Advertisement
ಮೂಲತಃ ಮಂಗಳೂರಿನ ಪಚ್ಚನಾಡಿಯವರಾದ ಸುರೇಶ್ ರಾವ್ ಕಳೆದ 40 ವರ್ಷಗಳಿಂದ ರಾಮಾಶ್ರಮ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2.5 ವರ್ಷಗಳಿಂದ ಮುಖ್ಯಶಿಕ್ಷಕರಾಗಿದ್ದ ಅವರು, 2018ರ ಮಾ. 18ರಂದು ನಿವೃತ್ತರಾಗಿದ್ದಾರೆ. ಮಾ. 31ರಂದು ಅವರ ಸೇವಾವಧಿ ಮುಗಿಯುತ್ತದೆ. ವಿಶೇಷವೆಂದರೆ ಕಳೆದ ನಾಲ್ಕು ವರ್ಷಗಳಿಂದ ಅವರು ಪ್ರತೀ ತಿಂಗಳು ತಮಗೆ ದೊರೆಯುವ ಸಂಬಳದ ಅರ್ಧ ಪಾಲನ್ನು ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ವರು ಗೌರವ ಶಿಕ್ಷಕರಿಗೆ ವೇತನ ನೀಡುವುದಕ್ಕಾಗಿ ವಿನಿಯೋಗಿಸುತ್ತ ಬಂದಿದ್ದಾರೆ.
ಶಾಲೆಯಲ್ಲಿ ಒಟ್ಟು 135 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ನಾಲ್ವರು ಖಾಯಂ ಶಿಕ್ಷಕರು ಮತ್ತು ನಾಲ್ವರು ಗೌರವ ಶಿಕ್ಷಕರು ಸೇರಿ ಒಟ್ಟು ಎಂಟು ಮಂದಿ ಶಿಕ್ಷಕರು. ಖಾಯಂ ಶಿಕ್ಷಕರಿಗೆ ಸರಕಾರಿ ವೇತನವಿದೆ, ಗೌರವ ಶಿಕ್ಷಕರ ಸಂಭಾವನೆಯನ್ನು ಅನ್ಯಮೂಲಗಳಿಂದ ಭರಿಸಬೇಕು. ಸ್ವಲ್ಪ ಸಮಯದವರೆಗೆ ಶಾಲಾ ಆಡಳಿತ ಮಂಡಳಿ ಇದನ್ನು ಭರಿಸುತ್ತಿತ್ತು. ಬಳಿಕ ಗೌರವ ಶಿಕ್ಷಕರಿಗೆ ಸಂಬಳ ನೀಡುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ ಮಕ್ಕಳ ಭವಿಷ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶಾಲಾ ಮುಖ್ಯ ಶಿಕ್ಷಕರಾಗಿದ್ದ ಸುರೇಶ್ ರಾವ್ ಸ್ವತಃ ಮುಂದೆ ನಿಂತು ತಮ್ಮ ಸಂಬಳದಲ್ಲಿ ಅರ್ಧ ಪಾಲನ್ನು ಗೌರವ ಶಿಕ್ಷಕರಿಗೆ ಸಂಬಳವಾಗಿ ನೀಡಿ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬದುಕಿಗೆ ಭರವಸೆಯ ಗುರುವಾದರು. ಇವರ ಮಾದರಿ ಕಾರ್ಯವನ್ನು ಶಾಲೆಯ ಶಿಕ್ಷಕ – ರಕ್ಷಕ ಸಂಘವು ಪ್ರೋತ್ಸಾಹಿಸುತ್ತಿದೆ. 55 ಸಾವಿರ ರೂ.ಗಳಲ್ಲಿ 25 ಸಾವಿರ ರೂ. ಶಿಕ್ಷಕರಿಗೆ!
40 ವರ್ಷಗಳ ಸೇವಾನುಭವ ಹೊಂದಿರುವ ಸುರೇಶ್ ರಾವ್ ಶಿಕ್ಷಕ ವೃತ್ತಿಯ ಕೊನೆಯ ಹಂತದಲ್ಲಿರುವಾಗ ಒಟ್ಟು 55,000 ರೂ. ವೇತನ ಪಡೆಯುತ್ತಿದ್ದರು. ಈ ಮೊತ್ತದಲ್ಲಿ 25,000 ರೂ.ಗಳನ್ನು ಗೌರವ ಶಿಕ್ಷಕರಿಗೆ ಸಂಭಾವನೆಯಾಗಿ ನೀಡುತ್ತಿದ್ದಾರೆ. ಇಬ್ಬರು ಶಿಕ್ಷಕರಿಗೆ ತಲಾ 5,500 ರೂ., ಓರ್ವ ಶಿಕ್ಷಕನಿಗೆ 6,000 ರೂ. ಹಾಗೂ ಓರ್ವ ಶಿಕ್ಷಕನಿಗೆ 8000 ರೂ.ಗಳನ್ನು ಸೇವಾವಧಿ ಆಧಾರದಲ್ಲಿ ಪ್ರತೀ ತಿಂಗಳು ನೀಡುತ್ತಿದ್ದಾರೆ. ಉಳಿದಂತೆ ಸುಮಾರು 5,000 ರೂ.ಗಳನ್ನು ಇತರ ಖರ್ಚುಗಳಿಗಾಗಿ ಬಳಸುತ್ತಾರೆ.
