Advertisement

ಕ್ರೈಸ್ತರ ಬಗ್ಗೆ ತಪ್ಪು ಗ್ರಹಿಕೆ ಹೋಗಬೇಕು

12:33 AM Jan 05, 2017 | Karthik A |

ಇದೀಗ ತಾನೇ 75 ವಸಂತಗಳನ್ನು ಪೂರೈಸಿರುವ ಬೆಂಗಳೂರು ಮಹಾಧರ್ಮಕ್ಷೇತ್ರದ ಆರ್ಚ್‌ ಬಿಷಪ್‌ ರೆವರೆಂಡ್‌ ಬರ್ನಾರ್ಡ್‌ ಮೊರಾಸ್‌ ಅವರು ಪಾದರಸ ಉರುಳಿದಂತೆ ನಡೆದಾಡುತ್ತಾರೆ ಹಾಗೂ ಅರಳು ಹುರಿದಂತೆ ಕನ್ನಡ ಮಾತನಾಡುತ್ತಾರೆ. ರಾಜಧಾನಿ ಎಂಬ ಕಾರಣಕ್ಕೋ ಅಥವಾ ಅವರ ಅನುಭವ ಹಾಗೂ ಹಿರಿತನಕ್ಕೋ ರಾಜ್ಯದ ಎಲ್ಲ ಸರ್ಕಾರಗಳೂ ಅವರನ್ನು ರಾಜ್ಯದ ಮಹಾಪ್ರಧಾನ ಕ್ರೈಸ್ತ ಪ್ರತಿನಿಧಿ ಎಂದೇ ಪರಿಗಣಿಸುತ್ತವೆ. ಹಾಗಾಗಿ, ಎಲ್ಲ ರಾಜಕಾರಣಿಗಳ ಒಡನಾಟವಿದ್ದರೂ ಎಂದೂ ರಾಜಕೀಯದಲ್ಲಿ ತೊಡಗಿಸಿಕೊಂಡವರಲ್ಲ. ಆದರೆ, ರಾಜ್ಯದ ಎಲ್ಲ ಕ್ರೈಸ್ತ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರ ಕೇಂದ್ರಕ್ಕೆ ಚುರುಕು ಮುಟ್ಟಿಸಲು ಹಿಂಜರಿಯುವವರೂ ಅಲ್ಲ. ಮಂಗಳೂರಿನ ಬಂಟ್ವಾಳದ ಕುಪ್ಪೇಪದವು ಗ್ರಾಮದಲ್ಲಿ ಹುಟ್ಟಿ ರೋಮ್‌ನಲ್ಲಿರುವ ಕ್ರೈಸ್ತಕಾಶಿ ವ್ಯಾಟಿಕನ್‌ ಸಿಟಿಯಲ್ಲೂ ಪ್ರಭಾವ ಹೊಂದಿರುವ ಶ್ರೀ ಮೊರಾಸ್‌ ಅವರು ‘ಉದಯವಾಣಿ’ಯ ಜೊತೆ ‘ನೇರಾ-ನೇರ’ ಮಾತಿಗೆ ಸಿಕ್ಕರು. 

Advertisement

ಕೆಲವು ವರ್ಷಗಳ ಹಿಂದೆ ನಡೆದಿದ್ದ ಸರಣಿ ಚರ್ಚ್‌ ದಾಳಿಗಳಿಂದ ಆತಂಕಕ್ಕೆ ಒಳಗಾಗಿದ್ದ ರಾಜ್ಯ ಕ್ರೈಸ್ತ ಸಮುದಾಯ ಈಗ ಸಾವರಿಸಿಕೊಂಡಿದೆಯೇ? ದಾಳಿಗೆ ಮತಾಂತರ ಕಾರಣವಾದದ್ದು ನಿಜವೇ? ಸಾಮಾಜಿಕ ನ್ಯಾಯ ನೀಡುತ್ತೇವೆ ಎಂಬ ನೆಲೆಯಲ್ಲಿ ಅಧಿಕಾರಕ್ಕೆ ಬಂದಿರುವ ಈಗಿನ ಕಾಂಗ್ರೆಸ್‌ ಸರ್ಕಾರದಿಂದ ಕ್ರೈಸ್ತರಿಗೆ ನ್ಯಾಯ ದೊರಕಿದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಅವರು ನೇರಾ – ನೇರ ಉತ್ತರಿಸಿದ್ದಾರೆ.

