Advertisement

ಪ್ರಾಣಕ್ಕೆ ಎರವಾಗುತ್ತಿವೆ ರಸ್ತೆ ಅಪಘಾತಗಳು: ಅತಿವೇಗ, ನಿಲಕ್ಷ್ಯದ ಚಾಲನೆಗೆ ಬೇಕಿದೆ ತಡೆ

11:59 PM Jan 17, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳ ಲೆಕ್ಕ ಹಾಕಿಕೊಂಡರೆ ಮಂಗಳೂರು ನಗರ ಕಮಿಷನರೆಟ್‌ ವ್ಯಾಪ್ತಿಯಲ್ಲೇ ಹೆಚ್ಚು ರಸ್ತೆ ಅಪಘಾತಗಳಾಗುತ್ತಿವೆ. ಜಿಲ್ಲಾವಾರು ಲೆಕ್ಕದಲ್ಲಿ ಉಡುಪಿ ದಕ್ಷಿಣ ಕನ್ನಡಕ್ಕಿಂತ ಮುಂದಿರುವುದು ಅಪಾಯದ ಕರೆಗಂಟೆಯನ್ನು ಬಾರಿಸಿದಂತಾಗಿದೆ.

Advertisement

ಮಂಗಳೂರು ಕಮಿಷನರೆಟ್‌ ಸೇರಿದಂತೆ ಎರಡೂ ಜಿಲ್ಲೆಗಳಲ್ಲಿ ಕಳೆದ ವರ್ಷ (2022ರಲ್ಲಿ) 455 ಭೀಕರ ರಸ್ತೆ ಅಪಘಾತ ಗಳು ಸಂಭವಿಸಿ 486 ಮಂದಿ ಪ್ರಾಣ ಕಳೆದು ಕೊಂಡಿದ್ದರು.

ಮಂಗಳೂರು ಕಮಿಷ ನರೆಟ್‌ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಗಳಿಗೆ ಬಲಿಯಾದವರ ಸಂಖ್ಯೆ 130. ಭೀಕರ ಅಪಘಾತಗಳಲ್ಲಿ 136, ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ 145 ಭೀಕರ ಅಪಘಾತಗಳಲ್ಲಿ 154 ಹಾಗೂ ಉಡುಪಿ ಜಿಲ್ಲೆಯಲ್ಲಿ 180 ಭೀಕರ ಅಪಘಾತಗಳಲ್ಲಿ 196 ಮಂದಿ ಮರಣ ಹೊಂದಿದ್ದಾರೆ. ಭೀಕರವೂ ಸೇರಿದಂತೆ ಒಟ್ಟು ಕ್ರಮವಾರು 957, 941, 990 ಅಪಘಾತ ಪ್ರಕರಣಗಳು ಘಟಿಸಿವೆ. ಜಿಲ್ಲಾವಾರು ದೃಷ್ಟಿಯಲ್ಲಿ ನೋಡುವುದಾದರೆ ದಕ್ಷಿಣ ಕನ್ನಡ ಜಿಲ್ಲೆ (ಕಮಿಷನರೆಟ್‌ ಬಿಟ್ಟು) ಗಿಂತ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಅಪಘಾತಗಳು ಆಗುತ್ತಿವೆ. ಇದೂ ಸಹ ಆತಂಕದ ಸಂಗತಿಯಾಗಿದೆ. ಹಾಗೆಯೇ ಉಡುಪಿ ನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ (ಮಂಗಳೂರಿನಂತೆ ಪ್ರತ್ಯೇಕ ಕಮಿಷನ್‌ರೆಟ್‌ ಇಲ್ಲ) 26 ಭೀಕರ ಘಟನೆಗಳಲ್ಲಿ 27 ಮಂದಿ ಮೃತಪಟ್ಟಿದ್ದಾರೆ.

2021ರಲ್ಲಿ 125 ಭೀಕರ ಅಪಘಾತಗಳಲ್ಲಿ 128 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 2020 ರಲ್ಲಿ 116 ಭೀಕರ ಪ್ರಕರಣಗಳಲ್ಲಿ 118 ಮಂದಿ ಹಾಗೂ 2019ರಲ್ಲಿ 145 ಭೀಕರ ಅಪಘಾತಗಳಲ್ಲಿ 146 ಮಂದಿ, ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು.

ಉಡುಪಿ ಜಿಲ್ಲೆಯಲ್ಲಿ 2022ರಲ್ಲಿ 180 ಭೀಕರ ಅಪಘಾತ ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ 189 ಭೀಕರ ಪ್ರಕರಣಗಳಲ್ಲಿ 196 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 2020ರಲ್ಲಿ 180 ಭೀಕರ ಪ್ರಕರಣಗಳಲ್ಲಿ 196 ಮಂದಿ ಹಾಗೂ 2019ರಲ್ಲಿ 249 ಭೀಕರ ಪ್ರಕರಣಗಳಲ್ಲಿ 264 ಮಂದಿ ಪ್ರಾಣ ಕಳೆದುಕೊಂಡಿದ್ದರು.

