Advertisement

ಫೇಸ್‌ ಬುಕ್‌ ನಲ್ಲಿ ಪತ್ನಿಗೆ ಹ್ಯಾಪಿ ಬರ್ತ್‌ಡೇ ಅಂದ ಯೋಧ!

06:25 AM Oct 09, 2018 | Karthik A |

ಸುಳ್ಯ: ‘ಬೇಸರಿಸಬೇಡ, ಇಲ್ಲಿ ನೆಟ್‌ವರ್ಕ್‌ ಇಲ್ಲ. 1,300 ಕಿ.ಮೀ. ದೂರ ಇದ್ದೇನೆ. 10 ದಿನ ಆಯಿತು ನೆಟ್‌ವರ್ಕ್‌ ಸಿಗುವುದೇ ದುಸ್ತರ ಎನಿಸಿದೆ. ಹಾಗಾಗಿ ನಿನ್ನ ಹುಟ್ಟುಹಬ್ಬದ ಮೊದಲೇ ಮೆಸೇಜ್‌ ಮಾಡಿರುವೆ. ಅಮ್ಮನಿಗೆ ತಿಳಿಸು, ರಜೆ ಸಿಕ್ಕರೆ ದೀಪಾವಳಿಗೆ ಬರುವೆ, ವಿಶ್‌ ಯು ಹ್ಯಾಪಿ ಬರ್ತ್‌ಡೆ…’ ಜಮ್ಮು ಕಾಶ್ಮೀರದ ಭಾರತ- ಪಾಕಿಸ್ಥಾನ ಗಡಿಭಾಗದಲ್ಲಿ ದೇಶ ಕಾಯುತ್ತಿರುವ ಯೋಧನೊಬ್ಬ ತನ್ನ ಪತ್ನಿಗೆ ಬರ್ತ್‌ಡೇ ವಿಶ್‌ ಗಾಗಿ ಕಳುಹಿಸಿದ ಫೇಸ್‌ ಬುಕ್‌ ಮೆಸೇಜ್‌ ಯೋಧರ ತ್ಯಾಗದಕಥೆಯನ್ನು ಹೇಳುತ್ತದೆ.

Advertisement

ಸೈನಿಕರು ಕಾಯುವ ಗಡಿ ಪ್ರದೇಶದಲ್ಲಿ ನೆಟ್‌ ವರ್ಕ್‌ ಸಿಗುವುದು ಕಷ್ಟ. ಹಾಗಾಗಿ ಸೇನೆಯಿಂದ ಬೇರೆ ಫೋನ್‌
ಸೌಲಭ್ಯವನ್ನು ಕಲ್ಪಿಸಿರುತ್ತಾರೆ. ನಿಗದಿತ ಸಮಯದಲ್ಲಿ ಒಬ್ಬರ ಹಿಂದೆ ಮತ್ತೂಬ್ಬರು ಕಾಯಬೇಕಾದ ಪರಿಸ್ಥಿತಿ ಇದ್ದದ್ದೇ. ಆದರೂ ತಮ್ಮ ವೈಯಕ್ತಿಕ ಫೋನ್‌ ನಲ್ಲಿ ಕುಟುಂಬದವರಿಗೆ ಮಾತ ನಾಡಲು ಅವಕಾಶವಿದೆ. ಆದರೆ ಇದಕ್ಕೆ ನೆಟ್‌ ವರ್ಕ್‌ ಸಹಕರಿಸಬೇಕಷ್ಟೇ!

ಪಂಜ ಸಮೀಪದ ಕೂತ್ಕುಂಜ ಗ್ರಾಮ ಕಕ್ಯಾನ ನಿವಾಸಿ ಯೋಧ ಸುದರ್ಶನ ಗೌಡ ತನ್ನ ಪತ್ನಿ ಲಾವಣ್ಯ ಅವರ ಹುಟ್ಟುಹಬ್ಬಕ್ಕೆ ಕಳುಹಿಸಿದ ಸಂದೇಶ ಈಗ ವೈರಲ್‌ ಆಗಿದೆ. ಪತಿಯ ಸಂದೇಶಕ್ಕೆ ಉತ್ತರಿಸಿದ ಲಾವಣ್ಯಾ ಸಹ, ‘ಒಂದು ತಿಂಗಳು ಆಯಿತು ನೀವು ಮಾತನಾಡಿ. ತುಂಬಾ ಭಯ ಆಗಿತ್ತು. ಈಗ ಯಾವ ಪ್ರದೇಶದಲ್ಲಿದ್ದೀರಿ?’ ಎಂದು ತಮ್ಮ ಪತಿಯ ಯೋಗಕ್ಷೇಮ ವನ್ನು ವಿಚಾರಿಸಿದ್ದರು.

17 ವರ್ಷಗಳಿಂದ ದೇಶ ಸೇವೆ


ಉಜಿರೆಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಸೈನ್ಯಕ್ಕೆ ಆಯ್ಕೆಗೊಂಡ ಸುದರ್ಶನ್‌, 17 ವರ್ಷಗಳಿಂದ ದೇಶವನ್ನು ಕಾಯುತ್ತಿದ್ದಾರೆ. ಒಂದೂವರೆ ತಿಂಗಳಿನಿಂದ ಗಡಿಭಾಗದಲ್ಲಿ ಸಾವಿರಾರು ಅಡಿ ಎತ್ತರದ ಪ್ರದೇಶಕ್ಕೆ ನಿಯೋಜಿತರಾಗಿದ್ದಾರೆ. ಲಾವಣ್ಯಾ ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್‌ ಆಗಿದ್ದಾರೆ. ದಂಪತಿಗೆ ಒಂದು ವರ್ಷ ಎಂಟು ತಿಂಗಳ ಪ್ರಾಯದ ಪುತ್ರನಿದ್ದಾನೆ. ಸುದರ್ಶನ್‌ ಅವರ ತಾಯಿ ಹಾಗೂ ಸೋದರ ಕಕ್ಯಾನದಲ್ಲಿದ್ದಾರೆ.