2008-09ರಲ್ಲಿ ರಾಜ್ಯದಲ್ಲಿ ನಡೆದಿದ್ದ ಚರ್ಚ್‌ ದಾಳಿಗಳಿಂದ ಕ್ರೈಸ್ತ ಸಮುದಾಯ ಆತಂಕಕ್ಕೆ ಒಳಗಾಗಿತ್ತು. ಈಗ ಪರಿಸ್ಥಿತಿ ತಿಳಿಯಾಗಿದೆ. ಇದರಿಂದ ನಿಮ್ಮ ಆತಂಕ ನಿವಾರಣೆಯಾಗಿದೆಯೇ?
ಅಂದು ರಾಜ್ಯಾದ್ಯಂತ ಕ್ರೈಸ್ತ ಸಮುದಾಯ ಬಹಳ ಆತಂಕಕ್ಕೆ ಒಳಗಾಗಿದ್ದು ನಿಜ. ಅಂದಿನ ಭಯದ ವಾತಾವರಣ ಹಲವು ವರ್ಷಗಳವರೆಗೆ ಹರಡಿತ್ತು. ನಮ್ಮ ಸಮುದಾಯದವರು ಚರ್ಚ್‌ಗಳಿಗೆ ಬರಲು ಸಹ ಅಂಜುತ್ತಿದ್ದರು. ಈಗ ಪರಿಸ್ಥಿತಿ ತಿಳಿಯಾಗಿದೆ. ಅಂತಹ ಭಯದ ವಾತಾವರಣವಿಲ್ಲ. ಇದಕ್ಕೆ ರಾಜ್ಯದ ಜನತೆಗೆ ಹಾಗೂ ಸರ್ಕಾರಗಳಿಗೆ ನಾವು ಧನ್ಯವಾದ ಹೇಳುತ್ತೇವೆ. ಆದರೆ, ಅಂದಿನ ದಾಳಿಗಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂಬುದು ಖೇದದ ಸಂಗತಿ. ಚರ್ಚ್‌ ದಾಳಿಗಳ ತನಿಖೆ ನಡೆಸಲು ಹಿಂದಿನ ಸರ್ಕಾರ ಜಸ್ಟಿಸ್‌ ಸೋಮಶೇಖರ್‌ ಆಯೋಗ ರಚಿಸಿತ್ತು. ಆ ಆಯೋಗ ಮಧ್ಯಂತರ ವರದಿ ನೋಡಿದಾಗ ತನಿಖೆಯ ಹಾದಿ ಸರಿದಾರಿಯಲ್ಲಿ ಸಾಗುತ್ತಿದೆ ಎಂಬ ಸಮಾಧಾನ ಸಿಕ್ಕಿತ್ತು. ಆದರೆ, ಆ ಆಯೋಗದ ಅಂತಿಮ ವರದಿ ಬಹುತೇಕ ಉಲ್ಟಾ ಆಗಿತ್ತು. ಇದರಿಂದ ಕ್ರೈಸ್ತ ಸಮುದಾಯ ಮತ್ತೆ ನಿರಾಸೆಗೊಳಗಾಗಿತ್ತು. ಆದ್ದರಿಂದ ಆ ವರದಿಯನ್ನು ತಿರಸ್ಕರಿಸಿ ಪೂರ್ವಾಗ್ರಹ ಇಲ್ಲದ ತನಿಖೆ ನಡೆಸುವಂತೆ ನಾವು ಈಗಿನ ಮುಖ್ಯಮಂತ್ರಿಗಳನ್ನು ಕೋರಿದೆವು. ಸರ್ಕಾರ ಆ ಮಟ್ಟಿಗೆ ನಮ್ಮ ಬೇಡಿಕೆಗೆ ಸ್ಪಂದಿಸಿದೆ. ಈಗಲು ರಾಜ್ಯದ ಕ್ರೈಸ್ತರು ಸರ್ಕಾರದ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.