Advertisement

ದಕ್ಷಿಣ ಕನ್ನಡ ಪೊಲೀಸ್‌ ವರಿಷ್ಠಾಧಿ ಕಾರಿ ವ್ಯಾಪ್ತಿಯಲ್ಲಿ 2021ರಲ್ಲಿ 134 ಭೀಕರ ಅಪಘಾತಗಳಲ್ಲಿ 146 ಮಂದಿ, 2020ರಲ್ಲಿ 101 ಭೀಕರ ಪ್ರಕರಣಗಳಲ್ಲಿ 109 ಮಂದಿ, 2019ರಲ್ಲಿ 126 ಭೀಕರ ಪ್ರಕರಣಗಳಲ್ಲಿ 154 ಮಂದಿ ಸಾವನ್ನಪ್ಪಿದ್ದಾರೆ.

ಭೀಕರ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದು ಕೊಂಡವರು ಒಂದೆಡೆಯಾದರೆ, ನಾನಾ ರೀತಿಯ ಇತರ ಸಾವಿರಾರು ಸಂಖ್ಯೆಯ ಅಪಘಾತ ಪ್ರಕರಣ ಗಳಲ್ಲಿ ಮೂಳೆ ಮುರಿತ, ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದವರ ಸಂಖ್ಯೆಯೂ ಸಾವಿರಾರು. ಮುಖ್ಯವಾಗಿ ವಾಹನ ಚಾಲನೆ ಸಂದರ್ಭ ತಮ್ಮ ಪ್ರಾಣದ ಜತೆ ಇತರರ ಜೀವದ ಬಗ್ಗೆಯೂ ಕಾಳಜಿ ವಹಿಸಬೇಕೆಂಬುದು ಸಾರ್ವಜನಿಕರ ಸಲಹೆ.

ಹತ್ತು ಹಲವು ಕಾರಣ
– ಸಂಚಾರ ನಿಯಮ ಉಲ್ಲಂಘನೆ- ನಿರ್ಲಕ್ಷ್ಯ
– ಅತಿ ವೇಗದ ಚಾಲನೆ
– ರಸ್ತೆಗಳಲ್ಲಿನ ಹೊಂಡ-ಗುಂಡಿಗಳು
– ಅವೈಜ್ಞಾನಿಕ ತಿರುವು
– ಸರ್ವೀಸ್‌ ರಸ್ತೆಗಳಿಲ್ಲದೇ ಏಕಮುಖ ಸಂಚಾರ
– ಹೆದ್ದಾರಿ, ರಸ್ತೆಗಳ ವಿಸ್ತರಣೆ

ವಾಹನ ಚಾಲನೆ ಸಂದರ್ಭ ನಿರ್ಲಕ್ಷ್ಯ, ಅತಿವೇಗದಿಂದಾಗಿ ಅಪಘಾತಗಳಾಗಿ ಪ್ರಾಣಹಾನಿ ಆಗುತ್ತಿವೆ. ಇದಲ್ಲದೆ ಸಂಚಾರ ನಿಯಮಗಳ ಉಲ್ಲಂಘನೆ, ಅವೈಜ್ಞಾನಿಕ ರಸ್ತೆ ತಿರುವುಗಳು, ಹೊಂಡಗಳೂ ಕಾರಣವಾಗುತ್ತವೆ.
– ಎನ್‌. ಶಶಿಕುಮಾರ್‌, ಪೊಲೀಸ್‌ ಆಯುಕ್ತರು, ಮಂಗಳೂರು ಪೊಲೀಸ್‌

ಬಹುತೇಕ ಚತುಷcಕ್ರ ಹಾಗೂ ದ್ವಿಚಕ್ರ ವಾಹನಗಳ ಅಪಘಾತಕ್ಕೆ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಪ್ರಮುಖ ಕಾರಣ. ದ್ವಿಚಕ್ರ ವಾಹನಗಳ ಮಳೆಗಾಲದಲ್ಲಿ ಸ್ಕಿಡ್‌ ಆಗುತ್ತಿವೆ. ಆಗ ಹೆಲ್ಮೆಟ್‌ ಧರಿಸದಿದ್ದ ಕಾರಣಕ್ಕೆ ಪ್ರಾಣಹಾನಿ ಯಾಗಿರುವುದೇ ಅಧಿಕ.
– ಹೃಷಿಕೇಶ್‌ ಭಗವಾನ್‌ ಸೋನಾವಣೆ, ಪೊಲೀಸ್‌ ವರಿಷ್ಠಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next