ಬೆಂಗಳೂರು: ಮಧುಮೇಹ ರೋಗದಿಂದ ಬಳಲುತ್ತಿದ್ದ ವ್ಯಕ್ತಿ ತನ್ನ ವಿಶೇಷ ಚೇತನ ಪುತ್ರನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿದ್ಯಾರಣ್ಯಪುರದ ಎಂ.ಎಸ್.ಪಾಳ್ಯದಲ್ಲಿ ಶನಿವಾರ ನಡೆದಿದೆ. ಎಂ.ಎಸ್.ಪಾಳ್ಯದ ಚಂದ್ರಪ್ಪ ಲೇಔಟ್ ನಿವಾಸಿ ಲೋಕೇಶ್ವರ್ (7) ಹತ್ಯೆಗೀಡಾಗಿದ್ದು, ಈತನ ತಂದೆ ಚಂದ್ರಶೇಖರ್ (40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನದ ಹೊಳೆನರಸಿಪುರ ತಾಲೂಕಿನ ಚಂದ್ರಶೇಖರ್ ಕಳೆದ ಎಂಟು ವರ್ಷಗಳ ಹಿಂದೆ ಪ್ರಮೀಳಾ ಎಂಬುವವರನ್ನು ವಿವಾಹವಾಗಿದ್ದು, ದಂಪತಿಗೆ ಲೋಕೇಶ್ವರ (7) ಮತ್ತು ಧನ್ಯಾ (3) ಎಂಬ ಇಬ್ಬರು ಮಕ್ಕಳಿದ್ದಾರೆ. ಐದು ವರ್ಷಗಳಿಂದ ದಂಪತಿ ಇಬ್ಬರು ಮಕ್ಕಳೊಂದಿಗೆ ಚಂದ್ರಲೇಔಟ್‌ನಲ್ಲಿ ವಾಸವಾಗಿದ್ದಾರೆ. ಚಂದ್ರಶೇಖರ್ ಯಲಹಂಕದಲ್ಲಿರುವ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರಮೀಳಾ ಮನೆಯಲ್ಲೇ ಇರುತ್ತಾರೆ.
ಮಾನಸಿಕ ಖನ್ನತೆ: ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿರುವ ಲೋಕೇಶ್ವರ್‌ಗೆ ಮತ್ತೂಬ್ಬರ ಸಹಾಯವಿಲ್ಲದೆ ನಡೆಯಲು ಆಗುತ್ತಿರಲಿಲ್ಲ. ಹೀಗಾಗಿ ಈತ ಮಾನಸಿಕ ಖನ್ನತೆಗೊಳಗಾಗಿದ್ದ. ಮತ್ತೂಂದೆಡೆ ಚಂದ್ರಶೇಖರ್ ಕೂಡ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಚಿಕಿತ್ಸೆ ವೆಚ್ಚ ಭರಿಸಲು ಕಷ್ಟವಾಗಿತ್ತು. ತನ್ನ ಸಕ್ಕರೆ ಕಾಯಿಲೆ ಹಾಗೂ ವಿಶೇಷಚೇತನ ಪುತ್ರನ ಕಷ್ಟ ಕಂಡು ನಲುಗಿದ್ದ ಚಂದ್ರಶೇಖರ್, ಈ ಬಗ್ಗೆ ಪತ್ನಿ ಬಳಿ ಹಲವು ಬಾರಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ಹೇಳಿದರು.
ಶನಿವಾರ ಬೆಳಗ್ಗೆ ಪ್ರಮೀಳಾ ಪುತ್ರಿಯೊಂದಿಗೆ ಆಧಾರ್ ಕಾರ್ಡ್ ಮಾಡಿಸಲು ಯಲಹಂಕಕ್ಕೆ ಹೋಗಿದ್ದರು. ಈ ವೇಳೆ ಚಂದ್ರಶೇಖರ್, ಪುತ್ರ ಲೋಕೇಶ್ವರ್‌ನನ್ನು ಕತ್ತು ಬಿಗಿದು ಕೊಂದು, ಬಳಿಕ ಡೆತ್‌ನೋಟ್ ಬರೆದಿಟ್ಟು ತಾವೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಪ್ರಮೀಳಾ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಡೆತ್‌ನೋಟ್‌ನಲ್ಲಿ ಏನಿದೆ?: “ನನ್ನ ವಿಶೇಷಚೇತನ ಪುತ್ರನ ಕಷ್ಟ ನೋಡಲು ಆಗುತ್ತಿಲ್ಲ. ನಾನು ಕೂಡ ಕಾಯಿಲೆಯಿಂದ ಬಳಲುತ್ತಿದ್ದೇನೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಕ್ಷಮಿಸಿ ಬಿಡು ಪ್ರಮೀಳಾ’ ಎಂದು ಪತ್ನಿಯನ್ನು ಉಲ್ಲೇಖೀಸಿ ಚಂದ್ರಶೇಖರ್ ಡೆತ್‌ನೋಟ್ ಬರೆದಿಟ್ಟಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣಮೂರ್ತಿ ಹೇಳಿದರು. ಪ್ರಕರಣ ವಿದ್ಯಾರಣ್ಯಪುರ ಠಾಣೆಯಲ್ಲಿ ದಾಖಲಾಗಿದೆ.