ಕ್ರೈಸ್ತ ಪಾದ್ರಿಗಳು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂಬ ಕೋಪದಿಂದ ಚರ್ಚ್‌ಗಳ ಮೇಲೆ ದಾಳಿಯಾಯಿತು ಎಂಬ ವರದಿಯ ಬಗ್ಗೆ ನೀವೇನಂತೀರಿ?
ಇದು ತಪ್ಪು ಗ್ರಹಿಕೆ ಹಾಗೂ ಪೂರ್ವಾಗ್ರಹ ಪೀಡಿತ ವರದಿ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಮತಾಂತರದ ವಿಚಾರದಲ್ಲಿ ಈ ಸಮಾಜಕ್ಕೆ ನಾನು ಒಂದು ವಿಷಯವನ್ನು ಮನವರಿಕೆ ಮಾಡಿಕೊಡಲು ಬಯಸುತ್ತೇನೆ. ಮತಾಂತರ ವಿಚಾರದಲ್ಲಿ ಸಮಾಜದಲ್ಲಿ ತಪ್ಪು ಕಲ್ಪನೆಯಿದೆ. ಅದನ್ನು ನಿವಾರಿಸಲು ಬಯಸುತ್ತೇನೆ. ಕರ್ನಾಟಕದಲ್ಲಿ, ಅಲ್ಲಲ್ಲಿ, ಕೆಲ ಖಾಸಗಿ ಚರ್ಚುಗಳಿಗೆ ಸಂಬಂಧಿಸಿದ ಯಾವುದೋ ವ್ಯಕ್ತಿಗಳು ಇಂಥ ಕೆಲಸದಲ್ಲಿ ತೊಡಗಿರುವುದು ನಮ್ಮ ಗಮನಕ್ಕೂ ಬಂದಿದೆ. ಇಂಥ  ಪ್ರಕ್ರಿಯೆಯನ್ನು ನಾವು ಯಾವುದೇ ಕಾರಣಕ್ಕೂ ಸಮರ್ಥಿಸುವುದಿಲ್ಲ. ಇಷ್ಟಕ್ಕೂ ಕರ್ನಾಟಕದಲ್ಲಿ ಯಾವುದೇ ಮೇನ್‌ಲೈನ್‌ ಚರ್ಚುಗಳು ಅಥವಾ ಪ್ರಮುಖ ಪಂಗಡಗಳಿಗೆ ಸೇರಿದ ಚರ್ಚುಗಳು ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿಲ್ಲ. ಉದಾಹರಣೆಗೆ ನಮ್ಮ ಕೆಥೋಲಿಕ್‌ ಚರ್ಚುಗಳು ಇಂತಹ ಪ್ರಕ್ರಿಯೆಯಲ್ಲಿ ತೊಡಗಿದ್ದರೆ ಕೆಥೋಲಿಕರ ಸಂಖ್ಯೆ ಇಷ್ಟು ವರ್ಷಗಳಲ್ಲಿ ಎಷ್ಟೋ ಪಟ್ಟು ಹೆಚ್ಚಾಗಬೇಕಿತ್ತು. ಹಾಗೆ ಅಗಿಲ್ಲ ಅಲ್ಲವೇ? ಅದರರ್ಥ ನಾವು ಯಾವುದೇ ಬಲವಂತದ ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿಲ್ಲ ಎಂಬುದು ಅಲ್ಲವೇ? ಇಷ್ಟಕ್ಕೂ ನಮ್ಮ ಚರ್ಚುಗಳಿಗೆ ಎಲ್ಲರಿಗೂ ಸ್ವಾಗತವಿದೆ. ಇಲ್ಲಿ ಕೆಥೋಲಿಕ್‌ ಧರ್ಮ ಸ್ವೀಕರಿಸಿದರೆ ಮಾತ್ರ ಪ್ರವೇಶ ಎಂಬ ಕಟ್ಟಳೆಯೇನೂ ಇಲ್ಲ. 

ಉದಾಹರಣೆಗೆ ಬೆಂಗಳೂರಿನ ಇನ್ಫಂಟ್‌ ಜೀಸಸ್‌ ಚರ್ಚ್‌ ಹಾಗೂ ಶಿವಾಜಿನಗರದ ಚರ್ಚುಗಳಿಗೆ ಎಲ್ಲ ಧರ್ಮೀಯ ಭಕ್ತರೂ ಬರುತ್ತಾರೆ. ಇದೆಲ್ಲ ಭಕ್ತರ ನಂಬಿಕೆಯ ವಿಚಾರ. ಇಂತಹ ನಂಬಿಕೆ ಗಳಿಸಿರುವ ದೇವಾಲಯಗಳು ಎಲ್ಲ ಧರ್ಮಗಳಲ್ಲೂ ಇವೆ ತಾನೇ? ಇಷ್ಟಕ್ಕೂ ನಮ್ಮ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಲು ಬಯಸಿದರೆ ಮೇನ್‌ಲೈನ್‌ ಚರ್ಚುಗಳಲ್ಲಿ ಕಠಿಣ ಕಾನೂನು ಕ್ರಮವಿದೆ ಹಾಗೂ ಕೋರ್ಟಿನಲ್ಲಿ ಪ್ರಮಾಣಪತ್ರ ಸಲ್ಲಿಸದ ಹೊರತೂ ನಮ್ಮ ಚರ್ಚುಗಳಲ್ಲಿ ಮತಾಂತರ ನಡೆಯುವುದು ಸಾಧ್ಯವೇ ಇಲ್ಲ. ಈ ಬಗ್ಗೆ ಸಮಾಜಕ್ಕೆ ಅಪನಂಬಿಕೆ ಬೇಡ. ಈ ಬಗ್ಗೆ ತಪ್ಪು ಕಲ್ಪನೆಗಳಿದ್ದರೆ ಸರಿಪಡಿಸಿಕೊಳ್ಳಲು ಮನವಿ. ಯಾರೋ ಕೆಲವರು ಮಾಡುವ ತಪ್ಪು ಕೆಲಸಗಳಿಗೆ ಇಡೀ ಕ್ರೈಸ್ತ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ನಾವು ಎಲ್ಲ ಧರ್ಮದವರನ್ನೂ ಗೌರವಿಸುತ್ತೇವೆ.