ಒಂದು ನಿಮಿಷ ಮಾತನಾಡಿದ್ರು…!
ಒಂದೂವರೆ ತಿಂಗಳಿನಿಂದ ದುರ್ಗಮ ಪ್ರದೇಶದಲ್ಲಿದ್ದಾರೆ. ಅಲ್ಲಿ ವಿಪರೀತ ಹಿಮ. ನಾನು ಭಯಪಡುವೆ ಎಂದು ಗಡಿಯಲ್ಲಿನ ಸ್ಥಿತಿಯನ್ನು ಹೇಳಿಕೊಂಡಿರಲಿಲ್ಲ ಅವರು. ಒಂದೂವರೆ ತಿಂಗಳಿನಿಂದ ಕರೆಗೂ ಸಿಕ್ಕಿರಲಿಲ್ಲ. ಅವರ ಜತೆಗೆ ಇರುವವರ ದೂರವಾಣಿಗೆ ಕರೆ ಮಾಡಿದ್ದರೂ ಸಂಪರ್ಕ ಸಿಕ್ಕಿರಲಿಲ್ಲ. ಹಾಗಾಗಿ ಭಯವಾಗಿತ್ತು. ರವಿವಾರ ಕರ್ತವ್ಯದ ಸ್ಥಳದಿಂದ 8 ಕಿ.ಮೀ. ಕೆಳಗೆ ಬಂದು ಫೋನ್‌ ಮಾಡಿದ್ದರು. ಒಂದು ನಿಮಿಷ ಮಾತನಾಡಿದ್ದೇ ಅಷ್ಟೇ. ಅವರೊಂದಿಗಿರುವ ಸುಮಾರು 900ಕ್ಕೂ ಅಧಿಕ ಸೈನಿಕರೂ ಕರೆ ಮಾಡಲು ಕಾಯುತ್ತಿರುತ್ತಾರಂತೆ’ ಎನ್ನುತ್ತಾರೆ ಲಾವಣ್ಯಾ.

Advertisement

ಸುದರ್ಶನ್‌ ಅವರು 14ನೇ ಎಂಜಿನಿಯರ್‌ ವಿಭಾಗದಲ್ಲಿ ಕರ್ತವ್ಯದಲ್ಲಿದ್ದರು. ನಾಲ್ಕು ವರ್ಷದ ಹಿಂದೆಯಷ್ಟೇ ಮದುವೆಯಾಗಿದೆ. ವರ್ಷದಲ್ಲಿ 3 ತಿಂಗಳು ರಜೆಯ ಅವಕಾಶವಿದ್ದರೂ ಗಡಿ ಭಾಗದಲ್ಲಿನ ಪರಿಸ್ಥಿತಿ ಎಲ್ಲವನ್ನೂ ನಿರ್ಧರಿಸುತ್ತದೆ. ದೀಪಾವಳಿಗೆ ಬರುವುದಾಗಿ ಹೇಳಿದ್ದರೂ ರಜೆ ಸಿಕ್ಕ ಮೇಲೆಯೇ ಖಚಿತ ಎಂಬುದು ಲಾವಣ್ಯಾರ ಮಾತು.

ಅ. 6ರ ಹುಟ್ಟುಹಬ್ಬಕ್ಕೆ ಸೆ. 25ರಂದು ಸಂದೇಶ…!


ಅ.6ರಂದು ಲಾವಣ್ಯಾ ಅವರ ಹುಟ್ಟುಹಬ್ಬವಿತ್ತು. ಸಂಭ್ರಮ ಹಂಚಿಕೊಳ್ಳಲು ಗಡಿಭಾಗದಲ್ಲಿರುವ ಪತಿಗೆ ಸಂಪರ್ಕ ಸಿಗುತ್ತದೆ ಎಂಬ ನಂಬಿಕೆ ಇರಲಿಲ್ಲ. ಹಾಗಾಗಿ ಸೆ. 25ರಂದೇ ಇಂಟರ್‌ನೆಟ್‌ ನೆಟ್‌ ವರ್ಕ್‌ ಸಿಕ್ಕಾಗ ತಮ್ಮ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಮೆಸೇಜ್‌ ಹಾಕಿದ್ದರು ಸುದರ್ಶನ್‌. ವಿಚಿತ್ರವೆಂದರೆ, ಅದು ಅಪ್‌ಲೋಡ್‌ ಆಗಿದ್ದು (ಫೇಸ್‌ ಬುಕ್‌ ನ ಪುಟದಲ್ಲಿ ಪ್ರಕಟವಾದದ್ದು) ಅ. 5ರಂದು ಸಂಜೆ. ಹುಟ್ಟುಹಬ್ಬದ ಒಂದು ದಿನ ಮುಂಚೆ ತಮ್ಮ ಪತಿಯ ಶುಭ ಹಾರೈಕೆ ಲಾವಣ್ಯಾರನ್ನು ತಲುಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next