Advertisement

ಸೋಷಿಯಲ್‌ ಮೀಡಿಯಾ ಟೆನ್ಷನ್: ಎಚ್ಚರ..ಈ ರೀತಿಯ ಪೇಜ್‌ ಗಳೂ FBಯಲ್ಲಿವೆ!

09:32 AM Mar 29, 2019 | Hari Prasad |

ಸಾಮಾಜಿಕ ಜಾಲತಾಣಗಳಾಗಿರುವ ಫೇಸ್ಬುಕ್‌, ವಾಟ್ಸ್ಯಾಪ್‌, ಇನ್‌ ಸ್ಟ್ರಾಗ್ರಾಂ ಮತ್ತು ಟ್ವಿಟ್ಟರ್‌ ಗಳಲ್ಲಿ ನೈಜ ಸುದ್ದಿಗಳಿಗಿಂತ ಆಧಾರ ರಹಿತ ಸುದ್ದಿಗಳೇ ಹೆಚ್ಚೆಚ್ಚು ಬರುತ್ತಿರುವುದು ಎಲ್ಲಾ ದೇಶಗಳ ಆಡಳಿತ ವರ್ಗಗಳಿಗೆ ತಲೆನೋವಿನ ವಿಷಯವಾಗಿ ಪರಿಣಮಿಸಿದೆ. ಮಾತ್ರವಲ್ಲದೇ ಸ್ವತಃ ಸಾಮಾಜಿಕ ಜಾಲತಾಣ ಕಂಪೆನಿಗಳೇ ಈ ಬಗ್ಗೆ ತಲೆಕೆಡಿಸಿಕೊಂಡಿದ್ದು ಇಂತಹ ಸುಳ್ಳು ಸುದ್ದಿಗಳನ್ನು ಹರಡುವ ಅನಧಿಕೃತ ಪುಟಗಳು, ಅಕೌಂಟುಗಳು ಮತ್ತು ಬಳಕೆದಾರರ ಮೇಲೆ ನಿಗಾ ವಹಿಸಲು ಮತ್ತು ಅವುಗಳನ್ನು ನಿರ್ಬಂಧಿಸಲು ಹೊಸ ತಂತ್ರಜ್ಞಾನದ ಮೊರೆ ಹೋಗಿವೆ. ವಿಷಯ ಹೀಗಿರುತ್ತಾ ಭಾರತ ಮತ್ತು ಪಾಕಿಸ್ಥಾನದ ನಡುವೆ ಉದ್ಭವಿಸಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಲಾಭ ಪಡೆದುಕೊಂಡು ಭಾರತೀಯರನ್ನು ಪ್ರಚೋದಿಸಲು ಇಲ್ಲಿನ ಫೇಮಸ್‌ ಯುವ ಕ್ರಿಕೆಟ್‌ ಆಟಗಾರನೊಬ್ಬ ಫೇಸ್ಬುಕ್‌ ಪೇಜ್‌ ಕ್ರಿಯೇಟ್‌ ಮಾಡಿದ್ದರೇ..? ಯಾರು ಆ ಕ್ರಿಕೆಟಿಗ.. ಏನಿದು ಕಥೆ ಇಲ್ಲಿದೆ ನೋಡಿ ಅಸಲೀ ವಿಚಾರ.

2017ರ ಆಗಸ್ಟ್‌ 10ನೇ ತಾರೀಖೀನಂದು ‘ಹಾರ್ಧಿಕ್‌ ಪಾಂಡ್ಯ FC.’ ಎಂಬ ಹೆಸರಿನ ಫೇಸ್ಬುಕ್‌ ಪುಟವೊಂದನ್ನು ಪ್ರಾರಂಭಿಸಲಾಗುತ್ತದೆ. ಹದಿಮೂರು ದಿನಗಳ ಬಳಿಕ ಈ ಪೇಜ್‌ ನ ಹೆಸರು ‘ಹಾರ್ಧಿಕ್‌ ಪಾಂಡ್ಯ ರನ್‌ ಮಷೀನ್‌’ ಎಂದು ಬದಲಾಗುತ್ತದೆ. ಇನ್ನು ಸೆಪ್ಟಂಬರ್‌ 15ರ ಹೊತ್ತಿಗೆ ಈ ಪೇಜ್‌ ಮತ್ತೆ ತನ್ನ ಹೆಸರನ್ನು ‘ಹಾರ್ಧಿಕ್‌ ಲೀಡರ್ ನ್ಯೂಸ್‌’ ಎಂದು ಬದಲಿಸಿಕೊಳ್ಳುತ್ತದೆ. ಮತ್ತೆ ಒಂಭತ್ತು ದಿನಗಳ ಬಳಿಕ ಅಂತಿಮವಾಗಿ ‘ದಿ ಲೀಡರ್ ನ್ಯೂಸ್‌’ ಎಂದು ಫೈನಲ್‌ ಹೆಸರನ್ನು ಇರಿಸಿಕೊಳ್ಳುತ್ತದೆ… ಹಾಗಾದರೆ ಏನಿದರ ಹಿಂದಿನ ಕಥೆ?