Advertisement

ಸಾಮಾಜಿಕ ನ್ಯಾಯದ ಸರ್ಕಾರ ರಾಜ್ಯದಲ್ಲಿದೆ. ಇದರಿಂದ ವಾಸ್ತವವಾಗಿ ಅಲ್ಪಸಂಖ್ಯಾತರಿಗೆ ನ್ಯಾಯ ಸಿಕ್ಕಿದೆಯಾ?
ಕ್ರೈಸ್ತರಮಟ್ಟಿಗೆ ಹೇಳುವುದಾದರೆ, ನಿರೀಕ್ಷಿತ ಮಟ್ಟದಲ್ಲಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಸಿಕ್ಕಿದೆ. ಉದಾಹರಣೆಗೆ ದಾಳಿಗಳು ಕಡಿಮೆಯಾಗಿವೆ. ಕ್ರೈಸ್ತರ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಕ್ರೈಸ್ತ ಸಮುದಾಯಕ್ಕೆ ಸಾಕಷ್ಟು ಅನುದಾನ ನೀಡಿದೆ. ಇವೆಲ್ಲಾ ಸಮುದಾಯಕ್ಕೆ ಬಲ ತುಂಬಿವೆ.

ನಿರೀಕ್ಷಿತ ಅಲ್ಲದಿದ್ದರೂ, ಅಂದರೆ ಪೂರ್ಣ ಪ್ರಮಾಣದ ನ್ಯಾಯ ಅಥವಾ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದರ್ಥವೇ?
ಅಲ್ಪಸಂಖ್ಯಾತರ ಆಯೋಗ ಇದೆ. ಈ ಆಯೋಗದ ಮಟ್ಟಿಗೆ ಹೇಳುವುದಾದರೆ, ಅಲ್ಪಸಂಖ್ಯಾತ ಎಂದರೆ ಒಂದೇ ಧರ್ಮ ಎಂಬ ಭಾವನೆ ಸೀಮಿತವಾಗಿದೆ. ಇದು ಎಷ್ಟು ಸರಿ? ಕ್ರಿಶ್ಚಿಯನ್ನರೂ ಅಲ್ಪಸಂಖ್ಯಾತರಲ್ಲವೇ? ಅಲ್ಪಸಂಖ್ಯಾತವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದರಿಂದ ಉಳಿದ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದಂತಲ್ಲವೇ? ಆದ್ದರಿಂದ ಆಯೋಗದ ಅಧ್ಯಕ್ಷರ ನೇಮಕ ರೊಟೇಷನ್‌ ಪದ್ಧತಿಯಲ್ಲಿ ಆಗಬೇಕು. ಕ್ರೈಸ್ತ ಸೇರಿದಂತೆ ಎಲ್ಲ ಅಲ್ಪಸಂಖ್ಯಾತ ಧರ್ಮೀಯರಿಗೂ ಅಲ್ಲಿ ಅವಕಾಶ ಸಿಗಬೇಕು. ಶಿಕ್ಷಣ, ಆರೋಗ್ಯ, ಸರ್ಕಾರೇತರ ಸೇವಾ ಸಂಸ್ಥೆಗಳು ಸೇರಿದಂತೆ ಕ್ರೈಸ್ತ ಧರ್ಮದ ಕೊಡುಗೆ ಗಣನೀಯ. ಆದರೂ ಈ ಸೇವೆಗೆ ತಕ್ಕುದಾದ ಪ್ರಾತಿನಿಧ್ಯ ಕ್ರೈಸ್ತರಿಗೆ ಸಿಕ್ಕಿಲ್ಲ. ರಾಜ್ಯದಲ್ಲಿ 120ಕ್ಕೂ ಹೆಚ್ಚು ನಿಗಮ-ಮಂಡಳಿಗಳಿವೆ. ಆದರೆ, ಆ ಪೈಕಿ ಕ್ರಿಶ್ಚಿಯನ್‌ ಮುಖಂಡರಿಗೆ ಸಿಕ್ಕಿರುವುದು ಒಂದೆರಡು ಮಾತ್ರ! ಈ ಬಗ್ಗೆ ಈ ಸರ್ಕಾರ ಕ್ರೈಸ್ತರಿಗೆ ಮತ್ತಷ್ಟು ಪ್ರಾತಿನಿಧ್ಯ ನೀಡಬೇಕಿದೆ.

