Advertisement

ವಯೋಮಿತಿ 75 ಸಂಸದೀಯ ಮಂಡಳಿ ನಿರ್ಧಾರವಲ್ಲ

08:25 AM Jan 02, 2018 | Team Udayavani |

ಹೊಸದಿಲ್ಲಿ: ಅಧಿಕಾರ ಹೊಂದಲು 75 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸುವ ಕುರಿತಂತೆ ಬಿಜೆಪಿ ಸಂಸದೀಯ ಮಂಡಳಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಕರ್ನಾಟಕದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ 74 ವರ್ಷದ ಯಡಿಯೂರಪ್ಪ ಐದು ವರ್ಷ ಅಧಿಕಾರದಲ್ಲಿ ಮುಂದು ವರಿಯಲು ಯಾವುದೇ ಸಮಸ್ಯೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಮುರಳೀಧರ ರಾವ್‌ ಹೇಳಿದ್ದಾರೆ.

Advertisement

ಬಿಜೆಪಿಯು ಮುಖ್ಯಮಂತ್ರಿ, ಸಚಿವರಂತಹ ಅಧಿಕಾರ ಹೊಂದಲು 75 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಿದೆ ಎಂಬುದು ಕೇವಲ ಮಾಧ್ಯಮ ಗಳಲ್ಲಿ ಬಂದಿರುವ ಸುದ್ದಿ. ಈ ಕುರಿತಂತೆ ಪಕ್ಷದ ಸಂಸದೀಯ ಮಂಡಳಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಮುಂದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಈ ಕುರಿತು ಪಕ್ಷ ಭರವಸೆ ನೀಡುತ್ತದೆ ಎಂದು ಹಿಂದುಸ್ಥಾನ್‌ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರಕಾರದ ಬಗ್ಗೆಯೂ ಕಿಡಿಕಾರಿರುವ ರಾವ್‌, ಸಿದ್ದರಾಮಯ್ಯ ಸರಕಾರ ರಾಷ್ಟ್ರವಿರೋಧಿ ಶಕ್ತಿಗಳೊಂದಿಗೆ ಸೌಹಾರ್ದಯುತವಾಗಿ ವರ್ತಿಸುತ್ತಿದೆ. ಮುಸ್ಲಿಂ ಆಡಳಿತಗಾರ ಟಿಪ್ಪುವನ್ನು ಬೆಂಬಲಿಸಿ ಸರ್ದಾರ್‌ ಪಟೇಲ್‌ರಂಥ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಪರಿಸ್ಥಿತಿ ಹೇಗಿದೆ?
ಕರ್ನಾಟಕದಲ್ಲಿ ಬಿಜೆಪಿ ಅನುಕೂಲಕರ ವಾತಾವರಣ ಹೊಂದಿದೆ. ಬಿಜೆಪಿ ಆಡಳಿತ ಹೊಂದಿರುವ ರಾಜ್ಯಗಳನ್ನು ನೋಡಿದಾಗ ನಮ್ಮ ನಾಯಕತ್ವ ಮತ್ತು ಆಡಳಿತದ ಬಗ್ಗೆ ಜನಮೆಚ್ಚುಗೆ ವ್ಯಕ್ತವಾಗುತ್ತಿರುವುದು ಕಂಡುಬರುತ್ತದೆ. ಅಲ್ಲದೆ, ಕಾಂಗ್ರೆಸ್‌ ಆಡಳಿತ ಮತ್ತು ನಾಯಕರ ವೈಫ‌ಲ್ಯತೆ ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಉಂಟುಮಾಡಿದೆ.

74 ವರ್ಷದ ಯಡಿಯೂರಪ್ಪ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ?
ಯಡಿಯೂರಪ್ಪ ಅವರಿಗೆ 74 ವರ್ಷವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಅನುಮಾನ ಏಕೆ? ಅಧಿಕಾರ ಹೊಂದಲು ಬಿಜೆಪಿಯಲ್ಲಿ 75 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ ಎಂಬುದು ಮಾಧ್ಯಮಗಳ ವರದಿಯೇ ಹೊರತು ಸಂಸದೀಯ ಮಂಡಳಿ ನಿರ್ಧಾರ ಕೈಗೊಂಡಿಲ್ಲ. ಅವರು ಐದು ವರ್ಷ ಅಧಿಕಾರದಲ್ಲಿ ಮುಂದುವರಿಯುತ್ತಾರೆ.

ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಬಿಎಸ್‌ವೈ ಮತ್ತು ಪಕ್ಷದ ಇತರ ನಾಯಕರ ಮಧ್ಯೆ ಇರುವ ಗೊಂದಲಗಳು ಪಕ್ಷಕ್ಕೆ 
ಆತಂಕ ಉಂಟುಮಾಡಿದೆಯೇ?
ಚುನಾವಣೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಪಕ್ಷವು ತನ್ನದೇ ಆದ ವಿಧಾನಗಳನ್ನು ಅನುಸರಿಸುತ್ತದೆ. ರಾಜ್ಯದಲ್ಲಿ ಯಾವುದೇ ವ್ಯಕ್ತಿ ಅಥವಾ ಮುಖ್ಯಮಂತ್ರಿ ಅಭ್ಯರ್ಥಿ ಟಿಕೆಟ್‌ ಹಂಚಿಕೆ ಮಾಡುವುದಿಲ್ಲ. ರಾಜ್ಯ ಸಮಿತಿ ಮಾಡುವ ಶಿಫಾರಸುಗಳನ್ನು ಆಧರಿಸಿ ಕೇಂದ್ರ ಸಮಿತಿ ನಿರ್ಧಾರ ಕೈಗೊಳ್ಳುತ್ತದೆ. ಈ ಸಂದರ್ಭದಲ್ಲಿ ಸಮೀಕ್ಷೆ, ಗೆಲ್ಲುವ ಸಾಮರ್ಥ್ಯ, ಸಾಮಾಜಿಕ ಸಂಯೋಜನೆಗಳನ್ನು ಪರಿಗಣಿಸಲಾಗುತ್ತದೆ. ಯಡಿಯೂರಪ್ಪ ಅವರೇ ಈ ವಿಚಾರವನ್ನು ಅನೇಕ ಸಭೆಗಳಲ್ಲಿ ಘೋಷಿಸಿದ್ದಾರೆ. ಹೀಗಾಗಿ ಗೊಂದಲ ಉದ್ಭವವಾಗುವುದಿಲ್ಲ.

