Advertisement
ಮಳೆಗಾಲದ ಸಮುದ್ರ ಅಪಾಯದ ಕುರಿತು ಉದಯವಾಣಿ ಸುದಿನ ಸಂಚಿಕೆಯಲ್ಲಿ ಬುಧವಾರ ಸುದ್ದಿ ಪ್ರಕಟಿಸಿ ಎಚ್ಚರಿಸಿತ್ತು. ಇನ್ನಾದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳುವುದೇ ಕಾದು ನೋಡಬೇಕಿದೆ. ಜೂನ್ ಪ್ರಾರಂಭದಲ್ಲಿ ಬಾರ್ಜ್ ದುರಂತ ಸಂಭವಿಸಿದರೆ ತಿಂಗಳ ಅಂತ್ಯದಲ್ಲಿ ಅಲೆಗಳಿಗೆ ಸಿಲುಕಿ ತುಮಕೂರು ಶಿರಾ ಮೂಲದ ಶಾರುಖ್ ಖಾನ್ ಮತ್ತು ಹಯಾಝ್ ಸಮುದ್ರ ಪಾಲಾಗಿದ್ದಾರೆ. ಈ ಎರಡು ಪ್ರಕರಣಗಳಲ್ಲಿ ತುರ್ತು ರಕ್ಷಣೆಯಾಗಲಿ ಅಥವಾ ಅವಘಡ ನಡೆಯದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಜಾರಿಗೊಂಡಿಲ್ಲ.ಸಮುದ್ರದ ಪಾಲಾಗುವ ಮುನ್ನ ಅಲೆಗಳ ಎದುರು ಸ್ನೇಹಿತರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಶಾರುಖ್ ಖಾನ್ ಮತ್ತು ಹಯಾಝ್.
ಸ್ನೇಹಿತರನ್ನು ಕಳೆದುಕೊಂಡು ರೋದಿಸುತ್ತಿರುವ ಯುವಕರು.
Related Articles
ಮೊಗವೀರಪಟ್ಣದಲ್ಲಿ ಬೇಸಗೆ ಕಾಲದಲ್ಲಿ ಶಿವಾಜಿ ಜೀವರಕ್ಷಕ ಈಜುಗಾರರು ಮತ್ತು ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ಸಮುದ್ರ ಪಾಲಾದವರನ್ನು ರಕ್ಷಿಸುತ್ತಾರೆ. ಆದರೆ ಮಳೆಗಾಲದಲ್ಲಿ ಜೀವರಕ್ಷಕ ಸಲಕರಣೆ ಇಲ್ಲದೆ ಸಮುದ್ರಕ್ಕೆ ಇಳಿಯುವುದು ಅಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆಯ ಮೂಲಕ ಅತ್ಯಾಧುನಿಕ ಜೀವರಕ್ಷಕ ಸಲಕರಣೆಯೊಂದಿಗೆ ಖಾಯಂ ಆಗಿ ಜೀವರಕ್ಷಕರನ್ನು ನೇಮಿಸುವ ಅಗತ್ಯ ಇದೆ ಎಂಬುದು ಸ್ಥಳೀಯರ ಆಗ್ರಹ.