ಕೊಟ್ಟ ಸೌಲಭ್ಯಗಳನ್ನೇ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಆರೋಪ ಇದೆ. ಉದಾಹರಣೆಗೆ ಕ್ರಿಶ್ಚಿಯನ್‌ ಅಲ್ಪಸಂಖ್ಯಾತ ಸಮಿತಿ ಅಡಿ ಸುಮಾರು 150 ಕೋಟಿ ರೂ. ನೀಡಲಾಗಿದೆ. ಬಳಕೆಯಾಗಿದ್ದು ಕಡಿಮೆ?
ಹೌದು, ಹಿಂದಿನ ಸರ್ಕಾರವೇ ಇದನ್ನು ಆರಂಭಿಸಿದ್ದು ನಿಜ. ಅದಕ್ಕೆ ಅವರನ್ನು ಅಭಿನಂದಿಸುತ್ತೇನೆ. ಆದರೆ, ಅನುದಾನ ಬಳಕೆ ಸಮರ್ಪಕ ಆಗದಿರುವಲ್ಲಿ ಎರಡು ಲೋಪಗಳಿವೆ. ಒಂದು- ನಮ್ಮ ಸಮುದಾಯದವರಿಗೆ ಆ ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲ. ಬಳಸಿಕೊಳ್ಳುವ ಪರಿ ಗೊತ್ತಿಲ್ಲ. ಮತ್ತೂಂದು ಸೌಲಭ್ಯ ಪಡೆಯುವ ದಾರಿ ಕಠಿಣ. ಇದಕ್ಕಾಗಿ ಅಡ್ಡದಾರಿ ಹಿಡಿಯಬೇಕಾಗುತ್ತದೆ. ಈ ಎರಡು ಕಾರಣಗಳಿಂದ ಸಮಾಜಬಾಂಧವರು ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಹಲವು ಕ್ರಮಗಳನ್ನು ನಾವೀಗ ಕೈಗೊಂಡಿದ್ದೇವೆ. ನಾನು ಇದಕ್ಕಾಗಿಯೇ ಸಮಿತಿಯನ್ನು ನೇಮಿಸಿದ್ದೇನೆ. ಸರ್ಕಾರದ ಅನುದಾನ ಪಡೆಯಲು ಅಡ್ಡದಾರಿ ತುಳಿಯಬೇಕಾಗಿದೆ ಎಂಬ ದೂರಿದೆ. ಇದನ್ನು ಪರಿಶೀಲಿಸುವಂತೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನು ಕೋರಿದ್ದೇನೆ.

ಹಾಗಿದ್ದರೆ, ಸೌಲಭ್ಯ ಪಡೆಯಲು ಇರುವ ನಿಯಮಗಳನ್ನು ಸಡಿಲಿಗೊಳಿಸಬೇಕೇ?
ಅರ್ಹ ಫ‌ಲಾನುಭವಿಗಳಿಗೆ ಯೋಜನೆ ತಲುಪಬೇಕಾದರೆ ಹಾಗೂ ದುರ್ಬಳಕೆ ತಡೆಯಬೇಕಾದರೆ ಕಟ್ಟುನಿಟ್ಟಿನ ನಿಯಮಗಳು ಅತ್ಯಗತ್ಯ. ಹಾಗಾಗಿ, ನಿಯಮ ಸಡಿಲಿಕೆ ಬೇಡ ; ವ್ಯವಸ್ಥೆಯನ್ನು ಸರಳಗೊಳಿಸಲಿ. ಇನ್ನು ಸರ್ಕಾರ ಮಾಡಿದ ನೀತಿ – ನಿಯಮಗಳನ್ನು ಅಧಿಕಾರಿಗಳು ತಮ್ಮ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆದು ಅನುದಾನ ನೀಡಿಕೆಯಲ್ಲಿ ಪಾರದರ್ಶಕತೆ ತರಲಿ.

