Advertisement
ನೀವು ಇತ್ತೀಚೆಗೆ ‘ಆಂತರಿಕ ಜಾಗತೀಕರಣ’ ಎಂಬ ಒಂದು ಐಡಿಯಾದ ಬಗ್ಗೆ ಮಾತನಾಡಿದ್ದೀರಿ. ಈ ವಿಷಯದಲ್ಲಿ ಹೆಜ್ಜೆ ಇಡಲು ಭಾರತಕ್ಕೆ ಇದು ಸರಿಯಾದ ಸಮಯ ಅನ್ನಿಸುತ್ತಾ?– ಹೌದು, ಯಾವುದನ್ನು ನಾವು ಆಂತರಿಕ ಜಾಗತೀಕರಣ ಅನ್ನುತ್ತೇವೋ ಅದರ ಅಗತ್ಯ ಈಗ ಇದೆ ಎಂದು ನನಗೆ ಅನ್ನಿಸುತ್ತದೆ. ಬಾಹ್ಯ ಜಾಗತೀಕರಣದ ಓಟ 20 ವರ್ಷಗಳವರೆಗಷ್ಟೇ ಜೋರಾಗಿತ್ತು. 1991ರ ವಿಚಾರವನ್ನೇ ನೋಡಿ, ಅದು ಭಾರತದ ಪಾಲಿಗೆ ಬೃಹತ್ ಆರ್ಥಿಕ ಸುಧಾರಣೆಗಳನ್ನಷ್ಟೇ ತಂದ ವರ್ಷವಾಗಿರಲಿಲ್ಲ, ಬದಲಾಗಿ, ಆ ಸಮಯದಲ್ಲಿ ಬರ್ಲಿನ್ ಗೋಡೆ ಕುಸಿದು, ಜಾಗತೀಕರಣದ ಪರ್ವಕ್ಕೆ ಮುನ್ನುಡಿ ಬರೆಯಿತು. ಅಂತರ್ಜಾಲದ ವಿಕಸನದಿಂದ ಇದಕ್ಕೆ ಮತ್ತಷ್ಟು ಬಲ ದೊರಕಿತು.
– ಹೌದು, ಆ ಸಮಯದಲ್ಲಿ ಏನಾಗಿತ್ತೆಂದರೆ ಬಾಸ್ಟನ್‌ನಿಂದ ಬೆಂಗಳೂರಿನವರೆಗಿನ ನಿಲುಕು ಸುಲಭವಿತ್ತು. ಆದರೆ ಬೆಂಗಳೂರಿನಿಂದ ಬಿಡದಿ ನಡುವೆ ಅಷ್ಟು ಸುಲಭ ನಿಲುಕು ಇರಲಿಲ್ಲ.
Related Articles
– ಇವತ್ತು ಬಿಡದಿಯಲ್ಲಿ ಟೋಯೋಟಾ ಫ್ಯಾಕ್ಟರಿ ಮತ್ತು ಗಾಲ್ಫ್ ಕೋರ್ಸ್ ಇದೆ. ಹಾಗೆಂದು ಇದು ಸರಿಯಾದ ಉದಾಹರಣೆ ಹೌದೋ ಅಲ್ಲವೋ ನನಗೆ ತಿಳಿಯದು. ಆದರೆ, ದೇಶಕ್ಕೆ ಈ ರೀತಿಯ ಬದಲಾವಣೆ ಅನಿವಾರ್ಯ ಎಂದು ನನಗನ್ನಿಸುತ್ತದೆ. ಮುಂದೆ ಉತ್ತರದಿಂದ ದಕ್ಷಿಣ ಭಾಗಕ್ಕೆ, ಪೂರ್ವದಿಂದ ಪಶ್ಚಿಮ ಭಾಗಕ್ಕೆ ಜನರ ವಲಸೆ ಪ್ರಮಾಣ ಹೆಚ್ಚಲಿದೆ. ಹೀಗಾಗಿ, ಆರ್ಥಿಕ ಬೆಳವಣಿಗೆಯ ಪ್ರಯೋಜನವು ಎಲ್ಲರಿಗೂ ತಲುಪುವಂತಾಗಬೇಕು. ಉದಾಹರಣೆಗೆ, ನನಗನ್ನಿಸುವಂತೆ, ಕೇಂದ್ರ ಸರಕಾರ ತೆಗೆದುಕೊಂಡಿರುವ ಕೆಲವು ನಿರ್ಧಾರಗಳು ಈ ದಿಕ್ಕಿನಲ್ಲಿವೆ. ಎಪಿಎಂಸಿಯ ಮೇಲೆ ಅದು ತೆಗೆದುಕೊಂಡ ನಿರ್ಣಯಗಳು, ಕೃಷಿಗೆ ಒಂದು ರಾಷ್ಟ್ರೀಯ ಮಾರುಕಟ್ಟೆ ನಿರ್ಮಾಣ ಮಾಡುವ ಪ್ರಯತ್ನವಾಗಿದೆ. ಇನ್ನು ಜಿಎಸ್ಟಿ ಎನ್ನುವುದು ಸರಕು ಮತ್ತು ಸೇವೆಗಳಿಗೆ ರಾಷ್ಟ್ರೀಯ ಮಾರುಕಟ್ಟೆ ನಿರ್ಮಿಸಿದೆ.
Advertisement
ಕೋವಿಡ್-19ರ ಈ ಸಮಯದಲ್ಲಿ ತಂತ್ರಜ್ಞಾನದ ಬಳಕೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ತಂತ್ರಜ್ಞಾನದ ಸದುಪಯೋಗವಾಗಬೇಕು ಎನ್ನುವ ಮಾತಿಗೆ, ಇದು ಪೂರಕವಾಗಿದೆ ಎಂದು ಅನಿಸುತ್ತದೆಯೇ?– ಖಂಡಿತ ಹೌದು. ಈ ಸಾಂಕ್ರಾಮಿಕದ ಸಮಯದಲ್ಲಿ ತಂತ್ರ ಜ್ಞಾನದಿಂದ ಪ್ರಯೋಜನಗಳಾಗುತ್ತಿವೆ. ಅಫ್ ಕೋರ್ಸ್, ಆರೋಗ್ಯ ಸೇತು ಅಪ್ಲಿಕೇಷನ್ ಅನ್ನೇ ನೋಡಿ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಲು (ಕಾಂಟ್ಯಾಕ್ಟ್ ಟ್ರೇಸಿಂಗ್) ಇದನ್ನು ಬಳಸಲಾಗುತ್ತಿದೆ. ಇದಷ್ಟೇ ಅಲ್ಲದೇ, ಇಂದು ಸುಪ್ರೀಂ ಕೋರ್ಟ್ ವೀಡಿಯೋ ಕಾನ್ಫರೆನ್ಸ್‌ಗಳ ಮೂಲಕ ವಿಚಾರಣೆ ನಡೆಸುತ್ತಿದೆ. ಇಂಥ ಬದಲಾವಣೆಯನ್ನು ಸಾಂಕ್ರಾಮಿಕಕ್ಕೂ ಮುನ್ನ ಊಹಿಸಲು ಸಾಧ್ಯವಿತ್ತೇ? ಸತ್ಯವೇನೆಂದರೆ, ಗ್ರೌಂಡ್ ಲೆವೆಲ್ ಅಲ್ಲಿ ಬಹಳಷ್ಟು ಅಂಶಗಳು ಕೆಲಸ ಮಾಡುತ್ತವೆ. ನಾನು ಡಿಜಿಟಲ್ ಮತ್ತು ‘ಆಂತರಿಕ ಜಾಗತೀಕರಣದ’ ಪರಿಕಲ್ಪನೆ (ಇಂಟರ್ನಲ್ ಗ್ಲೋಬಲೈಸೇಷನ್) ಎರಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ಮಾತಾಡುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮಲ್ಲಿ ಆಂತರಿಕ ವಲಸೆ ಪ್ರಮಾಣವಿದೆಯಲ್ಲ ಅದು ಹೆಚ್ಚಲಿದೆ. ಏಕೆಂದರೆ, ದಕ್ಷಿಣ ಭಾರತದಲ್ಲಿನ ಜನನದರಕ್ಕೂ ಉತ್ತರ ಭಾರತದಲ್ಲಿನ ಪ್ರಮಾಣಕ್ಕೂ ವ್ಯತ್ಯಾಸವಿದೆ. ಉತ್ತರ ಭಾರತದ ಕೆಲವು ರಾಜ್ಯಗಳು ಹಾಗೂ ಈಶಾನ್ಯ ರಾಜ್ಯವಾದಂಥ ಅಸ್ಸಾಂನಲ್ಲಿ ಟೋಟಲ್ ಫರ್ಟಿಲಿಟಿ ರೇಟ್ ಅಧಿಕವಿದೆ. ತತ್ಪರಿಣಾಮವಾಗಿ. ಮುಂದಿನ ದಶಕದಲ್ಲಿ ಇಂಥ ರಾಜ್ಯಗಳಲ್ಲಿನ ಜನಸಂಖ್ಯೆ ಅಧಿಕವಾಗುತ್ತದೆ. ಅಲ್ಲಿನ ಯುವ ಜನತೆ ವಲಸೆ ಬರಲಿದ್ದಾರೆ. ಈ ರಾಜ್ಯಗಳಿಂದ ಪಶ್ಚಿಮದ ರಾಜ್ಯಗಳಿಗೆ ಅಥವಾ ದಕ್ಷಿಣ ರಾಜ್ಯಗಳಿಗೆ ಆಂತರಿಕ ವಲಸೆ ಇರಲಿದೆ. ಜನರು ಈ ರೀತಿ ಸಂಚರಿಸಲಿದ್ದಾರೆ ಎಂದರೆ, ಅವರು ಎಲ್ಲಿ ದ್ದಾರೋ ಅಲ್ಲಿಯೇ ಪ್ರತಿಯೊಂದು ಸೇವೆಗಳೂ ಲಭ್ಯವಾಗುವಂತೆ ಮಾಡಬೇಕಾಗುತ್ತದೆ. ಇಂದು ಆಧಾರ್ ನಂಬರ್ ಎನ್ನುವುದು ರಾಷ್ಟ್ರೀಯ ಸ್ತರದಲ್ಲಿ ಬಳಕೆಯಾಗುವಂಥದ್ದು. ಬ್ಯಾಂಕ್ ಅಕೌಂಟ್ ಸಹ ರಾಷ್ಟ್ರೀಯವಾಗಿ ಬಳಕೆಯಾಗುವಂಥದ್ದು. ನನ್ನ ಮೊಬೈಲ್ ಸಂಖ್ಯೆ ಕೂಡ ಹಾಗೆಯೇ ಅಲ್ಲವೇ…? ಇದು ಅನ್ಯ ಸಂಗತಿಗಳಿಗೂ ಅನ್ವಯವಾಗಬೇಕು. ಒಂದು ವೇಳೆ ವ್ಯಕ್ತಿಯೊಬ್ಬ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಅರ್ಹವಾಗಿದ್ದಾನೆ ಎಂದರೆ, ಆತ ಅದರಡಿಯಲ್ಲಿ ಬರುವ ಸೇವೆಗಳನ್ನು ದೇಶದ ಯಾವುದೇ ಭಾಗದಲ್ಲೂ ಪಡೆಯುವಂತಾಗಬೇಕು. ನನಗೆ ನನ್ನ ಮಾತೃಭಾಷೆಯಲ್ಲಿ ಶಿಕ್ಷಣ ಬೇಕು ಎಂದರೆ, ದೇಶದ ಯಾವುದೇ ಭಾಗದಲ್ಲೂ ಅದು ನನಗೆ ದೊರೆಯುವಂತಾಗಬೇಕು. ಜನರಿಗೆ ಎಲ್ಲೆಡೆಯೂ ಸೌಲಭ್ಯಗಳು ಸಿಗಬೇಕೆಂದರೆ ನಾವು ನಿಜಕ್ಕೂ ಇಂಥ ಕೆಲವು ಸಂಗತಿಗಳ ಬಗ್ಗೆ ಮರುಯೋಚಿಸಬೇಕಿದೆ. ಇವೆಲ್ಲವೂ ತಂತ್ರಜ್ಞಾನದ ಮೂಲಕವೇ ಸಾಧ್ಯವಾಗುವಂಥದ್ದು. ಇಂಥದ್ದೊಂದು ಡಿಜಿಟಲ್ ಮೂಲಸೌಕರ್ಯ ನಿರ್ಮಾಣದಲ್ಲಿ ಭಾರತ 50 ಪ್ರತಿಶತ ಮುಂದಡಿಯಿಟ್ಟಿದೆ ಎಂದು ನೀವು ಹೇಳಿದ್ದೀರಿ. ಹಾಗಿದ್ದರೆ ಇನ್ನೂ ಬಾಕಿ ಉಳಿದಿರುವ 50 ಪ್ರತಿಶತ ಕೆಲಸವೇನು?
– ಈಗ ರಾಷ್ಟ್ರೀಯ ಸ್ತರದಲ್ಲಿ ಏಕರೂಪದಲ್ಲಿ ಇರುವುದೇನೆಂದರೆ, ರಾಷ್ಟ್ರೀಯ ಐಡೆಂಟಿಟಿ, ರಾಷ್ಟ್ರೀಯ ಪಾವತಿ ವ್ಯವಸ್ಥೆ – ಬ್ಯಾಂಕಿಂಗ್ ಹಾಗೂ ಮೊಬೈಲ್ ಸೇವೆಗಳು. ಅತ್ತ ಜಿಎಸ್ಟಿಯು ಈಗಾಗಲೇ ‘ರಾಷ್ಟ್ರೀಯ’ ಸ್ತರದಲ್ಲಿ ಪರೋಕ್ಷ ತೆರಿಗೆ ಪದ್ಧತಿಗೆ ಬುನಾದಿಯನ್ನು ಒದಗಿಸಿದೆ. ಆದರೂ ಅದನ್ನು ಇನ್ನಷ್ಟು ಸರಳಗೊಳಿಸುವ ಅಗತ್ಯವಿದೆ. ಇನ್ನು ಫಾಸ್ಟ್‌ಟ್ಯಾಗ್ ಅನ್ನೇ ನೋಡಿ. ಫಾಸ್ಟ್ ಟ್ಯಾಗ್‌ನಿಂದಾಗಿ ದೆಹಲಿಯಿಂದ ಕನ್ಯಾಕುಮಾರಿಯವರೆಗೂ ಟ್ರಕ್ ಡ್ರೈವ್ ಮಾಡುವವನು ಟೋಲ್ ಕಟ್ಟಲು ನಿಲ್ಲಬೇಕಾದ ಅಗತ್ಯ ದೂರವಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಕೂಡ ಈ ರೀತಿಯಾಗಬೇಕು. ಆರೋಗ್ಯ ವ್ಯವಸ್ಥೆಯಲ್ಲೂ ಇಂಥ ದ್ದೊಂದು ಏಕಸ್ಥರೀಯ ಬದಲಾವಣೆ ಬೇಕಿದೆ. ಮುಂದಿನ ದಿನಗಳಲ್ಲಿ ವಲಸೆಯಿಂದಾಗಿ ಬಹುಭಾಷೀಯ ರಾಜ್ಯಗಳನ್ನು ನಾವು ಹೊಂದಲಿರುವುದರಿಂದಾಗಿ ಅಲ್ಲೂ ಇಂಥ ಸುಧಾರಣೆಯಾಗಬೇಕಿದೆ.. (ಕೃಪೆ-ಲೈವ್ ಮಿಂಟ್) – ನಂದನ್ ನಿಲೇಕಣಿ