Advertisement

ದಸರಾ ಪ್ರಯುಕ್ತ ವಿಶೇಷ ವಿಮಾನ ಸೇವೆ

12:29 PM Oct 06, 2018 | |

ಬೆಂಗಳೂರು: ವಿಶ್ವವಿಖ್ಯಾತ ದಸರಾ ವೀಕ್ಷಣೆಗೆ ತೆರಳುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್‌ಟಿಡಿಸಿ) ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಬೆಂಗಳೂರು- ಮೈಸೂರು ನಡುವೆ ಅ.10ರಿಂದ 19ರವರೆಗೆ ವಿಶೇಷ ವಿಮಾನಯಾನ ಸೇವೆ ಕಲ್ಪಿಸಿದೆ.

Advertisement

ಕೆಎಸ್‌ಟಿಡಿಸಿಯು ಏರ್‌ ಇಂಡಿಯಾ ಅಂಗ ಸಂಸ್ಥೆಯಾದ ಅಲಯನ್ಸ್‌ ಏರ್‌ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. 72 ಆಸನಗಳ ಎಟಿಆರ್‌ ವಿಮಾನವು ನಿತ್ಯ ಮಧ್ಯಾಹ್ನ 2.10ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಹೊರಡಲಿದೆ. ನಿತ್ಯ ಮಧ್ಯಾಹ್ನ 3.30ಕ್ಕೆ ಮೈಸೂರಿನಿಂದ ಬೆಂಗಳೂರಿನ ಕಡೆಗೆ ಹೊರಡಲಿದೆ. ಟಿಕೆಟ್‌ಗಳು 999 ರೂ.ನಿಂದ 15,000 (ಜತೆಗೆ ತೆರಿಗೆ) ರೂ.ವರೆಗೆ ಲಭ್ಯವಿದೆ.

ಕೆಎಸ್‌ಟಿಡಿಸಿಯು ಕಳೆದ ಎರಡು ವರ್ಷ ಏಳು ಆಸನಗಳ ಕೆಸೆನ್ನಾ ವಿಮಾನಯಾನ ಸೇವೆಯನ್ನು “ಆಕಾಶ ಅಂಬಾರಿ’ ಹೆಸರಿನಡಿ ಕಲ್ಪಿಸಿತ್ತು. ಈ ವಿಮಾನಗಳು ಎಚ್‌ಎಎಲ್‌ ವಿಮಾನದಿಂದ ಮೈಸೂರಿಗೆ ಹೊರಟು ನಂತರ ಎಚ್‌ಎಎಲ್‌ ವಿಮಾನನಿಲ್ದಾಣಕ್ಕೆ ಹಿಂದಿರುಗುತ್ತಿತ್ತು. ಈ ಬಾರಿ 72 ಆಸನದ ವಿಮಾನಯಾನ ಸೇವೆಯನ್ನು ಕಲ್ಪಿಸಿದೆ ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ತೆರೆದ ಬಸ್‌ ಪ್ರವಾಸ: ದಸರಾ ಹಿನ್ನೆಲೆಯಲ್ಲಿ ಕೆಎಸ್‌ಟಿಡಿಸಿ, ಬಿಎಂಟಿಸಿ ಹಾಗೂ ಪ್ರವಾಸೋದ್ಯಮ ಇಲಾಖೆಯು ಜಂಟಿಯಾಗಿ “ತೆರೆದ ಬಸ್‌ ಪ್ರವಾಸ’ ವ್ಯವಸ್ಥೆ ಕಲ್ಪಿಸಲು ಸಜ್ಜಾಗಿದೆ. ಇದಕ್ಕೆಂದೇ ವಿಶೇಷ ವಿನ್ಯಾಸ ಹಾಗೂ ಬ್ರಾಂಡ್‌ನ‌ ಬಸ್‌ ಸಿದ್ಧವಾಗಿದೆ. ಬಿಎಂಟಿಸಿ ಬಳಿಯಿದ್ದ ಏಕೈಕ ತೆರೆದ ಬಸ್‌ “ಕಾವೇರಿ’ಯನ್ನು ಕೆಎಸ್‌ಟಿಡಿಸಿ ಪಡೆದಿದೆ. ಅ.10ರಿಂದ 20ರವರೆಗೆ ತೆರೆದ ಬಸ್‌ ಪ್ರಯಾಣಿಕರಿಗೆ ಮೈಸೂರು ದರ್ಶನ ಮಾಡಿಸಲಿದೆ.