ನೀವು ಅರಳು ಹುರಿದಂತೆ ಕನ್ನಡ ಮಾತನಾಡುತ್ತೀರಿ. ನೀವು ಕನ್ನಡದವರು. ದಕ್ಷಿಣ ಕನ್ನಡದವರು. ಆದರೂ ನೀವು ಬೆಂಗಳೂರಿನ ಚರ್ಚುಗಳಲ್ಲಿ ಕನ್ನಡದಲ್ಲಿ ಪೂಜೆಗೆ ಅನುವು ಮಾಡಿಕೊಡುತ್ತಿಲ್ಲ ಎಂಬ ಕೂಗಿದೆ?
– ನೋಡಿ, ಇದು ಇನ್ನೊಂದು ತಪ್ಪು ಗ್ರಹಿಕೆ. ನಮ್ಮ ಬೆಂಗಳೂರು ಮಹಾಧರ್ಮಕ್ಷೇತ್ರದಲ್ಲಿ ನಮ್ಮ ಅಧಿಕೃತ ಸೇವೆ ಹಾಗೂ ಪೂಜೆ ನಡೆಯುವುದೇ ಕನ್ನಡದಲ್ಲಿ. ಇದನ್ನು ನಾನು ಜಾರಿಗೆ ತಂದು ಕೆಲವು ವರ್ಷಗಳೇ ಕಳೆದಿವೆ. ಅಷ್ಟೇ ಅಲ್ಲ, ಈ ಧರ್ಮ ಕ್ಷೇತ್ರದ 120 ಘಟಕಗಳಲ್ಲಿ ಇರುವ ಎಲ್ಲಾ ಚರ್ಚುಗಳಲ್ಲೂ ಕನ್ನಡದಲ್ಲೇ ಅಗ್ರ ಪೂಜೆ ನಡೆಸಲು ನಾವು ಕ್ರಮ ಕೈಗೊಂಡಿದ್ದೇವೆ. ಕನ್ನಡದ ಪೂಜೆಯ ಜೊತೆಯೇ ಇನ್ನೂ ಕೆಲವು ಭಾಷೆಗಳಲ್ಲೂ ಪೂಜೆ ಸಲ್ಲಿಸಲು ಅವಕಾಶವಿದೆ. ಆದ್ದರಿಂದ ನಾವು ಕನ್ನಡದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುತ್ತಿಲ್ಲ ಎನ್ನುವುದು ಮಿಥ್ಯಾರೋಪ. ಇದೊಂದು 30-40 ವರ್ಷಗಳ ಸುದೀರ್ಘ‌ ಕಾಲದ ಸಮಸ್ಯೆಯಾಗಿತ್ತು. ಈಗ ಬಹುತೇಕ ಬಗೆಹರಿಸಿದ್ದೇನೆ. ಇದನ್ನು ಸಂಪೂರ್ಣ ಬಗೆಹರಿಸಲು ನಾನು ಬದ್ಧ. ಈ ವಿಷಯದ ಹಿನ್ನೆಲೆಯನ್ನು ಗಮನಿಸಿ. 

