ಕನ್ನಡದಲ್ಲಿ ತಮ್ಮ ಚಿತ್ರಗಳಿಗೆ ವಿಚಿತ್ರ ಟೈಟಲ್‌ಗಳನ್ನು ಇಡುವುದು ಇಂದು-ನಿನ್ನೆಯ ಟ್ರೆಂಡ್ ಅಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ಅದರಲ್ಲೂ ಇತ್ತೀಚೆಗೆ ಈ ಟ್ರೆಂಡ್ ಇನ್ನೂ ಹೆಚ್ಚಾಗುತ್ತಿದೆ. ಈಗ ಯಾಕೆ ಈ ಟೈಟಲ್ ಟ್ರೆಂಡ್ ಬಗ್ಗೆ ಮಾತು ಅಂತೀರಾ, ಅದಕ್ಕೂ ಒಂದು ಕಾರಣವಿದೆ. ಕನ್ನಡದಲ್ಲಿ ಬಂದ ಭಿನ್ನ-ವಿಭಿನ್ನ, ವಿಚಿತ್ರ ಟೈಟಲ್ ಸಾಲಿಗೆ ಈಗ ಮತ್ತೂಂದು ಚಿತ್ರ ಸೇರ್ಪಡೆಯಾಗಿದೆ. ಅದರ ಹೆಸರು “ಆಸಿಂಕೋಜ್ಹಿಲ್ಲ’. ಅದೇನೊ ಸರಿ ಈ ಆಸಿಂಕೋಜ್ಹಿಲ್ಲ’ ಅಂದ್ರೇನು? ಎಂಬ ಪ್ರಶ್ನೆಗೆ ಚಿತ್ರವನ್ನೇ ನೋಡಬೇಕು ಅನ್ನೊದು, ಚಿತ್ರತಂಡದ ಉತ್ತರ.
ಇತ್ತೀಚೆಗೆ ಈ ಚಿತ್ರದ ಟೈಟಲ್, ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಏಕಕಾಲದಲ್ಲಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಬಾ.ಮಾ ಹರೀಶ್, ನಟ ಸುಮಂತ್ ಶೈಲೇಂದ್ರ ಮೊದಲಾದ ಗಣ್ಯರು ಹಾಜರಿದ್ದು, ಚಿತ್ರದ ಟೈಟಲ್, ಟ್ರೇಲರ್, ಆಡಿಯೋ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಇನ್ನು ಈ ಚಿತ್ರಕ್ಕೆ ಶಮನ್ ನಿರ್ದೇಶನವಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿರುವ ಈ ಚಿತ್ರ ಮೇ ತಿಂಗಳಿನಲ್ಲಿ ಬಿಡುಗಡೆಗೆ ತಯಾರಿ ಮಾಡಿಕೊಂಡಿದೆ. ನಿರ್ಮಾಪಕ ಸೋಮಶೇಖರ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಐದು ಜನರ ಭಿನ್ನ ಕಥೆಗಳು ಇರುವ ಈ ಚಿತ್ರದಲ್ಲಿ ವಿಷ್ಣುತೇಜ, ಪ್ರಶಾಂತ್, ತಾರಕ್, ರಕ್ಷಿಕಾ, ಭಾನುಪ್ರಿಯಾ, ಸೋನಂ ರೈ, ವಿನಯ್, ಚಂದು, ಹೊನ್ನವಳ್ಳಿ ಕೃಷ್ಣ ಮತ್ತಿತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಹಾಡುಗಳಿಗೆ ಅಮೋಘ ವರ್ಷ ಸಂಗೀತ ಸಂಯೋಜಿಸಿದ್ದಾರೆ. ಒಟ್ಟಾರೆ “ಆಸಿಂಕೋಜ್ಹಿಲ್ಲ’ ಎಂಬ ವಿಚಿತ್ರ ಟೈಟಲ್ ಇಟ್ಟುಕೊಂಡಿರುವ ಈ ಚಿತ್ರ ಪ್ರೇಕ್ಷಕರಿಗೆ ಎಷ್ಟರಮಟ್ಟಿಗೆ ಇಷ್ಟವಾಗಲಿದೆ ಅನ್ನೊದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.
— ಜಿ. ಎಸ್. ಕಾರ್ತಿಕ ಸುಧನ್