Advertisement

ಉಡುಪಿಗೆ ಬರಲಿವೆ ವಿದ್ಯಾರ್ಥಿನಿ ‘ಹುಲಿಗಳು’!

02:00 AM Aug 24, 2018 | Karthik A |

ಉಡುಪಿ: ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಶಾಲಾ ಕಾಲೇಜ್‌ ವಿದ್ಯಾರ್ಥಿನಿಯರು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ಹುಲಿವೇಷ ಧರಿಸಿ ಕುಣಿಯಲಿದ್ದಾರೆ. ಪಿಯುಸಿ, ಪದವಿ, ಎಂಜಿನಿಯರಿಂಗ್‌ ಪದವಿ ಓದುವ 16 ವಿದ್ಯಾರ್ಥಿನಿಯರು, ಪ್ರಾ. ಶಾಲೆಯ ಮೂವರು ವಿದ್ಯಾರ್ಥಿನಿಯರು ಹುಲಿ ವೇಷ ಧರಿಸುವವರು. ಸಾಮಾನ್ಯವಾಗಿ ವಿಟ್ಲಪಿಂಡಿ ದಿನ ಹುಲಿವೇಷ ಸಹಿತ ವಿವಿಧ ವೇಷಗಳನ್ನು ಹಾಕುವುದು ರೂಢಿ. ಆದರೆ ಈ ಬಾರಿ ಸೆ. 3ರಂದು ನಗರಸಭಾ ಚುನಾವಣೆಯ ಫ‌ಲಿತಾಂಶ ಇರುವುದರಿಂದ ಶ್ರೀ ಕೃಷ್ಣಜನ್ಮಾಷ್ಟಮಿ ಸೆ. 2ರಂದೇ ವಿದ್ಯಾರ್ಥಿನಿಯರು ಹುಲಿವೇಷ ಧರಿಸಲಿದ್ದಾರೆ.

Advertisement

ಇವರಿಗೆ ತರಬೇತಿ ಕೊಡುತ್ತಿರುವವರು ಮೆಸ್ಕಾಂ ನಿವೃತ್ತ ಸಿಬಂದಿ ಶಿವಪ್ಪ ಪೂಜಾರಿಯವರು. ಇವರು ‘ಅಸಾಮಾನ್ಯ ಹುಲಿ’-1970, 1987 ರಲ್ಲಿ  ಸತತ ಎರಡು ಗಂಟೆ ಹುಲಿವೇಷ ಕುಣಿದು ಬಹುಮಾನ ಗಿಟ್ಟಿಸಿಕೊಂಡ ವರು. ಕಾನೂನು ವಿದ್ಯಾಲಯಕ್ಕೆ ತಮಿಳುನಾಡು, ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಹುಲಿವೇಷದ ತರಬೇತಿ ಕೊಟ್ಟವರು. ಹುಲಿವೇಷದ ಬಟ್ಟೆ ಧರಿಸಿ ಇವರು ಕುಣಿಯುವುದಿಲ್ಲ, ಬದಲಾಗಿ ಬಟ್ಟೆ ಮೇಲೆ ಬಣ್ಣಗಳನ್ನು ಸಿಂಪಡಿಸಿ (ಸ್ಪ್ರೇ) ವೇಷ ಹಾಕುತ್ತಾರೆ. ಇವರ ಉಡುಗೆ ಸಿದ್ಧಪಡಿಸುವವರು ಎ1 ಕಾಸ್ಟೂಮ್ಸ್‌ನ ನಿತಿನ್‌. ಈ ಹುಲಿವೇಷದ ತಂಡದವರು ಹೋದ ವರ್ಷ ಉಡುಪಿಯಲ್ಲಿ ನಡೆದ ಧರ್ಮಸಂಸದ್‌, ಅದಕ್ಕೂ ಹಿಂದೆ ನಡೆದ ಅಖಿಲ ಭಾರತೀಯ ಸಂಸ್ಕೃತ ಸಮ್ಮೇಳನಕ್ಕೆ ಆಗಮಿಸಿದ ಅತಿಥಿಗಳಿಗೆ ಭೋಜನ ಬಡಿಸುವ ಕೆಲಸವನ್ನು ನಡೆಸಿದ್ದರು.

ಕಾರಣವೇನು?
ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವದವರು ಆರಂಭಿಸಿದ ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ‘ಆಸರೆ’ ಯೋಜನೆಗೆ ನೆರವಾಗುವುದೇ ಹುಲಿವೇಷ ತಂಡದ ಗುರಿ. ಅಂದೇ ಯೋಜನೆಗೆ ನೆರವಾಗಲು ಉದ್ದೇಶಿಸಿದ್ದೆವು. ಆದರೆ ವಿದ್ಯಾರ್ಥಿಗಳಾದ್ದರಿಂದ ಹುಲಿವೇಷ ಹಾಕಿ ಸಂಗ್ರಹವಾದ ಹಣವನ್ನು ಆಸರೆ ಟ್ರಸ್ಟ್‌ ಗೆ ಹಸ್ತಾಂತರಿಸುತ್ತೇವೆ. ಇಷ್ಟಾದರೂ ಸಮಾಜಸೇವೆಯಾಗಲಿ ಎನ್ನುವುದು ನಮ್ಮ ಉದ್ದೇಶ ಎನ್ನುತ್ತಾರೆ ತಂಡದ ನೇತೃತ್ವ ವಹಿಸಿರುವ ಶ್ರುತಿ ಶೇಟ್‌ ಮತ್ತು ನವ್ಯಾ ಕಿಣಿ.

Advertisement

Udayavani is now on Telegram. Click here to join our channel and stay updated with the latest news.

Next