ಹಿಂದೂ ಸಂಪ್ರದಾಯಗಳಲ್ಲಿ ಸಂಸ್ಕೃತ ಹೇಗೋ ಹಾಗೆ ಹಿಂದೆ ನಮ್ಮ ಕೆಥೋಲಿಕ್‌ ಚರ್ಚುಗಳಲ್ಲಿ ಪೂಜೆ ನಡೆಯುತ್ತಿದ್ದ ಅಧಿಕೃತ ಭಾಷೆ ಲ್ಯಾಟಿನ್‌. ಆದರೆ, ಜಗತ್ತಿನಾದ್ಯಂತ ಈ ಭಾಷೆ ಎಲ್ಲರಿಗೂ ಅರ್ಥವಾಗದು ಎಂಬ ಕಾರಣಕ್ಕೆ ಹಲವು ವರ್ಷಗಳ ಹಿಂದೆ ಆಯಾ ಪ್ರದೇಶಗಳ ಜನರ ಭಾಷೆಯಲ್ಲೇ ಪೂಜೆ ನಡೆಸಲು ಅನುವು ನೀಡಬೇಕು ಎಂದು ವ್ಯಾಟಿಕನ್‌ ನಿರ್ಧರಿಸಿತು. ಆ ಪ್ರಕಾರ ಲ್ಯಾಟಿನ್‌ ಬಿಟ್ಟು ಸ್ಥಳೀಯ ಭಾಷೆಗಳಲ್ಲಿ ಪೂಜೆಗಳನ್ನು ನಡೆಸುವ ಸಂಪ್ರದಾಯ ಆರಂಭವಾಯಿತು. ಇದು ತಮಿಳುನಾಡು, ಕೇರಳ, ಆಂಧ್ರ, ಗೋವಾ, ಮಹಾರಾಷ್ಟ್ರದಂಥ ರಾಜ್ಯದಲ್ಲಿ ಸುಲಭವಾಯಿತು. ಏಕೆಂದರೆ, ಅಲ್ಲಿ ರಾಜ್ಯಾದ್ಯಂತ ಬಹುಸಂಖ್ಯಾತ ಕ್ರೈಸ್ತರ ಭಾಷೆ ಹಾಗೂ ಸ್ಥಳೀಯ ಒಂದೇ ಆಗಿತ್ತು. ಆದರೆ, ಕರ್ನಾಟಕದಲ್ಲಿ ಹಾಗಲ್ಲ. ಕರಾವಳಿಯಲ್ಲಿ ಕೊಂಕಣಿ ಹಾಗೂ ತುಳು ಭಾಷೆಯಾದರೆ, ಮದ್ರಾಸ್‌ ಪ್ರಸಿಡೆನ್ಸಿಯಿಂದ ಬಂದ ಬೆಂಗಳೂರಿನಂಥ ಪ್ರದೇಶದಲ್ಲಿ ತಮಿಳು ಪ್ರಭಾವ ಹೆಚ್ಚಿತ್ತು. ಹೈದರಾಬಾದ್‌ ನಿಜಾಮರ ಪ್ರಭಾವವಿದ್ದ ರಾಯಚೂರಿನಂಥ ಪ್ರದೇಶದಲ್ಲಿ ತೆಲುಗು ಹಾಗೂ ಉರ್ದು ಭಾಷಿಕ ಕ್ರೈಸ್ತರು ಹೆಚ್ಚು. ಮುಂಬೈ ಪ್ರಾಂತ್ಯದಿಂದ ಬಂದ ಬೆಳಗಾವಿಯಂಥ ಪ್ರದೇಶದಲ್ಲಿ ಮರಾಠಿ ಭಾಷಿಕ ಕ್ರೈಸ್ತರಿದ್ದಾರೆ. ಹಾಗಾಗಿ, ಇಡೀ ರಾಜ್ಯಾದ್ಯಂತ ಒಂದೇ ಭಾಷೆಯಲ್ಲಿ ಪೂಜೆ ಮಾಡುವುದು ಸಾಧ್ಯವಿಲ್ಲ. ಆದರೂ, ಬೆಂಗಳೂರು ಮಹಾಧರ್ಮ ಕ್ಷೇತ್ರದಲ್ಲಿ ಈಗ ಅಧಿಕೃತ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದು ಕನ್ನಡದಲ್ಲೇ. ಅಲ್ಲದೇ, ಈ ಧರ್ಮ ಕ್ಷೇತ್ರದ ಬಹುತೇಕ ಎಲ್ಲ ಚರ್ಚುಗಳಲ್ಲೂ ಅಗ್ರ ಪೂಜೆ ನಡೆಯುವುದು ಕನ್ನಡದಲ್ಲೇ. ಹಾಗೂ ಸ್ಥಳೀಯ ಭಕ್ತರಲ್ಲಿ ಅನ್ಯಭಾಷಿಕರ ಸಂಖ್ಯೆಗೆ ಅನುಗುಣವಾಗಿ ಅವರವರ ಭಾಷೆಯಲ್ಲೂ ಪೂಜೆ ನೀಡಲು ಅವಕಾಶ ನೀಡಿದ್ದೇವೆ. ಇದು ಬರೀ ಹಾರಿಕೆಯ ಮಾತಲ್ಲ. ಇದಕ್ಕಾಗಿ, ನಾವು ಅಧಿಕೃತ ಸುತ್ತೋಲೆಯನ್ನೇ ಹೊರಡಿಸಿದ್ದೇವೆ. ವ್ಯಾಟಿಕನ್‌ ಸಂದೇಶವೂ ಇದೇ. ಜನರು ತಮ್ಮ ಭಾಷೆಯಲ್ಲೇ ಪೂಜೆ ಮಾಡಬಹುದು. ಹಾಗಾಗಿ, ನಾವು ಕನ್ನಡದಲ್ಲಿ ಪೂಜೆ ಮಾಡುವ ಭಕ್ತರ ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ, ಬೇರೆ ಭಾಷೆಯಲ್ಲಿ ಮಾಡುವ ಆಯಾ ಭಾಷಿಕ ಭಕ್ತರ ಹಕ್ಕನ್ನೂ ಯಾರೂ ಕಿತ್ತುಕೊಳ್ಳಬಾರದು, ಅಲ್ಲವೇ?

