ಶಿವಮೊಗ್ಗ: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗೆ ವಾರ್ಷಿಕವಾಗಿ ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಲಾಗುವುದು ಎಂದು ಶಾಸಕ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿ.ಪಂ. ವತಿಯಿಂದ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗೆ ಏರ್ಪಡಿಸಲಾಗಿದ್ದ ಕ್ರೀಡಾ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ರಾಜ್ಯದ ಎಲ್ಲಾ ಗ್ರಾ.ಪಂ.ಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿದೆ. ಪ್ರಸ್ತುತ ಗ್ರಾ.ಪಂ.ಗಳ ಸದಸ್ಯರು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆರೆಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಪಂಚಾಯಿತಿ ಅಧ್ಯಕ್ಷರು-ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿ ಕಾರಿಗಳ ಸಂಘಟಿತ ಪ್ರಯತ್ನದಿಂದ ಯಶಸ್ಸು ಕಾಣಲು ಸಾಧ್ಯವಾಗಲಿದೆ. ಇದರಿಂದಾಗಿ ಗ್ರಾಮಗಳಲ್ಲಿ ಸಹಜವಾಗಿ ಹಸಿರುಕ್ರಾಂತಿ ಆಗಲಿದೆ ಎಂದರು.
ಶಾಸಕ ಕೆ.ಬಿ. ಅಶೋಕನಾಯ್ಕ ಮಾತನಾಡಿ, ಗ್ರಾಮಗಳಲ್ಲಿ ನೀರು, ರಸ್ತೆ, ಚರಂಡಿ, ವಿದ್ಯುತ್ ಇಂತಹ ಅನೇಕ ಸಮಸ್ಯೆಗಳೊಂದಿಗೆ ದಿನಕಳೆಯುವ ಪ್ರತಿನಿ ಧಿಗಳು ಹಾಗೂ ಸಿಬ್ಬಂದಿ ತಮ್ಮ ದೈನಂದಿನ ಒತ್ತಡದಿಂದ ಮುಕ್ತವಾಗಿರಲು ಹಾಗೂ ಸದಾ ಲವಲವಿಕೆಯಿಂದಿರಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದರು.
ಪ್ರತಿಯೊಬ್ಬರಲ್ಲಿಯೂ ವಿಶೇಷ ಪ್ರತಿಭೆಗಳಿವೆ. ಅವುಗಳ ಅನಾವರಣಕ್ಕೆ ವೇದಿಕೆಗಳ ಅಗತ್ಯವಿದೆ. ಅಂತಹ ವೇದಿಕೆಯನ್ನು ಕಲ್ಪಿಸುವ ಪ್ರಯತ್ನ ಇದಾಗಿದೆ. ಈ ಕ್ರೀಡಾಕೂಟಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಪ್ರಮುಖವಾಗಿದೆ. ಮುಂದಿನ ದಿನಗಳಲ್ಲಿ ಗೆಲ್ಲಲು ಇದು ಪ್ರಥಮ ಹೆಜ್ಜೆಯಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಚುನಾಯಿತ ಸದಸ್ಯರೆಲ್ಲರಲ್ಲಿಯೂ ಸ್ಪರ್ಧಾ ಮನೋಭಾವ, ಸಾಮರಸ್ಯ ಮೂಡಿಸುವಲ್ಲಿ ಈ ಕ್ರೀಡಾಕೂಟಗಳು ಸಹಕಾರಿಯಾಗಿವೆ. ಆದ್ದರಿಂದ ಮುಂದಿನ ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು. ಜಿ.ಪಂ. ಮಾಜಿ ಸದಸ್ಯ ಕೆ.ಇ. ಕಾಂತೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ, ಉಮಾ ಸದಾಶಿವ, ಮಂಜುನಾಥ್, ಅವಿನಾಶ್ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.