ಕಲಬುರಗಿ: ರಾಜ್ಯದಲ್ಲಿನ ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿನ ಅತಿವೃಷ್ಟಿ ಹಾಗೂ ಪ್ರವಾಹ ಹಾನಿ ಕುರಿತು ಚರ್ಚಿಸಲು ಈ ಕೂಡಲೇ ವಿಶೇಷ ಅಧಿವೇಶನ ಕರೆಯುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.
ಅತಿವೃಷ್ಟಿ ಹಾಗೂ ಪ್ರವಾಹ ಹಾನಿ ವೀಕ್ಷಣೆಗೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅತಿವೃಷ್ಟಿ ಮತ್ತು ಪ್ರವಾಹ ಹಾನಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಿಎಂದಿಂದ ಹಿಡಿದು ಸಚಿವರ್ಯಾರು ಖುದ್ದಾಗಿ ಹಾನಿ ವೀಕ್ಷಿಸಲಿಕ್ಕಾಗಿಲ್ಲ. ಜನರ ಕಷ್ಟ ಕೇಳಲು ಸಹ ಮುಂದೆ ಬರುತ್ತಿಲ್ಲ. ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ. ಕಳೆದ ವರ್ಷದ ಹಾನಿಗೆ ಸಹ ಪೂರ್ಣ ಪ್ರಮಾಣದಲ್ಲಿ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಎಲ್ಲ ವಿಷಯಗಳ ಕುರಿತು ಚರ್ಚಿಸಲು ಕುಂಟು ನೆಪ ಹೇಳದರ ವಿಶೇಷ ಅಧಿವೇಶನ ಕರೆಯಲೇಬೇಕೆಂದರು.
ಮುಖ್ಯಮಂತ್ರಿಗಳು ಬರೀ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ನಾಮಕವಾಸ್ತೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಒಬ್ಬರೇ ಒಬ್ಬ ಶಾಸಕರ ಅಭಿಪ್ರಾಯ ಕೇಳಲಿಲ್ಲ. ಕಲಬುರಗಿ ಉಸ್ತುವಾರಿ ಸಚಿವರು ಐದು ತಿಂಗಳಿನಿಂದ ಜಿಲ್ಲೆ ಕಡೆ ಮುಖ ಮಾಡಿಲ್ಲ. ಕಂದಾಯ ಸಚಿವರೂ ಹೆಸರಿಗೆ ಮಾತ್ರ ಭೇಟಿ ನೀಡಿ ಹೋಗಿದ್ದಾರೆ. ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಅತಿವೃಷ್ಟಿ ಹಾಗೂ ಪ್ರವಾಹ ಹಾನಿ ನಿಭಾಯಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ನೆಪ ಹೇಳಿ ವಿಶೇಷ ಅಧಿವೇಶನದಿಂದ ಹಿಂದೆ ಸರಿಯಬಾರದು. ಈಗಂತು ಎಲ್ಲ ಕೆಲಸಗಳು ನಡೆದಿವೆ. ಉಪಚುನಾವಣೆಯಲ್ಲಂತು ಇಡೀ ಸರ್ಕಾರವೇ ಭಾಗಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ವಿಶೇಷ ಅಧಿವೇಶನ ನಡೆಸಲು ಹಿಂದೇಟು ಹಾಕಬಾರದು ಎಂದರು.
ಧಮ್ಮಿಲ್ಲ: ಸರ್ಕಾರಕ್ಕೆ ಹಾಗೂ ರಾಜ್ಯದಿಂದ ಗೆದ್ದ 25 ಜನ ಸಂಸದರಿಗೆ ಧಮ್ಮಿಲ್ಲ. ಏಕೆಂದರೆ ಅತಿವೃಷ್ಟಿ ಹಾನಿಗೆ ಪರಿಹಾರ ಕೋರಿ ಕೇಂದ್ರದ ಬಳಿ ನಿಯೋಗ ಹೋಗಲಿಕ್ಕಾಗಿಲ್ಲ. ಇಷ್ಟೊಂದು ಹಾನಿಯಾದರೂ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿಲ್ಲ. ಬಿಹಾರ, ಗುಜರಾತಕ್ಕೆ ಭೇಟಿ ನೀಡ್ತಾರೆ. ಆದರೆ ನಿಯೋಗ ಹೋಗಲಿಕ್ಕೆ ಸರ್ಕಾರಕ್ಕೆ ಹಾಗೂ ರಾಜ್ಯದಿಂದ ಗೆದ್ದ 25 ಜನ ಸಂಸದರಿಗೆ ಪ್ರಧಾನಿ ಎದುರು ನಿಂತು ಮಾತನಾಡುವ ಧಮ್ಮಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ, ಶಾಸಕರಾದ ಶರಣಬಸಪ್ಪ ದರ್ಶನಾಪುರ, ಎಂ.ವೈ. ಪಾಟೀಲ್, ಖನೀಜಾ ಫಾತೀಮ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಶಾಸಕರಾದ ಬಿ.ಆರ್. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.