Advertisement
ಅಪಾಯದ ಸೂಚನೆಯ ಬೋರ್ಡ್ ಅಗತ್ಯ ಹಲವು ವರ್ಷಗಳಲ್ಲಿ ಮೊಗವೀರಪಟ್ಣ ಸಮುದ್ರ ತೀರದಲ್ಲಿ ಪ್ರವಾಸಿಗರಾಗಿ ಬಂದಿರುವ ಬೆಂಗಳೂರು ಮೂಲದ ಸಹಿತ ಉತ್ತರ ಕರ್ನಾಟಕದವರೇ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅದರಲ್ಲೂ ದರ್ಗಾ ವೀಕ್ಷಣೆಗೆಂದು ಬರುವ ಬೆಂಗಳೂರು ಮೂಲದ ಪ್ರವಾಸಿಗರಿಗೆ ಜೀವಮಾನದಲ್ಲಿ ಪ್ರಥಮ ಬಾರಿಗೆ ಸಮುದ್ರ ನೋಡಿದವರೇ ಹೆಚ್ಚಾಗಿದ್ದುಮ ಸಮುದ್ರಕ್ಕೆ ಇಳಿದರೆ ಏನಾಗುತ್ತೆ ಎನ್ನುವ ಮಾಹಿತಿಯೇ ಇರುವುದಿಲ್ಲ. ಉಳ್ಳಾಲ ದರ್ಗಾದಲ್ಲಿ ಸಮುದ್ರಕ್ಕೆ ತೆರಳಬೇಡಿ ಎನ್ನುವ ಮೈಕ್‌ನಲ್ಲಿ ಘೋಷಣೆ ಬಿಟ್ಟರೆ, ಅಪಾಯವನ್ನು ಸೂಚಿಸುವ ಫಲಕವನ್ನು ಹಾಕುವುದು ಸೂಕ್ತ ಎಂಬುದು ಪ್ರವಾಸಿಗರ ಸಲಹೆ. ಸಮುದ್ರ ತೀರದಲ್ಲೂ ಕೆಲವೆಡೆ ಅಪಾಯ ಸೂಚನೆಯ ಫಲಕ ಮತ್ತು ಇತ್ತೀಚೆಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆಗಳನ್ನು ನೀಡಿದರೆ ಒಂದಿಷ್ಟು ಜನರು ಎಚ್ಚೆತ್ತುಕೊಳ್ಳಬಹುದು ಎಂಬುದು ಸಲಹೆ. ಇನ್ನೊಂದೆಡೆ ಮೊಗವೀರಪಟ್ಣ ಬೀಚ್ ಬಳಿಯೂ ಇಂಥ ಫಲಕಗಳು ಬೇಕು. ಇಂತಹ ಕ್ರಮಕ್ಕೆ ದರ್ಗಾ ಆಡಳಿತ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಬೋರ್ಡ್ ಅಳವಡಿಸಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ. ಪೊಲೀಸ್ ಔಟ್ ಪೋಸ್ಟ್ ಅಗತ್ಯ
ಉಳ್ಳಾಲ ಮೊಗವೀರಪಟ್ಣದಲ್ಲಿ ವಿಶೇಷ ಸಂದರ್ಭದಲ್ಲಿ ಮತ್ತು ರಜಾ ದಿನಗಳಲ್ಲಿ ಪೊಲೀಸ್ ಔಟ್ ಪೋಸ್ಟ್ ಅಗತ್ಯ ಇದೆ. ಅದರಲ್ಲೂ ಎಚ್ಚರಿಕೆಯನ್ನು ಕಡೆಗಣಿಸಿ ಸಮುದ್ರಕ್ಕೆ ಇಳಿಯುವ ಪ್ರವಾಸಿಗರ ಮೇಲೆ ಕಠಿನ ಕ್ರಮ ಕೈಗೊಂಡರೆ ಸಮಸ್ಯೆ ಬಗೆಹರಿಯಬಹುದು. ಮುನ್ನೆಚ್ಚರಿಕೆ ಅಗತ್ಯ
ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿಯ ಉಳ್ಳಾಲ ದರ್ಗಾಕ್ಕೆ ಉತ್ತರ ಕರ್ನಾಟಕ ಸಹಿತ ಹಲವೆಡೆಯಿಂದ ಭಕ್ತಾದಿಗಳು ಆಗಮಿಸುತ್ತಿದ್ದು, ದರ್ಗಾ ವೀಕ್ಷಣೆಯ ಬಳಿಕ ಉಳ್ಳಾಲ ಮೊಗವೀರಪಟ್ಣ ಸಮುದ್ರ ತೀರಕ್ಕೆ ತೆರಳುವುದು ಸಾಮಾನ್ಯ. ಆದರೆ ಮುನ್ನೆಚ್ಚರಿಕೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ಜಿಲ್ಲಾಡಳಿತವಾಗಲಿ ಸ್ಥಳೀಯಾಡಳಿತ ಸಂಸ್ಥೆಯಾಗಲಿ ಕೈಗೊಂಡಿಲ್ಲ.
