Advertisement
ಕಲ್ಲಿನ ಕೋರೆ ಮಾಡಬೇಕಿದ್ದರೆ ಕಂದಾಯ ಮತ್ತು ಅರಣ್ಯ ಇಲಾಖೆಯವರಿಂದ ನಿರಾಕ್ಷೇಪಣಾ ಪತ್ರ ಪಡೆದು ಜಾಗವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಜತೆ ಲೀಸ್ ನಲ್ಲಿ ಒಪ್ಪಂದ ಮಾಡಿಕೊಂಡಿರಬೇಕು. ಆದರೆ ಅನೇಕ ಪ್ರಕರಣಗಳಲ್ಲಿ ಈ ರೀತಿ ಲೀಸ್ ಪಡೆಯದೆ ಬೇಕಾಬಿಟ್ಟಿ ಹೊಂಡ ತೆಗೆಯಲಾಗಿದೆ. ಇಂತಹ ಕೋರೆಯ ಮೂಲಕ ಕಲ್ಲು ತೆಗೆದು ಬೃಹತ್ ಗಾತ್ರದ ಹೊಂಡಗಳೇ ನಿರ್ಮಾಣವಾಗುತ್ತವೆೆ. ಮಳೆಗಾಲದ ಸಂದರ್ಭ ಇಲ್ಲಿ ಮಳೆ ನೀರು ಸಂಗ್ರಹವಾಗುತ್ತದೆ. ಆದರೆ, ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಆಟವಾಡಲು ಅಥವಾ ಇತರ ಕಾರಣಕ್ಕಾಗಿ ಹೋದ ಕೆಲವರು ಕಲ್ಲಿನ ಕೋರೆಗೆ ಬಿದ್ದ ಮೃತಪಟ್ಟ ಘಟನೆ ನಮ್ಮ ಕಣ್ಣ ಮುಂದಿದೆ. ಹೆಚ್ಚಾ ಕಡಿಮೆ ಕಳೆದ 5 ವರ್ಷದ ಸಮಯದಲ್ಲಿ ಸುಮಾರು 15ಕ್ಕಿಂತಲೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ.
ಖಾಸಗಿ ಪಟ್ಟಾ ಜಮೀನನ್ನು ಕಲ್ಲು ತೆಗೆಯಲು ಕೊಡುವುದು ಕೂಡಾ ಒಳ್ಳೆಯ ಆದಾಯ ತರುತ್ತದೆ ಎಂಬ ಕಾರಣಕ್ಕೆ ಜಿಲ್ಲೆಯ ಜನ ಇದಕ್ಕೆ ಮುಂದಾಗುತ್ತಾರೆ. ಜಮೀನಿನ ಮಧ್ಯೆ ಎಲ್ಲೋ ಖಾಲಿ ಜಾಗವನ್ನು ಈ ರೀತಿ ಕೋರೆಗಾಗಿ ಗುತ್ತಿಗೆದಾರರಿಗೆ ಕೊಡುತ್ತಾರೆ. ಕಲ್ಲು ಕೋರೆಯವರು ಮೊದಲು ಕಲ್ಲು ಹೇಗಿದೆ ಎಂದು ನೋಡಲು ಹೊಂಡ ಮಾಡುತ್ತಾರೆ, ಕಲ್ಲು ಚೆನ್ನಾಗಿದ್ದಾರೆ ಮುಂದುವರಿಯುತ್ತಾರೆ, ಇಲ್ಲವಾದರೆ ಹಾಗೇ ಬಿಟ್ಟು ಹೋಗುತ್ತಾರೆ. ಇಂತಹ ಹೊಂಡವೇ ಅನೇಕ ಜೀವ ತೆಗೆದು ಉದಾಹರಣೆ ಕಣ್ಣಮುಂದಿದೆ. ಮೂಡಬಿದಿರೆಯ ಬೆಳುವಾಯಿಯಲ್ಲಿ 6 ಮಕ್ಕಳು ಇದರಿಂದಾಗಿ ಪ್ರಾಣ ಕಳೆದುಕೊಂಡಿದ್ದರು.
Related Articles
ಸಾರ್ವಜನಿಕ ಜಾಗದಲ್ಲಿರುವ ದೊಡ್ಡ ಕೆಂಪುಕಲ್ಲು ಕೋರೆಗಳು ಅಪಾಯವನ್ನು ಸೃಷ್ಟಿಸಿದಂತೆಯೇ, ಖಾಸಗಿ ಜಾಗದಲ್ಲಿರುವ ಚಿಕ್ಕ, ಮಧ್ಯಮ ಗಾತ್ರದ ಕೋರೆಗಳು ಕೂಡ ಅಪಾಯದ ಸೂಚನೆ ನೀಡುತ್ತಿವೆ. ಯಾಕೆಂದರೆ ಖಾಸಗಿ ಜಾಗದಲ್ಲಿ ತೆಗೆದ ಸಣ್ಣ ಕೋರೆಗಳನ್ನು ಜನ ಕೆರೆಯ ರೀತಿಯಲ್ಲಿ ಬಳಸುವುದಕ್ಕಾಗಿ ಹಾಗೆಯೇ ಉಳಿಸಿಕೊಳ್ಳುತ್ತಾರೆ. ಅದಕ್ಕೆ ಸೂಕ್ತ ತಡೆಗೋಡೆ ಕಟ್ಟದಿದ್ದರೆ ಯಾರಾದರೂ ಬೀಳುವ ಅಪಾಯವಿರುತ್ತದೆ.
