ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಮ್ಯೂಸಿಕ್ ಆಲ್ಬಂ ಮತ್ತು ಶಾರ್ಟ್‌ಫಿಲಂ ಟ್ರೆಂಡ್ ಹೆಚ್ಚುತ್ತಿದೆ. ಅದರಲ್ಲೂ ಚಿತ್ರರಂಗಕ್ಕೆ ಬರಬೇಕು, ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವವರಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಮ್ಯೂಸಿಕ್ ಆಲ್ಬಂ, ಶಾರ್ಟ್‌ಫಿಲಂಸ್ ಉತ್ತಮ ವೇದಿಕೆ ಎಂಬಂತಾಗಿದೆ. ಅಂತಹ ವೇದಿಕೆ ಬಳಸಿಕೊಂಡು ಹೊಸಬರು ಈಗ ಮ್ಯೂಸಿಕ್ ಆಲ್ಬಂ ಮಾಡಿದ್ದಾರೆ. ಹೌದು, ಈಗಂತೂ ಎಲ್ಲಾ ಕಡೆ ವರ್ಲ್ಡ್ಕಪ್ ಕ್ರಿಕೆಟ್‌ನದ್ದೇ ಮಾತು. ಇದೇ ಅವಕಾಶ ಬಳಸಿಕೊಂಡು ಇಲ್ಲೊಬ್ಬ ಪ್ರತಿಭೆ “ಫ್ಯಾನ್ ಆಫ್ ಚಂದನ್ - ವರ್ಲ್ಡ್ಕಪ್ ನಮೆª’ ಎನ್ನುವ ಹೆಸರಿನಲ್ಲಿ ಮ್ಯೂಸಿಕ್ ಅಲ್ಬಂ ಅನ್ನು ಹೊರತಂದಿದ್ದಾರೆ. ಅಂದಹಾಗೆ, ಇಂಥದ್ದೊಂದು ವಿಭಿನ್ನ ಸಾಹಸಕ್ಕೆ ಕೈಹಾಕಿದವರು ರವಿಚಂದ್ರ (ರವಿ ಆರ್‌ಸಿಎಸ್). ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಬೇಕು ಎನ್ನುವ ಕನಸನ್ನು ಹೊಂದಿರುವ ರವಿಚಂದ್ರ, ಸಿನಿಮಾ ಮಾಡುವುದಕ್ಕೂ ಮೊದಲು ತಮ್ಮ ಪ್ರತಿಭೆಯ ಬಗ್ಗೆ ಮತ್ತು ತಮ್ಮ ಬಗ್ಗೆ ಸಣ್ಣದಾದ ಪರಿಚಯ ಮಾಡಿಕೊಡುವ ಸಲುವಾಗಿ ಈ ಮ್ಯೂಸಿಕ್ ವೀಡಿಯೋ ಆಲ್ಬಂ ನಿರ್ಮಿಸಿದ್ದಾರೆ.
“ಫ್ಯಾನ್ ಆಫ್ ಚಂದನ್ - ವರ್ಲ್ಡ್ಕಪ್ ನಮ್ದೇ’ ಮ್ಯೂಸಿಕ್ ಆಲ್ಬಂನಲ್ಲಿ ಒಟ್ಟು ಎರಡು ಮ್ಯೂಸಿಕ್ ವೀಡಿಯೋ ಗೀತೆಗಳಿದ್ದು, ಈ ಗೀತೆಗಳಿಗೆ ದಿನೇಶ್ ಕುಮಾರ್ ಸಂಗೀತ ಸಂಯೋಜನೆಯಿದ್ದು, ಸ್ವತಃ ರವಿಚಂದ್ರ ಅವರೇ ಗೀತೆಗಳಿಗೆ ಸಾಹಿತ್ಯ ಬರೆದು ಧ್ವನಿಯಾಗಿದ್ದಾರೆ. ರವಿಚಂದ್ರ, ಅರುಣ್ ಗೋಳೂರು, ಸಂಜೀವ, ಪುಟ್ಟ ಎಸ್.ಬಿ ಈ ಮ್ಯೂಸಿಕ್ ಆಲ್ಬಂನಲ್ಲಿ ಅಭಿನಯಿಸಿದ್ದಾರೆ. ಆಲ್ಬಂಗೆ ಅರುಣ್ ಸುಶೀಲ್ ಛಾಯಾಗ್ರಹಣವಿದೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ “ಫ್ಯಾನ್ ಆಫ್ ಚಂದನ್ - ವರ್ಲ್ಡ್ಕಪ್ ನಮ್ದೇ’ ಮ್ಯೂಸಿಕ್ ಆಲ್ಬಂ ಬಿಡುಗಡೆಯಾಯಿತು. ಇದೇ ವೇಳೆ ಮಾತನಾಡಿದ ಮ್ಯೂಸಿಕ್ ಆಲ್ಬಂ ರೂವಾರಿ ರವಿಚಂದ್ರ, “ಈಗ ವರ್ಲ್ಡ್ಕಪ್ ಆರಂಭವಾಗಿದೆ. ವರ್ಲ್ಡ್ಕಪ್‌ನಲ್ಲಿ ಆಡುವವರು ಮತ್ತು ನೋಡುವವರನ್ನು ಪ್ರೋತ್ಸಾಹಿಸಲೆಂದೇ ಈ ವರ್ಲ್ಡ್ಕಪ್ ನಮೆª ಎಂಬ ಗೀತೆಯನ್ನು ಮಾಡಿದ್ದೇನೆ. ವರ್ಲ್ಡ್ ಕಪ್ ಹಿನ್ನೆಲೆಯಲ್ಲಿ ಈ ಹಾಡನ್ನು ಚಿತ್ರೀಕರಿಸಿಕೊಂಡಿದ್ದೇವೆ. ಇದಲ್ಲದೆ ರ್ಯಾಪರ್ ಚಂದನ್ ಶೆಟ್ಟಿಯವರ ಅಭಿಮಾನಿಯಾಗಿ ಫ್ಯಾನ್ ಆಫ್ ಚಂದನ್ ಎಂಬ ಹಾಡನ್ನು ಮಾಡಿದ್ದೇನೆ. ಸಿರಾ ಕೋಟೆಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈಗಾಗಲೇ ಎರಡು – ಮೂರು ಕಥೆಗಳನ್ನು ರೆಡಿ ಮಾಡಿಟ್ಟುಕೊಂಡಿದ್ದು, ಮುಂದಿನ ದಿನಗಳಲ್ಲಿ ಚಿತ್ರ ನಿರ್ದೇಶನ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎಂಬುದು ಅವರ ಮಾತು.