ಸಾಂಗ್ಲಿ: ಹಳ್ಳಿ ಕಡೆಗಳಲ್ಲಿಎತ್ತು ಯಾವಾಗಲೂ ಬಿಡುವಿಲ್ಲದ ಪ್ರಾಣಿ. ಕೃಷಿಯ ಜೊತೆಗೆ ಬಂಡಿಗಳನ್ನು ಎಳೆಯಲು ಎತ್ತನ್ನು ನಿರಂತರವಾಗಿ ಬಳಸಲಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿಎತ್ತಿನ ಗಾಡಿಗೆ ಅದರ ಸಾಮರ್ಥ್ಯ ಮೀರಿ ಹೊರೆ ಹಾಕಲಾಗುತ್ತದೆ. ಇದರ ನೇರ ಪರಿಣಾಮ ಎತ್ತಿನ ಕುತ್ತಿಗೆಯ ಮೇಲಾಗುತ್ತದೆ. ಇದರ ವಿರುದ್ಧ ಪ್ರಾಣಿ ಪ್ರಿಯರು ಆಗಾಗ್ಗೆ ಧ್ವನಿ ಎತ್ತಿದ್ದಾರೆ. ಆದರೆ, ಎತ್ತಿನ ಕತ್ತಿನ ಹೊರೆ ಮಾತ್ರ ಕಡಿಮೆಯಾಗಿಲ್ಲ. ಆದರೆ ಇದೀಗ ಎತ್ತಿನ ಭಾರ ಕಡಿಮೆ ಮಾಡುವ ಹೊಸ ಸಂಶೋಧನೆಯೊಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಇಸ್ಲಾಂಪುರದ ರಾಜಾರಾಂಬಾಪು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ‘ಸಾರಥಿ’ ಎಂಬ ವಿಶೇಷ ಎತ್ತಿನ ಗಾಡಿ ನಿರ್ಮಿಸಿದ್ದಾರೆ. ಈ ಎತ್ತಿನ ಗಾಡಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಯಾರಿಸಿದ ರೋಲಿಂಗ್ ಸಪೋರ್ಟ್ ನೀಡಲಾಗಿದ್ದು, ಇದು ಎತ್ತುಗಳ ಕುತ್ತಿಗೆಯ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ.
ಕಬ್ಬು ಅರೆಯುವ ಸಮಯದಲ್ಲಿ ರೈತರು ಸಾಮಾನ್ಯವಾಗಿ ಎತ್ತಿನ ಗಾಡಿಯಲ್ಲಿ ಕಬ್ಬು ತುಂಬಿಸಿ ಗಾಣದ ಕಡೆ ಹೊರಡುವ ದೃಶ್ಯ ಸಾಮಾನ್ಯವಾಗಿರುತ್ತದೆ. ಆದರೆ ಬಹಳಷ್ಟು ಬಾರಿ ಎತ್ತು ಹೊರಬಹುದಾದ ಭಾರಕ್ಕಿಂತ ಹೆಚ್ಚಿನ ಭಾರವನ್ನೇ ಹಾಕಲಾಗಿರುತ್ತದೆ. ನೂರಾರು ಕಿಲೋ ಕಬ್ಬು ಸಾಗಿಸುವಾಗ ಎತ್ತಿನ ಗಾಡಿ ಪಲ್ಟಿ ಹೊಡೆದು ಎತ್ತುಗಳು ಗಂಭೀರವಾಗಿ ಗಾಯಗೊಂಡ ಘಟನೆಗಳೂ ನಡೆದಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಸ್ಲಾಂಪುರದ ರಾಜಾರಾಂಬಾಪು ಪಾಟೀಲ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಾಹಸ ಬಹುತೇಕ ಯಶಸ್ವಿಯಾಗಿದೆ.
ಇದನ್ನೂ ಓದಿ:ಕರಿದ ಎಣ್ಣೆಯ ಮೂಲಕ 9 ವರ್ಷದಿಂದ ಓಡುತ್ತಿರುವ ಕಾರು!
