ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು 2012ರ ಅಂತರ್ ಸಚಿವಾಲಯದ ಗುಂಪು ವರದಿಯ ಪ್ರಕಾರ ಬಿಹಾರಕ್ಕೆ ವಿಶೇಷ ಸ್ಥಾನಮಾನ (Special status) ನೀಡಲು ಸಾಧ್ಯವಿಲ್ಲ ಎಂದು ಸೋಮವಾರ ಹೇಳಿದ್ದು, ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯು)ಗೆ ದೊಡ್ಡ ಹೊಡೆತವನ್ನು ನೀಡಿದೆ.
ಝಂಜರ್‌ಪುರ ಲೋಕಸಭಾ ಸಂಸದ ರಾಮಪ್ರೀತ್ ಮಂಡಲ್ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, “ಯೋಜನೆಯ ಸಹಾಯಕ್ಕಾಗಿ ವಿಶೇಷ ವರ್ಗದ ಸ್ಥಾನಮಾನವನ್ನು ಹಿಂದೆ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಕೆಲವು ರಾಜ್ಯಗಳಿಗೆ ನೀಡಿತ್ತು. ವಿಶೇಷ ಸ್ಥಾನಮಾನಕ್ಕೆ ಕೆಲವು ಅಂಶಗಳ ಪರಿಗಣಿಸಲಾಗುತ್ತದೆ ಅವುಗಳಲ್ಲಿ ಅಗತ್ಯವಿರುವ ಹಲವಾರು ವೈಶಿಷ್ಟ್ಯಗಳು ಗುಡ್ಡಗಾಡು ಮತ್ತು ಕಷ್ಟಕರವಾದ ಭೂ ಪ್ರದೇಶ, ಕಡಿಮೆ ಜನಸಂಖ್ಯಾ ಸಾಂದ್ರತೆ ಅಥವಾ ಬುಡಕಟ್ಟು ಜನಸಂಖ್ಯೆಯ ಗಣನೀಯ ಪಾಲು, ನೆರೆಯ ದೇಶಗಳೊಂದಿಗೆ ಗಡಿಯುದ್ದಕ್ಕೂ ಆಯಕಟ್ಟಿನ ಸ್ಥಳ, ಆರ್ಥಿಕ ಮತ್ತು ಮೂಲಸೌಕರ್ಯ ಹಿಂದುಳಿದಿರುವಿಕೆ, ರಾಜ್ಯದ ಕಾರ್ಯಸಾಧ್ಯವಲ್ಲದ ಹಣಕಾಸು ಸ್ವಭಾವ ಆಧಾರದಲ್ಲಿ ಈ ಎಲ್ಲಾ ಅಂಶಗಳು ಮತ್ತು ರಾಜ್ಯದ ವಿಚಿತ್ರ ಪರಿಸ್ಥಿತಿಯ ಸಮಗ್ರ ಪರಿಗಣನೆ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದಕ್ಕೂ ಮೊದಲು, ವಿಶೇಷ ವರ್ಗದ ಸ್ಥಾನಮಾನಕ್ಕಾಗಿ ಬಿಹಾರದ ವಿನಂತಿಯನ್ನು ಅಂತರ್ ಸಚಿವಾಲಯದ ಗುಂಪು ಪರಿಗಣಿಸಿತ್ತು, ಅದು ತನ್ನ ವರದಿಯನ್ನು ಮಾ. 30, 2012 ರಂದು ಸಲ್ಲಿಸಿತು. ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಮಾನದಂಡಗಳನ್ನು ಆಧರಿಸಿ, ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡಲಾಗುವುದಿಲ್ಲ ಎಂದು ಅಂತರ್ ಸಚಿವಾಲಯದ ಗುಂಪು ಹೇಳಿದೆ.
ಜೆಡಿಯು ಸಂಸದ ಸಂಜಯ್ ಕುಮಾರ್ ಝಾ ಮಾತನಾಡಿ “ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬುದು ಜೆಡಿಯು ಆದ್ಯತೆಯಾಗಿದೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಗಲೇಬೇಕೆಂದು ಜೆಡಿಯು ಪಕ್ಷ ಆರಂಭದಿಂದಲೂ ಬೇಡಿಕೆ ಇಟ್ಟು ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ಹೋರಾಟಗಳ ನಡೆಸಿ ಬೇಡಿಕೆ ಇಟ್ಟಿತ್ತು. ವಿಶೇಷ ಸ್ಥಾನಮಾನ ನೀಡಲು ಕೆಲವು ಸಮಸ್ಯೆಗಳಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ ಆದ್ದರಿಂದ ಈಗ ವಿಶೇಷ ಪ್ಯಾಕೇಜಿಗೆ ಬೇಡಿಕೆ ಇಡಲಾಗಿದೆ” ಎಂದು ಹೇಳಿದರು.
ಬಹುಕಾಲದಿಂದ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸುತ್ತಿದ್ದ ಜೆಡಿಯು ಸಂಸತ್ ಅಧಿವೇಶನಕ್ಕೂ ಮುನ್ನ ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ತನ್ನ ಬೇಡಿಕೆಯನ್ನು ಪುನರುಚ್ಚರಿಸಿತ್ತು. ಜೆಡಿಯು ಜೊತೆಗೆ, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಕೂಡ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ಒತ್ತಾಯಿಸಿದೆ, ಇದನ್ನು 2014ರಲ್ಲಿ ವಿಭಜಿಸಿ ಹೊಸ ತೆಲಂಗಾಣ ರಾಜ್ಯವನ್ನು ರಚಿಸಲಾಯಿತು.