Advertisement


ಇದೇ ಸಂದರ್ಭದಲ್ಲಿ ಮಾರ್ಚ್‌ 26ರಂದು ಈ ‘ಹಾರ್ಧಿಕ್‌ ಪಾಂಡ್ಯ’ ಹೆಸರಿನ ಪೇಜ್‌ ಸಹಿತ 513 ಪೇಜ್‌ ಗಳನ್ನು ಮತ್ತು ಗ್ರೂಪ್‌ ಗಳನ್ನು ತೆಗೆದುಹಾಕಿರುವುದಾಗಿ ಪೇಸ್ಬುಕ್‌ ಪ್ರಕಟಿಸುತ್ತದೆ. ಯಾಕೆಂದರೆ ಅಸಲಿಗೆ ಭಾರತೀಯ ಮೂಲದ ಪೇಜ್‌ ಗಳಂತೆ ಕಾಣುವ ಈ ಪೇಜ್‌ ಗಳು ಅಸಲಿಗೆ ಸೃಷ್ಟಿಯಾಗುತ್ತಿದ್ದಿದ್ದು ಎಲ್ಲಿ ಗೊತ್ತಾ.. ದೂರದ ಇರಾನ್‌ ದೇಶದಲ್ಲಿ!
ಒಂದು ನಿರ್ಧಿಷ್ಟ ವಿಚಾರ, ಸಿದ್ಧಾಂತಗಳಿಗೆ ಸಂಬಂಧಿಸಿದ ಸುದ್ದಿ, ವಿಡಿಯೋಗಳನ್ನು ಪೋಸ್ಟ್‌ ಮಾಡಲು ಈ ರೀತಿಯ ಅಸಂಖ್ಯ ಅನಧಿಕೃತ ಪೇಜ್‌ ಗಳನ್ನು ಸೃಷ್ಟಿಸಲಾಗುತ್ತದೆ ಎಂಬ ಅಂಶವನ್ನು ಫೇಸುºಕ್‌ ಕಂಡುಕೊಳ್ಳುತ್ತದೆ. ಈ ರೀತಿಯ ಅನಧಿಕೃತ ಫೇಸ್ಬುಕ್‌ ಪೇಜ್‌ ಗಳಲ್ಲಿ ಹೆಚ್ಚೆಚ್ಚು ಪೋಸ್ಟ್‌ ಆಗುತ್ತಿದ್ದ ವಿಚಾರವೆಂದರೆ ಭಾರತ ಮತ್ತು ಪಾಕಿಸ್ಥಾನ ನಡುವಿನ ಬಿಕ್ಕಟ್ಟು ಮತ್ತು ಅದಕ್ಕೆ ಸಂಬಂಧಿಸಿದ ಸುದ್ದಿಗಳೇ ಆಗಿದ್ದವು.

ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ನೆಚ್ಚಿನ ಕ್ರಿಕೆಟಿಗರು, ನಟರು ಅಥವಾ ಇನ್ನಿತರ ಕ್ಷೇತ್ರಗಳ ಸಾಧಕರ ಹೆಸರಿನ ಫ್ಯಾನ್ಸ್‌ ಗ್ರೂಪ್‌ ಎಂದಾಗ ಕಣ್ಮುಚ್ಚಿ ಫಾಲೋ ಮಾಡುತ್ತಾರೆ ಎಂಬುದು ಈ ರೀತಿಯ ಅನಧಿಕೃತ ಪೇಜ್‌ ಗಳನ್ನು ಸೃಷ್ಟಿಸುವವರ ದುರುದ್ದೇಶವಾಗಿದೆ ಎಂಬುದು ಫೇಸ್ಬುಕ್‌ ವಾದ.

