Advertisement

ಧಗೆಯನ್ನು ಮರೆಯಲು ಪಾನೀಯಗಳು

09:52 AM May 13, 2019 | mahesh |

ದಿನೇ ದಿನೇ ಸೂರ್ಯನ ಕಿರಣದ ಪ್ರಖರತೆ ಹೆಚ್ಚಾಗುತ್ತಿದೆ. ಬಿಸಿಲಿನ ಝಳಕ್ಕೆ ದೇಹವು ದಾಹದಿಂದ ತಣ್ಣಗಿನ ಪಾನೀಯವನ್ನು ಅರಸುತ್ತಿದೆ. ಇಂತಹ ಸಂದರ್ಭದಲ್ಲಿ ದಣಿವಾರಿಸಲು ಸಹಾಯಕವಾಗುವ ಸಿಹಿ, ಹುಳಿ, ಖಾರ ಮಿಶ್ರಿತ ರುಚಿ ಹೊಂದಿರುವ ಶರೀರವನ್ನು ತಂಪಾಗಿಸುವ ಆರೋಗ್ಯಕರ ಪಾನೀಯಗಳು ನಿಮಗಾಗಿ…

Advertisement

ಮಜ್ಜಿಗೆ ಜ್ಯೂಸ್‌
ಬೇಕಾಗುವ ಸಾಮಗ್ರಿ: ದಪ್ಪಮಜ್ಜಿಗೆ- ಒಂದು ಕಪ್‌, ನೀರು- ಮೂರು ಕಪ್‌, ಹಸಿಮೆಣಸಿನ ಕಾಯಿ- ಮೂರು, ಲಿಂಬೆರಸ- ಮೂರು ಚಮಚ, ಶುಂಠಿ-ಸಣ್ಣ ತುಂಡು, ಕೊತ್ತಂಬರಿ ಸೊಪ್ಪು-ಮೂರು ಗರಿ, ಒಗ್ಗರಣೆಗೆ- ಸಾಸಿವೆ, ತುಪ್ಪ-ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ದಪ್ಪಮಜ್ಜಿಗೆಗೆ ನೀರು ಸೇರಿಸಿಕೊಳ್ಳಿ. ಬಾಣಲೆಗೆ ತುಪ್ಪಹಾಕಿ ಕಾದೊಡನೆ ಸಾಸಿವೆ ಹಾಕಿ, ಸಿಡಿದ ನಂತರ ಸಣ್ಣಗೆ ಹೆಚ್ಚಿಟ್ಟ ಹಸಿಶುಂಠಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು$ಹಾಕಿ ಚೆನ್ನಾಗಿ ಮಿಶ್ರ ಮಾಡಿ ಮಜ್ಜಿಗೆಗೆ ಸೇರಿಸಿ, ಉಪ್ಪು ಹಾಕಿ ಕದಡಿಕೊಂಡು ಲಿಂಬೆರಸ ಸೇರಿಸಿ ಸವಿಯಿರಿ. (ಬೇಕಿದ್ದರೆ ಐಸ್‌ಕ್ಯೂಬ್‌ ಸೇರಿಸಿಕೊಳ್ಳಿ.)ತಂಪಾದ ಮಜ್ಜಿಗೆ ಜ್ಯೂಸ್‌ ರೆಡಿ.

ಇಂಗಿನ ಮಜ್ಜಿಗೆ
ಬೇಕಾಗುವ ಸಾಮಗ್ರಿ: ದಪ್ಪ ಮಜ್ಜಿಗೆ- ಒಂದು ಕಪ್‌, ಇಂಗು- ಕಡ್ಲೆ ಕಾಳಿನಷ್ಟು, ಉಪ್ಪು-ಅರ್ಧ ಚಮಚ.

ತಯಾರಿಸುವ ವಿಧಾನ: ಮಜ್ಜಿಗೆಗೆ ಇಂಗು, ಉಪ್ಪು$ಹಾಕಿ ಚೆನ್ನಾಗಿ ಕದಡಿಕೊಂಡು ಕುಡಿಯಿರಿ. ಇದು ವಾಯುದೋಷ, ಹೊಟ್ಟೆನೋವಿಗೆ ದಿವ್ಯ ಔಷಧ ಹಾಗೂ ದೇಹವನ್ನು ತಂಪಾಗಿಸಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

Advertisement

ಗಂಜಿ (ಅನ್ನದ ತಿಳಿ) ಜ್ಯೂಸ್‌
ಬೇಕಾಗುವ ಸಾಮಗ್ರಿ: ಗಂಜಿ ತಿಳಿ- ಒಂದು ಕಪ್‌, ತುಪ್ಪ- ಒಂದು ಚಮಚ, ಉಪ್ಪು-ಕಾಲು ಚಮಚ.

ತಯಾರಿಸುವ ವಿಧಾನ: ಕುಚ್ಚಲಕ್ಕಿಯನ್ನು ಬೇಯಿಸಿ ಬಸಿದ ನೀರನ್ನು ತೆಗೆದುಕೊಂಡು ಬಿಸಿ ಇರುವಾಗಲೇ ತುಪ್ಪ, ಉಪ್ಪು ಹಾಕಿ ಚೆನ್ನಾಗಿ ಕದಡಿಕೊಂಡು ಆರಲು ಬಿಡಿ. ದಣಿವಾರಿಸಲು ಐಸ್‌ಕ್ಯೂಬ್‌ ಹಾಕಿ ಸವಿಯಿರಿ. ವಿಶೇಷ ರುಚಿಯ ಆರೋಗ್ಯಕರ ಜ್ಯೂಸ್‌ ಕುಡಿದು ನೋಡಿ.

