Advertisement

ವಿಕಲಚೇತನರ ವಿಶೇಷ ಕೌಶಲ ಬೆಳಗಲಿ: ಡಾ|ಪಾಟೀಲ್

03:26 PM May 21, 2022 | Team Udayavani |

ರಾಯಚೂರು: ವಿಕಲಚೇತನರು ವಿಶೇಷ ಕೌಶಲವುಳ್ಳವರಾಗಿದ್ದು, ಅವರಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸಿ ಅವರ ಕಾಲ ಮೇಲೆ ನಿಲ್ಲುವಂತೆ ಮಾಡಬೇಕು. ಮುಖ್ಯವಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಡಾ| ಎಸ್‌.ಶಿವರಾಜ ಪಾಟೀಲ್‌ ತಿಳಿಸಿದರು.

Advertisement

ನಗರದ ಪಂ| ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆರ್‌.ಇ.ಸಿ ಲಿಮಿಟೆಡ್‌, ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಉಪಕರಣಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರವೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ದೊಡ್ಡ ದೊಡ್ಡ ಸಂಸ್ಥೆಗಳು, ಕಂಪನಿಗಳು ಕೂಡ ಮುಂದೆ ಬಂದು ವಿಕಲಚೇತನರಿಗೆ ಸಹಾಯ ಹಸ್ತ ನೀಡಬೇಕು. ಅವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿದಾಗ ಅವರು ಎಲ್ಲರಂತೆ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯ. ರಾಯಚೂರು ಮಹತ್ವಕಾಂಕ್ಷೆ ಜಿಲ್ಲೆಯಾಗಿದ್ದು, ರೆಕ್‌ ಕಂಪನಿ ಜಿಲ್ಲೆಗೆ 37 ಲಕ್ಷ ರೂ. ನೀಡಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಆರ್ಥಿಕ, ಸಾಮಾಜಿಕವಾಗಿ ಕೊಡುಗೆ ನೀಡಿದಲ್ಲಿ ಅನುಕೂಲವಾಗುತ್ತದೆ ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಉದ್ದಿಮೆದಾರರು ವಿಕಲಚೇತನರಿಗೆ ಸಾಮಾಜಿಕ ಕಳಕಳಿ ಮೂಡಿಸುವ ಮೂಲಕ ಸಾಮಾಜಮುಖೀ ಕಾರ್ಯಗಳನ್ನು ಮಾಡಬೇಕು. ತಂತ್ರಜ್ಞಾನ ಅಳವಡಿಸಿಕೊಂಡು ವಿಕಲಚೇತನರಿಗೆ ಸೌಲಭ್ಯ, ಸಲಕರಣೆಗಳನ್ನು ನೀಡಬೇಕು. ಅಂದಾಗ ಅವರ ಜೀವನ ಶೈಲಿಯೂ ಬದಲಾಗಲಿದೆ ಎಂದರು.

ಜಿಲ್ಲೆಯಲ್ಲಿ ಅಪೌಷ್ಟಿಕತೆ ಇರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಅಂಥ ಮಕ್ಕಳನ್ನು ಗುರುತಿಸಿ ವಿಶೇಷವಾಗಿ ಪೌಷ್ಟಿಕ ಆಹಾರ ಪದಾರ್ಥ ನೀಡುವ ನಿಟ್ಟಿನಲ್ಲಿ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಲು ಸಂಬಂಧಿಸಿದ ಇಲಾಖೆ, ಸಂಸ್ಥೆಗಳು ಮುಂದಾಗಬೇಕು ಎಂದರು.

Advertisement

ಎಡಿಸಿ ಡಾ| ಕೆ.ಆರ್‌. ದುರುಗೇಶ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನೀಡಬೇಕು. ಉದ್ಯೋಗಕ್ಕಾಗಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಸಬಲರನ್ನಾಗಿ ಮಾಡಬೇಕು ಎಂದರು. ಆರ್‌.ಇ.ಸಿ ಕಂಪನಿಯ ಪ್ರಧಾನ ವ್ಯವಸ್ಥಾಪಕ ಆರ್‌.ಬಾಲಗನ್‌ ಮಾತನಾಡಿ, ನಮ್ಮ ಕಂಪನಿಯಿಂದ ಸಮಾಜಕ್ಕೆ ಒಳಿತಾಗುವ ನಾನಾ ಕೆಲಸಗಳನ್ನು ಮಾಡುತ್ತಿದ್ದೇವೆ. ಅದರಲ್ಲಿ ವಿಕಲಚೇತನರಿಗೆ ಸಾಧನ-ಸಲಕರಣೆಗಳನ್ನು ನೀಡುತ್ತಿದ್ದು, ದೇಶದಲ್ಲಿ ಒಟ್ಟು 24 ಜಿಲ್ಲೆಗಳು ಹಾಗೂ ಕರ್ನಾಟಕದ ರಾಯಚೂರು, ಗದಗ, ಯಾದಗಿರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಅಂಗವಿಕಲರಿಗೆ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ಸಲಕರಣೆ ನೀಡಲಾಗುತ್ತದೆ ಎಂದರು.

ಈ ವೇಳೆ ಜಿಲ್ಲೆಯ ವಿವಿಧ ವಿಕಲಚೇತನರಿಗೆ ಬ್ರೈಂಡ್‌ ವೈಟ್‌ ಕೇನ್‌, ಕ್ಲಸ್ಟರ್‌, ಡಿಜಿಟಲ್‌ ಹಿಯರಿಂಗ್‌ ಹೆಡ್‌, ಬ್ಯಾಟರಿ ಟ್ರೈ ಸೈಕಲ್‌, ಎಂ.ಆರ್‌ ಕಿಟ್‌, ಬ್ರೈಂಡ್‌ ಕಿಟ್‌, ಕ್ಯಾಲಿಫರ್‌, ಆರ್ಟಿಫಿಷಿಯಲ್‌ ಲಿಂಬ್‌ ಸೇರಿದಂತೆ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು. ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ, ನಗರಸಭೆ ಸದಸ್ಯರಾದ ಹರೀಶ ನಾಡಗೌಡ, ಶ್ರೀನಿವಾಸ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೆಂಕಟಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್‌ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next