯೆಗೆ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಈ ನಡುವೆ ಭಾರತೀಯ ರೈಲ್ವೇ ಇಲಾಖೆಯು ಕರ್ನಾಟಕದಿಂದ ಆಯೋಧ್ಯೆಗೆ ಇದೇ 31 ರಿಂದ 11 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಿದೆ.

Advertisement

ಬೆಂಗಳೂರು ನೈರುತ್ಯ ರೈಲ್ವೇ ವಿಭಾಗದಿಂದ ಮೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು ವಿಭಾಗದಿಂದ ತಲಾ ಎರಡು ಹಾಗೂ ಶಿವಮೊಗ್ಗ, ಬೆಳಗಾವಿ ವಿಭಾಗದಿಂದ ಒಂದು ವಿಶೇಷ ಆಸ್ತಾ ರೈಲು ಸಂಚಾರವನ್ನು ಜ.31ರಿಂದ ಹಂತವಾಗಿ ಪ್ರಾರಂಭಿಸಿ ಮಾ.31ಕ್ಕೆ ಮುಕ್ತಾಯಗೊಳಿಸಲಿದೆ.

ಅಯೋಧ್ಯೆಗೆ ಸದ್ಯಕ್ಕೆ ಒಂದು ರೈಲು!: ಪ್ರಸ್ತುತ ರಾಜ್ಯದಿಂದ ಅಯೋಧ್ಯೆಗೆ ನೈಋತ್ಯ ರೈಲ್ವೇಯ ಬೆಂಗಳೂರಿನ ಯಶವಂತಪುರದಿಂದ ನೇರವಾಗಿ ಒಂದು ರೈಲು ಸಂಚರಿಸುತ್ತಿದೆ. ಯಶವಂತಪುರ ನಿಲ್ದಾಣದಿಂದ ಪ್ರತಿ ಗುರುವಾರ ರಾತ್ರಿ 11.40ಕ್ಕೆ ಹೊರಟ ರೈಲು ಶನಿವಾರ ಮಧ್ಯಾಹ್ನ 4.24ಕ್ಕೆ ಅಯೋಧ್ಯೆಗಢ ನಿಲ್ದಾಣಕ್ಕೆ ತಲುಪಲಿದೆ. ತದನಂತರ ರೈಲು ಗೋರಖ್‌ಪುರದಲ್ಲಿ ನಿಲುಗಡೆ ಮಾಡಲಿದೆ. ಇದರ ಹೊರತಾಗಿ ಯಾವುದೇ ರೈಲು ಅಯೋಧ್ಯಗಢ ಮೂಲಕ ಹಾದು ಹೋಗುವುದಿಲ್ಲ.

ಸಂಪರ್ಕ ವ್ಯವಸ್ಥೆ: ಬೆಂಗಳೂರಿನಿಂದ ತೆರಳುವ ಪ್ರಯಾಣಿಕರು ಲಕ್ನೋ ಹಾಗೂ ಬಾದಶಾ ರೈಲುಗಳ ಮೂಲಕ ತೆರಳಿದರೆ ಅಯೋಧ್ಯಗಢಕ್ಕೆ ಸಂಪರ್ಕ ಸಾಧಿಸಬಹುದಾಗಿದೆ. ಈ ಮಾರ್ಗವಾಗಿ ಪ್ರತಿ ಸೋಮವಾರ ಹಾಗೂ ಬುಧವಾರ ತಲಾ ಎರಡು ರೈಲುಗಳು ಸಂಚರಿಸಲಿದೆ. ಪ್ರಯಾಣಿಕರು ಲಕ್ನೋ ಹಾಗೂ ಬಾದಶಾ ರೈಲು ನಿಲ್ದಾಣದಲ್ಲಿ ಇಳಿದು 130 ರಿಂದ 150 ಕಿ.ಮೀ. ದೂರದಲ್ಲಿರುವ ಅಯೋಧ್ಯೆಗಢಕ್ಕೆ ರೈಲು, ಬಸ್‌ ಅಥವಾ ಇತರೆ ಸಾರಿಗೆ ಮೂಲಕ ಅಯೋಧ್ಯೆ ತಲುಪಬಹುದಾಗಿದೆ.

ವೈಟಿಂಗ್‌ ಲಿಸ್ಟ್‌ ಹೆಚ್ಚಳ: ರಾಮನವಮಿ ಸೇರಿದಂತೆ ವಿಶೇಷ ದಿನಗಳು ಹಾಗೂ ರಜಾ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವುದರಿಂದ ಕಳೆದೊಂದು ತಿಂಗಳಿನಿಂದ ಈ ರೈಲುಗಳಲ್ಲಿ ಆಸನಗಳ ಕಾಯ್ದಿರಿಸುವವರ ಸಂಖ್ಯೆಯಲ್ಲಿಯೂ ಹೆಚ್ಚಿದೆ. ಇದೀಗ ಒಟ್ಟಾರೆ 1,000ಕ್ಕೂ ಅಧಿಕ ಟಿಕೆಟ್‌ಗಳು ವೈಟಿಂಗ್‌ ಲಿಸ್ಟ್‌ನಲ್ಲಿವೆ.

Advertisement

ಬೆಂಗಳೂರಿನಿಂದ ಅಯೋಧ್ಯೆಗಢ ಹಾಗೂ ಲಖನೌ, ಬಾದಶಾ ನಗರದ ರೈಲ್ವೇ ನಿಲ್ದಾಣಕ್ಕೆ ವಾರದಲ್ಲಿ 5 ರೈಲುಗಳ ಸಂಚಾರವಿದೆ. ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಸೀಟು ಕಾಯ್ದಿರಿಸುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕುಸುಮಾ ಹರಿಪ್ರಸಾದ್‌, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿನೈ ಋತ್ಯ ರೈಲ್ವೇ ಬೆಂಗಳೂರು.

ಬೆಂಗಳೂರಿನಿಂದ ಅಯೋಧ್ಯೆಗೆ ನೇರವಾದ ವಿಶೇಷ ರೈಲು ಸಂಚಾರ ಪ್ರಾರಂಭಿಸುವ ಕುರಿತು ಮನವಿ ಮಾಡಲಾಗಿದೆ. ಪಿ.ಸಿ.ಮೋಹನ್‌, ಬೆಂಗಳೂರು ಸಂಸದ.

ತೃಪ್ತಿ ಕುಮ್ರಗೋಡು

 

Advertisement

Udayavani is now on Telegram. Click here to join our channel and stay updated with the latest news.

Next