Advertisement
ನೀರು ಇಂಗಿಸುತ್ತಾರೆ!ಮಳೆಗಾಲದಲ್ಲಿ ನೀರು ತುಂಬಿ ಬೃಹತ್ ಕೆರೆಗಳಾಗಿ ಪರಿವರ್ತನೆಯಾಗುವುದರಿಂದ ಜಿಲ್ಲಾಡಳಿತ ಇಂತಹ ಕೋರೆಗಳನ್ನೇ ಮುಚ್ಚಿಸುತ್ತದೆ. ಆದರೆ, ಇಂತಹ ಕೋರೆಯಲ್ಲಿಯೇ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಂಡು ಜಲಸಂರಕ್ಷಣೆ ಮಾಡಲು ಕೂಡ ಅವಕಾಶವಿದೆ ಎಂದು ಹಲವು ಕೃಷಿಕರು ಮಾಡಿ ತೋರಿಸಿದ್ದಾರೆ. ತಮ್ಮ ಭೂಮಿಯಲ್ಲಿರುವ ನಿರುಪಯುಕ್ತ ಕಲ್ಲಿನ ಕೋರೆಗಳಲ್ಲಿ ನಾಲ್ಕೂ ಸುತ್ತಲು ಬೇಲಿ ಹಾಕಿ ಮಳೆ ನೀರು ಸಂಗ್ರಹಿಸಿ ನೀರು ಇಂಗಿಸುವಂತೆ ಮಾಡುವ ವಿಶೇಷ ಪ್ರಯತ್ನ ಕೂಡ ಸದ್ದಿಲ್ಲದೆ ನಡೆಯುತ್ತಿದೆ. ಎಲ್ಲೆಲ್ಲಿವೆ ಕೋರೆಗಳು?
ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಕಲ್ಲಿನ ಕೋರೆಗಳಿವೆ. ನೂರಾರು ಮಂದಿ ಇದರಿಂದಾಗಿ ಜೀವನ ನಿರ್ವಹಿಸುತ್ತಿದ್ದಾರೆ. ಮಂಗಳೂರು, ಮೂಡಬಿದಿರೆ ತಾಲೂಕಿನ ಆದ್ಯಪಾಡಿ, ಬಡಗ ಎಕ್ಕಾರು, ಕೊಂಪದವು, ಪುತ್ತಿಗೆ, ಬೆಳುವಾಯಿ, ತೆಂಕಮಿಜಾರು, ತೆಂಕ ಎಕ್ಕಾರು, ಮುನ್ನೂರು, ಬಂಟ್ವಾಳ ತಾಲೂಕಿನ ಕರಿಯಂಗಳ, ಮಂಚಿ, ಕಸಬಾ, ಇರಾ, ನರಿಂಗಾನ, ಬೆಳ್ತಂಗಡಿ ತಾಲೂಕಿನ ಕಣಿಯೂರು, ಧರ್ಮಸ್ಥಳ, ತಣ್ಣೀರುಪಂತ, ಪಾರಂಕಿ, ಪುತ್ತೂರು ತಾಲೂಕಿನ ಮುಟ್ನೂರು, ಅರಿಯಡ್ಕ, ಬಡಗನ್ನೂರು, ನೆಟ್ಟಣಿಗೆ ಮುಟ್ನೂರು, ಬನ್ನೂರು, ಐತೂರು, ಪಾಣಾಜೆ, ಬೆಟ್ಟಂಪಾಡಿ, ರಾಮಕುಂಜ, ಹಳೆನೇರಂಕಿ, ಸುಳ್ಯ ತಾಲೂಕಿನ ಅಜ್ಜಾವರ, ಮಂಡೆಕೋಲು, ಜಾಲ್ಸೂರು, ಸುಳ್ಯ, ನಾಲ್ಕೂರು, ಆರಂತೋಡು, ಅಮರಮುಟ್ನೂರು, ಕಲ್ಮಕಾರು, ಕೋಡಿಯಾಳ, ಗುತ್ತಿಗಾರು, ಕಲ್ಮಡ್ಕ ಮುಂತಾದ ಕಡೆಗಳಲ್ಲಿ ಕಲ್ಲಿನ ಕೋರೆಗಳಿವೆ. ಇಲ್ಲಿ ಎಲ್ಲ ಕಡೆ ಅಪಾಯ ಎಂದಲ್ಲ. ಆದರೆ, ಕೆಲವು ಕಡೆಗಳಲ್ಲಿ ಅಪಾಯವಿದೆ. ವಿಶೇಷ ವರದಿ