Advertisement

ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಮುಂದೆ ಕರೆದೊಯ್ಯುತ್ತಾರೆಯೇ?
ನಾವು (ಬಿಜೆಪಿ) ಸಾಕಷ್ಟು ಸಮಾಲೋಚನೆ ನಡೆಸಿ ಮತ್ತು ಯೋಚಿಸಿಯೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದೇವೆ. ಈ ನಿರ್ಧಾರವನ್ನು ಯಾರೂ ಪ್ರಶ್ನಿಸಿಲ್ಲ. ಪ್ರಸ್ತುತ ರಾಜ್ಯದಲ್ಲೇ ಅವರು ಪ್ರಮುಖ ನಾಯಕ. ಆಗಾಧ ಜನಪ್ರಿಯತೆ ಮತ್ತು ಮನ್ನಣೆ ಗಳಿಸಿರುವುದರಿಂದಲೇ ಪರಿವರ್ತನಾ ಯಾತ್ರೆ ಯಶಸ್ವಿಯಾಗಿ ನಡೆಯಲು ಕಾರಣ. ಅವರು ಒಗ್ಗಟ್ಟು ತರದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ.

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯ ಪ್ರಮುಖ ಅಜೆಂಡಾಗಳು ಏನು?
ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕಳೆದ ನಾಲ್ಕೂಮುಕ್ಕಾಲು ವರ್ಷದಲ್ಲಿ 3000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಅನಂತರದ್ದು ಕಾನೂನು ಸುವ್ಯವಸ್ಥೆ ಸಮಸ್ಯೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಂಗಳೂರಿಗೆ ಹೊಂದಿಕೊಂಡಿರುವ ಕೇರಳದಲ್ಲಿ ಕಾಂಗ್ರೆಸ್‌ನ ವೋಟ್‌ಬ್ಯಾಂಕ್‌ ರಾಜಕಾರಣದಿಂದ ಮೂಲಭೂತವಾದಿಗಳಿಗೆ ಬೆಂಬಲ ನೀಡಲಾಗುತ್ತಿದೆ. ಬಿಜೆಪಿ ಸೇರಿದಂತೆ ಹಿಂದೂ ಕಾರ್ಯಕರ್ತರ ಮೇಲೆ ದಾಳಿಗಳಾಗುತ್ತಿವೆ. ಆದರೂ ಕಾಂಗ್ರೆಸ್‌ ಸರಕಾರ ಇಂತಹ ಮೂಲಭೂತವಾದಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೊಂದೆಡೆ ನಗರ ಮೂಲ ಸೌಕರ್ಯ ಕಲ್ಪಿಸಲು ರಾಜ್ಯ ಸರಕಾರ ವಿಫ‌ಲವಾಗಿದೆ. ಜತೆಗೆ ಭ್ರಷ್ಟಾಚಾರ ಕೂಡ ಹೆಚ್ಚಿದ್ದು, ಇದು ಬಿಜೆಪಿಗೆ ಅನುಕೂಲವಾಗಲಿದೆ.

ಹಿಂದುತ್ವ ವಿಚಾರವನ್ನು ಪ್ರಸ್ತಾವಿಸಿ ಬಿಜೆಪಿ ಹಿಂದೂ ಮತಗಳನ್ನು ಕ್ರೋಡೀಕರಿಸಲು ಮುಂದಾಗಿದೆಯೇ?
ಹಿಂದುತ್ವ ಎಂಬುದು ಬಿಜೆಪಿಗೆ ರಾಜಕೀಯ ವಿಚಾರವಲ್ಲ. ಅದು ಮೊದಲಿನಿಂದಲೂ ಬಿಜೆಪಿ ಪಾಲಿಸಿಕೊಂಡು ಬಂದಿರುವ ತತ್ವ. ಕಳೆದ ನಾಲ್ಕು ತಿಂಗಳಲ್ಲಿ 20 ಹತ್ಯೆಗಳು ಕರ್ನಾಟಕದಲ್ಲಿ ನಡೆದಿವೆ. ಆದರೆ, ಸರಕಾರ ಈ ಕೊಲೆಗಳ ಹಿಂದಿರುವ ಮೂಲಭೂತವಾದಿ ಸಂಘಟನೆಗಳ ಬಗ್ಗೆ ಮೃದು ಧೋರಣೆ ಮುಂದುವರಿಸಿದೆ. ಸಾವಿರಾರು ವರ್ಷಗಳಿಂದ ಕರ್ನಾಟಕದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿರುವ ಜನ ಇದರಿಂದ ಸಹಜವಾಗಿಯೇ ಬೇಸತ್ತಿದ್ದಾರೆ. ಹೀಗಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next