ರಾಜಾರಂಬಾಪು ಎಂಜಿನಿಯರಿಂಗ್ ಕಾಲೇಜಿನ ಆಟೋಮೊಬೈಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಸೌರಭ್ ಭೋಸಲೆ, ಆಕಾಶ್ ಕದಂ, ನಿಖಿಲ್ ತಿಪಯ್ಲೆ, ಆಕಾಶ ಗಾಯಕವಾಡ, ಓಂಕಾರ ಮಿರಜಕರ್ ಅವರು “ಸಾರಥಿ” ಯೋಜನೆ ರೂವಾರಿಗಳು. ಗಾಡಿಯಲ್ಲಿ ಎತ್ತುಗಳ ನೊಗದ ಹೊರೆಯನ್ನು ಕಡಿಮೆ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವಾಗ “ರೋಲಿಂಗ್ ಸಪೋರ್ಟ್” ಬಗ್ಗೆ ಯೋಚಿಸಿದೆವು. ಇದರಿಂದ, ಈ ವಿದ್ಯಾರ್ಥಿಗಳು ಟೈರ್ ಮತ್ತು ಇತರ ವಸ್ತುಗಳ ಮೂಲಕ ಈ “ರೋಲಿಂಗ್ ಸಪೋರ್ಟ್” ಮಾಡಿದರು. ಕಬ್ಬು ಸಾಗಿಸಿ ಎತ್ತಿನ ಗಾಡಿ ಪ್ರಯೋಗ ಮಾಡಿ ಯಶಸ್ವಿಯೂ ಆದರು.
ಎತ್ತಿನ ಗಾಡಿಯ ನೊಗಕ್ಕೆ ರಾಡ್ ಸಪೋರ್ಟ್ ನೀಡಿ ಅದಕ್ಕೆ ಚಕ್ರವನ್ನು ನೀಡಿದ್ದಾರೆ. ಇದರಿಂದ ಎತ್ತಿಗೆ ಬೀಳುತ್ತಿದ್ದ ಭಾರ ಈ ರೋಲಿಂಗ್ ಸಪೋರ್ಟ್ ಗೆ ಬೀಳುತ್ತದೆ. ಇದರಿಂದ ಎತ್ತುಗಳ ಕತ್ತಿನ ಹೊರೆ ಕಡಿಮೆಯಾಗಿ ಎತ್ತುಗಳು ಎತ್ತಿನ ಬಂಡಿಯನ್ನು ಎಳೆಯಲು ಅನುಕೂಲವಾಗುತ್ತದೆ.
ಈ ಸಾರಥಿಯಿಂದ ರೈತರಿಗೆ ಬಹಳಷ್ಟು ಸಹಾಯವಾಗುತ್ತದೆ ಎಂಬ ಅಭಿಪ್ರಾಯವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ. ಈ ರೋಲಿಂಗ್ ಸಪೋರ್ಟ್ ಕಬ್ಬು ಸಾಗಿಸುವ ಎತ್ತಿನ ಗಾಡಿ ಚಾಲಕರಿಗೂ ಅನುಕೂಲವಾಗಲಿದ್ದು, ಇದರಿಂದ ಹೆಚ್ಚು ಹೊರೆ ಹಾಕಿದರೂ ಎತ್ತಿನ ಮೇಲಿನ ಭಾರ ಕಡಿಮೆಯಾಗಲಿದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ. ಈಗ ವಿದ್ಯಾರ್ಥಿಗಳು ಈ ರೋಲಿಂಗ್ ಸಪೋರ್ಟ್ ನ ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯದಲ್ಲೂ ಬೇಡಿಕೆ: ರಾಜ್ಯದಲ್ಲಿ ಹೆಚ್ಚಿನ ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಮಂಡ್ಯ, ಬೆಳಗಾವಿ ಜಿಲ್ಲೆಗಳಲ್ಲೂ ಈ ರೋಲಿಂಗ್ ಸಪೋರ್ಟ್ ಉತ್ತಮ ಸಹಾಯಕವಾಗ ಬಲ್ಲದು. ಇದರಿಂದ ರಾಜ್ಯದ ಎತ್ತುಗಳ ಭಾರವೂ ಸ್ವಲ್ಪ ಕಡಿಮೆಯಾಗಲಿ ಎಂದು ಪ್ರಾಣಿ ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಹೊಸ ಎತ್ತಿನ ಗಾಡಿ ಆವಿಷ್ಕಾರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.