ಭಾರತವನ್ನು ಗುರಿಯಾಗಿಸಿ ಮಾತ್ರವಲ್ಲದೇ ಈಜಿಪ್ಟ್, ಇಂಡೋನೇಷಿಯಾ, ಇಸ್ರೇಲ್‌, ಇಟಲಿ, ಕಝಕಿಸ್ಥಾನ ಮತ್ತು ಮಧ್ಯಪ್ರಾಚ್ಯ ಹಾಗೂಉತ್ತರ ಆಫ್ರಿಕಾದ ವಿವಿಧ ದೇಶಗಳನ್ನು ಗುರಿಯಾಗಿಸಿ ಇರಾನ್‌ ನೆಲದಲ್ಲಿ ಇಂತಹ ‘ಜಾಲತಾಣ ಭಯೋತ್ಪಾದನೆ’ ಚಟುವಟಿಕೆಗಳು ನಡೆಯುತ್ತಿರುವುದನ್ನು ಫೇಸ್ಬುಕ್‌ ಸಹಿತ ಜಾಲತಾಣ ಕಂಪೆನಿಗಳು ಗಂಭೀರವಾಗಿ ಪರಿಗಣಿಸಿವೆ. ‘ಜನರನ್ನು ದಾರಿತಪ್ಪಿಸುವ ಇಂತಹ ಕುಕೃತ್ಯಗಳಿಗೆ ನಮ್ಮ ಸೇವೆಯನ್ನು ಬಳಸಿಕೊಳ್ಳಲು ನಾವೆಂದೂ ಅವಕಾಶ ನೀಡುವುದಿಲ್ಲ’ ಎಂಬ ಹೇಳಿಕೆಯನ್ನು ಫೇಸ್ಬುಕ್‌ ಇತ್ತೀಚೆಗೆ ತಾನೆ ನೀಡಿದ್ದು ಈ ರೀತಿಯ ಚಟುವಟಿಕೆಗಳ ಮೂಲವನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿರುವುದಾಗಿ ಅದು ಭರವಸೆ ನೀಡಿದೆ.

ಈ ರೀತಿಯಾಗಿ ದೇಶ ದೇಶಗಳ ನಡುವೆ ಅಥವಾ ಜಾತಿ, ಧರ್ಮ, ಜನಾಂಗಗಳ ನಡುವೆ ದ್ವೇಷದ ಕಿಡಿ ಬಿತ್ತುವ, ಅನಾಮಧೇಯ ಅಕೌಂಟ್‌, ಪೇಜ್‌ ಅಥವಾ ಗ್ರೂಪ್‌ ಗಳ ಕುರಿತಾಗಿ ಬಳಕೆದಾರರಾಗಿರುವ ನಾವೂ ಸಹ ಎಚ್ಚರಿಕೆಯಿಂದರಬೇಕಾಗಿರುವುದು ನಮ್ಮ ಕರ್ತವ್ಯವೂ ಹೌದು. ಯಾಕೆಂದರೆ ಫೇಸ್ಬುಕ್‌ ನೀಡಿರುವ ಮಾಹಿತಿಯಂತೆ ಸುಮಾರು 1.4 ಮಿಲಿಯನ್‌ ಅಕೌಂಟ್‌ ಗಳು ಈ ರೀತಿಯ ಒಂದಲ್ಲಾ ಒಂದು ಪೇಜ್‌ ಗಳನ್ನು ಅನುಸರಿಸುತ್ತಿರುವುದು ಗಂಭೀರವಾದ ವಿಷಯವೇ ಸರಿ. ಇನ್ನ ಇನ್‌ ಸ್ಟ್ರಾಗ್ರಾಂನಲ್ಲೂ 38,000 ಅಕೌಂಟ್‌ ಗಳು ಈ ರೀತಿಯ ಬೇನಾಮಿ ಪೇಜ್‌ ಗಳನ್ನು ಫಾಲೋ ಮಾಡುತ್ತಿವೆ. ಇನ್ನೊಂದು ಆಘಾತಕಾರಿ ವಿಷಯವೆಂದರೆ ಸುಮಾರು 15 ಸಾವಿರ ಡಾಲರ್‌ ಗಳನ್ನು ಈ ಅನಧಿಕೃತ ಪೇಜ್‌ ಗಳು ಜಾಹೀರಾತಿಗಾಗಿ ವ್ಯಯ ಮಾಡಿವೆ ಮತ್ತು ಇವುಗಳಲ್ಲಿ ಬಹುಪಾಲು ಮೊತ್ತವನ್ನು ಭಾರತೀಯ ಅಥವಾ ಪಾಕಿಸ್ಥಾನಿ ಕರೆನ್ಸಿ ರೂಪದಲ್ಲಿ ಪಾವತಿಸಲಾಗಿದೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next