ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರುವ ಎಂಬ ಮಾತಿನಂತೆ ಊರು ಬಿಟ್ಟು ಉದ್ಯೋಗವನ್ನು ಅರಸಿ ಮರುಳುಗಾಡು ದುಬೈನಲ್ಲಿ ಕನ್ನಡದ ಕುಡಿಗಳು ಕನ್ನಡದ ಡಿಂಡಿಮ ಬಾರಿಸುವ ಪ್ರಯತ್ನದ ಕನಸೇ ಕನ್ನಡ ಪಾಠ ಶಾಲೆ ದುಬೈ.
ಏಳು ವರ್ಷಗಳ ಹಿಂದೆ ‘ಕನ್ನಡ ಮಿತ್ರರು ಯು.ಎ.ಇ’ ಎಂಬ ಹೆಸರಿನಡಿಯಲ್ಲಿ ಮಿತ್ರರ ಬಳಗವನ್ನೆಲ್ಲಾ ಸೇರಿಸಿಕೊಂಡು ಕನ್ನಡ ಪಾಠ ಶಾಲೆ ದುಬೈ ಆರಂಭಿಸಿದ್ದಾರೆ. ಕೇವಲ ಎರಡಂಕಿಯ 45 ವಿದ್ಯಾರ್ಥಿಗಳಿಂದ ನಾಂದಿ ಹಾಡಿದ ಕನ್ನಡ ಪಾಠ ಶಾಲೆ ಈ ವರ್ಷ 350 ವಿದ್ಯಾರ್ಥಿ ಬಳಗವನ್ನು ಹೊಂದಿದೆ ಎನ್ನುವುದು ಅದರ ಹೆಚ್ಚುಗಾರಿಕೆಯೇ ಸರಿ.
ಸುತ್ತೂರು ಸಂಸ್ಥಾನ ಮಠದ ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಆಶೀರ್ವಾದಿಂದ ದುಬೈನ ಜೆ. ಎಸ್. ಎಸ್. ಶಾಲೆಯಲ್ಲಿ ಕನ್ನಡ ಪಾಠ ಶಾಲೆಯ ತರಗತಿಗಳು ಮೊದಲ್ಗೊಂಡು, 2018ರಲ್ಲಿ ಓಂ ಪ್ರಕಾಶ್ ಅಸಾಪ್ ಟ್ಯುಟರ್ಸ್ ಕೊಠಡಿಗಳಲ್ಲಿ, ತದನಂತರ 2019, 2020ರಲ್ಲಿ ಪ್ರಭಾಕರ ಕೋರೆಯವರ ಬಿಲ್ವಾ ಇಂಡಿಯನ್ ಸ್ಕೂಲ್ ನಲ್ಲಿ ತರಗತಿಗಳನ್ನು ದುಬೈನಲ್ಲೇ ಹುಟ್ಟಿ ಬೆಳೆದ ಕನ್ನಡದ ಕುಡಿಗಳಿಗಾಗಿ ತೆರೆದುಕೊಂಡವು.
ಅನಿವಾಸಿ ಕನ್ನಡಿಗರ ಮಕ್ಕಳಿಗೆ ಕನ್ನಡ ಸಾಕ್ಷರತಾ ಆಂದೋಲನದ ಮೂಲ ಉದ್ದೇಶದಿಂದ ಕನ್ನಡ ಪಾಠ ಶಾಲೆ ಪಾಠ ಹೇಳಲು ಆರಂಭಿಸಿ ಕನ್ನಡದ ಕೀರ್ತಿ ಪತಾಕೆಯನ್ನು ಹೊರದೇಶದ ಮಣ್ಣಿನಲ್ಲೂ ಹಾರಿಸುತ್ತಿದೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಹಂತಗಳಲ್ಲಿ ಪಾಠ ಕಲಿಸುವ ಕನ್ನಡ ಪಾಠ ಶಾಲೆಯಲ್ಲಿ ಎಲ್ಲವೂ ಉಚಿತ ಎನ್ನುವುದು ವಿಶೇಷ.
ಶ್ರೀಮಂತ ರಾಷ್ಟ್ರ ಎಂದೇ ಕರೆಸಿಕೊಳ್ಳುವ ದುಬೈನಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವ ಕನ್ನಡ ಪಾಠ ಶಾಲೆ, ಮಕ್ಕಳಿಗೆ ವರ್ಣಮಾಲೆ, ಸಂಖ್ಯೆ, ಪುಟಾಣಿ ಸಾಹಿತ್ಯ, ಸುಲಭ ಪದಗಳು, ವಾಕ್ಯ ರಚನೆ ಸೇರಿದಂತೆ ಪ್ರಬಂದ ಬರವಣಿಗೆ, ಸಾಹಿತ್ಯ ಎಲ್ಲವೂ ಮಕ್ಕಳಿಗೆ ಧಾರೆಯೆರೆಯುತ್ತಿದೆ.
ಶುಕ್ರವಾರದ ಕನ್ನಡ ಪಾಠ ಶಾಲೆ
ಅರಬ್ ರಾಷ್ಟ್ರಗಳಲ್ಲಿ ಇರುವ ಕನ್ನಡ ಮಿತ್ರರೊಡಗೂಡಿ ಆರಂಭಿಸಿದ ಕನ್ನಡ ಪಾಠ ಶಾಲೆ ಸಂಪೂರ್ಣ ಉಚಿತವಾಗಿ ಪ್ರತಿ ಶುಕ್ರವಾರ ಮಾತ್ರ, ನಡೆಯುತ್ತಿದೆ. ದುಬೈನಲ್ಲಿ ವಾರಾಂತ್ಯದಲ್ಲಿ(ದುಬೈನಲ್ಲಿ ವಾರಾಂತ್ಯ ಶುಕ್ರವಾರ) ಕನ್ನಡ ಪಾಠ ಶಾಲೆಯಲ್ಲಿ ಪಾಠ ಹೇಳುವ ಶಿಕ್ಷಕರಿಗೆ ವೇತನ ಇಲ್ಲ. ಪಾಠ ಕೇಳುವ ವಿದ್ಯಾರ್ಥಿಗಳಿಗೂ ಕೂಡ ಇಲ್ಲಿ ಯಾವ ಶುಲ್ಕವೂ ಇಲ್ಲ.
ಸ್ವಪ್ರೇರಣೆಯಿಂದಲೇ ಪಾಠ ಹೇಳುವ ಪೋಷಕರು
ದುಬೈನಲ್ಲಿ ಕನ್ನಡದ ಕಂಪು ಪಸರಿಸುತ್ತಿರುವ ಕನ್ನಡ ಪಾಠ ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು ಯಾರೂ ಕೂಡ ವೃತ್ತಿಪರ ಶಿಕ್ಷಕರಲ್ಲ. ಪಾಠ ಹೇಳುವವರು ಎಲ್ಲರೂ ಮಕ್ಕಳ ಪೋಷಕರು ಎನ್ನುವುದು ವಿಶೇಷ. ತಮ್ಮ ಮಕ್ಕಳು ಮಾತೃಭಾಷಾ ಸಾಕ್ಷರತೆಯನ್ನು ಹೊಂದಿರಬೇಕು ಎನ್ನುವ ಅಭಿಲಾಷೆಯಿಂದ, ಆಸ್ತೆಯಿಂದ ಕನ್ನಡ ಕಲಿಸುತ್ತಿರುವುದು ಕನ್ನಡದ ಮೇಲೆ ಅವರಿಗೆ ಇರುವ ಅಭಿಮಾನಕ್ಕೆ ಹಿಡಿದಿರುವ ಕನ್ನಡಿ.
ಹೊರನಾಡಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಕನ್ನಡ ಪಾಠ ಶಾಲೆ
ಕನ್ನಡದ ಕುಡಿಗಳಿಗೆ ಕನ್ನಡ ಮರಿಚಿಕೆಯಾಗಬಾರದು ಎಂಬ ಉದ್ದೇಶದಿಂದ ಕನ್ನಡ ಕಲಿಸುತ್ತಿರುವ ಪಾಠ ಶಾಲೆಗೆ ಈ ವರ್ಷ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಸದ್ಯ, ಕೋವಿಡ್ ಬಿಕ್ಕಟ್ಟಿನ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಆನ್ ಲೈನ್ ಮುಖಾಂತರವೇ ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತಿದ್ದು, ಇದುವರೆಗೂ ಶೈಕ್ಷಣಿಕ ವರ್ಷಾವಧಿಯಲ್ಲಿ ವಾರಾಂತ್ಯದ ಪಾಠ ನಿಂತಿಲ್ಲ ಎನ್ನುವುದು ಕನ್ನಡ ಪಾಠ ಶಾಲೆಯ ಹಿರಿಮೆ.
ಚತುರ ಶಾಲೆ ಯೋಜನೆ
ಕನ್ನಡ ಮಿತ್ರರು ಯು.ಎ.ಇ ಸಂಘಟನೆಯ ವತಿಯಿಂದ ಕರ್ನಾಟಕದ ಸರ್ಕಾರಿ ಕನ್ನಡ ಶಾಲೆಗೆ ಸ್ಮಾರ್ಟ್ ಕ್ಲಾಸ್ ಚತುರ ಶಾಲಾ ಉಪಕರಣಗಳನ್ನು ನೀಡಿ, ಕನ್ನಡ ಮಾಧ್ಯಮದ ಗ್ರಾಮಾಂತರ ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗುತ್ತಿದೆ. ಲ್ಯಾಪ್ ಟಾಪ್, ಡಿಜಿಟಲ್ ಪ್ರೊಜೆಕ್ಟರ್, ಕಲರ್ ಪ್ರಿಂಟರ್ ಗಳನ್ನು ಈಗಾಗಲೇ ಕರ್ನಾಟಕದ, ಗುಲ್ಬರ್ಗಾ ಜಿಲ್ಲೆಯ ಹೊನಗುಂಟ ಶಾಲೆ, ದಾವಣಗೆರೆಜಿಲ್ಲೆಯ ನಂದಿ ತಾವರೆ ಶಾಲೆ, ಮೈಸೂರು ಜಿಲ್ಲೆಯ ಕಲ್ಕುಂದ ಶಾಲೆ, ಚಿತ್ರದುರ್ಗದ ಭರಮಸಾಗರ ಶಾಲೆ, ಬಳ್ಳಾರಿಯ ಚಿಟಗೇರಿ ಶಾಲೆಗಳಿಗೆ ನೀಡಲಾಗಿದೆ.
ಒಟ್ಟಿನಲ್ಲಿ, ಅನಿವಾಸಿ ಕನ್ನಡಿಗರ ಕನ್ನಡ ಕಟ್ಟುವ ಅಪರೂಪದ ಕೈಂಕರ್ಯಕ್ಕೆ ಈಗ ಎಲ್ಲೆಡೆಯಿಂದ ಶ್ಲಾಘನೆ ಕೇಳಿ ಬರುತ್ತಿದೆ.