ದುರಂತ ಸಂಭವಿಸಿದ ಕಡಲ ಕಿನಾರೆ ಪ್ರದೇಶದಲ್ಲಿ ಅಪಾರ ಸಂಖ್ಯೆಯ ಜನರು ನೆರೆದಿದ್ದರು.
ಸ್ಥಳೀಯರ ಎಚ್ಚರಿಕೆಗೆ ಕಿವಿಗೊಡುವುದಿಲ್ಲ
ಮಳೆಗಾಲ ಸಂದರ್ಭದಲ್ಲಿ ಸ್ಥಳೀಯರು ಸಮುದ್ರದ ಬಳಿಗೆ ಹೋಗುವುದಿಲ್ಲ. ಉತ್ತರ ಕನ್ನಡ ಮತ್ತು ಬೆಂಗಳೂರಿನಿಂದ ಬರುವ ಪ್ರವಾಸಿಗರು ಮಾತ್ರ ಸಮುದ್ರಕ್ಕೆ ಇಳಿಯುತ್ತಾರೆ. ಸ್ಥಳೀಯರು ಎಚ್ಚರಿಸಿದರೂ ಕೇಳುವುದಿಲ್ಲ. ಕೆಲವು ಬಾರಿ ಸ್ಥಳದಲ್ಲಿದ್ದ ಹೋಮ್‌ಗಾರ್ಡ್‌ಳಿಗೂ ಬೆದರಿಕೆ ಹಾಕಿದ ಪ್ರಸಂಗಗಳಿವೆ. ಬುಧವಾರವೂ ನಾವು ಇದೇ ತಂಡಕ್ಕೆ ಎಚ್ಚರಿಸಿದ್ದೆವು. ನಮ್ಮ ರಕ್ಷಣೆ ನಾವು ಮಾಡಿಕೊಳ್ಳುತೇವೆ ಎನ್ನುವ ಹುಂಬತನದ ಉತ್ತರ ಅವರದ್ದು, ಎಚ್ಚರಿಕೆ ನೀಡಿದ ಹತ್ತೇ ನಿಮಿಷದಲ್ಲಿ ಘಟನೆ ನಡೆದಿದೆ.
– ವಾಸುದೇವ ಬಂಗೇರ ಯಾನೆ ಠಾಗೂರ್, ಸಂಘಟನಾ ಕಾರ್ಯದರ್ಶಿ, ಶಿವಾಜಿ ಜೀವರಕ್ಷಕ ಈಜುಗಾರರ ಸಂಘ ಉಳ್ಳಾಲ ದರ್ಗಾ ಗಾರ್ಡ್‌ಗಳಿಂದ ಮಾಹಿತಿ
ಉಳ್ಳಾಲ ದರ್ಗಾಕ್ಕೆ ಆಗಮಿಸುವ ಪ್ರವಾಸಿಗರು ಹೆಚ್ಚಾಗಿ ಅವಘಡಕ್ಕೆ ಈಡಾಗುತ್ತಿದ್ದು, ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಈಗಾಗಲೇ ಮೈಕ್‌ನಲ್ಲಿ ದರ್ಗಾದ ಗಾರ್ಡ್‌ಗಳು ಮಾಹಿತಿ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೊಗವೀರಪಟ್ಣ ಬಳಿ ಕೈಗೊಳ್ಳುವ ಯಾವುದೇ ಸುರಕ್ಷತಾ ಕ್ರಮಕ್ಕೆ ದರ್ಗಾ ಸಹಕರಿಸಲಿದೆ.
– ರಶೀದ್ ಉಳ್ಳಾಲ್, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷರು. – ವಸಂತ ಕೊಣಾಜೆ