32 ಆಸನವುಳ್ಳ ಬಸ್‌ನಲ್ಲಿ ಪ್ರವಾಸಕ್ಕೆ 150 ರೂ. ಪ್ರಯಾಣ ದರ ನಿಗದಿಪಡಿಸಲಾಗಿದ್ದು, ಲಘು ಉಪಾಹಾರವಿರಲಿದೆ. ಒಂದೂವರೆ ತಾಸಿನ ಪ್ರವಾಸದಲ್ಲಿ ಪ್ಯಾಲೆಸ್‌ ಗೇಟ್‌, ಹಾರ್ಡಿಂಜ್‌ ವೃತ್ತ, ಕೆ.ಆರ್‌.ವೃತ್ತ, ಅರಸು ರಸ್ತೆ, ಮೆಟ್ರೋ ಪೋಲ್‌ ವೃತ್ತ, ರೈಲ್ವೆ ನಿಲ್ದಾಣ, ಕೆ.ಆರ್‌.ಆಸ್ಪತ್ರೆ, ಬನ್ನಿ ಮಂಟಪ, ಎಲ್‌ಐಸಿ ಕಚೇರಿ ವೃತ್ತ, ಪೈಲಟ್‌ ವೃತ್ತ, ಉಪನಗರ ನಿಲ್ದಾಣ, ಪ್ಯಾಲೆಸ್‌ ಗೇಟ್‌ ಭೇಟಿ ಇರಲಿದೆ.

Advertisement

ಹಾಪ್‌ ಆನ್‌- ಹಾಪ್‌ ಆಫ್ ಸೇವೆ: ಕೆಎಸ್‌ಟಿಡಿಸಿ ಹಾಗೂ ಕೆಎಸ್‌ಆರ್‌ಟಿಸಿ ಜಂಟಿಯಾಗಿ “ಹಾಪ್‌ ಆನ್‌- ಹಾಪ್‌ ಆಫ್’ ಬಸ್‌ ಸೇವೆ ಆರಂಭಿಸಲಿದೆ. ಈ ಸೇವೆಯಡಿ ಪ್ರವಾಸಿಗರು 150 ರೂ. ದರದ ದಿನದ ಪಾಸ್‌ ಪಡೆದು ದಿನವಿಡೀ ಈ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶವಿರಲಿದೆ. ಒಟ್ಟು 10 ಬಸ್‌ಗಳನ್ನು ಈ ಸೇವೆಗೆ ನಿಯೋಜಿಸಲಾಗಿದೆ.

ಒಟ್ಟು 15ಕ್ಕೂ ಹೆಚ್ಚು ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಪ್ರತಿ ನಿಲ್ದಾಣದಲ್ಲಿ 10 ನಿಮಿಷಕ್ಕೊಂದು ಬಸ್‌ ಸಂಚರಿಸಲಿದೆ. ಹವಾನಿಯಂತ್ರಿತ ಪರಿಸರಸ್ನೇಹಿ ವೋಲ್ವೋ ಬಸ್‌ಯಲ್ಲಿ ಪ್ರಯಾಣ ವ್ಯವಸ್ಥೆ ಇದೆ. ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಿದೆ. ಆನ್‌ಲೈನ್‌ ಬುಕ್ಕಿಂಗ್‌ ಜತೆಗೆ ಸ್ಥಳದಲ್ಲೂ ಟಿಕೆಟ್‌ ಪಡೆಯಬಹುದಾಗಿದೆ.

ಅಂತಾರಾಷ್ಟ್ರೀಯ ಮಾದರಿಯ ಪ್ರವಾಸವನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ಪ್ರವಾಸಿಗರು ಸುಲಭವಾಗಿ ಮೈಸೂರು ಸುತ್ತಾಡಲು ಅನುಕೂಲವಾಗಲಿದೆ. ಇದರಿಂದ ದಸರಾ ವೇಳೆಯಲ್ಲಿ ವೈಯಕ್ತಿಕವಾಗಿ ಕಾರು ಇತರೆ ವಾಹನ ಬಳಕೆಯಿಂದ ಸಂಚಾರ ದಟ್ಟಣೆ ಉಂಟಾಗದಂತೆ ತಡೆಯಲು ಅನುಕೂಲವಾಗಲಿದೆ.
-ಸಾ.ರಾ.ಮಹೇಶ್‌, ಪ್ರವಾಸೋದ್ಯಮ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next