Advertisement
ಯಾವುದೇ ನಾಮಫಲಕವಿಲ್ಲದೆ, ಶೆಡ್‌ನಲ್ಲಿ 50 ವರ್ಷಗಳ ಹಿಂದೆ ಶಿವಣ್ಣ ಎಂಬಾತ ಈ ಹೋಟೆಲ್ ಪ್ರಾರಂಭ ಮಾಡಿದ್ದರು. ಅವರ ನಂತರ, ಶಿವಣ್ಣನ ಮಗ ವೀರಭದ್ರಸ್ವಾಮಿ ಈ ಹೋಟೆಲ್ ಮುನ್ನಡೆಸಿದರು. ಈಗ ಇವರ ಪುತ್ರರಾದ ಭಕ್ತ ವತ್ಸಲ(ಬಾಬು), ಮಹದೇವಸ್ವಾಮಿ (ದೀಪು) ಹೋಟೆಲ್ ನೋಡಿಕೊಳ್ಳುತ್ತಿದ್ದಾರೆ. ಭಕ್ತ ವತ್ಸಲ ಹೋಟೆಲ್ ಜೊತೆಗೆ ಕನ್ನಡ ಸಾಹಿತ್ಯ ಕೆಲಸದಲ್ಲೂ ತೊಡಗಿಸಿಕೊಂಡಿದ್ದು, ಕಸಾಪ ಹಲಗೂರು ಹೋಬಳಿ ಘಟಕದ ಕಾರ್ಯಾಧ್ಯಕ್ಷರೂ ಆಗಿದ್ದಾರೆ.
ಕುಕ್ಕೆ(ಚಿಬ್ಲು ) ಇಡ್ಲಿ ಫೇಮಸ್ಸು:
ಸಾಮಾನ್ಯವಾಗಿ ಇಡ್ಲಿಗೆ ಬಳಸುವ ಪದಾರ್ಥಗಳನ್ನು ಕುಕ್ಕೆ ಇಡ್ಲಿಗೂ ಹಾಕಲಾಗುತ್ತದೆ. ಆದರೆ, ಇಲ್ಲಿ ಕುಚಲಕ್ಕಿ ಬಿಟ್ರೆ ಬೇರೆ ಬಳಸುವುದಿಲ್ಲ. ಕಟ್ಟಿಗೆ ಒಲೆಯಲ್ಲೇ ಅಡುಗೆ ಮಾಡಲಾಗುತ್ತದೆ. ಇದರಿಂದ ತಿಂಡಿ ತುಂಬಾ ರುಚಿಕರವಾಗಿರುತ್ತದೆ. ಈ ಕುಕ್ಕೆ ಇಡ್ಲಿಯನ್ನು ದೊಡ್ಡದಾದ ಇಡ್ಲಿ ಪಾತ್ರೆಯಲ್ಲಿ ಸ್ವಲ್ಪ ನೀರುಹಾಕಿ, ಬಿದುರಿನ ಬಿಬ್ಲು (ಕುಕ್ಕೆ)ಗಳ ಮೇಲೆ ಬಟ್ಟೆ ಹಾಸಿ, ಉದ್ದಿನ ಬೇಳೆ ಮುಂತಾದ ಪದಾರ್ಥಗಳನ್ನು ಬೆರೆಸಿ ರುಬ್ಬಿಕೊಂಡ ಅಕ್ಕಿಯ ಹಿಟ್ಟನ್ನು ಹಾಕಲಾಗುತ್ತದೆ. ನಂತರ ಒಂದೊಂದನ್ನೇ ಇಡ್ಲಿ ಪಾತ್ರೆಯೊಳಗೆ ಜೋಡಿಸಿ, ಮುಚ್ಚಳ ಮುಚ್ಚಿ 15 ರಿಂದ 20 ನಿಮಿಷ ಬೇಯಿಸಿದ್ರೆ ರುಚಿಕರವಾದ ಚಿಬ್ಲು ಇಡ್ಲಿ ರೆಡಿಯಾಗುತ್ತದೆ. ಅಡುಗೆ ಉಸ್ತುವಾರಿ ತಾಯಿಯದ್ದೇ:
ಹೋಟೆಲ್ ಉಸ್ತುವಾರಿ ಮಕ್ಕಳದ್ದೇ ಆದ್ರೂ, ಅಡುಗೆ ಮಾತ್ರ ಜಗದಾಂಬ ಅವರಿಂದಲೇ ತಯಾರಾಗುತ್ತೆ. ಚಟ್ನಿ, ಪಲ್ಯ, ಚಿತ್ರಾನ್ನವನ್ನು ಮನೆಯಲ್ಲೇ ಜಗದಾಂಬ ಸಿದ್ಧ ಮಾಡಿಕೊಡುತ್ತಾರೆ. ಹೋಟೆಲ್ ಕೆಲಸಕ್ಕೆ ಯಾವುದೇ ಆಳು ಕಾಳು ಇಲ್ಲ. ಎಲ್ಲವನ್ನೂ ಮನೆಯವರೇ ಮಾಡಿಕೊಳ್ಳುತ್ತಾರೆ. ಪ್ರತಿದಿನ ನಿಗದಿತ ತಿಂಡಿಯನ್ನಷ್ಟೇ ಮಾಡ್ತಾರೆ. ಒಮ್ಮೆ ಖಾಲಿಯಾದ್ರೆ ಹೊಸದಾಗಿ ಮಾಡುವುದಿಲ್ಲ.
