Advertisement

ವಿಶೇಷ ವರದಿ: ಪುತ್ತೂರು ಎಪಿಎಂಸಿ: 1,000 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಗೋದಾಮು

10:24 PM Sep 29, 2020 | mahesh |

ಪುತ್ತೂರು: ಆದಾಯ ಮತ್ತು ರೈತರಿಗೆ ಸಹಕಾರಿ ಎನ್ನುವ ತತ್ತ್ವದಡಿ ಪುತ್ತೂರು ಎಪಿಎಂಸಿಯಲ್ಲಿ 1,000 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಬೃಹತ್‌ ಗೋದಾಮು ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿದೆ. ನಗರದ ಸಾಲ್ಮರದಲ್ಲಿರುವ ಎಪಿಎಂಸಿ ಪ್ರಾಂಗಣದಲ್ಲಿ ನಡೆದಿರುವ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಈ ಗೋದಾಮು ಹೊಸ ಸೇರ್ಪಡೆಯೆನಿಸಿದೆ. ಇದರ ಅಂತಿಮ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, ನೀಲಿ, ಬಿಳಿ ಬಣ್ಣದೊಂದಿಗೆ ಕಂಗೊಳಿಸುತ್ತಿದೆ. ತರಕಾರಿ ಮಾರುಕಟ್ಟೆ ಪಕ್ಕದಲ್ಲೇ ಹೊಸ ಗೋದಾಮು ನಿರ್ಮಾಣಗೊಂಡಿದೆ.

Advertisement

ಆಹಾರ ಇಲಾಖೆಗೆ ಬಾಡಿಗೆಗೆ ನೀಡಲು ಚಿಂತನೆ
ಗೋದಾಮು ಅನ್ನು ಆಹಾರ ಇಲಾಖೆಯ ಪಡಿತರ ಆಹಾರ ಸಾಮಗ್ರಿ ದಾಸ್ತಾನು ಸಂಗ್ರಹಿಸಿಡಲು ಬಾಡಿಗೆ ರೂಪದಲ್ಲಿ ನೀಡಲು ಎಪಿಎಂಸಿ ಚಿಂತನೆ ನಡೆಸಿದೆ. ಇದರಿಂದ ಎಪಿಎಂಸಿಗೆ ಮಾಸಿಕ ಆದಾಯ ಸಿಗಲಿದೆ. ಸರಕಾರದಿಂದ ತಾಲೂಕಿನ ಪಡಿತರ ಫಲಾನುಭವಿಗಳಿಗೆ ಪ್ರತಿ ತಿಂಗಳು ನೀಡುವ ಆಹಾರ ಸಾಮಗ್ರಿಗಳನ್ನು ದಾಸ್ತಾನು ಇರಿಸಲು ಸುಸಜ್ಜಿತ ಗೋದಾಮಿನ ಆವಶ್ಯಕತೆ ಇದ್ದು, ಆಹಾರ ಇಲಾಖೆ ಈ ನಿಟ್ಟಿನಲ್ಲಿ ಎಪಿಎಂಸಿ ಗೋದಾಮು ಬಳಸಲು ಮಾತುಕತೆ ನಡೆದಿದೆ. ಇದರ ಜತೆಗೆ ರೈಲು ಮೂಲಕ ಅಡಿಕೆ ಸಾಗಾಟಕ್ಕೆ ಚಾಲನೆ ದೊರೆತಿದ್ದು, ಎಪಿಎಂಸಿ ಪ್ರಾಂಗಣದ ಅಂಗಡಿಗಳಲ್ಲಿನ ಅಡಿಕೆ ಜತೆಗೆ ಇತರ ಅಡಿಕೆ, ಕೃಷಿ ಉತ್ಪನ್ನ ದಾಸ್ತಾನು ಇಡಲು ಈ ಗೋದಾಮು ಪೂರಕವೆನಿಸಿದೆ.

6 ಕೋ. ರೂ. ವೆಚ್ಚದ ಅಭಿವೃದ್ಧಿ ಕೆಲಸ
ಗೋದಾಮು ಸಹಿತ ಎಪಿಎಂಸಿ ಒಟ್ಟು 6 ಕೋ. ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ವಾರದ ಸಂತೆಗೆ ಪೂರಕವಾಗಿ 35 ಲಕ್ಷ ರೂ. ವೆಚ್ಚದ ನವೀಕೃತ ತರಕಾರಿ ಮಾರುಕಟ್ಟೆ, 60 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಎಪಿಎಂಸಿ ಪ್ರಾಂಗಣದಲ್ಲಿ 2 ಕೋ. ರೂ. ವೆಚ್ಚದಲ್ಲಿ ಸಿಸಿ ರಸ್ತೆ, 30 ಲಕ್ಷ ರೂ. ವೆಚ್ಚದಲ್ಲಿ ಸಂಡ್ರಿಶಾಪ್‌, 10 ಲಕ್ಷ ರೂ. ವೆಚ್ಚದಲ್ಲಿ 3 ಶೌಚಾಲಯ, 1.5 ಕೋ. ರೂ. ವೆಚ್ಚದಲ್ಲಿ ಇಂಟರ್‌ಲಾಕ್‌, ನವೀಕೃತ ಹೋದೋಟ ಹೀಗೆ ವಿವಿಧ ಕಾಮಗಾರಿಗಳು ಅನುಷ್ಠಾನಗೊಂಡಿವೆ. ಅ. 3ರಂದು ಲೋಕಾರ್ಪಣೆ ನಡೆಯಲಿದೆ.