ನೋಟು ರದ್ದತಿಯಿಂದ ಚರ್ಚ್‌ಗಳಿಗೆ ಬರುವ ಕಾಣಿಕೆ ಮೇಲೆ ಪರಿಣಾಮ ಆಗಿದೆಯೇ?
ಸ್ವಲ್ಪ ಪರಿಣಾಮ ಆಗಿರುವುದು ನಿಜ. ಕೆಲ ಕಾಲ ಕಾಣಿಕೆ ಕಡಿಮೆಯಾಗಿತ್ತು. ಈಗ ನಿಧಾನವಾಗಿ ಸಹಜಸ್ಥಿತಿಗೆ ಮರಳುತ್ತಿದೆ. ನೋಟು ರದ್ದಾದ ನಂತರ ಯಾವುದೇ ಕಾರಣಕ್ಕೂ 500 ಮತ್ತು 1000 ರೂ. ನೋಟುಗಳನ್ನು ಪಡೆಯದಿರಲು ರದ್ದಾದ ಕ್ಷಣದಿಂದಲೇ ನಾನು ಸುತ್ತೋಲೆ ಹೊರಡಿಸಿದ್ದೆ. ಈ ಮೂಲಕ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳಲು ನಮ್ಮ ಚರ್ಚ್‌ ಬಳಕೆಯಾಗದಂತೆ ಎಚ್ಚರ ವಹಿಸಿದ್ದೆ. ಹಾಗಾಗಿ ಕಾಣಿಕೆ ಕಡಿಮೆಯಾಯಿತು. ಈ ನೋಟು ರದ್ದತಿ ಪರಿಣಾಮ ಕೆಲ ಅಸಂಘಟಿತ ಕಾರ್ಮಿಕರು ಕೆಲಸ ಕಳೆದುಕೊಂಡರು. ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಬಂದ ಬಡತನ ರೇಖೆಗಿಂತ ಕೆಳಗಿರುವ ಸಮುದಾಯದ ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಕ್ರಿಸ್‌ಮಸ್‌ ಆಚರಣೆಗೆ ತಲಾ 2 ಸಾವಿರ ರೂ. ನೀಡಲಾಗಿದೆ.

ರಾಜ್ಯ ಸರಕಾರ ತರಲು ಹೊರಟಿರುವ ಮೌಡ್ಯ ಪ್ರತಿಬಂಧಕ ಕಾಯ್ದೆ ಬಗ್ಗೆ ನಿಮ್ಮ ನಿಲುವು ಏನು?
ಈ ಕಾಯ್ದೆಗಳಿಂದ ಜನರಿಗೆ ಎಷ್ಟು ಅನುಕೂಲವಾಗುತ್ತವೆ ಎಂಬುದು ಗೊತ್ತಿಲ್ಲ. ಆದರೆ, ಅನೇಕ ಮೂಢನಂಬಿಕೆಗಳು ಹೋಗಬೇಕು ಎಂಬುದು ನಿಜ. ಮೂಢನಂಬಿಕೆ ಹೋಗಲಾಡಿಸುವಲ್ಲಿ ಆಯಾ ಧರ್ಮಗಳ ಧಾರ್ಮಿಕ ಮುಖಂಡರ ಜವಾಬ್ದಾರಿ ಹೆಚ್ಚು. ಆದ್ದರಿಂದ ಪ್ರತಿ ಧಾರ್ಮಿಕ ಮುಖಂಡರು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಮತ್ತೂಂದೆಡೆ ಶಿಕ್ಷಣದ ಮೂಲಕ ತೊಡೆದು ಹಾಕುವ ಪ್ರಯತ್ನವೂ ಆಗಬೇಕು. ಅಷ್ಟಕ್ಕೂ ಇದು ಕಾಯ್ದೆ-ಕಾನೂನುಗಳಿಂದ ತೊಡೆದುಹಾಕುವುದು ಕಷ್ಟ ಎಂಬುದು ನನ್ನ ನಂಬಿಕೆ.

– ಬರ್ನಾರ್ಡ್‌ ಮೊರಾಸ್‌ ; ಆರ್ಚ್‌ಬಿಷಪ್‌, ಬೆಂಗಳೂರು
– ಸಂದರ್ಶನ : ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next