Related Articles
ಡಾ.ರಾಜ್ ಕುಟುಂಬದ ಫೇವರೇಟ್ ಹೋಟೆಲ್:
ವರನಟ ಡಾ.ರಾಜ್‌ಕುಮಾರ್, ಹಲಗೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಾಗ ವೀರಭದ್ರೇಶ್ವರ ಭವನಕ್ಕೆ ಬಂದು ಚಿಬುÉ ಇಡ್ಲಿ ರುಚಿ ನೋಡದೇ ಹೋಗುತ್ತಿರಲಿಲ್ಲ. ಇತ್ತೀಚೆಗೆ ನಟ ಶಿವರಾಜ್‌ಕುಮಾರ್, ಚಿ.ಗುರುದತ್, ನಿರ್ಮಾಪಕ ಶ್ರೀಕಾಂತ್ ಕೂಡ ಈ ಹೋಟೆಲ್‌ಗೆ ಭೇಟಿ ನೀಡಿ ಕುಕ್ಕೆ ಇಡ್ಲಿ, ಬೆಣ್ಣೆ ದೋಸೆ ರುಚಿ ನೋಡಿದ್ದರು.
Advertisement
ಹೋಟೆಲ್ ಸಮಯ:ಬೆಳಗ್ಗೆ 7ರಿಂದ 11 ಗಂಟೆಯವರೆಗೆ ಮಾತ್ರ. ವಾರದ ರಜೆ ಇಲ್ಲ. ಹೋಟೆಲ್ ವಿಳಾಸ:
ಕನಕಪುರ ಮುಖ್ಯ ರಸ್ತೆ, ಸ್ಕೂಲ್ ಕಾಂಪೌಂಡ್ ಪಕ್ಕ, ಹಲಗೂರು ಗ್ರಾಮ. ಹೋಟೆಲ್‌ಗೆ ನಾಮಫಲಕವಿಲ್ಲದ ಕಾರಣ, ವೀರಭದ್ರೇಶ್ವರ ಭವನ ಅಥವಾ ಬಾಬು ಹೋಟೆಲ್ ಅಂದ್ರೆ ತೋರಿಸುತ್ತಾರೆ. ತಿಂಡಿ ಮಾತ್ರ:
ಚಿಬ್ಲು (ಕುಕ್ಕೆ) ಇಡ್ಲಿ, ಬೆಣ್ಣೆ ದೋಸೆ, ಸೆಟ್ ದೋಸೆ, ಮಸಾಲೆ ದೋಸೆ, ಚಿತ್ರಾನ್ನ ಹೀಗೆ… ಕೆಲವು ತಿಂಡಿ ಮಾತ್ರ ಹೋಟೆಲ್‌ನಲ್ಲಿ ಸಿಗುತ್ತದೆ. ಇಡ್ಲಿ ಒಂದಕ್ಕೆ 8 ರೂ., ದೋಸೆ 5 ರೂ., ಚಿತ್ರಾನ್ನ (ಒಂದು ಪ್ಲೇಟ್)20 ರೂ. ಜೊತೆಗೆ ಚಟ್ನಿ, ಈರುಳ್ಳಿ ಫಲ್ಯ, ಬೆಣ್ಣೆ ಕೊಡಲಾಗುತ್ತದೆ. ಕಾಫಿ, ಟೀ, ಹಾಲು ಮಾಡಲಾಗುತ್ತದೆ. ದರ 5 ರೂ. – ಭೋಗೇಶ ಆರ್. ಮೇಲುಕುಂಟೆ