ಬೆಂಗಳೂರು: ರಾಜ್ಯ ಸರ ಕಾರದ ಮಹತ್ವಾಕಾಂಕ್ಷೆಯ “ಜಲಾಮೃತ’ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ವಿಶೇಷ “ಗ್ರಾಮಸಭೆ’ ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ.
ಅದಕ್ಕಾಗಿ “ಜಲಶಕ್ತಿ- ಜಲಾ ಮೃತ’ ಅಭಿಯಾನದ ಬಗ್ಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಆ.23ರಂದು ವಿಶೇಷ ಗ್ರಾಮ ಸಭೆ ಆಯೋಜಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಎಲ್ಲ ಜಿ.ಪಂ. ಸಿಇಒ, ತಾ.ಪಂ. ಇಒ ಹಾಗೂ ಗ್ರಾಮ ಪಂಚಾ ಯತ್ ಪಿಡಿಒಗಳಿಗೆ ಸುತ್ತೋಲೆ ಮೂಲಕ ಸೂಚನೆ ನೀಡಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಿಸಲು 2019-20ನೇ ಸಾಲಿನ ಬಜೆಟ್‌ನಲ್ಲಿ 2019ನ್ನು “ಜಲವರ್ಷ’ ಎಂದು ಘೋಷಿಸಲಾಗಿತ್ತು. “ಜಲಾಮೃತ’ ಯೋಜನೆಯಡಿ ಜಲ ಸಂರಕ್ಷಣೆ, ಜಲ ಸಾಕ್ಷರತೆ, ಜಲ ಮೂಲಗಳ ಪುನಶ್ಚೇತನ ಮತ್ತು ಹಸುರೀಕರಣವನ್ನು ಗುರಿ ಯಾಗಿಟ್ಟು ಕೊಂಡು ಜಲ ಸಂರಕ್ಷಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಾಗೂ ನೈಸರ್ಗಿಕ ಸಂಪನ್ಮೂಲ ನಿರ್ವಹಣ ಕಾಮಗಾರಿಗಳಡಿ ಮುಂದಿನ 2 ವರ್ಷಗಳ ಅವಧಿ ಯಲ್ಲಿ 20 ಸಾವಿರ ಜಲ ಸಂರಕ್ಷಣ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲು ಸರಕಾರ ಉದ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ಜಲಾಮೃತ ಯೋಜನೆಯನ್ನು ಸ್ಥಳೀಯ ಮಟ್ಟದಲ್ಲಿ ಪರಿಣಾಮ ಕಾರಿ ಯಾಗಿ ಅನುಷ್ಠಾನಗೊಳಿಸಲು ಹಾಗೂ ಮೇಲ್ವಿ ಚಾರಣೆ ನಡೆಸಲು ವಿವಿಧ ಸಮಿತಿಗಳನ್ನು ರಚಿಸ ಲಾಗಿದೆ. ಈ ಎಲ್ಲ ಸಮಿತಿಗಳ ಸಮನ್ವಯ, ಕ್ರಿಯಾ ಯೋಜನೆಗಳ ಅನುಮೋದನೆ, ಅವುಗಳ ಅನುಷ್ಠಾನ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿ, ತೀರ್ಮಾನಗಳನ್ನು ತೆಗೆದು ಕೊಳ್ಳಲು ಅನುಕೂಲವಾಗುವ ಉದ್ದೇಶ ದಿಂದ ಈ ವಿಶೇಷ ಗ್ರಾಮಸಭೆ ನಡೆಸಲು ಸೂಚಿಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಗ್ರಾಮ ಪಂಚಾಯತ್‌ಗೆ ಬೇಕಾದ ನೀರಿನ ಅಗತ್ಯವನ್ನು ಗ್ರಾಮದ ಪರಿಣತರು, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ತಯಾ ರಿಸುವುದು, ಯೋಜನೆಯ ಅನುಷ್ಠಾನಕ್ಕೆ ಲಭ್ಯ ವಿರುವ ಸಂಪನ್ಮೂಲಗಳ ಪಟ್ಟಿ ತಯಾರಿಕೆ, ಸರಕಾರದ ಇತರ ಯೋಜನೆಗಳಾದ ಉದ್ಯೋಗ ಖಾತರಿ, ಕೃಷಿ ಭಾಗ್ಯ, ಕೆರೆ ಸಂಜೀವಿನಿ, ಹಸುರು ಕರ್ನಾಟಕ ಮತ್ತಿತರ ಯೋಜನೆಗಳಲ್ಲಿ ಲಭ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ಜಲಾಮೃತ ಯೋಜನೆಯಲ್ಲಿ ಒಗ್ಗೂಡಿಸುವ ಆವಶ್ಯಕತೆ ಇರುತ್ತದೆ. ಅದಕ್ಕಾಗಿ ವಿಶೇಷ ಗ್ರಾಮ ಸಭೆ ನಡೆಸಿದರೆ ಅನುಕೂಲವಾಗಲಿದೆ ಅನ್ನುವುದು ಅಧಿಕಾರಿಗಳ ಸಮರ್ಥನೆಯಾಗಿದೆ.
ಯೋಜನೆಗಳನ್ನು ತಾ.ಪಂ. ಇಒಗಳ ಪರಿ ಶೋಧನೆ ಮತ್ತು ಅನುಮೋದನೆಗಾಗಿ ಕಳುಹಿಸು ವುದು ಮತ್ತು ಅದನ್ನು ಅನುಷ್ಠಾನಗೊಳಿಸಲು ಗ್ರಾಮ ಸಭೆಯನ್ನು ಒಪ್ಪಿಸುವುದು ಗ್ರಾಮ ಪಂಚಾಯತ್‌ನ ಜವಾಬ್ದಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವಿಶೇಷ ಗ್ರಾಮ ಸಭೆ ಕರೆದರೆ ಮಾತ್ರ ಅಭಿಯಾನದ ಉದ್ದೇಶ ಈಡೇರಲು ಸಾಧ್ಯ ಎಂಬುದು ಇಲಾಖೆಯ ಅಂಬೋಣ.
ಜಲಾಮೃತದ ಚಟುವಟಿಕೆಗಳು
-ಎರಡು ವರ್ಷಗಳಲ್ಲಿ 14 ಸಾವಿರ ಜಲಮೂಲಗಳ ಪುನಶ್ಚೇತನ
– 12 ಸಾವಿರ ಚೆಕ್ ಡ್ಯಾಂ ನಿರ್ಮಾಣ
– ಕಿಂಡಿ ಅಣೆಕಟ್ಟು, ಸಣ್ಣ ಜಲಾಶಯ ನಿರ್ಮಿಸುವ ಗುರಿ
– ನೀರಿನ ಮಿತ ಬಳಕೆಯ ಬಗ್ಗೆ ಅರಿವು
– ಗ್ರಾಮೀಣ ಮಟ್ಟದಲ್ಲಿ ಸಮುದಾಯ ಸಹಭಾಗಿತ್ವದೊಂದಿಗೆ ಅರಣ್ಯೀಕರಣ ಆಂದೋಲನ
– ಜಲ ಮೂಲ ಬಳಕೆದಾರರ ಸಂಘ ಮತ್ತು ಸಮಿತಿಗಳ ರಚನೆ