(ಕನ್ನಡ ಮಿತ್ರರು ಯು.ಎ.ಇ)
—————————
ಕನ್ನಡ ವಿಶ್ವವ್ಯಾಪಿ
ಕರ್ನಾಟಕ್ಕೆ ಗಡಿ ಇದೆ. ಆದರೇ, ಕನ್ನಡಕ್ಕೆ ಗಡಿ ಇಲ್ಲ. ಕನ್ನಡ ವಿಶ್ವವ್ಯಾಪಿ. ಕನ್ನಡಿಗರನ್ನು ವಿಶ್ವ ಮಾನವರನ್ನಾಗಿ ಮಾಡುವ ಕೆಲಸ ಕನ್ನಡ ಪಾಠ ಶಾಲೆಯಿಂದ ಆಗುತ್ತಿದೆ. ಇದರಲ್ಲಿ ಕನ್ನಡದ ಸಂಸ್ಕಾರ ಸುಸ್ಪಷ್ಟವಾಗಿ ಕಾಣಿಸುತ್ತಿದೆ. ಹೊರನಾಡಿನಲ್ಲಿ ಕನ್ನಡ ಬೆಳೆಸುವ ಪರಂಪರೆಯನ್ನು ಸಾಗಿಸುತ್ತಿರುವ ಕನ್ನಡ ಪಾಠ ಶಾಲೆಗೆ ಕನ್ನಡಿಗರೆಲ್ಲರೂ ಕೃತಜ್ಞರಾಗಿರುತ್ತಾರೆ.
ಟಿ. ಎಸ್. ನಾಗಾಭರಣ
ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
————————-
ಕನ್ನಡದ ಸಾಕ್ಷರತೆ ಕನ್ನಡಿಗನ ಹಕ್ಕು
ನಾವು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ನಮ್ಮ ಮಾತೃಭಾಷೆಯನ್ನು ಮರೆಯಬಾರದು. ಕನ್ನಡ ನಮ್ಮ ಮಾತೃಭಾಷೆ. ಕನ್ನಡವನ್ನು ನಮ್ಮ ಮುಂದಿನ ತಲೆಮಾರಿಗೆ ಧಾರೆಯೆರೆಯುವುದು ಕನ್ನಡಿಗರೆಲ್ಲರ ಜವಾಬ್ದಾರಿ. ಕನ್ನಡದ ಸಾಕ್ಷರತೆ ಪ್ರತಿ ಕನ್ನಡದ ಕುಡಿಯೂ ಹೊಂದಿರಬೇಕು ಎನ್ನುವುದೇ ನಮ್ಮ ಆಶಯ.
ಶಶಿಧರ ನಾಗರಾಜಪ್ಪ
ಅಧ್ಯಕ್ಷರು, ಕನ್ನಡ ಮಿತ್ರರು, ಯು.ಎ.ಇ
———————
ಕನ್ನಡದ ಮಕ್ಕಳು ಮಾತೃಭಾಷೆಯಿಂದ ವಂಚಿತರಾಗಬಾರದು
ಸಣ್ಣದಾಗಿ ಆರಂಭವಾದ ಈ ಕನ್ನಡ ಪಾಠ ಶಾಲೆ ಹೊರನಾಡಿನ ಕನ್ನಡಿಗರು ನಡೆಸುತ್ತಿರುವ ಅತಿದೊಡ್ಡ ಪಾಠ ಶಾಲೆ ಆಗಿ ಬೆಳೆದಿದೆ ಎನ್ನುವುದು ನಮಗೆ ಹೆಮ್ಮೆ. ಕನ್ನಡದ ಮಕ್ಕಳು ಕನ್ನಡದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಪ್ರಾರಂಭಿಸಿದ ಶಾಲೆಯಲ್ಲಿ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಕನ್ನಡದ ಸಾಕ್ಷರತೆ ಪಡೆದುಕೊಳ್ಳುತ್ತಿರುವುದರ ಬಗ್ಗೆ ನಮಗೆ ತೃಪ್ತಿ ಇದೆ.
ನಾಗರಾಜ್ ರಾವ್, ಉಡುಪಿ
ಖಜಾಂಜಿ, ಕನ್ನಡ ಮಿತ್ರರು, ಯು.ಎ.ಇ
————————————————-
ಇದನ್ನೂ ಓದಿ : ಪೆಗಾಸಸ್ : ದೇಶಾದ್ಯಂತ 22 ರಂದು ರಾಜ್ ಭವನಕ್ಕೆ ಕಾಂಗ್ರೆಸ್ ಮೆರವಣಿಗೆ