ಕಾಳುಮೆಣಸು ಪಾನಕ

ಬೇಕಾಗುವ ಸಾಮಗ್ರಿ: ಕುದಿಸಿ ಆರಿಸಿದ ನೀರು ಅಥವಾ ಫಿಲ್ಟರ್‌ ನೀರು- ಒಂದು ಕಪ್‌, ಬೆಲ್ಲದ ಹುಡಿ- ಮೂರು ಚಮಚ, ಕಾಳುಮೆಣಸಿನ ಹುಡಿ- ಎರಡು ಚಮಚ, ಏಲಕ್ಕಿ- ಎರಡು, ಚಿಟಿಕೆ ಉಪ್ಪು.

ತಯಾರಿಸುವ ವಿಧಾನ: ಏಲಕ್ಕಿ, ಶುಂಠಿ ಜಜ್ಜಿಟ್ಟುಕೊಳ್ಳಿ. ಅರ್ಧಕಪ್‌ ನೀರಿಗೆ ಬೆಲ್ಲದ ಹುಡಿ, ಜಜ್ಜಿಟ್ಟ ಏಲಕ್ಕಿ, ಶುಂಠಿ ಕಾಳುಮೆಣಸಿನ ಹುಡಿ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಉಳಿದ ಅರ್ಧ ಕಪ್‌ ನೀರು ಸೇರಿಸಿ ಹದಗೊಳಿಸಿ ಸೋಸಿಕೊಳ್ಳಿ. ಸಿಹಿ-ಖಾರ ಮಿಶ್ರಿತ ದೇಹಕ್ಕೆ ತಂಪಾದ ಪಾನಕ ರೆಡಿ.

ಎಳನೀರು ಜ್ಯೂಸ್‌
ಬೇಕಾಗುವ ಸಾಮಗ್ರಿ: ಎಳನೀರು- ಎರಡು ಕಪ್‌, ಸಕ್ಕರೆ- ಎರಡು ಚಮಚ, ಏಲಕ್ಕಿ- ಎರಡು, ಲಿಂಬೆ ರಸ- ಒಂದು ಚಮಚ.

ತಯಾರಿಸುವ ವಿಧಾನ: ಎಳೆ ತೆಂಗಿನಕಾಯಿಯ ನೀರು ಹಾಗೂ ಒಳಗಿನ ಎಳೆ ತಿರುಳನ್ನು ಪಾತ್ರೆಗೆ ಹಾಕಿ ಸಕ್ಕರೆ, ಏಲಕ್ಕಿ ಹುಡಿ, ಲಿಂಬೆರಸ ಸೇರಿಸಿ ಚೆನ್ನಾಗಿ ಕದಡಿಕೊಂಡು ಅರ್ಧ ಗಂಟೆ ಫ್ರಿಜ್‌ನಲ್ಲಿ ಇಟ್ಟು ಉಪಯೋಗಿಸಿ.
ಪಪ್ಪಾಯ ಮಿಲ್ಕ್ ಶೇಕ್‌

ಬೇಕಾಗುವ ಸಾಮಗ್ರಿ: ಪಪ್ಪಾಯ ಹಣ್ಣಿನ ಹೋಳು- ಎರಡು ಕಪ್‌, ಹಾಲು- ಒಂದು ಕಪ್‌, ಸಕ್ಕರೆ- ಐದು ಚಮಚ, ಜೇನುತುಪ್ಪ-ಒಂದು ಚಮಚ, ಗೋಡಂಬಿ- ನಾಲ್ಕು.
ತಯಾರಿಸುವ ವಿಧಾನ: ಪಪ್ಪಾಯ ಹಣ್ಣನ್ನು ಸಿಪ್ಪೆ, ಬೀಜ ತೆಗೆದು ಸಣ್ಣಗೆ ತುಂಡು ಮಾಡಿ ಸಕ್ಕರೆ ಅರ್ಧಕಪ್‌ (ಕುದಿಸಿ ತಣ್ಣಗಾಗಿಸಿದ)ಹಾಲು ಸೇರಿಸಿ ಮಿಕ್ಸಿಯಲ್ಲಿ ನಯವಾಗಿ ರುಬ್ಬಿಕೊಳ್ಳಿ. ಉಳಿದ ಅರ್ಧ ಕಪ್‌ ಹಾಲನ್ನು ಸೇರಿಸಿ, ಜೇನುತುಪ್ಪ ಹಾಕಿ ಕದಡಿಕೊಂಡು ಸರ್ವಿಂಗ್‌ ಬೌಲ್‌ಗೆ ಹಾಕಿ ಗೋಡಂಬಿ, ಐಸ್‌ಕ್ಯೂಬ್‌ ಹಾಕಿ ಅಲಂಕರಿಸಿ ಸವಿಯಿರಿ.

ವಿಜಯಲಕ್ಷ್ಮೀ ಕೆ.ಎನ್‌.

Advertisement

Udayavani is now on Telegram. Click here to join our channel and stay updated with the latest news.

Next