Related Articles
ಸರಕಾರ ಶಿಕ್ಷಕರನ್ನು ನೇಮಕ ಮಾಡುತ್ತಿಲ್ಲ. ಮೊದಲೇ ಕನ್ನಡ ಮಾಧ್ಯಮದ ಬಗ್ಗೆ ಮಕ್ಕಳ ಪೋಷಕರು ಆಸಕ್ತಿ ವಹಿಸುತ್ತಿಲ್ಲ. ಸ್ವಯಂ ಪ್ರೇರಣೆಯಿಂದ ನನ್ನ ಸಂಬಳದಿಂದಲೇ ಶಿಕ್ಷಕರಿಗೆ ವೇತನ ನೀಡಲು ಮುಂದಾದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇದೊಂದು ಸಣ್ಣ ಸೇವೆಯಷ್ಟೆ’ ಎನ್ನುತ್ತಾರೆ ಸುರೇಶ್ ರಾವ್.
Advertisement
ಮಕ್ಕಳ ಶುಲ್ಕವನ್ನೂ ಭರಿಸುತ್ತಿದ್ದರುಕೊಂಚಾಡಿ ಶ್ರೀ ರಾಮಾಶ್ರಮ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ ಕಲಿಯುತ್ತಿರುವ 135 ಮಂದಿ ಮಕ್ಕಳಲ್ಲಿ ಶೇ. 90ರಷ್ಟು ಉತ್ತರ ಕರ್ನಾಟಕ ಭಾಗದವರು. ಉ. ಕರ್ನಾಟಕ ಭಾಗದಿಂದ ವಲಸೆ ಬಂದ ಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ತೀರಾ ಬಡವರಾಗಿದ್ದಾರೆ. ಅಂತಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಶಿಕ್ಷಕರ ಜವಾಬ್ದಾರಿ. ಈ ನಿಟ್ಟಿನಲ್ಲಿ ಸುರೇಶ್ ರಾವ್ ಅವರ ಸೇವೆ ಶ್ಲಾಘನೀಯ. ಶಿಕ್ಷಕರ ವೇತನ ಮಾತ್ರವಲ್ಲದೆ ಬಡ ಮಕ್ಕಳ ಶುಲ್ಕ, ಬಸ್ ಶುಲ್ಕಗಳನ್ನೂ ಅವರು ಪಾವತಿಸುತ್ತಿದ್ದರು ಎನ್ನುತ್ತಾರೆ ರಾವ್ ಅವರ ಹಳೇ ವಿದ್ಯಾರ್ಥಿಗಳು. ಸುಖೀ ಸಂಸಾರ
ಸುರೇಶ್ ರಾವ್ ಅವರು ಪತ್ನಿ ಚಂದ್ರಲೇಖಾ ಜತೆಗೆ ಮಂಗಳೂರಿನ ಪಚ್ಚನಾಡಿಯಲ್ಲಿ ವಾಸವಾಗಿದ್ದಾರೆ. ಪುತ್ರ ಶೈಲೇಶ್ ರಾವ್, ಪುತ್ರಿ ರಶ್ಮಿ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ರಶ್ಮಿ ಅವರು 1998ರಲ್ಲಿ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದುದನ್ನು ಇಲ್ಲಿ ಸ್ಮರಿಸಬಹುದು. ಆದರ್ಶರು
ಸುರೇಶ್ ರಾವ್ ಆದರ್ಶ ಶಿಕ್ಷಕರು. ಶಾಲೆ ಮತ್ತು ಮಕ್ಕಳ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ ಇಟ್ಟುಕೊಂಡಿದ್ದಾರೆ. ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ದುಡಿಯುವವರಿಗೆ ಸುರೇಶ್ ರಾವ್ ಅವರೇ ತಮ್ಮ ಸಂಬಳದಲ್ಲಿ ಗೌರವಧನವನ್ನು ನೀಡುತ್ತಿದ್ದರು. ಇದು ಎಲ್ಲರಿಗೂ ಮಾದರಿ.
– ಮಂಜಪ್ಪ , ಮುಖ್ಯ ಶಿಕ್ಷಕರು, ಶ್ರೀ ರಾಮಾಶ್ರಮ ಅನುದಾನಿತ ಪ್ರಾಥಮಿಕ ಶಾಲೆ, ಕೊಂಚಾಡಿ — ಧನ್ಯಾ ಬಾಳೆಕಜೆ