ಕಬ್ಬಿಣದ ರಾಡ್‌ ರಹಿತ ಶೀಟ್‌ ಬಳಕೆ
1,000 ಮೆಟ್ರಿಕ್‌ ಟನ್‌ ಸಾಮರ್ಥ್ಯ ಇರುವ ಈ ಗೋದಾಮಿಗೆ ಗುಜರಾತ್‌ನ ತಂತ್ರಜ್ಞಾನ ಬಳಸಿ ಕಬ್ಬಿಣದ ರಾಡ್‌ ಸಹಿತ ಯಾವುದೇ ಪರಿಕರ ಬಳಸದೆ ಸ್ವ-ಸಾಮರ್ಥ್ಯದಲ್ಲಿ ನಿಲ್ಲುವ ಹೊಸ ಮಾದರಿಯ ಶೀಟು ಅಳವಡಿಸಲಾಗಿದೆ. ಶೀಟ್‌ಗೆ ಆಧಾರವಾಗಿ ಕಬ್ಬಿಣದ ರಾಡ್‌ ಬಳಸಿಲ್ಲ. ಇಡೀ ಛಾವಣಿಯನ್ನು ನೇರವಾಗಿ ಶೀಟ್‌ನಿಂದಲೇ ಮುಚ್ಚಲಾಗಿದೆ. ಗುಜರಾತ್‌ ಕಾರ್ಮಿಕರು ರೋಲ್‌ ತಂದು ಅದನ್ನು ಇಲ್ಲಿಯೇ ಸಿದ್ಧಪಡಿಸಿದ್ದಾರೆ. ಮಾಮೂಲಿ ಶೀಟ್‌ಗಿಂತ ಇದು ಬಾಳಿಕೆ, ಗಟ್ಟಿ ಹೆಚ್ಚು. 1 ಎಂ.ಎಂ. ದಪ್ಪ ಇದೆ. 36 ಮೀಟರ್‌ ಉದ್ದ ಹಾಗೂ 18 ಮೀಟರ್‌ ಅಗಲ ಇದೆ ಎನ್ನುತ್ತಾರೆ ಎಪಿಎಂಸಿ ಪ್ರಾಂಗಣದ ವಿವಿಧ ಕಾಮಗಾರಿ ನಿರ್ವಹಣೆ ಹೊಣೆ ಹೊತ್ತಿರುವ ಜಯಕುಮಾರ್‌. ಈ ಗೋದಾಮು ನಿರ್ಮಾಣಕ್ಕೆ 1 ಕೋ. ರೂ. ವೆಚ್ಚ ತಗಲಿದ್ದು, ಕಡಿಮೆ ವೆಚ್ಚ, ಉತ್ತಮ ಗುಣಮಟ್ಟದ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ ಎನ್ನುತ್ತಾರೆ ಗುತ್ತಿಗೆದಾರರು.

ರೈತ ಪರ ಎಪಿಎಂಸಿ
1,000 ಮೆಟ್ರಿಕ್‌ ಟನ್‌ ಗೋದಾಮು ನಿರ್ಮಾಣದ ಮೂಲಕ ಆದಾಯ ಸಂಗ್ರಹ ಹಾಗೂ ರೈತರಿಗೆ ಸಹಕಾರಿ ಆಗುವ ಚಿಂತನೆ ಹೊಂದಲಾಗಿದೆ. ಇದರ ಜತೆಗೆ ಒಟ್ಟು 6 ಕೋ. ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಪುತ್ತೂರು ಎಪಿಎಂಸಿ ಅನ್ನು ರೈತರ, ಕೃಷಿಕರ ಎಪಿಎಂಸಿಯನ್ನಾಗಿ ರೂಪಿಸುವುದು ನಮ್ಮ ಗುರಿ.
-ದಿನೇಶ್‌ ಮೆದು, ಅಧ್ಯಕ್ಷರು ಎಪಿಎಂಸಿ ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next